Home ರಾಜ್ಯ ಉಡುಪಿ ಕೋಮುಹಿಂಸೆ ನಿಗ್ರಹಿಸಲು ಆಗ್ರಹಿಸಿ ಕರಾವಳಿಯ ಪ್ರಜ್ಞಾವಂತರಿಂದ ಮುಖ್ಯಮಂತ್ರಿಗೆ ಬಹಿರಂಗ ಪತ್ರ

ಕೋಮುಹಿಂಸೆ ನಿಗ್ರಹಿಸಲು ಆಗ್ರಹಿಸಿ ಕರಾವಳಿಯ ಪ್ರಜ್ಞಾವಂತರಿಂದ ಮುಖ್ಯಮಂತ್ರಿಗೆ ಬಹಿರಂಗ ಪತ್ರ

0

ಕರಾವಳಿಯ ಅಭಿವೃದ್ದಿ ಮತ್ತು ಅದಕ್ಕೆ ಮಾರಕವಾಗಿರುವ ಕೋಮುವಾದದ ನಿಯಂತ್ರಣಕ್ಕಾಗಿ ನಾಡಿನ ಪ್ರಜ್ಞಾವಂತರು ಮತ್ತು ಕರಾವಳಿ ಭಾಗದ ಪ್ರಮುಖ ವಿಚಾರವಾದಿಗಳ ಗುಂಪು ಮುಖ್ಯಮಂತ್ರಿಗಳಿಗೆ ಬಹಿರಂಗ ಮನವಿ ಪತ್ರ ಬರೆದಿದ್ದಾರೆ. ಅದರಂತೆ ಕರಾವಳಿ ಭಾಗ ಕೋಮುವಾದಿ ಶಕ್ತಿಗಳ ಕಾರಣಕ್ಕೆ ಅಭಿವೃದ್ಧಿ ಮರೀಚಿಕೆ ಆಗಿರುವಾಗ ಹಾಗೂ ಕೋಮು ಶಕ್ತಿಗಳ ನಿಗ್ರಹಿಸದೇ ಇದ್ದರೆ ಆಗುವ ಅನಾಹುತಗಳ ಬಗ್ಗೆ ಬೆಳಕು ಚೆಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಪತ್ರ ಈ ಕೆಳಗಿನಂತಿದೆ
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಒಂದಾಗಿರುವ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಅತ್ಯಂತ ತೀವ್ರಗತಿಯಲ್ಲಿ ಬೆಳೆಯುತ್ತಿರುವ ‘ಕೋಮುವಾದ’ ತಮ್ಮ ಮತ್ತು ತಮ್ಮ ನೇತೃತ್ವದ ರಾಜ್ಯ ಸರ್ಕಾರದ ಗಮನಕ್ಕಿದೆ ಎಂದು ಭಾವಿಸುತ್ತೇವೆ.  ಕರ್ನಾಟಕದ ಉಳಿದ ಭಾಗಗಳಿಗೆ ಹೋಲಿಸಿದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯು ಸೂಚ್ಯಂಕಗಳ ಪ್ರಕಾರ ಮುಂದಿದೆ ಎಂದು ಎಲ್ಲಾ ಕಾಲದ ಸರಕಾರಗಳು ಹೇಳುತ್ತಾ ಬಂದಿವೆ. ಮೂಲಭೂತ ಸೌಕರ್ಯಗಳು, ಭೂಮಸೂದೆ ತಂದ ಬದಲಾವಣೆಗಳು, ಕೈಗಾರಿಕೆಗಳು, ಸಾಮಾನ್ಯ ಶಿಕ್ಷಣ ಮತ್ತು ಉನ್ನತ ಶಿಕ್ಷಣವನ್ನು ಕಲ್ಪಿಸುವ ಸಂಸ್ಥೆಗಳ ಸಂಖ್ಯೆಯಲ್ಲಿನ ಅಭೂತಪೂರ್ವ ವಿಸ್ತರಣೆ, ಇಲ್ಲಿನ ಬ್ಯಾಂಕುಗಳು ಇವೆಲ್ಲವುಗಳನ್ನು ಈ ‘ಅಭಿವೃದ್ದಿ’ಗೆ ಉದಾಹರಣೆಯಾಗಿ ಕೊಡುವ ಪರಿಪಾಠವಿದೆ. ಆದರೆ ಇವಿಷ್ಟೇ ಅಭಿವೃದ್ದಿಯಲ್ಲ ಎಂಬುದನ್ನು ನಾವು ಮನಗಾಣಬೇಕು.

