ಮಹಾ ವ್ಯಾಪಾರಾಧಿಪತಿಯ ಅಕ್ರಮಗಳ ತೊಟ್ಟಿಲು ಮತ್ತೊಮ್ಮೆ ಮುರಿದು ಬಿದ್ದಿದೆ. ಹೈಸ್ಕೂಲ್ ಶಿಕ್ಷಣವನ್ನೂ ಪೂರ್ಣಗೊಳಿಸದ ಶಾಲೆ ಬಿಟ್ಟ ವಿದ್ಯಾರ್ಥಿ ಈಗ ತನ್ನ ಅಕ್ರಮಗಳ ಮೂಲಕ ಜಗತ್ತಿನ ಗಮನಸೆಳೆದಿದ್ದಾನೆ. ಜಗತ್ತು ಈತನ ಅಕ್ರಮಗಳ ಕಡೆ ಮೂಗಿನ ಮೇಲೆ ಬೆರಳಿಟ್ಟು ಗಮನಿಸುತ್ತಿದೆ.
ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (OCCRP) ಪ್ರಧಾನಿ ಮೋದಿಯವರ ಆತ್ಮೀಯ ಸ್ನೇಹಿತ ಮತ್ತು ಅದಾನಿ ಸಮೂಹದ ಕಂಪನಿಗಳ ಅಧ್ಯಕ್ಷ ಗೌತಮ್ ಅದಾನಿ ಅವರ ಆರ್ಥಿಕ ಅಕ್ರಮಗಳ ಕುರಿತು ಸೆನ್ಸೇಷನಲ್ ಎನ್ನಿಸುವಂತಹ ಆರೋಪಗಳನ್ನು ಮಾಡಿದೆ. ಅದಾನಿ ಗ್ರೂಪ್ ಕಂಪನಿಗಳಲ್ಲಿ ನಡೆದಿರುವ ಅಕ್ರಮಗಳು ನಿಜ ಎಂಬುದನ್ನು ಸಾಕ್ಷ್ಯ ಸಹಿತ ಬಹಿರಂಗಪಡಿಸಿದೆ.
- ಗುಂಪು ಕಂಪನಿಗಳಲ್ಲಿ ಅಕ್ರಮ ಹೂಡಿಕೆ
- ಮಾರಿಷಸ್ನಿಂದ ಅಪಾರ ಪ್ರಮಾಣದ ನಿಧಿಯ ಪ್ರವಾಹ.
- ಗುಂಪಿನ ಷೇರುಗಳ ಮುಖಬೆಲೆಯನ್ನು ಕೃತಕವಾಗಿ ಹೆಚ್ಚಿಸುವುದು
- ಹೂಡಿಕೆದಾರರು ಪ್ರಮೋಟರ್ಸ್ಗಳಿಗೆ ತುಂಬಾ ಹತ್ತಿರವಾಗಿದ್ದಾರೆ
- ಭಾರತೀಯ ನಿಯಂತ್ರಣ ಕಾನೂನುಗಳ ಉದ್ದೇಶಪೂರ್ವಕ ಉಲ್ಲಂಘನೆ
ಇವು OCCRP ಅವ್ಯವಹಾರ ನಡೆದಿದೆಯೆಂದು ಹೇಳುವುದಕ್ಕೆ ಮುಖ್ಯ ಕಾರಣಗಳು. ಮತ್ತು ಆ ಸಂಸ್ಥೆ ಇದೆಲ್ಲದಕ್ಕೂ ಸಾಕ್ಷ್ಯಗಳನ್ನು ಒದಗಿಸಿದೆ.
