ನವದೆಹಲಿ: ಕೇಂದ್ರ ಸರ್ಕಾರದ ಮಹತ್ವದ ಮಸೂದೆಯಾದ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸುವ ‘ಒಂದು ದೇಶ ಒಂದು ಚುನಾವಣೆ’ಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವ ಮಸೂದೆಯನ್ನು ಡಿ. 17ರಂದು ಲೋಕಸಭೆಯಲ್ಲಿ ಮಂಡಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
‘ಸಂವಿಧಾನ (19ನೇ ತಿದ್ದುಪಡಿ) ಮಸೂದೆ 2024’ ಅನ್ನು ಡಿ. 17ರಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಂಡಿಸಲಿದ್ದಾರೆ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮಸೂದೆ ಮಂಡನೆ ಬಳಿಕ ಅದನ್ನು ಜಂಟಿ ಸಂಸದೀಯ ಸಮಿತಿಗೆ ವಹಿಸಲು ಸ್ಪೀಕರ್ ಓಂ ಬಿರ್ಲಾ ಅವರಿಗೆ ಮೇಘವಾಲ್ ಮನವಿ ಮಾಡಲಿದ್ದಾರೆ.
ವಿವಿಧ ಪಕ್ಷಗಳ ಸಂಸದರ ಸಂಖ್ಯಾಬಲದ ಆಧಾರದ ಮೇಲೆ ಅನುಪಾತದ ಆಧಾರದಲ್ಲಿ ಜಂಟಿ ಸಮಿತಿಯನ್ನು (ಜೆಪಿಸಿ) ರಚಿಸಲಾಗುತ್ತದೆ. ದೊಡ್ಡ ಪಕ್ಷ ಬಿಜೆಪಿಗೆ ಅಧ್ಯಕ್ಷ ಸ್ಥಾನ ಸಿಗಲಿದ್ದು, ಪ್ರಾತಿನಿಧ್ಯವೂ ಹೆಚ್ಚು ಸಿಗಲಿದೆ. ಕಳೆದ ವಾರ ಈ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದಲ್ಲಿ ರಚಿಸಿದ ಉನ್ನತ ಮಟ್ಟದ ಸಮಿತಿ ಈ ಬಗ್ಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ವಿಸ್ತೃತ ವರದಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.