ದಕ್ಷಿಣ ಕನ್ನಡ ಜಿಲ್ಲೆಯ ಜನರು ಈ ‘ಕ್ಲೀಷೆಗೊಳಪಟ್ಟ ಅಭಿವೃದ್ದಿ’ಯಿಂದ ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ಏರುಗತಿಯನ್ನು ಕಂಡಿಲ್ಲ. ಬದಲಾಗಿ ದಿನೇ ದಿನೇ  ಕುಸಿತವನ್ನು ಕಾಣುತ್ತಿದೆ. ಜಿಲ್ಲೆಯ ಯುವ ಜನರು ಉದ್ಯೋಗಕ್ಕಾಗಿ ಊರೂರು ಅಲೆಯುವ ಪರಿಸ್ಥಿತಿ ಉಂಟಾಗಿದೆ. ಸ್ವಂತ ಊರಲ್ಲೊಂದು ಸೂರು ಬೇಕು ಎಂದು ಹೊರ ರಾಜ್ಯಗಳಲ್ಲಿ ದುಡಿಯುವ ಸ್ಥಿತಿ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲವೂ ಇದ್ದು, ಜನಸಾಮಾನ್ಯರ ಕೈಗೆಟಕುವ ಆರ್ಥಿಕತೆಗಾಗಿ ‘ವಲಸೆ’ಯನ್ನು ನಂಬಬೇಕಾಗಿದೆ. ಕರಾವಳಿಯ ಲಕ್ಷಾಂತರ ಜನ ಸದ್ದಿಲ್ಲದ ‘ಆಕರ್ಷಕ ವಲಸೆ’ಗೆ ಒಳಗಾಗಿದ್ದಾರೆ. ಇದು ಪರಿಸರ/ವ್ಯವಸ್ಥೆಯ ಕಾರಣಕ್ಕಾಗಿ ನಡೆಯುವ ‘ಬಲವಂತದ  ವಲಸೆ’ಯಂತೆ ಕ್ರೂರವಾಗಿ ದೃಶ್ಯದಲ್ಲಿ ಕಾಣದಿದ್ದರೂ ಆಳದಲ್ಲಿ ಕ್ರೂರ ಪರಿಣಾಮವನ್ನೇ ಬೀರುತ್ತದೆ. ಈ ರೀತಿಯ ವಲಸೆಯ ಆಕರ್ಷಣೆಗೆ ಮುಖ್ಯ ಕಾರಣ, ನಿರುದ್ಯೋಗ, ಉದ್ಯಮಗಳ ಕುಸಿತ ಮತ್ತು ಮುಖ್ಯವಾಗಿ ಕೋಮುವಾದ ಎಂಬುದು ಸ್ಪಷ್ಟ.

