ಬಳ್ಳಾರಿಯಲ್ಲಿ ಬ್ಯಾನರ್ ಅಳವಡಿಕೆ ವೇಳೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಜನಾರ್ದನ ರೆಡ್ಡಿ ನಿವಾಸದ ಮುಂದೆ ಮತ್ತೊಂದು ಬುಲೆಟ್ ಪತ್ತೆಯಾಗಿದ್ದು, ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ. ಹುಬ್ಬಳ್ಳಿಯಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ ಹಾಗೂ ನ್ಯಾಯ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ.
ಬುಲೆಟ್ ಪತ್ತೆಹಚ್ಚುವ ಯಂತ್ರದ ಮೂಲಕ ಜನಾರ್ದನ ರೆಡ್ಡಿ ಮನೆ ಮುಂಭಾಗದಲ್ಲಿ 9 ಎಂಎಂ ಬುಲೆಟ್ ಪತ್ತೆಯಾಗಿದೆ. ಪತ್ತೆಯಾದ ಬುಲೆಟ್‌ಗೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್ ತಂಡದಿಂದ ಸ್ಥಳದಲ್ಲಿಯೇ ಫೋಟೋ ಮತ್ತು ವೀಡಿಯೋ ಚಿತ್ರೀಕರಣ ನಡೆಸಲಾಗಿದ್ದು, ನಂತರ ಬುಲೆಟ್ ಅನ್ನು ವಶಕ್ಕೆ ಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಪೊಲೀಸರ ಪರಿಶೀಲನೆ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ನಿವಾಸಕ್ಕೆ ಸೇರಿದ ಜಾಗದಲ್ಲಿ 50ಕ್ಕೂ ಹೆಚ್ಚು ದೊಣ್ಣೆಗಳು ಪತ್ತೆಯಾಗಿವೆ. ಗಲಾಟೆ ವೇಳೆ ಶಾಸಕ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಬೆಂಬಲಿಗರು ದೊಣ್ಣೆ ಹಿಡಿದು ನಿಂತಿದ್ದರು ಎಂಬ ಆರೋಪಕ್ಕೆ ಈ ಬೆಳವಣಿಗೆ ಹೊಸ ತಿರುವು ನೀಡಿದೆ.
ಗಲಭೆಯ ಹಿನ್ನೆಲೆ
ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ಅಳವಡಿಸುವ ಸಂದರ್ಭದಲ್ಲಿ ಗಲಾಟೆ ನಡೆದಿತ್ತು. ಮೊದಲು ಅಳವಡಿಸಿದ್ದ ಬ್ಯಾನರ್ ಅನ್ನು ಜನಾರ್ದನ ರೆಡ್ಡಿ ಬೆಂಬಲಿಗರು ಹರಿದು ಹಾಕಿದ್ದಾರೆ ಎಂಬ ಆರೋಪವಿದೆ. ಇದಾದ ಬಳಿಕ ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಅವರ ಬೆಂಬಲಿಗ ಸತೀಶ್ ರೆಡ್ಡಿ ಸ್ಥಳಕ್ಕೆ ಆಗಮಿಸಿ, ರಸ್ತೆಯಲ್ಲೇ ಕುರ್ಚಿ ಹಾಕಿ ಕುಳಿತು ಮತ್ತೆ ಬ್ಯಾನರ್ ಅಳವಡಿಸಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಬೆಂಬಲಿಗರು ಮನೆ ಮುಂದೆ ದೊಣ್ಣೆ ಹಿಡಿದು ನಿಂತಿದ್ದರಿಂದ, ನಾರಾ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಜಟಾಪಟಿ ನಡೆದಿದ್ದು, ಅದೇ ಗಲಭೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