ಹಿಂಡನ್ಬರ್ಗ್ನ ಹೊಡೆತಕ್ಕೆ ಸಿಲುಕಿದ ಗೌತಮ್ ಅದಾನಿ ಕೋಟೆಗೆ ಮತ್ತೊಂದು ಸಿಡಿಲು ಬಡಿದಿದೆ. ಪ್ರಮೋಟರ್ಸ್ ಸಮೂಹಕ್ಕೆ ಸಂಬಂಧಿಸಿದ ನೂರಾರು ಮಿಲಿಯನ್ ಡಾಲರ್ಗಳನ್ನು ಅದಾನಿ ಸಮೂಹದ ಷೇರುಗಳಲ್ಲಿ ಹೂಡಿಕೆ ಮಾಡಲಾಗಿದೆ ಮತ್ತು ಅಕ್ರಮ ಹೂಡಿಕೆಯ ಪ್ರವಾಹ ಮಾರಿಷಸ್ನಿಂದ ಹರಿದಿದೆ ಎಂದು ಅಂತರರಾಷ್ಟ್ರೀಯ ಸಂಸ್ಥೆ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (OCCRP) ಬಾಂಬ್ ಸ್ಫೋಟಿಸಿದೆ. ಸಂವೇದನಾಶೀಲ ಆರೋಪಗಳೊಂದಿಗೆ OCCRP ಬಿಡುಗಡೆ ಮಾಡಿರುವ ವರದಿ ಈಗ ಎಲ್ಲೆಡೆ ಸಂಚಲನ ಮೂಡಿಸುತ್ತಿದೆ.
ಈಗಾಗಲೇ ಹಿಂಡನ್ ಬರ್ಗ್ ವರದಿಯಿಂದಾಗಿ ಒಂದು ಕಣ್ಣು ಕಳೆದುಕೊಂಡಿರುವ ಅದಾನಿ ಸಮೂಹಕ್ಕೆ OCCRP ವರದಿ ಮತ್ತೊಂದು ಕಣ್ಣಿನ ಮೇಲೆ ಹೊಡೆದಿದೆ. OCCRP ಎಂಬುದು ತನಿಖಾ ಪತ್ರಕರ್ತರ ಜಾಲವಾಗಿದ್ದು, ಅವರು ಅದಾನಿ ಸಮೂಹದ ಕಂಪನಿಗಳಲ್ಲಿ ಹಣಕಾಸು ಅಕ್ರಮಗಳ ಅನೇಕ ಪುರಾವೆಗಳನ್ನು ಬಹಿರಂಗಪಡಿಸಿದ್ದಾರೆ.
ಸಂಘಟಿತ ಅಪರಾಧ, ಭ್ರಷ್ಟಾಚಾರ ಮತ್ತು ಹಣಕಾಸಿನ ಅಕ್ರಮಗಳ ಆಳವಾದ ವಿಶ್ಲೇಷಣೆ ನಡೆಸಲು ಪ್ರಪಂಚದಾದ್ಯಂತದ ಪತ್ರಕರ್ತರ ಪ್ರಬಲ ತನಿಖಾ ಜಾಲವಾಗಿದೆ. ರಷ್ಯಾವನ್ನು ಬೆಚ್ಚಿಬೀಳಿಸಿದ ಮ್ಯಾಗ್ನಿಟ್ಸ್ಕಿ ತೆರಿಗೆ ಹಗರಣ, ಜಗತ್ತನ್ನೇ ಬೆಚ್ಚಿ ಬೀಳಿಸಿದ ಪನಾಮ ಪೇಪರ್ಸ್, ಭಾರತ ಸೇರಿದಂತೆ 30 ದೇಶಗಳ ಚುನಾವಣೆ ಮೇಲೆ ಪರಿಣಾಮ ಬೀರಿದ ಟೀಮ್ ಜಾರ್ಜ್ ಮುಂತಾದ ಹೈ ಪ್ರೊಫೈಲ್ ಪ್ರಕರಣಗಳಲ್ಲಿ OCCRP ಭವಿಷ್ಯ ನಿಜವಾಗಿದೆ. ಇದೀಗ OCCRP ಅದಾನಿ ಗ್ರೂಪ್ನ ಅಕ್ರಮಗಳ ಬಗ್ಗೆ ಹಲವು ಪುರಾವೆಗಳನ್ನು ಬಹಿರಂಗಪಡಿಸಿದೆ ಎಂಬುದು ಗಮನಾರ್ಹ.
