ಭುವನೇಶ್ವರ: ದೋಷಪೂರಿತ ವಿನ್ಯಾಸ, ಕಳಪೆ ಗುಣಮಟ್ಟದ ನಿರ್ಮಾಣ ಹಾಗೂ ಸರಿಯಾದ ನಿರ್ವಹಣೆಯ ಕೊರತೆಯಿಂದಾಗಿ ರಸ್ತೆ ಅಪಘಾತಗಳಲ್ಲಿ ಪಾದಚಾರಿಗಳು ಮೃತಪಟ್ಟರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದರೆ, ಅದಕ್ಕೆ ಕಾರಣರಾದ ಗುತ್ತಿಗೆದಾರರು, ಸರ್ಕಾರಿ ಎಂಜಿನಿಯರ್‌ಗಳು ಹಾಗೂ ನಿರ್ಮಾಣ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ದಂಡ ವಿಧಿಸಲು ಒಡಿಶಾ ಸರ್ಕಾರ ಮುಂದಾಗಿದೆ.
ಈ ಸಂಬಂಧ ರಾಜ್ಯ ವಾಣಿಜ್ಯ ಮತ್ತು ಸಾರಿಗೆ ಇಲಾಖೆಯು ಪಾದಚಾರಿ ಸುರಕ್ಷತಾ ಕರಡು ನಿಯಮಾವಳಿಗಳನ್ನು (ಒಡಿಶಾ ಪೆಡೆಸ್ಟ್ರಿಯನ್ ಸೇಫ್ಟಿ ರೂಲ್ಸ್-2026) ಪ್ರಕಟಿಸಿದೆ.ಪ್ರಸ್ತಾವಿತ ಕರಡು ನಿಯಮಗಳ ಪ್ರಕಾರ, ರಸ್ತೆ ನಿರ್ಮಾಣ ಅಥವಾ ನಿರ್ವಹಣಾ ಲೋಪಗಳಿಂದಾಗಿ ದುರ್ಘಟನೆ ಸಂಭವಿಸಿದರೆ, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 198ಎ ಅಡಿಯಲ್ಲಿ ಸಂಬಂಧಪಟ್ಟ ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳು ತನಿಖೆ ಹಾಗೂ ಕ್ರಿಮಿನಲ್ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ.
ಇದಲ್ಲದೆ, ಕಳಪೆ ಕಾಮಗಾರಿ ನಡೆಸಿರುವ ನಿರ್ಮಾಣ ಸಂಸ್ಥೆಗಳ ಗುತ್ತಿಗೆ ಒಪ್ಪಂದಗಳನ್ನು ರದ್ದುಗೊಳಿಸುವುದು, ಸಂಸ್ಥೆಗಳನ್ನು ಕಪ್ಪುಪಟ್ಟಿಗೆ (ಬ್ಲ್ಯಾಕ್‌ಲಿಸ್ಟ್) ಸೇರಿಸುವುದು ಮತ್ತು ಬಾಕಿ ಪಾವತಿಗಳನ್ನು ತಡೆಹಿಡಿಯುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.ರಸ್ತೆ ಯೋಜನೆಗೆ ಅಂತಿಮ ಅನುಮತಿ ನೀಡುವ ಮುನ್ನ ಅಥವಾ ಅಂತಿಮ ಆರ್ಥಿಕ ಬಿಲ್ ಪಾವತಿಯಾಗುವ ಮೊದಲು, ಪ್ರಮುಖ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರು ವೈಯಕ್ತಿಕ ಕಾನೂನು ಹೊಣೆಗಾರಿಕೆಯನ್ನು ಒಪ್ಪಿಕೊಂಡು ಸುರಕ್ಷತಾ ಅನುಸರಣಾ ಪತ್ರಕ್ಕೆ (ಸೇಫ್ಟಿ ಕಾಂಪ್ಲೈಯನ್ಸ್ ಡಿಕ್ಲರೇಷನ್) ಕಡ್ಡಾಯವಾಗಿ ಸಹಿ ಹಾಕಬೇಕೆಂದು ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ.
