Monday, July 1, 2024

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್‌ ಕದ ತಟ್ಟಿಬಂದ ಬೊಮ್ಮಾಯಿ ಯಾವ ನೈತಿಕತೆ ಮೇಲೆ ನನ್ನ ನಿರ್ಧಾರವನ್ನು ಪ್ರಶ್ನಿಸುತ್ತಿದ್ದಾರೆ? ಶೆಟ್ಟರ್‌ ಗುಡುಗು

ಯಡಿಯೂರಪ್ಪನವರನ್ನು ವಯಸ್ಸಿನ ಕಾರಣದಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಿ.ಜೆ.ಪಿ. ಹೈಕಮಾಂಡ್‌ಗೆ ಈಗ ಅದೇ ಯಡಿಯೂರಪ್ಪನವರನ್ನು ಮುಂದಿಟ್ಟುಕೊಂಡು ಮತ ಕೇಳಲು ಯಾವ ನೈತಿಕ ಹಕ್ಕು ಇದೆ ಎಂದು ಮಾಜಿಮುಖ್ಯಮಂತ್ರಿ ಹಾಗೂ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಪ್ರಶ್ನಿಸಿದರು.

ಚುನಾವಣಾ ಬಹಿರಂಗ ಪ್ರಚಾರದ ಕೊನೆಯ ದಿನವಾದ ಸೋಮವಾರ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಶೆಟ್ಟರ್ ಅವರು, ಬಿ.ಜೆ.ಪಿ.ಯಲ್ಲಿ ಲಿಂಗಾಯತರು, ಒಕ್ಕಲಿಗರು, ದಲಿತರು ಸೇರಿದಂತೆ ಇತರೆಲ್ಲ ಹಿಂದುಳಿದ ವರ್ಗಗಳ ನಾಯಕರನ್ನು ವ್ಯವಸ್ಥಿತವಾಗಿ ರಾಜಕೀಯವಾಗಿ ಮೂಲೆಗುಂಪು ಮಾಡುವ ಪ್ರಯತ್ನ ಬಿ.ಎಲ್. ಸಂತೋಷ್ ಮತ್ತವರ ಸಹಚರರಿಂದ ನಡೆಯುತ್ತಿದೆ ಎಂದು ಆರೋಪಿಸಿದರು. ತಮ್ಮ ಆರೋಪಕ್ಕೆ ಸಾಕ್ಷ್ಯ ಒದಗಿಸುತ್ತ ಮಾತನಾಡಿದ ಅವರು, ೨೫ ಸಂಸದರನ್ನು ನೀಡಿರುವ ಕರ್ನಾಟಕಕ್ಕೆ ದಲಿತ ಸಮುದಾಯದ ಎ.ನಾರಾಯಣಸ್ವಾಮಿ, ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ ಮತ್ತು ಲಿಂಗಾಯತ ಸಮುದಾಯದ ಭಗವಂತ ಖೂಬಾ ಅವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿ, ಬ್ರಾಹ್ಮಣ ಸಮುದಾಯದ ಪ್ರಲ್ಹಾದ ಜೋಶಿ ಅವರಿಗೆ ಮಾತ್ರ ಕ್ಯಾಬಿನೆಟ್ ಸಚಿವ ಸ್ಥಾನ ನೀಡಲಾಗಿದೆ; ಕೇವಲ ೨-೩ ಬಿ.ಜೆ.ಪಿ. ಸಂಸದರನ್ನು ನೀಡಿರುವ ರಾಜ್ಯಗಳಿಗೆ ಹೆಚ್ಚಿನ ಕ್ಯಾಬಿನೆಟ್ ಸ್ಥಾನಗಳನ್ನು ನೀಡಲಾಗಿದೆ ಎಂದು ವಿಶ್ಲೇಷಿಸಿದರು.

ಸಂತೋಷ್ ಅವರು ಲಿಂಗಾಯತರು ಬಿ.ಜೆ.ಪಿ.ಗೆ ಬೇಕಿಲ್ಲ ಎಂದು ಹೇಳಿದ್ದರೆನ್ನಲಾದ ವಿಷಯವನ್ನು ಪ್ರಸ್ತಾಪಿಸಿದ ಶೆಟ್ಟರು, ಪ್ರಕರಣ ದಾಖಲಿಸುವುದು ಬಿ.ಜೆ.ಪಿ.ಗೆ ಒಂದು ರೂಢಿಯಾಗಿ ಬಿಟ್ಟಿದೆ; ಹಿಂದೆ ಕಟೀಲ್ ಅವರೂ, ಬಿ.ಜೆ.ಪಿ.ಯಲ್ಲಿ ಇನ್ನು ಯಡಿಯೂರಪ್ಪನವರ ಕತೆ ಮುಗೀತು; ಶೆಟ್ಟರ್ ಮತ್ತು ಈಶ್ವರಪ್ಪ ಇಬ್ಬರನ್ನು ಬದಿಗೆ ಸರಿಸಿಬಿಟ್ಟರೆ ನಾವು ನಮ್ಮದೇ ಆದ ಬಿ.ಜೆ.ಪಿ. ಕಟ್ಟಬಹುದು ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದ ಆಡಿಯೊ ವೈರಲ್ ಆಗಿತ್ತು. ಆ ಬಗ್ಗೆ ಕಟೀಲ್ ಅವರೇ ಪ್ರಕರಣ ದಾಖಲಿಸಿದ್ದರು. ಆ ಪ್ರಕರಣದ ಕತೆ ಏನಾಯಿತು ಎನ್ನುವುದು ಇವತ್ತಿಗೂ ಯಾರಿಗೂ ಗೊತ್ತಿಲ್ಲ. ಒಟ್ಟಿನಲ್ಲಿ ಪ್ರಕರಣ ದಾಖಲಿಸಿ, ವಿಷಯಾಂತರ ಮಾಡುವುದು ಬಿ.ಜೆ.ಪಿ.ಯ ತಂತ್ರವಾಗಿದೆ ಎಂದು ಹರಿಹಾಯ್ದರು.

