Home ಜನ-ಗಣ-ಮನ ಧರ್ಮ- ಸಂಸ್ಕೃತಿ ತುಳುನಾಡಿನ ಮಣ್ಣಿನಲ್ಲಿರುವುದು ಭೂತದೈವ ಮತ್ತು ನಾಗದೇವರ ಕಾರಣಿಕ ಮಾತ್ರ

ತುಳುನಾಡಿನ ಮಣ್ಣಿನಲ್ಲಿರುವುದು ಭೂತದೈವ ಮತ್ತು ನಾಗದೇವರ ಕಾರಣಿಕ ಮಾತ್ರ

0

ಕಾರ್ಕಳದ ಪಾರ್ಕಿನಲ್ಲಿಯ ಉಬ್ಬು ಶಿಲ್ಪಗಳಲ್ಲಿ ತುಳುನಾಡಿನ ಭೂತ ದೈವ ನಾಗ ದೇವರೆಲ್ಲಾ ಪರಶುರಾಮನ ಕಾಲಬುಡಲ್ಲಿ ಇರುವಂತೆ ಚಿತ್ರಿಸಿ ಅವಮಾನಿಸಲಾಗಿದೆ ಎಂದು ತುಳುವರು ಆಕ್ರೋಶ ವ್ಯಕ್ತ ಮಾಡಿದ್ದು ಸರಿಯಾಗಿದೆ. ಕಾರಣ ಅನಾದಿ ಕಾಲದಿಂದ ನಮ್ಮ ಸ್ಥಳೀಯ ದೇವರುಗಳನ್ನು ವೈದಿಕ ದೇವರ ಆಧೀನ ಶಕ್ತಿಗಳು ಎಂದು ಹೇಳಿ ಪುರೋಹಿತ ವರ್ಗದವರು, ಮುಖ್ಯವಾಗಿ ವೈಷ್ಣವ (ಮಾಧ್ವ) ಬ್ರಾಹ್ಮಣರು ಅವಮಾನಿಸುತ್ತಾ ಬಂದಿದ್ದಾರೆ.  ತುಳು ಬ್ರಾಹ್ಮಣ ಪುರೋಹಿತರು ನಮ್ಮ ಮನೆಯಲ್ಲಿ/ ಕಚೇರಿಯಲ್ಲಿ ಯಾವುದೇ ಪೂಜೆ ಮಾಡಲಿ ಅದು ಮುಗಿದ ಕೂಡಲೇ ತಮ್ಮ ಎಡಗೈಯಿಂದ ತಮ್ಮ ಬಲ ಅಂಗೈಗೆ ತುಲಸಿ ನೀರು ಬಿಟ್ಟುಕೊಂಡು “ಕೃಷ್ಣಾರ್ಪಣಮಸ್ತು” ಎಂದು ಹೇಳಿಯೇ ಪೂಜೆ ಮುಗಿಸುತ್ತಾರೆ.  ಗಣಪತಿ ಪೂಜೆ ಇರಲಿ, ಗಣ ಹೋಮವಿರಲಿ, ನಾಗ ಪೂಜೆ, ಶನಿ ಪೂಜೆ, ಶಿವ ಪೂಜೆ, ದುರ್ಗಾದೇವಿಯ ಪೂಜೆ, ಯಾವುದೇ ಆಗಿರಲಿ, ಎಲ್ಲಾ ಪೂಜೆಯ ಕೊನೆಗೆ “ ಕೃಷ್ಣಾರ್ಪಣಮಸ್ತು” ಅಥವಾ “ನಾರಾಯಣಾಂತರ್ಗತ”  ಎಂದು ಹೇಳಿಯೇ ಅರ್ಚಕರು ಪೂಜೆ ಮುಗಿಸುವುದು ವಾಡಿಕೆ. ಈ ಕುರಿತು ನಾನು ಒಮ್ಮೆ ಪುರೋಹಿತರಿಗೆ ನೇರವಾಗಿ ಕೇಳಿದಾಗ ಅವರು ಹೇಳಿದ್ದು – ನಮ್ಮ (ಮಾಧ್ವರ) ನಂಬಿಕೆ ಪ್ರಕಾರ ವಿಷ್ಣುವೆ ಸರ್ವೋತ್ತಮ, ಹಾಗಾಗಿ ನಾವು ಯಾವುದೇ ಶೈವ-ಶಾಕ್ತ ದೇವರಿಗೆ ಪೂಜೆ ಮಾಡಿದರೂ ಅದು ಕೊನೆಗೆ ಹೋಗಿ ಮುಟ್ಟುವುದು ‘ವಿಷ್ಣುವಿಗೆ” ಮಾತ್ರ. ಆ ಕಾರಣಕ್ಕಾಗಿಯೇ ನಾವು ಅಲ್ಲಿ ನೆರೆದಿರುವ ಶೂದ್ರ ಭಕ್ತರಿಂದ ‘ಗೋವಿಂದಾ ನಿ ಗೋವಿಂದಾ’ ಎಂದು ಕೂಗಿಸುವುದು ಹಾಗೂ ಕೃಷ್ಣನ ಹೆಸರಲ್ಲಿಯೇ ತುಲಸಿ ನೀರು ಬಿಟ್ಟು ಪೂಜೆ ಮುಗಿಸುವುದು ವಾಡಿಕೆ ಎಂದು ಹೇಳಿದರು. ಶೂದ್ರರಿಗೆ ಇವೆಲ್ಲದರ ಅರ್ಥವೇ ಗೊತ್ತಿಲ್ಲದರಿಂದ ನಮ್ಮ ಹಿಂದೂ ದೇವರ ಪೂಜೆಯ ಕೊನೆಗೆ ದೇವರನ್ನೇ ಮೋಸ ಮಾಡುವ ಪುರೋಹಿತರ ಇಂತಹಾ ಕಪಟ ಮಂತ್ರಕ್ಕೆ ಯಾರೂ ಆಕ್ಷೇಪ ಎತ್ತುವುದಿಲ್ಲ. (ಕೇವಲ ಹವ್ಯಕ ಬ್ರಾಹ್ಮಣ ಪುರೋಹಿತರು ಮಾತ್ರ ಪೂಜೆಯ ಕೊನೆಗೆ “ಶಿವಾರ್ಪಣಮಸ್ತು” ಎಂದು ಹೇಳಿಯೇ ಪೂಜೆ ಮುಗಿಸುತ್ತಾರೆ!).

