Home ದೇಶ ಶೇ. 0.1ರಷ್ಟು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ: ಇ.ಡಿ. ಕಾರ್ಯನಿರ್ವಹಣೆ ಬಗ್ಗೆ ಸಂಸತ್ತಿನಲ್ಲಿ ಕೇಂದ್ರದ ಮಾಹಿತಿ

ಶೇ. 0.1ರಷ್ಟು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ: ಇ.ಡಿ. ಕಾರ್ಯನಿರ್ವಹಣೆ ಬಗ್ಗೆ ಸಂಸತ್ತಿನಲ್ಲಿ ಕೇಂದ್ರದ ಮಾಹಿತಿ

0

ದೆಹಲಿ: ವಿರೋಧ ಪಕ್ಷಗಳ ಮೇಲೆ ರಾಜಕೀಯ ಸೇಡು ತೀರಿಸಿಕೊಳ್ಳಲು ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಗಳು ನಿಜವೆಂಬುದು ಕೇಂದ್ರ ಸರ್ಕಾರವೇ ಸಂಸತ್ತಿನಲ್ಲಿ ನೀಡಿದ ಮಾಹಿತಿಯಿಂದ ಸ್ಪಷ್ಟವಾಗಿದೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಸಾಕೇತ್ ಗೋಖಲೆ ಅವರು ಕೇಳಿದ ಪ್ರಶ್ನೆಗೆ ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ರಾಜ್ಯಸಭೆಯಲ್ಲಿ ಈ ಕುರಿತು ವಿವರ ನೀಡಿದರು. 2015ರಿಂದ 2025ರ ಅವಧಿಯಲ್ಲಿ ಜಾರಿ ನಿರ್ದೇಶನಾಲಯವು ದಾಖಲಿಸಿದ ಪ್ರಕರಣಗಳಲ್ಲಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಕೇವಲ 8 ಪ್ರಕರಣಗಳಲ್ಲಿ ಮಾತ್ರ 15 ಜನರಿಗೆ ವಿಶೇಷ ನ್ಯಾಯಾಲಯಗಳು ಶಿಕ್ಷೆ ವಿಧಿಸಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದು ದಾಖಲಾದ ಒಟ್ಟು ಪ್ರಕರಣಗಳ ಶೇ. 0.1ರಷ್ಟು ಮಾತ್ರ.

ಕಳೆದ ಹತ್ತು ವರ್ಷಗಳಲ್ಲಿ, ಇ.ಡಿ. PMLA ಕಾಯ್ದೆಯ ಅಡಿಯಲ್ಲಿ 5,892 ಪ್ರಕರಣಗಳನ್ನು ತನಿಖೆ ಮಾಡಿದೆ. ಆದರೆ ಕೇವಲ 15 ಜನರಿಗೆ ಮಾತ್ರ ಶಿಕ್ಷೆಯಾಗಿದೆ. ಇದೇ ಅವಧಿಯಲ್ಲಿ, ಇ.ಡಿ. 49 ಪ್ರಕರಣಗಳಲ್ಲಿ ಕ್ಲೋಸರ್ ರಿಪೋರ್ಟ್ ಸಲ್ಲಿಸಿದೆ. ಅಂದರೆ, ಇ.ಡಿ. ಕೈಗೊಂಡ ಪ್ರಕರಣಗಳಲ್ಲಿ ಕೇವಲ ಶೇ. 24ರಷ್ಟು ಮಾತ್ರ ತನಿಖಾ ಹಂತ ತಲುಪುತ್ತವೆ. ಅವುಗಳಲ್ಲಿ ಶೇ. 5ರಷ್ಟು ಮಾತ್ರ ವಿಚಾರಣಾ ಹಂತಕ್ಕೆ ಬರುತ್ತವೆ. ಇನ್ನು 2019 ಮತ್ತು 2024ರ ನಡುವೆ 654 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, ಕೇವಲ 42 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ವಿಧಿಸಲಾಗಿದೆ. ಇದು ಶೇ. 6.42ರಷ್ಟು ಮಾತ್ರ.