ಕುಸಿದ ಷೇರುಗಳು.. ಕರ್ಪೂರದಂತೆ ಕರಗಿದ 35 ಸಾವಿರ ಕೋಟಿ ರೂ
ಒಸಿಆರ್ಪಿ ಸ್ಫೋಟಿಸಿದ ಬಾಂಬ್ನಿಂದ ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಷೇರುಗಳು ಕುಸಿದಿವೆ. ಹತ್ತರಲ್ಲಿ ಒಂಬತ್ತು ಸ್ಟಾಕ್ಗಳು ಶೇಕಡಾ 4ರವರೆಗೆ ಕಳೆದುಕೊಂಡಿವೆ. ಇದರಿಂದ ಒಂದೇ ದಿನದಲ್ಲಿ 35 ಸಾವಿರ ಕೋಟಿ ರೂ.ಗೂ ಅಧಿಕ ಮಾರುಕಟ್ಟೆ ಮೌಲ್ಯ ಆರತಿ ತಟ್ಟೆಯಲ್ಲಿನ ಕರ್ಪೂರದಂತೆ ಕರಗಿದೆ.
OCCP ವರದಿಯ ಮುಖ್ಯಾಂಶಗಳು
2013ರಲ್ಲಿ ಅದಾನಿ ಗ್ರೂಪ್ ಕಂಪನಿಗಳ ಮಾರುಕಟ್ಟೆ ಬಂಡವಾಳ 8 ಬಿಲಿಯನ್ ಡಾಲರ್ ಆಗಿದ್ದರೆ ಕಳೆದ ವರ್ಷ 260 ಬಿಲಿಯನ್ ಡಾಲರ್ ತಲುಪಿತ್ತು. 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯವು ದೊಡ್ಡ ಮಟ್ಟದಲ್ಲಿ ಬೆಳೆದಿದೆ.
ಕಲ್ಲಿದ್ದಲು, ತೈಲ, ವಿಮಾನ ನಿಲ್ದಾಣಗಳು, ಬಂದರುಗಳು, ವಿದ್ಯುತ್, ನೈಸರ್ಗಿಕ ಅನಿಲ, ಲಾಜಿಸ್ಟಿಕ್ಸ್, ರಸ್ತೆಗಳು, ಸಾರಿಗೆ,ಡಾಟಾ ಸೆಂಟರ್ಸ್, ರಿಯಲ್ ಎಸ್ಟೇಟ್, ಮಾಧ್ಯಮ, ಹೀಗೆ ಅದಾನಿ ಸಮೂಹವು ದೇಶದ ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲಿ ಬೇರೂರಿದೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ನಿಕಟ ಸಂಬಂಧದಿಂದಾಗಿ 50 ವರ್ಷಗಳ ಅವಧಿಯ ಗುತ್ತಿಗೆ ಮತ್ತು ಟೆಂಡರ್ಗಳನ್ನು ಅದಾನಿ ಗ್ರೂಪ್ಗೆ ನೀಡಲಾಗಿದೆ. ವಿರೋಧ ಪಕ್ಷಗಳೂ ಇದೇ ರೀತಿಯ ಆರೋಪ ಮಾಡುತ್ತಿವೆ.
ಕಳೆದ ಜನವರಿಯಲ್ಲಿ, US ಮೂಲದ ಕಿರು-ಮಾರಾಟ ಸಂಸ್ಥೆ ಹಿಂಡೆನ್ಬರ್ಗ್ ವರದಿಯಲ್ಲಿ ಅದಾನಿ ಸಮೂಹದ ಕಂಪನಿಗಳಲ್ಲಿ ಹಣಕಾಸಿನ ಅಕ್ರಮಗಳನ್ನು ಆರೋಪಿಸಿದೆ. ಗೌತಮ್ ಅದಾನಿ ಕೆಲವೇ ದಿನಗಳಲ್ಲಿ 60 ಬಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ. ಶ್ರೀಮಂತರ ಪಟ್ಟಿಯಲ್ಲಿ ಮೂರರಿಂದ 24ನೇ ಸ್ಥಾನಕ್ಕೆ ಕುಸಿದಿದ್ದರು.
ಹಿಂಡೆನ್ಬರ್ಗ್ನ ಆರೋಪಗಳಿಗೆ ಅದಾನಿ ಗ್ರೂಪ್ ಕೂಡ ಪ್ರತಿಕ್ರಿಯಿಸಿ ಇದು ಭಾರತದ ಮೇಲಿನ ವ್ಯೂಹಾತ್ಮಕ ದಾಳಿ ಎಂದು ಬಣ್ಣಿಸಿ, ರಾಷ್ಟ್ರೀಯತೆಯನ್ನು ಮುನ್ನೆಲೆಗೆ ತಂದಿತು.
ಅದಾನಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿ ಮತ್ತು SEBI ಪ್ರತ್ಯೇಕ ತನಿಖೆಯನ್ನು ಆರಂಭಿಸಿವೆ. ನಾವೂ (OCCRP) ತನಿಖೆಯನ್ನು ಕೈಗೆತ್ತಿಕೊಂಡಿದ್ದೇವೆ.
ತೆರಿಗೆ ವಿನಾಯಿತಿಯ ಸ್ವರ್ಗ ಎಂದು ಹೇಳಿಕೊಳ್ಳುವ ಮಾರಿಷಸ್ನಿಂದ ಅದಾನಿ ಗ್ರೂಪ್ ಕಂಪನಿಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಹರಿದು ಬಂದಿರುವುದನ್ನು ನಾವು ಗಮನಿಸಿದ್ದೇವೆ.
ನಾವು 13 ವಿದೇಶಿ ಕಂಪನಿಗಳಲ್ಲಿ ಎರಡು ಪ್ರಕರಣಗಳನ್ನು ಆಳವಾಗಿ ವಿಶ್ಲೇಷಿಸಿದ್ದೇವೆ. ಎಮರ್ಜಿಂಗ್ ಇಂಡಿಯಾ ಫೋಕಸ್ ಫಂಡ್ (EIFF) ಮತ್ತು ಇಎಂ ರಿಸರ್ಜೆಂಟ್ ಫಂಡ್ (EMRF) ವಿದೇಶಿ ಫಂಡ್ಗಳಿಂದ ಅದಾನಿ ಗ್ರೂಪ್ ಭಾರಿ ಹೂಡಿಕೆಗಳನ್ನು ಪಡೆದಿರುವುದನ್ನು ನಾವು ಗಮನಿಸಿದ್ದೇವೆ.
UAE, ಮಾರಿಷಸ್ ಮತ್ತು ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಗಳಲ್ಲಿನ ನಾಲ್ಕು ಕಂಪನಿಗಳು ಈ ವಹಿವಾಟುಗಳಲ್ಲಿ ಭಾಗಿಯಾಗಿರುವುದನ್ನು ನಾವು ಕಂಡುಕೊಂಡಿದ್ದೇವೆ.
EIFF ಮತ್ತು EMRF ಕಂಪನಿಗಳು ಅದಾನಿ ಷೇರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಭಾರಿ ಲಾಭ ಗಳಿಸಿರುವುದನ್ನು ನಾವು ಕಂಡುಕೊಂಡಿದ್ದೇವೆ.
ಇಲ್ಲಿ ಅಸಲು ವಿಷಯವೆಂದರೆ EIFF ಮತ್ತು EMRFನಲ್ಲಿನ ಬಹುಪಾಲು ಷೇರುಗಳು ಚೀನಾದ ಚುಂಗ್ ಚುಂಗ್-ಲಿಂಗ್ ಮತ್ತು UAE ನಾಸರ್ ಅಲಿ ಶಾಬಾನ್ ಅವರ ಒಡೆತನದಲ್ಲಿದೆ.
ಲಿಂಗ್ ಮತ್ತು ಅಹ್ಲಿ ಅದಾನಿ ಕುಟುಂಬದೊಂದಿಗೆ ದೀರ್ಘಕಾಲದ ವ್ಯಾಪಾರ ಸಂಬಂಧವನ್ನು ಹೊಂದಿದ್ದಾರೆ. ಇದಲ್ಲದೆ, ಈ ಇಬ್ಬರು ಗುಂಪಿನ ಪ್ರವರ್ತಕರಿಗೆ ತುಂಬಾ ಹತ್ತಿರವಾಗಿದ್ದಾರೆ.