ಯಡಿಯೂರಪ್ಪನವರು ಸಂತೋಷ್ ಅವರ ಬಗ್ಗೆ ಈ ಹಿಂದೆಯೇ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಉಲ್ಲೇಖಿಸಿದ ಶೆಟ್ಟರ್, ಹುಬ್ಬಳ್ಳಿಗೆ ಬರುವ ಎಲ್ಲ ಬಿ.ಜೆ.ಪಿ. ರಾಷ್ಟ್ರೀಯ ಮತ್ತು ರಾಜ್ಯ ನಾಯಕರು, ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಮತ ಕೇಳುವ ಬದಲಿಗೆ, ‘ಶೆಟ್ಟರ್‌ ಅವರನ್ನು ಸೋಲಿಸಿ’ ಎಂದೇ ಗೋಗರೆಯುತ್ತಿದ್ದಾರೆ; ನಾವು ಕಾಂಗ್ರೆಸ್ ಸೇರಿದ ಬಳಿಕ ಸೆಂಟ್ರಲ್ ಕ್ಷೇತ್ರ ದೇಶದ ಗಮನ ಸೆಳೆದಿರುವುದರಿಂದ ಬಿ.ಜೆ.ಪಿ.ಯವರಿಗೆ ನನ್ನ ಸೋಲು ಮುಖ್ಯವಾಗಿದೆ. ಆದರೆ ನನ್ನ ಕ್ಷೇತ್ರದ ಮತದಾರರು ಹಿಂದಿನ ಎಲ್ಲ ಮಾರ್ಜಿನ್ ದಾಖಲೆಗಿಂತ ಹೆಚ್ಚಿನ ಮಾರ್ಜಿನ್‌ನಿಂದ ನನ್ನನ್ನು ಆಶೀರ್ವದಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಮೋದಿ ಒಬ್ಬರೇ ರೋಡ್‌ಶೋ ನಡೆಸಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ ಶೆಟ್ಟರ್, ಮುಖ್ಯಮಂತ್ರಿ ಬೊಮ್ಮಾಯಿ, ಪಕ್ಷದ ಇವತ್ತಿಗೂ ಅತ್ಯಂತ ಜನಪ್ರಿಯ ನಾಯಕರಾಗಿಯೇ ಉಳಿದಿರುವ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸದಾನಂದಗೌಡರನ್ನೂ ದೂರ ಇಟ್ಟಿರುವುದನ್ನು ಉಲ್ಲೇಖಿಸಿ, ಬಿ.ಜೆ.ಪಿ.ಯ ರಾಜ್ಯ ನಾಯಕತ್ವದ ಅಧೋಗತಿ ಎಂದು ಬಣ್ಣಿಸಿದರು.

ಪಕ್ಷ ಮುಖ್ಯವೇ ಹೊರತು, ವ್ಯಕ್ತಿ ಅಲ್ಲ ಎನ್ನುವ ಬಿ.ಜೆ.ಪಿ. ನಾಯಕರು, ಮೋದಿ ಅವರನ್ನು ದೂರ ಇಟ್ಟು ರಾಜ್ಯದ ಚುನಾವಣೆ ಎದುರಿಸಿ ತೋರಿಸಲಿ ಎಂದು ಸವಾಲು ಹಾಕಿದರು.