ಶಿಕ್ಷಣ, ಆರೋಗ್ಯ, ಹಣಕಾಸು, ಸಾರಿಗೆ ಇತ್ಯಾದಿ ಮೂಲಭೂತ ಸೌಲಭ್ಯಗಳನ್ನು ಸೃಷ್ಟಿಸಲು ಈ ಜಿಲ್ಲೆಯು ಸರಕಾರದ ನೆರವನ್ನು ಕಾದಿಲ್ಲ. ದಶಕಗಳಿಂದಲೇ ಈ ಎಲ್ಲ ಕ್ಷೇತ್ರಗಳಲ್ಲೂ ಇಲ್ಲಿನ ಶ್ರಮಿಕ ವರ್ಗಗಳು ತಕ್ಕಮಟ್ಟಿನ ಸೌಲಭ್ಯಗಳನ್ನು ಸೃಷ್ಟಿಸಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮುಂದುವರೆಯಲು ಮೇಲ್ನೋಟಕ್ಕೆ ಇಲ್ಲಿನ ಶ್ರೀಮಂತರು, ಮಠಗಳು, ಮೇಲ್ವರ್ಗಗಳು, ಧರ್ಮಾಧಿಕಾರಿಗಳು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಕಾರಣ ಎಂದು ಕಂಡು ಬಂದರೂ ವಾಸ್ತವವಾಗಿ ಇಲ್ಲಿನ ದುಡಿಯುವ ವರ್ಗದ ಕೌಶಲ್ಯತೆ ಅದಕ್ಕೆ ಕಾರಣ ಎಂಬುದು ನಿಸ್ಸಂಶಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿನ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಶ್ರೀಮಂತರು ಮತ್ತು ಮಠಮಾನ್ಯಗಳ ಅಡಿಯಾಳಾಗಿದ್ದು, ಸರ್ಕಾರಿ ವ್ಯವಸ್ಥೆಯೊಳಗೆ ಶಿಕ್ಷಣ, ಆರೋಗ್ಯವನ್ನು ತರಲು ಹಿಂಜರಿಯುತ್ತಿರುವುದು ಧೀರ್ಘಕಾಲೀನವಾಗಿ ಕರಾವಳಿಗೆ ಬಹುದೊಡ್ಡ ಏಟು ನೀಡುತ್ತಿದೆ. ಮೇಲ್ನೋಟಕ್ಕೆ ಈ ಖಾಸಗಿ ಸೌಲಭ್ಯಗಳು ರೋಮಾಂಚನ ಮೂಡಿಸಿದರೂ ಅದು ಬಡವ ಶ್ರೀಮಂತರ ಮಧ್ಯೆ ಅಂತರವನ್ನು ಹೆಚ್ಚಿಸಿ, ಜನಸಮಾನ್ಯರು ವಲಸೆಯ ಆಕರ್ಷಣೆಗೆ ಬಲವಂತಪಡಿಸುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಕರಾವಳಿಯ ಖಾಸಗಿ ಶಿಕ್ಷಣ, ಆರೋಗ್ಯ ಮಾಫಿಯಾವನ್ನು ನಿಯಂತ್ರಣಕ್ಕೊಳಪಡಿಸುವ ಅವಶ್ಯಕತೆ ಇದೆ.

ಕರಾವಳಿಯ ಕೋಮುವಾದದಲ್ಲಿ ಸರ್ಕಾರಗಳ ಪಾಲು ದೊಡ್ಡದಿದೆ. ಕರಾವಳಿಯ ಕೈಗಾರಿಕೆಗಳಲ್ಲಿ ತುಳುನಾಡಿನ ಜನರಿಗೆ ಸೂಕ್ತ ಪ್ರಾತಿನಿದ್ಯ ಸಿಕ್ಕಿಲ್ಲ. ‘ತುಳುವಪ್ಪೆ ಜೋಕುಲೆಗು ಮಲ್ಲ ಪಾಲ್’ (ತುಳು ತಾಯಿಯ ಮಕ್ಕಳಿಗೆ ದೊಡ್ಡ ಪಾಲು) ನೀಡಿ ಎಂಬುದು ಇಲ್ಲಿನ ಯುವ ಜನ ಚಳವಳಿಗಳ ಘೋಷಣೆಯಾಗಿದೆ. ನಮ್ಮ ನೆಲ-ಜಲವನ್ನು ಬಳಕೆ ಮಾಡಿಕೊಂಡು, ರೈತರ ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ತಲೆ ಎತ್ತಿರುವ ಒ ಎನ್ ಜಿ ಸಿ, ಎಂ ಆರ್ ಪಿ ಎಲ್ ನಂತಹ ಕಾರ್ಖಾನೆಗಳು ಉತ್ತರ ಭಾರತೀಯರಿಗೆ ಉದ್ಯೋಗ ಕೊಡುವ ತಾಣವಾಗಿದೆ. ಕರಾವಳಿ ಎಲ್ಲರನ್ನೂ ಒಳಗೊಳ್ಳುವ, ತಬ್ಬಿಕೊಳ್ಳುವ ಸಂಸ್ಕೃತಿ ಇರುವ ಜಿಲ್ಲೆ. ಆದರೆ, ಉದ್ಯೋಗದಲ್ಲಿ ಕನಿಷ್ಠ ಅಧ್ಯತೆಯ ಪಾಲು ಸಿಗುವಂತಾಗಬೇಕು. ನಿರುದ್ಯೋಗ ಸಮಸ್ಯೆ ಮತ್ತು ಆರ್ಥಿಕ ಅಸಮಾನತೆಯೂ ಕೋಮುವಾದಕ್ಕೆ ಕಾರಣಗಳಲ್ಲೊಂದು ಆಗಿರುವುದರಿಂದ ಕರಾವಳಿಯ ಈ ಸಮಸ್ಯೆಗೆ ಸರ್ಕಾರ ‘ನೀತಿ ರೂಪಣೆ’ ಮೂಲಕ  ಪರಿಹಾರ ಕಂಡುಕೊಳ್ಳಬೇಕು.

ಕೇರಳ ಮಾದರಿಯಲ್ಲಿ ಕರಾವಳಿಯನ್ನು ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಸಬೇಕು. ಇಲ್ಲಿನ ನದಿ, ಸಮುದ್ರ, ಬೆಟ್ಟ ಗುಡ್ಡಗಳು, ದೇವಸ್ಥಾನ, ದೈವಸ್ಥಾನ, ಪಶ್ಚಿಮ ಘಟ್ಟ, ಐತಿಹಾಸಿಕ ಚರ್ಚ್, ಮಸೀದಿ, ಜೈನಬಸದಿಗಳನ್ನು ಬಳಸಿಕೊಂಡು ಪ್ರವಾಸೋದ್ಯಮ ರೂಪುಗೊಂಡರೆ ಸ್ಥಳಿಯ ನಿವಾಸಿಗಳಿಗೆ ಅದೇ ಆದಾಯದ ಮೂಲವಾಗಿ ಕೋಮುವಾದಕ್ಕೆ ಬೆಂಬಲ ಕೊಡುವುದನ್ನು ನಿಲ್ಲಿಸುತ್ತಾರೆ. ಹಾಗಾಗಿ ಸರ್ಕಾರಗಳು ಈ ನಿಟ್ಟಿನಲ್ಲಿ ಕೆಲಸ ಮಾಡದಿರುವುದೇ ಕೋಮುವಾದ ಬೆಳವಣಿಗೆ ಹೊಂದಲು ಕಾರಣವಾಗಿದೆ ಎಂದು ಪರಿಗಣಿಸಿ ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಕರಾಗಬೇಕು.

ದಕ್ಷಿಣ ಕನ್ನಡದ ಅಭಿವೃದ್ದಿಗೆ ಅತೀ ದೊಡ್ಡ ಮಾರಕವಾಗಿರುವ ಕೋಮುವಾದ/ ಮತೀಯವಾದ ಎನ್ನುವುದು ಕರಾವಳಿಗೆ ಹೊಸದೇನೂ ಅಲ್ಲ. ಎಪ್ಪತ್ತರ ದಶಕದ ಆಸುಪಾಸಿನಲ್ಲೇ ಕರಾವಳಿಯಲ್ಲಿ ದೇಶದ ಗಮನ ಸೆಳೆದಂತಹ ಕೋಮುಗಲಭೆಗಳು ನಡೆದು, ದಕ್ಷಿಣ ಕನ್ನಡ ಜಿಲ್ಲೆ ಕೋಮುಸೂಕ್ಷ್ಮ ಜಿಲ್ಲೆ ಎಂಬ ವಿಭಾಗಕ್ಕೆ ಸೇರಿತ್ತು. ಆದರೆ ಎಪ್ಪತ್ತರ ದಶಕದ ಕೋಮುವಾದಕ್ಕೂ ಈಗಿನ ಕೋಮುವಾದಕ್ಕೂ ಗುಣಾತ್ಮಕವಾದ ವ್ಯತ್ಯಾಸವಿದೆ. ಹಿಂದೆ ಸಂಘಟನೆಗಳು ಮತ್ತು ಸೈದ್ದಾಂತಿಕ ವ್ಯಕ್ತಿಗಳು ಮಾತ್ರ ಕೋಮುವಾದಿಗಳಾಗಿದ್ದರು. ಹಾಗಾಗಿ ವ್ಯವಸ್ಥೆಯಿಂದ ಜನ ನ್ಯಾಯ ನಿರೀಕ್ಷಿಸಬಹುದಿತ್ತು. ದುರಾದೃಷ್ಠಾವಶಾತ್, ಈಗ ಕರಾವಳಿಯ ಜನಸಾಮಾನ್ಯರು ಮಾತ್ರವಲ್ಲದೆ ಇಡೀ ಸರ್ಕಾರಿ ವ್ಯವಸ್ಥೆಯೇ ಕೋಮುವಾದೀಕರಣಗೊಂಡಿದೆ. ಕ್ಷುಲ್ಲಕ ವಿಷಯಗಳಿಗೆ ಅಲ್ಪಸಂಖ್ಯಾತರು, ದಲಿತರ ಮೇಲೆ ದಾಳಿಗಳಾಗುತ್ತಿದೆ. ಸಂತ್ರಸ್ತರ ಪರ ನಿಲ್ಲಬೇಕಾದ ಸರ್ಕಾರಿ ವ್ಯವಸ್ಥೆಯು ‘ಬಹುಸಂಖ್ಯಾತ ರಾಜಕಾರಣ’ದ ಭಾಗವಾಗಿದೆ.

