ಗ್ರಹಾಂ ಸ್ಟೇನ್ಸ್ ಹತ್ಯೆ ಪ್ರಕರಣ: ದಾರಾ ಸಿಂಗ್ ಅಕಾಲಿಕ ಬಿಡುಗಡೆ ಅರ್ಜಿ ತಿರಸ್ಕರಿಸಿದ ಒಡಿಶಾ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ಮಾಹಿತಿ

ಆಸ್ಟ್ರೇಲಿಯಾದ ಮಿಷನರಿ ಗ್ರಹಾಂ ಸ್ಟೇನ್ಸ್ ಹಾಗೂ ಅವರ ಇಬ್ಬರು ಅಪ್ರಾಪ್ತ ಮಕ್ಕಳ ಬರ್ಬರ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ರವೀಂದ್ರ ಕುಮಾರ್ ಪಾಲ್ ಅಲಿಯಾಸ್ ದಾರಾ ಸಿಂಗ್ ಸಲ್ಲಿಸಿದ್ದ ಅಕಾಲಿಕ ಬಿಡುಗಡೆ ಅರ್ಜಿಯನ್ನು ಒಡಿಶಾ ಸರ್ಕಾರದ ಶಿಕ್ಷಾ ಪರಿಶೀಲನಾ ಮಂಡಳಿ (Sentence Review Board) ತಿರಸ್ಕರಿಸಿದೆ. ಈ ವಿಷಯವನ್ನು ಒಡಿಶಾ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದೆ.

ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ವಿಜಯ್ ಬಿಷ್ಣೋಯ್ ಅವರನ್ನೊಳಗೊಂಡ ಪೀಠಕ್ಕೆ ಸರ್ಕಾರದ ಈ ನಿರ್ಧಾರವನ್ನು ತಿಳಿಸಲಾಯಿತು. ರಾಜ್ಯ ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ತನ್ನ ಅರ್ಜಿಯನ್ನು ತಿದ್ದುಪಡಿ ಮಾಡಲು ಅಪರಾಧಿಗೆ ಅವಕಾಶ ನೀಡಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿದೆ. ಸರ್ಕಾರದ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ದಾರಾ ಸಿಂಗ್ ಪರ ವಕೀಲರು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ 25 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದ ದಾರಾ ಸಿಂಗ್‌ಗೆ ಈ ನಿರ್ಧಾರದಿಂದ ಭಾರಿ ಹಿನ್ನಡೆಯಾಗಿದೆ.

ಈ ಹಿಂದೆ ಪದೇಪದೇ ನಿರ್ದೇಶನ ನೀಡಿದ್ದರೂ ಅರ್ಜಿ ವಿಲೇವಾರಿ ಮಾಡದೆ ವಿಳಂಬ ಧೋರಣೆ ಅನುಸರಿಸಿದ್ದಕ್ಕಾಗಿ ಒಡಿಶಾ ಸರ್ಕಾರ ಹಾಗೂ ಪರಿಶೀಲನಾ ಮಂಡಳಿಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಅಂತಿಮ ಅವಕಾಶ ನೀಡಿ, ತೀರ್ಮಾನ ಕೈಗೊಳ್ಳದಿದ್ದರೆ ತಾನೇ ನಿರ್ಧಾರ ತೆಗೆದುಕೊಳ್ಳುವುದಾಗಿ ಎಚ್ಚರಿಸಿತ್ತು. 1999ರಲ್ಲಿ ನಡೆದ ಸ್ಟೇನ್ಸ್ ಕುಟುಂಬದ ಹತ್ಯೆ ಪ್ರಕರಣದಲ್ಲಿ ಬಜರಂಗದಳದ ಕಾರ್ಯಕರ್ತನಾಗಿದ್ದ ದಾರಾ ಸಿಂಗ್‌ಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ನಂತರ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಲಾಗಿತ್ತು. ಒಡಿಶಾ ಸರ್ಕಾರದ ನಿಯಮಾವಳಿಗಳ ಪ್ರಕಾರ ಇಂತಹ ಅಪರಾಧಿಗಳು 25 ವರ್ಷಗಳ ಜೈಲುವಾಸದ ನಂತರ ಅಕಾಲಿಕ ಬಿಡುಗಡೆ ಅರ್ಜಿಗೆ ಅರ್ಹರಾಗುತ್ತಾರೆ.

ತಮ್ಮ ಸುದೀರ್ಘ ಜೈಲುವಾಸ, ಜೈಲಿನಲ್ಲಿನ ಉತ್ತಮ ನಡತೆ ಹಾಗೂ ಸುಧಾರಣಾ ನ್ಯಾಯದ ತತ್ವಗಳನ್ನು ಉಲ್ಲೇಖಿಸಿ ದಾರಾ ಸಿಂಗ್ ಬಿಡುಗಡೆಗೆ ಕೋರಿದ್ದ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಎ.ಜಿ. ಪೆರಾರಿವಾಲನ್ ಅವರನ್ನು 2022ರಲ್ಲಿ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದ ಆದೇಶವನ್ನು ಉಲ್ಲೇಖಿಸಿದ್ದ ಆತ, ಅಧಿಕಾರಿಗಳ ವಿಳಂಬ ಧೋರಣೆಯು ಸಂವಿಧಾನದ 21ನೇ ವಿಧಿಯಡಿ ತನಗೆ ನೀಡಿರುವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದ.

Related Articles

ಇತ್ತೀಚಿನ ಸುದ್ದಿಗಳು