‘ಇ.ಡಿ. ಮೋದಿಯವರ ರಾಜಕೀಯ ಮಾಫಿಯಾ’

ಇ.ಡಿ. ಬಗ್ಗೆ ಕೇಂದ್ರ ಸರ್ಕಾರ ನೀಡಿದ ವಿವರಗಳನ್ನು ಟಿಎಂಸಿ ಸಂಸದ ಗೋಖಲೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಕೇಂದ್ರದ ತನಿಖಾ ಸಂಸ್ಥೆಯಾದ ಇ.ಡಿ. ಹೇಗೆ ರಾಜಕೀಯ ಮಾಫಿಯಾದಂತೆ ಕೆಲಸ ಮಾಡುತ್ತಿದೆ ಎಂಬುದನ್ನು ಈ ಅಂಕಿಅಂಶಗಳು ತೋರಿಸುತ್ತವೆ ಎಂದು ಟೀಕಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಇ.ಡಿ. ದಾಖಲಿಸಿದ ಪ್ರಕರಣಗಳಲ್ಲಿ ಶೇ. 77ರಷ್ಟು ಪ್ರಕರಣಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಸಹ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ. ವಿರೋಧ ಪಕ್ಷಗಳನ್ನು ಗುರಿಯಾಗಿಸಲು ಮೋದಿ ಸರ್ಕಾರ ಇ.ಡಿ. ಯನ್ನು ವೈಯಕ್ತಿಕ ಮಾಫಿಯಾದಂತೆ ಬಳಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೊದಲ ಬಾರಿಗೆ ಇ.ಡಿ. ದಾಳಿ

ಜಾರಿ ನಿರ್ದೇಶನಾಲಯವು ಮೊದಲ ಬಾರಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಶೋಧ ನಡೆಸಿದೆ. ಅಂಡಮಾನ್ ಮತ್ತು ನಿಕೋಬಾರ್ ಸ್ಟೇಟ್ ಕೋ-ಆಪರೇಟಿವ್ ಬ್ಯಾಂಕ್, ಅದರ ಮಾಜಿ ಉಪಾಧ್ಯಕ್ಷ ಮತ್ತು ಕಾಂಗ್ರೆಸ್‌ನ ಮಾಜಿ ಸಂಸದ ಕುಲ್‌ದೀಪ್ ರಾಯ್ ಶರ್ಮಾ ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಈ ದಾಳಿ ನಡೆದಿದೆ. ಶರ್ಮಾ ಅವರನ್ನು ಜುಲೈ 18ರಂದು ಪೊಲೀಸರು ಬಂಧಿಸಿದ್ದು, ಜುಲೈ 29ರಂದು ಪೋರ್ಟ್ ಬ್ಲೇರ್ ನ್ಯಾಯಾಲಯ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಇ.ಡಿ. ಅಧಿಕಾರಿಗಳು ಗುರುವಾರ ಪೋರ್ಟ್ ಬ್ಲೇರ್‌ನಲ್ಲಿ ಒಂಬತ್ತು ಸ್ಥಳಗಳಲ್ಲಿ ಮತ್ತು ಕೋಲ್ಕತ್ತಾದಲ್ಲಿ ಎರಡು ಕಡೆಗಳಲ್ಲಿ ಶೋಧ ನಡೆಸಿದ್ದಾರೆ.

ಸಾಲಗಳು ಮತ್ತು ಓವರ್‌ಡ್ರಾಫ್ಟ್‌ಗಳ ಅಕ್ರಮಗಳಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಇ.ಡಿ. ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಶರ್ಮಾ ಅವರ ಅನುಕೂಲಕ್ಕಾಗಿ ಕೆಲವು ವ್ಯಕ್ತಿಗಳು 15 ಸಂಸ್ಥೆಗಳು/ಕಂಪನಿಗಳನ್ನು ಸ್ಥಾಪಿಸಿದ್ದು, ಆ ಕಂಪನಿಗಳು ಬ್ಯಾಂಕ್‌ನಿಂದ ಸುಮಾರು 200 ಕೋಟಿ ರೂಪಾಯಿಗಳನ್ನು ಪಡೆದಿವೆ ಎಂದು ಪ್ರಕರಣ ದಾಖಲಾಗಿದೆ.

You cannot copy content of this page

Exit mobile version