ಅದೇ ಪ್ರಕಾರ ನಮ್ಮ ಮಣ್ಣಿನ ಭೂತದೈವ ಗಳೆಲ್ಲಾ ಸ್ವತಂತ್ರ ದೈವೀಶಕ್ತಿಗಳಾಗಿದ್ದರೂ ಅವೆಲ್ಲಾ ಶಿವನ ಭೂತಗಣದಲ್ಲಿರುವ ಶಿವನ ಸೇವಕರು ಎಂದು ಅನ್ನುವುದರ ಹಿಂದೆಯೂ ವೈದಿಕರ ಮೇಲರಿಮೆ ಹಾಗೂ ಶೂದ್ರರ ಕೀಳರಿಮೆ ಅಡಗಿದೆ. ನಿಜವಾಗಿ ತುಳುನಾಡಿನ ಮಣ್ಣಿನಲ್ಲಿ ಕೇವಲ ಇಲ್ಲಿಯ ಮೂಲ ಭೂತದೈವ ಮತ್ತು ನಾಗದೇವರ ಕಾರಣಿಕ ಮಾತ್ರ ಇರುವುದು! ವೈದಿಕ ದೇವರುಗಳೆಲ್ಲಾ ಕೇವಲ ನಾಮಮಾತ್ರದ ಉತ್ಸವ ಮೂರ್ತಿಗಳು ಅಷ್ಟೇ. ಅದಕ್ಕಾಗಿಯೇ ಎಲ್ಲಾ ಬ್ರಾಹ್ಮಣರ ದೇವಸ್ಥಾನಗಳಲ್ಲಿ ತುಳುವರ ಭೂತದೈವಗಳನ್ನು ‘ಪರಿವಾರ ದೈವ’ ಎಂಬ ಹೆಸರಲ್ಲಿ ಪ್ರತಿಷ್ಠಾಪಿಸಿ ಆ ಭೂತದೈವಗಳ ನೈಜ ಕಾರಣಿಕವನ್ನು ಎರವಲು ಪಡೆದು ಅದು ವೈದಿಕ ದೇವರ ಮಹಿಮೆ ಎಂದು ಬಿಂಬಿಸಲಾಗುತ್ತದೆ! ಇದು ಸೂರ್ಯನ ಸ್ವತಂತ್ರ ಬೆಳಕನ್ನು ಎರವಲು ಪಡೆದು ಚಂದ್ರ ಬೆಳಗಿದಂತೆ!  ತುಳುನಾಡಿನ ಹೆಚ್ಚಿನ ದುರ್ಗಾಪರಮೇಶ್ವರಿ ಕ್ಷೇತ್ರಗಳ ದೇವಿಗೆ “ಉಲ್ಲಾಳ್ತಿ” ಎಂದು ತುಳು ದೈವದ ಹೆಸರಲ್ಲಿ ಕರೆಯಲು ಮುಖ್ಯ ಕಾರಣ ಎಲ್ಲಾ ದುರ್ಗಾ ಕ್ಷೇತ್ರಗಳಲ್ಲಿ ನಿಜವಾದ ಕಾರಣಿಕ ಇರುವುದು ತುಳುವರ ಉಲ್ಲಾಳ್ತಿ ದೈವದ್ದೇ ಹೊರತು ಉತ್ತರ ಭಾರತದಿಂದ ವಲಸೆ ಬಂದ ವೈದಿಕ ದೇವರದ್ದು ಅಲ್ಲ!  ವೈದಿಕ ದೇವರುಗಳೆಲ್ಲಾ ಕೇವಲ ಕಾಲ್ಪನಿಕ ಪೌರಾಣಿಕ ಕಥೆಗಳ ಪಾತ್ರಗಳು ಅಷ್ಟೇ!  ಪರಶುರಾಮನೂ ಒಂದು ಕಾಲ್ಪನಿಕ ಪುರಾಣ ಪಾತ್ರ ಮಾತ್ರ ಎಂಬುದನ್ನೂ ಜನರ ಮನದಲ್ಲಿ ನಾಟಿಸಲು ಕಾರ್ಕಳದ ಪರಶುರಾಮ ಪಾರ್ಕಿನ ವಿವಾದ ಈಗ ನಮಗೆ ಒಂದು ಉತ್ತಮ ಅವಕಾಶ ಒದಗಿಸಿದೆ.

