ಬೀದರ್ ನಲ್ಲಿ ಎಟಿಎಂ ಸಿಬ್ಬಂದಿಯ ಹತ್ಯೆಗೈದು, ಹಣ ದೋಚಿದ ದುಷ್ಕರ್ಮಿಗಳಲ್ಲಿ ಒಬ್ಬನೇ ಬಂಧನವಾಗಿದೆ. ಹೈದರಾಬಾದ್‌ನಲ್ಲಿ ಒಟ್ಟು ಮೂವರು ಆರೋಪಿಗಳು ಪತ್ತೆಯಾಗಿದ್ದರು. ಆದರೆ ಪೊಲೀಸರು ಅವರನ್ನ ಬಂಧಿಸಲು ಮುಂದಾದಾಗ ಮತ್ತೆ ಫೈರಿಂಗ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರ ಕಡೆಯಿಂದಲೂ ಎದುರಿನ ಆರೋಪಿಗಳ ಮೇಲೆ ಫೈರಿಂಗ್ ನಡೆದ ಪರಿಣಾಮ ಒಬ್ಬ ಆರೋಪಿಗೆ ಗುಂಡು ಬಿದ್ದು ಗಾಯಗೊಂಡಿದ್ದಾನೆ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಗಾಯಗೊಂಡ ಆರೋಪಿಯನ್ನ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೀದರ್ ನಗರದ ಶಿವಾಜಿ ಸರ್ಕಲ್ ಬಳಿಯ ಎಟಿಎಂಗೆ ಹಣ ತುಂಬಲು ವಾಹನದಲ್ಲಿ ಬಂದಿದ್ದ CMS ಸೇವಾ ಸಿಬ್ಬಂದಿಯ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಅವರ ಕಣ್ಣಿಗೆ ಖಾರದ ಪುಡಿಯನ್ನೂ ಎರಚಿ, ಸಿನಿಮೀಯ ಶೈಲಿಯಲ್ಲಿ ಹಣ ದೋಚಿದ್ದಾರೆ. ಕಣ್ಣುಮುಚ್ಚಿ ಬಿಡೂವುದರ ಒಳಗೇ ಇವೆಲ್ಲ ನಡೆದು ಹೋಗಿತ್ತು. ಅಲ್ಲಿದ್ದ ಸಾರ್ವಜನಿಕರು ಇದಕ್ಕೆ ಮೂಕ ಪ್ರೇಕ್ಷಕರಾಗಿದ್ದರು.
ಎಟಿಎಂ ಸಿಬ್ಬಂದಿ ಮೇಲೆ ದರೋಡೆಕೋರರು ಫೈರಿಂಗ್ ಮಾಡಿದ್ದರು. ಅದರಲ್ಲಿ ಎಟಿಎಂ ಸಿಬ್ಬಂದಿ ಗಿರಿ ವೆಂಕಟೇಶ್ ಅವರು ಮೃತಪಟ್ಟಿದ್ದರೆ, ಶಿವಕುಮಾರ್ ಎಂಬುವವರಿಗೆ ಗಂಭೀರವಾಗಿ ಗಾಯಗೊಂಡಿದ್ದರು, ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ದುಷ್ಕರ್ಮಿಗಳು ಫೈರಿಂಗ್ ಮಾಡೋದಕ್ಕೂ ಮೊದಲು ಸಿಬ್ಬಂದಿಯ ಕಣ್ಣಿಗೆ ಖಾರದ ಪುಡಿ ಎರಚಿದ್ದರು. ಬಳಿಕ ಅವರು ಹಣದ ಪೆಟ್ಟಿಗೆಯನ್ನ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದರು.