Home ದೇಶ ಅತಿಶಿಯ ಪೋಷಕರು ಅಫ್ಜಲ್‌ ಗುರುವಿನ ಬೆಂಬಲಿಗರು, ದೆಹಲಿಯನ್ನು ದೇವರೇ ಕಾಪಾಡಬೇಕು: ಆಪ್‌ ಸಂಸದೆ ಸ್ವಾತಿ ಮಲಿವಾಲ್

ಅತಿಶಿಯ ಪೋಷಕರು ಅಫ್ಜಲ್‌ ಗುರುವಿನ ಬೆಂಬಲಿಗರು, ದೆಹಲಿಯನ್ನು ದೇವರೇ ಕಾಪಾಡಬೇಕು: ಆಪ್‌ ಸಂಸದೆ ಸ್ವಾತಿ ಮಲಿವಾಲ್

0

ಹೊಸದೆಹಲಿ: ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ರಾಜೀನಾಮೆ ನೀಡಲು ಮುಂದಾಗಿರುವುದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಚಾರ.

ಈ ಹಿನ್ನೆಲೆಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬಹುದೆನ್ನುವ ಕುತೂಹಲಕ್ಕೆ ಪಕ್ಷವು ಈಗಾಗಲೇ ತೆರೆಯೆಳೆದಿದ್ದು, ಸಚಿವೆ ಅತಿಶಿಯವರನ್ನು ಅದು ತನ್ನ ಮುಂದಿನ ಮುಖ್ಯಮಂತ್ರಿಯಾಗಿ ಘೋಷಿಸಿದೆ. ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಜೈಲಿನಲ್ಲಿದ್ದ ಸಂದರ್ಭದಲ್ಲಿ ಅತಿಶಿಯವರು ಸರ್ಕಾರವನ್ನು ಸಮರ್ಥವಾಗಿ ಮುನ್ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷ ಅವರನ್ನೇ ಮುಖ್ಯಮಂತ್ರಿಯಾಗಿ ಘೋಷಿಸಿದೆ.

ಈ ಕುರಿತು ಆಪ್‌ ಪಕ್ಷದ ಸಂಸದೆ ಹಾಗೂ ಪಕ್ಷದ ನಾಯಕತ್ವದ ವಿರುದ್ಧ ಬಂಡೆದ್ದಿದ್ದ ನಾಯಕಿ ಅತಿಶಿಯವ ಆಯ್ಕೆಯ ಕುರಿತು ಪ್ರತಿಕ್ರಿಯಿಸಿದ್ದಾರೆ. ಅವರು ತಮ್ಮ ಪ್ರತಿಕ್ರಿಯೆಯಲ್ಲಿ ಅತಿಶಿ ಕೇವಲ ಕೇಜ್ರಿವಾಲ್‌ ಅವರ ಕೈಗೊಂಬೆಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಮುಂದುವರೆದು ಹೇಳಿಕೆ ನೀಡಿರುವ ಅವರು “ಅತಿಶಿಯವರ ಪೋಷಕರು ಅಫ್ಜಲ್‌ ಗುರುವಿನ ಮರಣದಂಡನೆ ತೀರ್ಪನ್ನು ರದ್ದುಗೊಳಿಸಿ, ಕ್ಷಮಾಪಣೆ ಕೊಡಿಸಲು ಬಹಳವಾಗಿ ಓಡಾಡಿದ್ದರು” ಎಂದು ಹೇಳಿದ್ದಾರೆ.

“ಅತಿಶಿಯ ಪೋಷಕರು ಅಫ್ಜಲ್ ಗುರುವಿಗೆ ಕ್ಷಮಾದಾನ ನೀಡುವಂತೆ ಕೋರಿ ಭಾರತದ ರಾಷ್ಟ್ರಪತಿಗಳಿಗೆ ಪತ್ರವನ್ನೂ ಬರೆದಿದ್ದಾರೆ. ರಾಜಕೀಯ ಷಡ್ಯಂತ್ರದ ಭಾಗವಾಗಿ ಅಫ್ಜಲ್‌ನನ್ನು ಶಿಕ್ಷಿಸಲಾಗಿದೆ ಎಂದು ಆ ಪತ್ರದಲ್ಲಿ ಉಲ್ಲೇಖಿಸಿದ್ದರು” ಎಂದು ಹೇಳಿದ್ದಾರೆ.

ದೆಹಲಿ ಮುಖ್ಯಮಂತ್ರಿಯನ್ನು ನೇಮಿಸುವಾಗ ರಾಷ್ಟ್ರೀಯ ಭದ್ರತೆಯನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಏನೇ ಆಗಲಿ ದೆಹಲಿಯನ್ನು ದೇವರೇ ಕಾಪಾಡಬೇಕು ಎಂದು ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಾರ್ವತ್ರಿಕ ಚುನಾವಣಾ ಪ್ರಚಾರಕ್ಕಾಗಿ ತಿಹಾದ್ ಜೈಲಿನಿಂದ ಬಿಡುಗಡೆಯಾಗಿದ್ದರು. ಈ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಸ್ವಾತಿ ಮಲಿವಾಲ್ ಅವರ ನಿವಾಸದ ಮೇಲೆ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಪೊಲೀಸರ ಮೊರೆ ಹೋಗಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಿಭವ್ ಕುಮಾರ್ ಅವರನ್ನು ಬಂಧಿಸಿ ತಿಹಾರ್ ಜೈಲಿಗೆ ಕಳುಸಿದ್ದರು. ಇತ್ತೀಚೆಗೆ ಬಿಭವ್ ಕುಮಾರ್ ಕೂಡ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಸಿಎಂ ಕೇಜ್ರಿವಾಲ್ ಮಂಗಳವಾರ ದೆಹಲಿಯಲ್ಲಿ ಪಕ್ಷದ ಶಾಸಕರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಅತಿಶಿ ಅವರ ಹೆಸರನ್ನು ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಸ್ತಾಪಿಸಿದರು. ಎಎಪಿಯ ಎಲ್ಲಾ ಶಾಸಕರು ಅವರ ಪ್ರಸ್ತಾವನೆಯನ್ನು ಸರ್ವಾನುಮತದಿಂದ ಒಪ್ಪಿಕೊಂಡರು.


ಪೀಪಲ್‌ ಟಿವಿಯ ವಿಡಿಯೋ ನೋಡಿ:

You cannot copy content of this page

Exit mobile version