ನಮ್ಮ ತುಳು ಮಣ್ಣಿನ ಪವಿತ್ರ ಶಕ್ತಿಗಳನ್ನು ವೈದಿಕ ದೇವರಲ್ಲಿ ಸಮೀಕರಿಸುವ ಕೆಟ್ಟ ಪದ್ದತಿ ಬಹಳ ಹಿಂದಿನಿಂದಲೂ ನಮ್ಮ ತುಳುನಾಡಿನಲ್ಲಿ ಇದೆ. ಇತ್ತೀಚೆಗೆ ಕೊರಗಜ್ಜ (ಕೊರಗ ತನಿಯ) ಎಂಬ ದೈವದ ಕಾರಣಿಕದ ಕುರಿತು ಸಾಮಾನ್ಯ ಜನರಿಗೆ ನಂಬಿಕೆ ಹೆಚ್ಚಿದ್ದರಿಂದ ಈಗ ತುಳುನಾಡಿನಲ್ಲಿ ಇರುವ ಕೊರಗಜ್ಜ ಕ್ಷೇತ್ರಗಳಿಗೆ ದೊಡ್ಡ ಸಂಖ್ಯೆಯಲ್ಲಿ ಎಲ್ಲಾ ಜಾತಿಯ ಭಕ್ತರು ಭೇಟಿ ಕೊಡುತ್ತಿದ್ದಾರೆ ಹಾಗೂ ಹರಕೆ ಹೊರುತ್ತಿದ್ದಾರೆ (ತುಳುವ ಬ್ರಾಹ್ಮಣರ ಹೊರತು).  ಯಾವುದೇ ಮೂಲನಿವಾಸಿಗಳ ಜಾನಪದ ದೇವರು ಜನಪ್ರಿಯರಾದ ಕೂಡಲೇ ವೈದಿಕರು ಆ ಜಾನಪದ ದೇವರನ್ನು ತಮ್ಮ ವೈದಿಕ ದೇವರ ಅವತಾರ ಅಥವಾ ಪರಮ ಭಕ್ತ ಎಂದು ಹೇಳಿ ಸ್ವಾಧೀನ ಪಡಿಸಿಕೊಳ್ಳುವುದು (Appropriate ಮಾಡುವುದು) ಶತಮಾನಗಳಿಂದ ನಡೆದೇ ಇದೆ. ಅದಕ್ಕೆ ಅನುಗುಣವಾಗಿಯೇ ಕೊರಗಜ್ಜನನ್ನು ಶಿವನ ಅವತಾರ ಅಥವಾ ಶಿವನ ಭಕ್ತ ಎಂದು ಬಿಂಬಿಸಿ ಈ ಮೂಲನಿವಾಸಿಗಳ ದೈವಗಳನ್ನು ವೈದಿಕರು ಕಾಲಾಂತರದಲ್ಲಿ ತಮ್ಮ ಕೈವಶ ಮಾಡಿಕೊಳ್ಳುವ ಉಪಾಯಕ್ಕೆ ಈಗಿನಿಂದಲೇ ಅಡಿಪಾಯ ಹಾಕುತ್ತಿರುವಂತೆ ಕಾಣುತ್ತಿದೆ.  ಪಡುಬಿದ್ರಿಯಲ್ಲಿ ಬಹಳ ಕಾರಣಿಕ ಇರುವ ಉಲ್ಲಾಯ ದೈವದ ಬ್ರಹ್ಮಸ್ಥಾನವಿದೆ. ಅಲ್ಲಿ ಜನರು ನೈಜ ಭಕ್ತಿಯಿಂದ ಪ್ರಾಮಾಣಿಕವಾಗಿ ಬೇಡಿದ್ದು ಸಿದ್ದಿಸುತ್ತದೆ ಎಂಬ ಪ್ರತೀತಿ ಇದೆ.  ಅಲ್ಲಿಗೆ ಬೆಂಗಳೂರಿನ ಸಿನೆಮಾರಂಗದವರೂ ಯಾವುದೇ ಪ್ರಚಾರವಿಲ್ಲದೆ ಬಂದು ಹರಕೆ ತೀರಿಸಿ ಹೋಗುತ್ತಿದ್ದಾರೆ.  