ಉತ್ತರ ಕರ್ನಾಟಕದ ಜನಪದ ಕಲೆಗಳು ತಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಮೌಲ್ಯಗಳಿಗೆ ದೇಶಾದ್ಯಂತ ಪ್ರಸಿದ್ಧವಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಹಾಡು, ನೃತ್ಯ ಹಾಗೂ ನಾಟಕಗಳಲ್ಲಿ ಅಶ್ಲೀಲ ಪದಗಳು ಮತ್ತು ಅಸಭ್ಯ ಪ್ರದರ್ಶನಗಳ ಬಳಕೆ ಹೆಚ್ಚುತ್ತಿರುವುದು ಕಲಾ ವಲಯದಲ್ಲೇ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಈ ಹಿನ್ನೆಲೆ ಉತ್ತರ ಕರ್ನಾಟಕದ ಜನಪದ ಕಲಾವಿದರೇ ಅಶ್ಲೀಲ ಪ್ರವೃತ್ತಿಗಳ ವಿರುದ್ಧ ಧ್ವನಿ ಎತ್ತಿದ್ದು, ಇಂತಹ ಅನಾಚಾರಗಳಿಗೆ ಕಡಿವಾಣ ಹಾಕುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಜನಪದ ಕಲೆಯ ಹೆಸರಿನಲ್ಲಿ ನಡೆಯುತ್ತಿರುವ ಅಸಭ್ಯತೆಗಳು ಪರಂಪರೆಯ ಗೌರವಕ್ಕೆ ಧಕ್ಕೆಯಾಗುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಇತ್ತೀಚೆಗೆ ಜನಪದ ಕಲಾವಿದ ‘ಮ್ಯೂಸಿಕ್ ಮೈಲಾರಿ’ ಬಂಧನಕ್ಕೊಳಗಾದ ನಂತರ ಈ ವಿಷಯ ಮತ್ತಷ್ಟು ಚರ್ಚೆಗೆ ಬಂದಿದ್ದು, ಅವರ ಕಾರ್ಯಕ್ರಮಗಳಲ್ಲಿ ವೇದಿಕೆ ಮೇಲೆ ಅಶ್ಲೀಲವಾಗಿ ಮಾತನಾಡಿ ನಿಂದಿಸಿದ ಘಟನೆಗಳು ನಡೆದಿದ್ದವು ಎಂಬ ವರದಿಗಳು ಹೊರಬಂದಿವೆ. ಈ ಬಂಧನವು ಎಲ್ಲಾ ಕಲಾವಿದರಿಗೆ ಎಚ್ಚರಿಕೆಯ ಪಾಠವಾಗಬೇಕು ಎಂದು ಜನಪದ ಸಮುದಾಯದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಆರ್ಕೆಸ್ಟ್ರಾ ಕಾರ್ಯಕ್ರಮಗಳು, ನಾಟಕಗಳು, ಆಲ್ಬಮ್ ಹಾಡುಗಳು, ನೃತ್ಯ ಪ್ರದರ್ಶನಗಳು ಹಾಗೂ ಉಡುಪುಗಳ ಆಯ್ಕೆಯಲ್ಲೂ ಶಿಷ್ಟಾಚಾರ ಪಾಲನೆಯಾಗಬೇಕು ಎಂದು ಕಲಾವಿದರು ಒತ್ತಾಯಿಸಿದ್ದಾರೆ. ಜನಪದ ಕಲೆ ಮನರಂಜನೆಯ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಸಾರುವ ಮಾಧ್ಯಮವಾಗಬೇಕು, ಅಶ್ಲೀಲತೆಗೆ ವೇದಿಕೆಯಾಗಬಾರದು ಎಂಬುದು ಅವರ ಸ್ಪಷ್ಟ ನಿಲುವಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕುರಿತು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಿ, ಜನಪದ ಕಲೆಯ ಗೌರವವನ್ನು ಕಾಪಾಡಬೇಕು ಎಂಬ ಒತ್ತಾಯ ದಿನೇದಿನೇ ಬಲ ಪಡೆಯುತ್ತಿದೆ.
