ಅಧಿಕಾರಿಗಳು ಸರ್ಕಾರದ ಘನತೆ ಕಾಯ್ದುಕೊಳ್ಳಬೇಕು – ಸಿಎಂ ಡಿಕೆಶಿ

ಬೆಂಗಳೂರು: ಅಧಿಕಾರಿಗಳು ವೃತ್ತಿಪರತೆ ಪ್ರದರ್ಶಿಸಿ ಇಲಾಖೆ ಹಾಗೂ ಸರ್ಕಾರದ ಘನತೆ ಕಾಯ್ದುಕೊಳ್ಳಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ವಿಧಾನಸೌಧದಲ್ಲಿಂದು ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಇಲಾಖೆಯ ಪ್ರಸ್ತುತ ಕಾರ್ಯವೈಖರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಅಧಿಕಾರಿಗಳು ವೃತ್ತಿಪರತೆ ಪ್ರದರ್ಶಿಸಿ ಇಲಾಖೆ ಹಾಗೂ ಸರ್ಕಾರದ ಘನತೆ ಕಾಯ್ದುಕೊಳ್ಳಬೇಕು. ಸರ್ಕಾರದ ಘನತೆಗೆ ಧಕ್ಕೆ ತರುವ ಅಥವಾ ಕೆಟ್ಟ ಹೆಸರು ತರುವ ಯಾವುದೇ ಪ್ರಯತ್ನವನ್ನು ಸಹಿಸಲಾಗುವುದಿಲ್ಲ. ಅಗತ್ಯಬಿದ್ದರೆ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಲು ಬೇಕಾದ ಕಾನೂನು ಬದಲಾವಣೆಯನ್ನು ತರಲು ಅವಕಾಶಗಳಿದ್ದು, ಎಲ್ಲರೂ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎನ್ನುವ ಸ್ಪಷ್ಟ ಸೂಚನೆ ನೀಡಿದ್ದಾರೆ.

ಅಕ್ಕಪಕ್ಕದ ರಾಜ್ಯಗಳಲ್ಲಿ ಇಲಾಖೆ ಹೇಗೆ ನಡೆಯುತ್ತಿದೆ ಎನ್ನುವ ವರದಿಗಳನ್ನು ಗಮನಿಸಿದ್ದು, ಇಲಾಖೆಗೆ ಕೊಟ್ಟಿರುವ ಗುರಿಯನ್ನು ತಲುಪಲು ಅಧಿಕಾರಿಗಳು ಕಡ್ಡಾಯವಾಗಿ ಶ್ರಮಿಸಬೇಕು. ಇಲಾಖೆಯಲ್ಲಿ ಹೊಸದಾಗಿ AIB ಪದ್ಧತಿ ಜಾರಿಯಾದ ಬಳಿಕ ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ. ಹೀಗಾಗಿ ಸಭೆಯಲ್ಲಿ, ಹೊಸದಾಗಿ 574 ಸನ್ನದುಗಳನ್ನು ಇ-ಹರಾಜು ಹಾಕಲು ನಿರ್ಧರಿಸಲಾಗಿದೆ. ಅಂತೆಯೇ ವ್ಯಾಪಾರಿಗಳ ಅನುಕೂಲಕ್ಕಾಗಿ ಪರವಾನಗಿ ನವೀಕರಣ ಮೊತ್ತವನ್ನು ಎರಡು ಕಂತುಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸುವಂತೆ ಸೂಚಿಸಲಾಗಿದೆ . ಹೀಗೆ ಎರಡು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಆರ್ಥಿಕ ಸಲಹೆಗಾರರಾದ ಎಲ್. ಕೆ. ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಅಬಕಾರಿ ಇಲಾಖೆ ಆಯುಕ್ತರಾದ ವೆಂಕಟೇಶ್ ಕುಮಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು