Friday, August 16, 2024

ಸತ್ಯ | ನ್ಯಾಯ |ಧರ್ಮ

ಹಾಸನ: ಇಡೀ ಕುಟುಂಬವನ್ನೇ ಬಲಿ ತೆಗೆದುಕೊಂಡ ಆನ್‌ಲೈನ್‌ ರಮ್ಮಿ ಚಟ

ಹಾಸನ: ಎರಡೆರಡು ಯೆಲ್ಲೋ ಬೋರ್ಡ್‌ ಕಾರಿನೊಂದಿಗೆ ಒಳ್ಳೆಯ ಸಂಪಾದನೆ, ಟೀಚರ್‌ ಕೆಲಸಕ್ಕೆ ಹೋಗಿ ಸಂಪಾದನೆ ಮಾಡಿ ತರುವ ಪತ್ನಿ ಇದ್ದೂ ಸಾಲಗಾರರ ಕಾಟ ತಡೆಯಲಾರದೆ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮಗಳೊಂದಿಗೆ ಸೇರಿ ಕೆರೆಗೆ ಹಾರಿ ಜೀವ ಬಿಟ್ಟಿರುವ ಘಟನೆ ಹಾಸನದ ಚನ್ನರಾಯಪಟ್ಟಣ ತಾಲ್ಲೂಕಿನ, ಕೆರೆಬೀದಿಯಲ್ಲಿ ನಡೆದಿದೆ.

ಈ ಸಾವಿಗೆ ನೇರವಾಗಿ ಕಾರಣವಾಗಿದ್ದು ಮೊಬೈಲ್‌ ತೆರೆದರೆ ಕಾಣಿಸಿಕೊಳ್ಳುವ ಆನ್ಲೈನ್‌ ರಮ್ಮಿ ಅಪ್ಲಿಕೇಷನ್‌ ಎನ್ನುವುದು ದುರಂತ. ಆನ್ಲೈನ್‌ ಗೇಮ್‌ಗಳ ಹಾವಳಿಗೆ ಈಗಾಗಲೇ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತು ಜಾಗೃತಿಗಳೂ ನಡೆಯುತ್ತಿವೆ. ಆದರೆ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಈ ನಡುವೆ ಇಂತಹ ಪ್ರಾಣಕಂಟಕ ಜುಗಾರಿ ಆಟಗಳ ಜಾಹೀರಾತು ರೂಪದರ್ಶಿಗಳಾಗಿ ಕಾಣಿಸಿಕೊಳ್ಳುತ್ತಿರುವವರಿಗೂ ಕಡಿಮೆಯಿಲ್ಲ.

ಇನ್ನು ಘಟನೆಯತ್ತ ಗಮನಹರಿಸುವುದಾದರೆ ಶ್ರೀನಿವಾಸ್ (43), ಪತ್ನಿ ಶ್ವೇತಾ (36) ಹಾಗೂ ಪುತ್ರಿ ನಾಗಶ್ರೀ (13) ಮೃತ ದುರ್ದೈವಿಗಳು. ಶ್ರೀನಿವಾಸ್ ಕಾರು ಚಾಲಕರಾಗಿದ್ದು, ಶ್ವೇತಾ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪುತ್ರಿ ನಾಗಶ್ರೀ ಏಳನೇ ತರಗತಿ ಓದುತ್ತಿದ್ದಳು. 

ಬೆಂಗಳೂರಿನಲ್ಲಿ ಕಾರು ಓಡಿಸಿಕೊಂಡಿದ್ದ ಶ್ರೀನಿವಾಸ್‌ ಕೊರೋನಾ ಸಮಯದಲ್ಲಿ ಊರಿಗೆ ಬಂದವರು ಮತ್ತೆ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದಿದ್ದರು. ಹೀಗೆ ಮನೆಯಲ್ಲೇ ಇದ್ದ ಶ್ರೀನಿವಾಸ್‌ ಆನ್ಲೈನ್‌ ರಮ್ಮಿ ಚಟಕ್ಕೆ ಬಿದ್ದಿದ್ದರು. ಆಟದ ಸಲುವಾಗಿ ಊರೆಲ್ಲ ಸಾಲ ಮಾಡಿಕೊಂಡಿದ್ದರು. ಸಾಲಗಾರರ ಒತ್ತಡ ಹೆಚ್ಚಾದ ಕಾರಣ ಪತ್ನಿ ಹಾಗೂ ಮಗಳೊಂದಿಗೆ ಸೇರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಗಳವಾರದಂದು ದಂಪತಿ ಮಗಳೊಂದಿಗೆ ಹೊರಗೆ ಹೋದವರು ರಾತ್ರಿಯಾದರೂ ಮರಳಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಪೊಲೀಸ್‌ ಠಾಣೆಯಲ್ಲಿ ಕಾಣೆಯಾದ ಕುರಿತು ದೂರು ಸಲ್ಲಿಸಿದ್ದರು.

ಪೊಲೀಸರು ಹುಡುಕಾಟ ನಡೆಸಿದ್ದು ಬುಧವಾರ ಸಂಜೆ ಬಾಗೂರು ಹೋಬಳಿ, ಮುದ್ಲಾಪುರ ಬಳಿಯ ಹೇಮಾವತಿ ನಾಲೆಯಲ್ಲಿ ಶ್ರೀನಿವಾಸ್, ಶ್ವೇತಾ ಶವ ಪತ್ತೆಯಾಗಿದೆ. ಅಗ್ನಿಶಾಮಕ ದಳದ‌ ಸಿಬ್ಬಂದಿ ಹಾಗೂ ಪೊಲೀಸರು ಎರಡು ಮೃತದೇಹಗಳನ್ನು ಹೊರತೆಗೆದಿದ್ದು, ಬಾಲಕಿ ನಾಗಶ್ರೀ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ಸ್ಥಳಕ್ಕೆ ಎಸ್ಪಿ ಮಹಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ನುಗ್ಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆತ್ಮಹತ್ಯೆ ತಡೆ ಸಹಾಯವಾಣಿ. ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ ಇಂತಿದೆ 080 – 25497777.

Related Articles

ಇತ್ತೀಚಿನ ಸುದ್ದಿಗಳು

You cannot copy content of this page