Home ಬ್ರೇಕಿಂಗ್ ಸುದ್ದಿ ಸಕಲೇಶಪುರ ಅರಣ್ಯದಲ್ಲಿ ಆಫ್ ರೇಡಿಂಗ್, ಬೆಂಗಳೂರು ಮೂಲದ 7 ಮಹೀಂದ್ರ ಥಾರ್‌ ಜೀಪ್‌ಗಳು ಜಪ್ತಿ

ಸಕಲೇಶಪುರ ಅರಣ್ಯದಲ್ಲಿ ಆಫ್ ರೇಡಿಂಗ್, ಬೆಂಗಳೂರು ಮೂಲದ 7 ಮಹೀಂದ್ರ ಥಾರ್‌ ಜೀಪ್‌ಗಳು ಜಪ್ತಿ

ಸಕಲೇಶಪುರ: ಹಾಸನ ಜಿಲ್ಲೆಯ ಸಕಲೇಶಪುರ (Sakaleshpura) ತಾಲೂಕಿನ ಸೌಂದರ್ಯಕ್ಕೆ ಮನಸೋತು ಬರುವ ಪ್ರವಾಸಿಗರಲ್ಲಿ (Tourists ) ಕೆಲವರು ನಿಯಮ ಮೀರಿ ವರ್ತಿಸುತ್ತಿದ್ದಾರೆ.

ತಾಲೂಕಿನ ಹೊಡಚಳ್ಳಿ ಗ್ರಾಮದ ವ್ಯಾಪ್ತಿಯಲ್ಲಿರುವ ಪರಿಭಾವಿತ ಅರಣ್ಯ (ಡೀಮ್ಡ್ ಫಾರೆಸ್ಟ್) ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ‘ಆಫ್ ರೇಡಿಂಗ್’ ಸಾಹಸ ಪ್ರದರ್ಶಿಸುತ್ತಿದ್ದ ಪ್ರವಾಸಿಗರ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ಜರುಗಿಸಿದೆ.

ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರ ತಂಡವೊಂದು ಅತ್ಯಂತ ಸೂಕ್ಷ್ಮ ಪರಿಸರ ವಲಯದಲ್ಲಿ ವಾಹನಗಳನ್ನು ಚಲಾಯಿಸುತ್ತಾ ಪುಂಡಾಟ ನಡೆಸುತ್ತಿತ್ತು. ಸ್ಥಳೀಯ ಸಸ್ಯರಾಶಿ ಹಾಗೂ ವನ್ಯಜೀವಿಗಳ ಆವಾಸಸ್ಥಾನಕ್ಕೆ ಹಾನಿ ಉಂಟಾಗುತ್ತಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ, ಸಕಲೇಶಪುರ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ಈ ದಿಢೀರ್ ದಾಳಿಯ ವೇಳೆ ನಿಯಮ ಉಲ್ಲಂಘಿಸಿ ಆಫ್ ರೋಡ್ ಚಾಲನೆ ಮಾಡುತ್ತಿದ್ದ 7 ಮಹೀಂದ್ರ ಥಾರ್ ಜೀಪ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಕೃತಿ ಸೌಂದರ್ಯವನ್ನು ಆನಂದಿಸುವುದನ್ನು ಬಿಟ್ಟು ಪರಿಸರ ನಾಶಕ್ಕೆ ಕಾರಣರಾದ ಪ್ರವಾಸಿಗರ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸೂಕ್ಷ್ಮ ಅರಣ್ಯ ಪ್ರದೇಶಗಳಿಗೆ ಅಕ್ರಮವಾಗಿ ಮಾರ್ಗದರ್ಶನ ನೀಡಿ, ವಾಸ್ತವ್ಯದ ವ್ಯವಸ್ಥೆ ಕಲ್ಪಿಸಿದ್ದ ಸ್ಥಳೀಯ ಹೋಮ್‌ಸ್ಟೇ ಹಾಗೂ ರೆಸಾರ್ಟ್‌ಗಳ ಮಾಲೀಕರಿಗೂ ನೋಟಿಸ್ ನೀಡಲು ಇಲಾಖೆ ತೀರ್ಮಾನಿಸಿದೆ. ಇಂತಹ ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

You cannot copy content of this page

Exit mobile version