Home ಬ್ರೇಕಿಂಗ್ ಸುದ್ದಿ ಬೇಲೂರು ಕಾಡಾನೆ ದಾಳಿಯಿಂದ ಓರ್ವ ಮೃತ – ಸ್ಥಳೀಯರಿಂದ ಪ್ರತಿಭಟನೆ

ಬೇಲೂರು ಕಾಡಾನೆ ದಾಳಿಯಿಂದ ಓರ್ವ ಮೃತ – ಸ್ಥಳೀಯರಿಂದ ಪ್ರತಿಭಟನೆ

ಬೇಲೂರು : ಕಾಡಾನೆ ದಾಳಿಗೆ ರೈತರೊಬ್ಬರು ಮೃತಪಟ್ಟಿರುವ ಘಟನೆ ಬೇಲೂರು ತಾಲೂಕಿನ ಹಿರೇಹಸಡೆ ಗ್ರಾಮದ ಬಳಿ ನಡೆದಿದೆ. ಕಣಗುಪ್ಪೆ ಗ್ರಾಮದ ಧರ್ಮರಾಜ್ ಅಲಿಯಾಸ್ ಧರ್ಮಶೆಟ್ಟಿ (55) ಕಾಡಾನೆ ದಾಳಿಯಿಂದ ಮೃತಪಟ್ಟವರು.

ಬುಧವಾರ ಸಂಜೆ ಬೇಲೂರಿನಲ್ಲಿ ಕೆಲಸದ ನಿಮಿತ್ತ ತೆರಳಿದ್ದ ಧರ್ಮರಾಜ್ ಅವರು ವಾಪಸ್ ಮನೆಗೆ ಬಂದಿರಲಿಲ್ಲ. ನಾಪತ್ತೆಯಾಗಿದ್ದ ಧರ್ಮರಾಜ್​ ಅವರಿಗಾಗಿ ಹುಟುಕಾಟ ನಡೆಸಿದಾಗ ಎರಡು ದಿನಗಳ ಬಳಿಕ ಶುಕ್ರವಾರ ಸಂಜೆ ಕಾಫಿ ತೋಟದ ಸಮೀಪ ಮೃತದೇಹ ಪತ್ತೆಯಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಬುಧವಾರ ರಾತ್ರಿ ವೇಳೆ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ಧರ್ಮರಾಜ್ ಮೇಲೆ ಕಾಡಾನೆ ದಾಳಿ ಮಾಡಿದೆ. ಪರಿಣಾಮ ತಲೆ ಮತ್ತು ಮುಖದ ಭಾಗ ಗಂಭೀರ ಗಾಯವಾಗಿ, ತಲೆಯಿಂದ ರಕ್ತಸ್ರಾವವಾದ ಹಿನ್ನೆಲೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಡಿಎಫ್​ಒ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧರ್ಮರಾಜ್ ಅವರ ಸಾವಿನಿಂದ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಕಾಡಾನೆಗಳ ಹಾವಳಿ ತಡೆಗಟ್ಟುವಲ್ಲಿ ವಿಫಲವಾಗಿರುವ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಕೆಲ ಕಾಲ ರಸ್ತೆ ತಡೆದು ಪ್ರತಿಭಟಿಸಿದರು. ಈ ಕುರಿತು ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕುಟುಂಬದವರು ಹೇಳುವ ಪ್ರಕಾರ 2 ದಿನದ ಹಿಂದೆ ಧರ್ಮಶೆಟ್ಟಿ ಕಾಣೆಯಾಗಿದ್ದರು. ಶುಕ್ರವಾರ ಅವರ ಮೃತದೇಹ ಹೀರೆಹಸಡೆ ಕಾಫಿತೋಟದಲ್ಲಿ ದೊರೆತಿದೆ. ಕಾಡಾನೆ ದಾಳಿಯಿಂದ ರೈತ ಸಾವಿಗೀಡಾಗಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಸರ್ಕಾರದ ಅನುಮತಿ ಪಡೆದು ಪರಿಹಾರದ ಚೆಕ್ ನೀಡಲಾಗುವುದು” ಎಂದು ಹಾಸನ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಅವರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.

You cannot copy content of this page

Exit mobile version