ಈ ರೀತಿಯ ಬಹುಸಂಖ್ಯಾತ ರಾಜಕಾರಣದ ಕಾರಣಕ್ಕಾಗಿಯೇ ಕರಾವಳಿಯ ಕೋಮುವಾದದಲ್ಲಿ ‘ಸ್ವ’ ಮತ್ತು ‘ಅನ್ಯ’ ಕಲ್ಪನೆಗಳು ಹುಟ್ಟಿಕೊಂಡಿದೆ. ಇಲ್ಲಿನ ಬಹುಸಂಖ್ಯಾತರು ‘ಸ್ವ ಮತಸ್ಥರು’, ಇಲ್ಲಿನ ಅಲ್ಪಸಂಖ್ಯಾತರು ‘ಅನ್ಯಮತೀಯ’ರಾಗಿ ವ್ಯವಸ್ಥೆ/ಪ್ರಭುತ್ವಕ್ಕೆ ಕಾಣಿಸತೊಡಗಿದೆ. ಇದು ಕೋಮುವಾದವು ಕರಾವಳಿಯಲ್ಲಿ ಅಪಾಯದ ಗೆರೆಯನ್ನು ದಾಟಿರುವ ಸಂಕೇತವಾಗಿದೆ. ಈ ಕಾರಣಕ್ಕಾಗಿಯೇ ಮಾನಸಿಕ ಅಸ್ವಸ್ಥನಾಗಿದ್ದ ಕೇರಳದ ಅಶ್ರಫ್ ಎಂಬಾತನನ್ನು 30 ರಿಂದ 50 ರಷ್ಟಿದ್ದ ಯುವಕರ ಗುಂಪು ಮುಸ್ಲೀಮನೆಂಬ ಕಾರಣಕ್ಕಾಗಿ ಗುಂಪು ದಾಳಿ ಮಾಡಿ ಕೊಲೆ ಮಾಡುತ್ತದೆ. ಪೊಲೀಸ್ ವ್ಯವಸ್ಥೆಯ ಗಂಟಲುಬ್ಬಿ ಬರಬೇಕಿದ್ದ ಈ ಅಮಾನವೀಯ ಪ್ರಕರಣವನ್ನು ಪೊಲೀಸರು ಮುಚ್ಚಿ ಹಾಕುವ ಕ್ರೂರತೆಯನ್ನು ಪ್ರದರ್ಶಿಸುತ್ತಾರೆ. ಗುಂಪು ಹತ್ಯೆಯ ತಂಡದ ಭಾಗವೇ ಆಗಿರುವ ವ್ಯಕ್ತಿಗಳಿಂದ ದೂರು ಬರೆಸಿಕೊಂಡು ಮೊಕದ್ದಮೆ ದಾಖಲಿಸುವ, ಸಂತ್ರಸ್ತ “ಪಾಕಿಸ್ತಾನ ಎಂದು ಕೂಗಿದ್ದ” ಎಂದು ದೂರಿನಲ್ಲಿ ಸೇರಿಸುವ ಅಪಾಯಕಾರಿ ನಡೆಗಳು ಪೊಲೀಸರಿಂದಲೆ ನಡೆಯುತ್ತದೆ‌. ಘಟನೆ ನಡೆದು 36 ತಾಸುಗಳ ಕಾಲ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ ಕಮೀಷನರ್ ಯಾವುದೇ ಕ್ರಮ ಜರುಗಿಸದೆ ಮೌನಕ್ಕೆ ಶರಣಾಗುತ್ತಾರೆ.  ಈ ಗಂಭೀರ ಅಂಶಗಳನ್ನು ಒಳಗೊಂಡ ಘಟನೆಗೆ ಒರ್ವ ಪೊಲೀಸ್ ಇನ್ಸ್ಪೆಕ್ಟರ್ ದರ್ಜೆಯ ಅಧಿಕಾರಿಯನ್ನು ಅಮಾನತ್ತು ಮಾಡಿ  ಸರಕಾರ ತನ್ನ ಕರ್ತವ್ಯದಿಂದ ಮುಕ್ತಗೊಂಡಿದೆ. ಈ ರೀತಿಯ ಅಪರಾಧವು ಸಾಮಾನ್ಯವಾಗಿ ದುರ್ಬಲ ಮತ್ತು ಅಂಚಿನಲ್ಲಿರುವ ಗುಂಪುಗಳ ವಿರುದ್ಧ ನಡೆಯುತ್ತದೆ. ಗುಂಪು ಥಳಿತವು ಮಾನವಕುಲ ಮತ್ತು ಅದರ ಜೀವನ ವಿಧಾನಕ್ಕೆ ಅಪಾಯವಾಗಿದೆ. ಹಾಗಾಗಿ ಕಮಿಷನರ್ ದರ್ಜೆಯ ಅಧಿಕಾರಿಗಳನ್ನು ಮಾಬ್ ಲಿಂಚಿಂಗ್ ಗೆ ಹೊಣೆಗಾರರನ್ನಾಗಿ ಮಾಡಬೇಕು.

ಎಲ್ಲಕ್ಕಿಂತ ಮುಖ್ಯವಾಗಿ, ಮಂಗಳೂರಿನ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ರಸ್ತೆಯಲ್ಲಿ ಎಪ್ರಿಲ್ 27, 2025 ರಂದು ಅಶ್ರಫ್ ಎನ್ನುವ ಮಾನಸಿಕ ಅಸ್ವಸ್ಥನ ಗುಂಪು ಹತ್ಯೆ ಪ್ರಕರಣದಲ್ಲಿ ಕರ್ನಾಟಕದ ರಾಜ್ಯ ಸರ್ಕಾರವು ಸುಪ್ರಿಂಕೋರ್ಟ್ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಕರಾವಳಿಯ ಪ್ರಜ್ಞಾವಂತ ವಲಯ ಬಯಸುತ್ತದೆ.

ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠವು ‘ತೆಹ್ಸೀನ್ ಎಸ್. ಪೂನವಲ್ಲಾ V/s  ಭಾರತದ ಒಕ್ಕೂಟ ಸರ್ಕಾರ’ ಪ್ರಕರಣದಲ್ಲಿ ನಿರ್ದೇಶಿಸಿರುವ ಮಾರ್ಗಸೂಚಿ ಈ ರೀತಿ ಇದೆ :

1.      ಒಂದು ತಿಂಗಳೊಳಗೆ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 357A ಗೆ ಅನುಗುಣವಾಗಿ ಗುಂಪು ಹತ್ಯೆಯ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಬೇಕು.
2.      ಸಂಭಾವ್ಯ ಗುಂಪು ಹತ್ಯೆಯನ್ನು ತಡೆಯಲು ಧ್ವೇಷ ಭಾಷಣಗಳನ್ನು ತಡೆಯುವುದು
3.      ಗುಂಪು ಹತ್ಯೆಗೆ ಕಾರಣವಾಗುವ ಧ್ವೇಷದ ತಪ್ಪು ಮಾಹಿತಿ ಹರಡುವುದನ್ನು ತಡೆಯುವುದು.
4.      ಪೊಲೀಸ್  ವರಿಷ್ಠಾಧಿಕಾರಿ ಹುದ್ದೆಗಿಂತ ಕಡಿಮೆಯಿಲ್ಲದ ಅಧಿಕಾರಿಯನ್ನು ಪ್ರತ್ಯೇಕವಾಗಿ ನೋಡೆಲ್ ಅಧಿಕಾರಿಯಾಗಿ ನೇಮಿಸುವುದು
5.      ದ್ವೇಷ ಭಾಷಣವನ್ನು ತಡೆಯಲೆಂದೇ ಪ್ರತ್ಯೇಕ ‘ವಿಶೇಷ ಕಾರ್ಯಪಡೆ’ಯನ್ನು ರಚಿಸುವುದು.
6.      ಗುಂಪು ಹತ್ಯೆ ಪ್ರಕರಣದ ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಸ್ಥಾಪಿಸಬೇಕು ಮತ್ತು ಆರು ತಿಂಗಳೊಳಗೆ  ವಿಚಾರಣೆ ಪೂರ್ಣಗೊಳಿಸಬೇಕು.
7.     ಆರೋಪಿಗಳನ್ನು ನಿರ್ಧಿಷ್ಟ ಅವಧಿಯಲ್ಲಿ ಬಂಧಿಸಿ ಆರೋಪ ಪಟ್ಟಿ ಸಲ್ಲಿಸಬೇಕು

ಇದು ಭಾರತದ ಗೌರವಾನ್ವಿತ ಸುಪ್ರಿಂ ಕೋರ್ಟ್ ಸೂಚಿಸಿರುವ ಮಾರ್ಗದರ್ಶಿ ಸೂತ್ರಗಳು. ಇದರಂತೆ ರಾಜ್ಯ ಸರ್ಕಾರ ಕಾರ್ಯನಿರ್ವಹಿಸಬೇಕು. ಅಶ್ರಫ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ದ್ವೇಷ ಭಾಷಣಗಳ ವಿರುದ್ಧ ಪ್ರಕರಣ ದಾಖಲಿಸಿ ಆರೋಪಿಗಳಿಗೆ ಜಾಮೀನು ಸಿಗದಂತೆ ನೋಡಿಕೊಳ್ಳಲು ವಿಶೇಷ ಕಾರ್ಯಪಡೆಯನ್ನು ರಾಜ್ಯ ಸರ್ಕಾರ ರಚಿಸಬೇಕು. ಪರಾರಿಯಾಗಿರುವ ಮತ್ತು ಪ್ರಭಾವ ಬಳಸಿ ಹೊರಗುಳಿದಿರುವ ಎಲ್ಲಾ ಪ್ರಭಾವಿ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಮತ್ತು ವಿಚಾರಣೆಗಾಗಿ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯವನ್ನು ಸ್ಥಾಪಿಸಬೇಕು ಎಂದು ಕರಾವಳಿಯ ಜನ ಸಮುದಾಯ ಒತ್ತಾಯಿಸುತ್ತದೆ. ಸಾಧ್ಯವಾದರೆ, ಸಶಕ್ತವಾದ ‘ಮಾಬ್ ಲಿಂಚಿಂಗ್ ತಡೆ ಕಾಯ್ದೆ’ಯನ್ನು ರೂಪಿಸಬೇಕು.

