ದೆಹಲಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷಕ್ಕೆ ಪರಿಹಾರವೆಂದರೆ, ಪರಸ್ಪರ ಮಾತುಕತೆ ಮೂಲಕ ಎರಡೂ ರಾಷ್ಟ್ರಗಳು ಸ್ವತಂತ್ರ ಮತ್ತು ಸಾರ್ವಭೌಮ ದೇಶಗಳಾಗಿ ತಮ್ಮ ಗಡಿಗಳನ್ನು ಗುರುತಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ತಿಳಿಸಿದೆ.
ಪ್ಯಾಲೆಸ್ತೀನ್‌ಗೆ ಭಾರತದ ಬೆಂಬಲವು ವಿದೇಶಾಂಗ ನೀತಿಯ ಭಾಗವಾಗಿದೆಯೇ ಎಂಬ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ಲಿಖಿತ ಉತ್ತರ ನೀಡಿದರು. “ಇಸ್ರೇಲ್‌ನೊಂದಿಗೆ ಗಡಿ ಹಂಚಿಕೊಂಡು, ಶಾಂತಿಯುತವಾಗಿ ಪ್ಯಾಲೆಸ್ತೀನ್ ಅಸ್ತಿತ್ವದಲ್ಲಿರಬೇಕು ಎಂಬುದು ನಮ್ಮ ನೀತಿ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆ ಪ್ರದೇಶದಲ್ಲಿನ ಭದ್ರತಾ ಪರಿಸ್ಥಿತಿಯ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ ಎಂದು ಸಚಿವರು ಹೇಳಿದರು. “ಕೂಡಲೇ ಕದನ ವಿರಾಮ ಜಾರಿಯಾಗಬೇಕು, ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಮತ್ತು ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು ಎಂಬುದು ಭಾರತದ ಉದ್ದೇಶ” ಎಂದು ಅವರು ತಿಳಿಸಿದರು.