೨೦೧೩ರಲ್ಲಿ ಯಡಿಯೂರಪ್ಪ ಮತ್ತು ಶ್ರೀರಾಮುಲು ಬಿ.ಜೆ.ಪಿ. ತೊರೆದು ಕೆ.ಜೆ.ಪಿ. ಮತ್ತು ಬಿ.ಎಸ್.ಆರ್.ಕಾಂಗ್ರೆಸ್ ಕಟ್ಟಿದಾಗ ಬಸವರಾಜ ಬೊಮ್ಮಾಯಿಯವರು ಕಾಂಗ್ರೆಸ್ ಪಕ್ಷದ ಕದ ತಟ್ಟಿದ್ದರು, ಅವರಿಗೆ ತಾವು ಕೇಳಿದ ಕ್ಷೇತ್ರಕ್ಕೆ ಟಿಕೆಟ್ ಕೊಡಲ್ಲ ಎಂದು ಕಾಂಗ್ರೆಸ್ ಹೇಳಿದಾಗ, ಅನಿವಾರ್ಯವಾಗಿ ಬಿ.ಜೆ.ಪಿ.ಯಲ್ಲಿ ಉಳಿದು ಮುಖ್ಯಮಂತ್ರಿಯಾಗಿರುವ ಬೊಮ್ಮಾಯಿಯವರು ಈಗ ಯಾವ ನೈತಿಕತೆ ಮೇಲೆ ನನ್ನ ನಿರ್ಧಾರವನ್ನು ಪ್ರಶ್ನಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರಲ್ಲದೇ ಯಡಿಯೂರಪ್ಪ-ಶ್ರೀರಾಮುಲು ಅವರಂತೆ ತಾವು ಮತ್ತೆಂದೂ ಬಿ.ಜೆ.ಪಿ.ಗೆ ಮರಳಲ್ಲ, ತಮ್ಮ ಜೀವಿತದ ಕೊನೆಯವರಿಗೂ ಕಾಂಗ್ರೆಸ್‌ನಲ್ಲಿ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.

ಮಾಜಿ ಸಂಸದ, ಉದ್ಯಮಿ ವಿಜಯ ಸಂಕೇಶ್ವರರು ತಮ್ಮ ವಿರುದ್ಧ ಹೇಳಿಕೆ ನೀಡುತ್ತಿರುವುದರ ಬಗ್ಗೆ ಪ್ರಶ್ನಿಸಿದಾಗ, ಅವರಿಗೆ ಕೇಂದ್ರ ಸರಕಾರದಿಂದ ಹಾಗೆ ಮಾತನಾಡಲು ಒತ್ತಡ ಇರಬಹುದು ಎಂದು ಶೆಟ್ಟರ್ ಅನುಮಾನ ವ್ಯಕ್ತಪಡಿಸಿದರು. “ಸಂಕೇಶ್ವರ ಒಬ್ಬರೇ ಅಲ್ಲ, ಹಲವಾರು ಬಿ.ಜೆ.ಪಿ. ನಾಯಕರು-ಕಾರ್ಯಕರ್ತರನ್ನು ನಾನಾ ವಿಧಗಳಿಂದ ಒತ್ತಡ ಹೇರಿ, ಬೆದರಿಕೆ ಹಾಕಿ ಶೆಟ್ಟರ್ ಪರ ಮಾತನಾಡದಂತೆ ಭಯ ಸೃಷ್ಟಿಸಲಾಗಿದೆ. ಆದರೆ ಅಂಥ ನಾಯಕರೆಲ್ಲರೂ ಬಿ.ಜೆ.ಪಿ.ಗೆ ಒಳ ಹೊಡೆತ ನೀಡಿ, ನಮ್ಮನ್ನು ಬೆಂಬಲಿಸಲಿದ್ದಾರೆ” ಎಂದು ತಿಳಿಸಿದರು.

ತಮಗೆ ಅನ್ಯಾಯ ಆಗಿರುವುದನ್ನು ಕಂಡು, ಪ್ರಚಾರದ ವೇಳೆ ಬಿ.ಜೆ.ಪಿ. ತ್ಯಜಿಸಿ, ಕಾಂಗ್ರೆಸ್ ಸೇರಿದ ಶಾಂತಣ್ಣ ಕಡಿವಾಲರಿಗೆ ಬಿ.ಜೆ.ಪಿ.ಯ ಕೆಲವು ನಾಯಕರು ಕರೆ ಮಾಡಿ ಬೆದರಿಕೆ ಒಡ್ಡುತ್ತಿದ್ದಾರೆ. ಆದರೆ ಕುರುಬ ಸಮಾಜದ ಮುಖಂಡರೂ, ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳೂ ಆಗಿರುವ ಕಡಿವಾಲರು ಇದ್ಯಾವುದಕ್ಕೂ ಮಣಿದಿಲ್ಲ ಎಂದು ಶೆಟ್ಟರ್ ಹೇಳಿದರು.

ಚುನಾವಣೆಗೆ ಇನ್ನು ಕೆಲವೇ ಗಂಟೆಗಳು ಉಳಿದಿರುವ ಹೊತ್ತಿನಲ್ಲಿ ಶೆಟ್ಟರ್ ಅವರು ಗುಡುಗು ಹಾಕಿರುವುದು ರಾಜ್ಯದ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ-https://peepalmedia.com/lingayat-leaders-who-do-not-bend-to-joshi/ http://ಜೋಶಿ ಪಟ್ಟಿಗೆ ಬಗ್ಗದ ಲಿಂಗಾಯತ ಮುಖಂಡರು

Related Articles

ಇತ್ತೀಚಿನ ಸುದ್ದಿಗಳು