ಸಂಬಲ್‌ಪುರ: ಒಡಿಶಾದ ಸಂಬಲ್‌ಪುರದಲ್ಲಿ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕನನ್ನು ‘ಬಾಂಗ್ಲಾದೇಶಿ ನುಸುಳುಕೋರ’ ಎಂದು ಆರೋಪಿಸಿ ಹೊಡೆದು ಕೊಲ್ಲಲಾಗಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಿವಾಸಿಯಾದ 30 ವರ್ಷದ ಜುಯೆಲ್ ಶೇಖ್ ಕೊಲೆಯಾದ ದುರ್ದೈವಿ.
ವರದಿಗಳ ಪ್ರಕಾರ, ಜುಯೆಲ್ ಶೇಖ್ ತನ್ನ ಮೂವರು ಸಹಚರರೊಂದಿಗೆ ಚಹಾದ ಅಂಗಡಿಯೊಂದರ ಬಳಿ ನಿಂತಿದ್ದಾಗ, ಅಲ್ಲಿಗೆ ಬಂದ ಕೆಲವು ವ್ಯಕ್ತಿಗಳು ಅವರನ್ನು ‘ಅಕ್ರಮ ಬಾಂಗ್ಲಾದೇಶಿಗಳು’ ಎಂದು ಕರೆದು ಗುರುತಿನ ಚೀಟಿ ತೋರಿಸುವಂತೆ ಒತ್ತಾಯಿಸಿದರು.
ಕಾರ್ಮಿಕರು ತಮ್ಮ ಬಳಿಯಿದ್ದ ಅಧಿಕೃತ ದಾಖಲೆಗಳನ್ನು ತೋರಿಸಿದ ಹೊರತಾಗಿಯೂ, ಉದ್ರಿಕ್ತ ಗುಂಪು ಜುಯೆಲ್ ಶೇಖ್ ಮೇಲೆ ಮನಬಂದಂತೆ ಹಲ್ಲೆ ನಡೆಸಿತು. ಈ ದಾಳಿಯಲ್ಲಿ ಜುಯೆಲ್ ಸಾವನ್ನಪ್ಪಿದ್ದು, ಉಳಿದ ಮೂವರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸಂಬಲ್‌ಪುರ ಪೊಲೀಸರು ಇದುವರೆಗೆ ಆರು ಮಂದಿಯನ್ನು ಬಂಧಿಸಿದ್ದಾರೆ. ಪೊಲೀಸ್ ಮಹಾನಿರೀಕ್ಷಕ (ಐಜಿ) ಹಿಮಾಂಶು ಲಾಲ್ ಅವರ ಪ್ರಕಾರ, ಇದು ‘ಹಠಾತ್ ಪ್ರಚೋದನೆ’ಯಿಂದ ನಡೆದ ಘಟನೆಯಾಗಿದ್ದು, ಯಾರನ್ನೂ ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲ ಎಂದು ತಿಳಿಸಿದ್ದಾರೆ.
ದಾಳಿಕೋರರು ಕಾರ್ಮಿಕರ ಗುರುತಿನ ಚೀಟಿಗಳನ್ನು ಕೇಳಲು ಕಾರಣವೇನು ಎಂಬುದನ್ನು ಪೊಲೀಸರು ಇನ್ನೂ ಸ್ಪಷ್ಟಪಡಿಸಿಲ್ಲ. ಕೆಲವು ಸ್ಥಳೀಯ ಮಾಧ್ಯಮಗಳ ಪ್ರಕಾರ, ‘ಬೀಡಿ ಕಳ್ಳತನ’ದ ಆರೋಪವೂ ಈ ಘಟನೆಯ ಹಿಂದೆ ಕೇಳಿಬಂದಿದೆ.
ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇದಕ್ಕೆ ಬಿಜೆಪಿಯ ‘ಬಂಗಾಳಿ ವಿರೋಧಿ ಅಭಿಯಾನ’ವೇ ಕಾರಣ ಎಂದು ಆರೋಪಿಸಿದೆ. ಬಂಗಾಳಿ ಭಾಷೆ ಮಾತನಾಡುವವರನ್ನು ‘ನುಸುಳುಕೋರರು’ ಅಥವಾ ‘ಅನುಮಾನಸ್ಪದ ವ್ಯಕ್ತಿಗಳು’ ಎಂದು ಚಿತ್ರಿಸುವ ರಾಜಕೀಯ ಭಾಷಣಗಳಿಂದಾಗಿ ಇಂತಹ ದ್ವೇಷದ ಘಟನೆಗಳು ಬೀದಿಗಳಲ್ಲಿ ನಡೆಯುತ್ತಿವೆ ಎಂದು ಟಿಎಂಸಿ ಟೀಕಿಸಿದೆ.
ಇತ್ತೀಚೆಗಷ್ಟೇ ಕೇರಳದ ಪಾಲಕ್ಕಾಡ್‌ನಲ್ಲಿಯೂ ಛತ್ತೀಸ್‌ಗಢ ಮೂಲದ ರಾಮನಾರಾಯಣ್ ಬಘೇಲ್ ಎಂಬ ಕಾರ್ಮಿಕನನ್ನು ಕಳ್ಳತನದ ಶಂಕೆಯ ಮೇಲೆ ಹೊಡೆದು ಕೊಲ್ಲಲಾಗಿತ್ತು. ಅಲ್ಲಿಯೂ ಸಹ ದಾಳಿಕೋರರು ಆತನನ್ನುನೀನು ‘ಬಾಂಗ್ಲಾದೇಶಿಯೇ’ ಎಂದು ಕೇಳಿದ್ದರು ಎಂಬುದು ಗಮನಾರ್ಹ. ದೇಶಾದ್ಯಂತ ‘ಅಕ್ರಮ ಬಾಂಗ್ಲಾದೇಶಿ’ ಎಂಬ ಶಂಕೆಯ ಮೇಲೆ ಅಮಾಯಕ ಕಾರ್ಮಿಕರ ಮೇಲೆ ನಡೆಯುತ್ತಿರುವ ಇಂತಹ ಸರಣಿ ದಾಳಿಗಳು ತೀವ್ರ ಕಳವಳಕ್ಕೆ ಕಾರಣವಾಗಿವೆ.