ಈ ಬಯಲು ದೈವಸ್ಥಾನದ ದೈವದ ಅಪಾರ ಕಾರಣಿಕ ಕಂಡು ವೈದಿಕರು ಈ ದೈವಕ್ಕೆ “ಖಡ್ಗೇಶ್ವರಿ” ಎಂಬ ವೈದಿಕ ಹೆಸರು ಕೊಟ್ಟು ಅಲ್ಲೊಂದು ಶಾಶ್ವತ ದೇವಸ್ಥಾನ ಕಟ್ಟಿ ಅದು ದುರ್ಗಾದೇವಿಯ ಕ್ಷೇತ್ರ ಎಂದು ಹೇಳಿ ಕಟೀಲು-ಬಪ್ಪನಾಡು ಮಾದರಿಯಲ್ಲಿ ಹಣದ ಹೊಳೆ ಹರಿಸುವ ಪ್ರಯತ್ನ ಹಿಂದಿನ 30 ವರ್ಷಗಳಿಂದ ನಡೆಸುತ್ತಲೇ ಇದ್ದಾರೆ. ಆದರೆ ಆ ಸ್ಥಳದ ಉಲ್ಲಾಯ ದೈವದ ನೈಜ ಕಾರಣಿಕವು ವೈದಿಕರ ಈ ಹುನ್ನಾರವನ್ನು 30 ವರ್ಷಗಳಿಂದ ಸತತವಾಗಿ ಸ್ವತಃ ವಿಫಲ ಗೊಳಿಸುತ್ತಿದೆಯಂತೆ! ಅದು ಬಯಲು ದೈವಸ್ಥಾನವಾಗಿಯೇ ಇರಬೇಕು ಹಾಗೂ ದ್ರಾವಿಡ ರೀತಿಯಲ್ಲಿಯೇ ಪೂಜೆಗಳು ನಡೆಯಬೇಕು, ಅಲ್ಲಿ ತುಲಸಿ ಕಟ್ಟೆ ಇಡಲೇಬಾರದು, ಕಾಣಿಕೆ ಡಬ್ಬಿ ಇಡಲೇಬಾರದು ಎಂಬ ಉಲ್ಲಾಯ ದೈವದ ಆದೇಶವನ್ನು ಪ್ರತಿ ಬಾರಿಯ ದರ್ಶನದಲ್ಲಿ ದೈವಪಾತ್ರಿಯೆ ಹೇಳುತ್ತಾರೆ.  ಉಲ್ಲಾಯ ದೈವ ಇದು ಗಂಡು-ಹೆಣ್ಣು ಎರಡೂ ಅಲ್ಲದ ಅತ್ಯಂತ ಕಾರಣಿಕದ ಒಂದು ನಿರಾಕಾರ ದೈವ. ಆದರೂ ಏನೇನೋ ಉಪಾಯದಿಂದ ಅದನ್ನು ಒಂದು ಹೆಣ್ಣು ವೈದಿಕ ದೇವಿಯಾಗಿ ಪರಿವರ್ತಿಸುವ ಪ್ರಯತ್ನ ವೈದಿಕರಿಂದ ನಡೆಯುತ್ತಲೇ ಇದೆಯಂತೆ. ಅದಕ್ಕಾಗಿ ಒಂದು ಕಾಲ್ಪನಿಕ ರಾಕ್ಷಸನನ್ನು ಖಡ್ಗೇಶ್ವರಿ ದೇವಿ ಖಡ್ಗದಿಂದ ಕೊಲ್ಲುವ ಕ್ಷೇತ್ರ ಪುರಾಣವೂ ರೆಡಿ ಇದೆಯಂತೆ. ದೇವಿಯ ಖಡ್ಗದ ಹೊಡೆತಕ್ಕೆ ರಾಕ್ಷಸನ ಪಾದ ತುಂಡಾಗಿ ಭೂಮಿಗೆ ಬಿದ್ದ ಸ್ಥಳ “ಪಾದ ಬಿದ್ದ ಊರು” ಆಗಿ ಪಡುಬಿದ್ರಿ ಆಯಿತಂತೆ!).