ಲಿಂಗ್ ಮತ್ತು ಅಹ್ಲಿ ಅವರು ಗೌತವ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಒಡೆತನದ ಹಲವಾರು ಕಂಪನಿಗಳಲ್ಲಿ ನಿರ್ದೇಶಕರು ಮತ್ತು ಷೇರುದಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಈಗ ಅನುಮಾನಾಸ್ಪದ ವಿದೇಶಿ ನಿಧಿಗಳ ಮೂಲಕ ಅದಾನಿ ಸಮೂಹದ ಷೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದವರು ಅವರೇ. ಷೇರುಗಳ ಮುಖಬೆಲೆಯನ್ನು ಕೃತಕವಾಗಿ ಹೆಚ್ಚಿಸಿ ಹೆಚ್ಚಿನ ಬೆಲೆಗೆ ಮಾರಲಾಯಿತು. ಪರಿಣಾಮವಾಗಿ, ಗಣನೀಯ ಲಾಭವನ್ನು ಗಳಿಸಲಾಯಿತು.
ಲಿಂಗ್, ಅಹ್ಲಿ ಅದಾನಿ ಗ್ರೂಪ್ ಪ್ರವರ್ತಕರ ಪರವಾಗಿ ಇದೆಲ್ಲವನ್ನೂ ಮಾಡಿದ್ದರೆ? ಅದೇ ನಿಜವಾಗಿದ್ದರೆ, ಕಂಪನಿಯ ಒಳಗಿನವರು 75 ಪ್ರತಿಶತಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದ್ದಾರೆ! ಇದು ಭಾರತದ ಲಿಸ್ಟಿಂಗ್ ನಿಯಮಗಳಿಗೂ ವಿರುದ್ಧವಾಗಿದೆ.
ಕುಟುಂಬ ಸದಸ್ಯರ ಸಮನ್ವಯದಿಂದ ಅದಾನಿ ಷೇರುಗಳ ವಹಿವಾಟು ನಡೆದಿರುವುದು ನಮ್ಮ ತನಿಖೆಯಿಂದ ತಿಳಿದುಬಂದಿದೆ.
EIFF ಮತ್ತು EMRF ಮೂಲಕ, ಅದಾನಿ ಗ್ರೂಪ್ಗೆ ಸೇರಿದ 4 ಕಂಪನಿಗಳಲ್ಲಿ ಲಿಂಗ್ ಮತ್ತು ಅಹ್ಲಿ ಕ್ರಮವಾಗಿ 13.5 ಶೇಕಡಾ ಮತ್ತು 8 ಶೇಕಡಾ ಉಚಿತ ಫ್ಲೋಟಿಂಗ್ ಷೇರುಗಳನ್ನು ಹೊಂದಿದ್ದಾರೆ ಎಂದು ನಾವು ಕಲಿತಿದ್ದೇವೆ. ಇವು ಗುಂಪು ಪ್ರವರ್ತಕರ ಪರವಾಗಿವೆ ಎಂದು ಪರಿಗಣಿಸಿದರೆ, ಅದು ಭಾರತೀಯ ಕಾನೂನುಗಳನ್ನು ಉಲ್ಲಂಘಿಸುತ್ತದೆ ಮತ್ತು 75 ಪ್ರತಿಶತದ ಮಿತಿಯನ್ನು ದಾಟುತ್ತದೆ. ಅಂದರೆ ಸ್ಟಾಕ್ ಮ್ಯಾನಿಪ್ಯುಲೇಷನ್.
ಗೌತಮ್ ಅದಾನಿ ಆಸ್ತಿ ವಿವರ
2013: ರೂ.17,000 ಕೋಟಿ (ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ)
2020: ರೂ.1.6 ಲಕ್ಷ ಕೋಟಿ (ಮೋದಿ ಪ್ರಧಾನಿಯಾಗಿ ದೇಶವನ್ನು ಆಳುತ್ತಿರುವಾಗ)
2023, ಜನವರಿ 23: ರೂ 9.8 ಲಕ್ಷ ಕೋಟಿ (ಹಿಂಡೆನ್ಬರ್ಗ್ ವರದಿಯ ಹಿಂದಿನ ದಿನ)
2023, ಮಾರ್ಚ್ 31: ರೂ.3.8 ಲಕ್ಷ ಕೋಟಿ (ಹಿಂಡೆನ್ಬರ್ಗ್ ವಿವಾದ ಮುಂದುವರಿದಿರುವಾಗ)
2023, ಆಗಸ್ಟ್ 30: ರೂ.4.5 ಲಕ್ಷ ಕೋಟಿ (OCCRP ವರದಿಗೂ ಮೊದಲು)