ಕಾಲ್ಪನಿಕ ರಾಕ್ಷಸರ ಪಾತ್ರ ಇರುವ ಕ್ಷೇತ್ರ ಪುರಾಣಗಳೆ  ವೈದಿಕರ ಮೂಲ ಬಂಡವಾಳ.  ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು.  ರಾಕ್ಷಸರು-ದಾನವರು-ಅಸುರರು ಎಂಬ ನೂರಡಿ ಎತ್ತರದ ದೈತ್ಯ ಜೀವಿಗಳು ಈ ಜಗತ್ತಿನಲ್ಲಿ ಎಂದೂ ಇರಲೇ ಇಲ್ಲ ಎಂದು ಜೀವಶಾಸ್ತ್ರಜ್ಞರು ಹೇಳುತ್ತಾರೆ. ಕೋಟ್ಯಂತರ ವರ್ಷಗಳ ಹಿಂದೆ ಇದ್ದ ಡೈನೋಸಾರ್ ಗಳ ಪಳೆಯುಳಿಕೆ ನಮಗೆ ಈಗ ಸಿಕ್ಕಿರುವಾಗ ಕೇವಲ ಮೂರು ಸಾವಿರ ವರ್ಷಗಳ ಹಿಂದೆ ಇದ್ದ ನೂರಾರು ಅಡಿ ಎತ್ತರದ ರಾಕ್ಷಸನ ಒಂದೇ ಒಂದೂ ಪಳೆಯುಳಿಕೆ ವಿಜ್ಞಾನಿಗಳಿಗೆ ಯಾಕೆ ಸಿಕ್ಕಿಲ್ಲ?  ರಾಕ್ಷಸರು ಎಂಬ ಜೀವಿಗಳು ಕಾಲ್ಪನಿಕ ಎಂದ ಮೇಲೆ ಅವರನ್ನು ಕೊಲ್ಲಲು ಅವತಾರ ಎತ್ತುವ ದೇವರ ಪಾತ್ರಗಳೂ ಶುದ್ಧ ಕಾಲ್ಪನಿಕ ತಾನೇ? ಹಾಗಿರುವಾಗ ಹಿಂದೂ ಪುರಾಣದಲ್ಲಿ ಬರುವ ಎಲ್ಲಾ ರಾಕ್ಷಸರ ಪಾತ್ರಗಳೂ ಹಾಗೂ ಅವರನ್ನು ಕೊಲ್ಲಲು ಅವತಾರ ಎತ್ತುವ ದೇವರ ಕತೆಗಳೆಲ್ಲಾ ಶುದ್ಧ ಕಾಲ್ಪನಿಕ ಕಥೆಗಳು ಎಂದು ಜನರಿಗೆ ಮನನ ಮಾಡುವ ಕಾಲ ಈಗ ಬಂದಿರುವಂತಿದೆ! 

ಪ್ರವೀಣ್‌ ಶೆಟ್ಟಿ

ಸಂಸ್ಕೃತಿ ಚಿಂತಕರು

You cannot copy content of this page

Exit mobile version