ಕರಾವಳಿಯ ಮತೀಯ ಸಂಘರ್ಷವನ್ನು ತಡೆಯಲು ನಕ್ಸಲ್ ನಿಗ್ರಹ ಪಡೆ ಮಾದರಿಯ ‘ಕಾರ್ಯಪಡೆ’ ರಚಿಸಲಾಗುವುದು ಎಂದು ರಾಜ್ಯದ ಗೃಹ ಸಚಿವರು ಅಧಿಕೃತವಾಗಿ ಘೋಷಿಸಿದ್ದರು. ಇದು ಮೂರ್ಖತನದ ಪರಮಾವಧಿಯಾಗಿದೆ. ಕರಾವಳಿಯಲ್ಲಿ ಸೃಷ್ಟಿಯಾಗಿರುವುದು  ರಾಜಕೀಯ- ಸಾಮಾಜಿಕ- ಆರ್ಥಿಕ- ಸಾಂಸ್ಕೃತಿಕ ಬಿಕ್ಕಟ್ಟು. ಇಂತಹ ಬಿಕ್ಕಟ್ಟಿಗೆ ಬೇಕಿರುವುದು ರಾಜಕೀಯ ಪರಿಹಾರವೇ ಹೊರತು ಪೊಲೀಸರ ಮದ್ಯಸ್ಥಿಕೆಯಲ್ಲ. ವಿಪರ್ಯಾಸವೆಂದರೆ  ಇಂತಹ ರಾಜಕೀಯ ಮಾಡಬೇಕಿರುವ ಆಡಳಿತ ಪಕ್ಷದ ನಾಯಕರುಗಳು ಕೋಮುವಾದಿಗಳನ್ನು ಸೃಷ್ಟಿಸುವ ಮಠಾಧೀಶರು, ಧರ್ಮಾಧಿಕಾರಿಗಳ ಕಾಲಾಳುಗಳಾಗಿದ್ದಾರೆ. ಕೋಮುವಾದದ ವಿರುದ್ಧ ಸೈದ್ದಾಂತಿಕವಾಗಿ ಹೋರಾಟ ಮಾಡುತ್ತಿರುವ ಜಾತ್ಯಾತೀತ ರಾಜಕೀಯ ಕಾರ್ಯಕರ್ತರುಗಳು, ಸ್ವತಂತ್ರ ಸಾಮಾಜಿಕ ಕಾರ್ಯಕರ್ತರುಗಳು, ಬರಹಗಾರರು, ಚಿಂತಕರನ್ನು ಈ ಸರ್ಕಾರ ಕರಾವಳಿಯಲ್ಲಿ ವೈರಿಗಳಂತೆ ಕಾಣುತ್ತಿದೆ. ಕೋಮುವಾದಿಗಳ ಮೇಲೆ  ಪ್ರಕರಣ ದಾಖಲಿಸುವ ಬದಲು ಕೋಮುವಾದದ ವಿರೋಧಿಗಳ ಮೇಲೆ ಪೊಲೀಸ್ ಇಲಾಖೆ ಎಫ್ಐಆರ್ ಗಳ ಮೇಲೆ ಎಫ್ಐಆರ್ ದಾಖಲಿಸುತ್ತದೆ. ಇದನ್ನು ಸರ್ಕಾರದ ಗಮನಕ್ಕೆ ತಂದರೂ ಕರಾವಳಿಯ ಪೊಲೀಸ್ ಇಲಾಖೆಯ ಅಮೂಲಾಗ್ರ ಬದಲಾವಣೆ ಇನ್ನೂ ಸಾಧ್ಯವಾಗಿಲ್ಲ.

ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುವ ನಿರುಪಯುಕ್ತ ಪ್ರತ್ಯೇಕ ‘ಕೋಮು ಹಿಂಸೆ ತಡೆ ಕಾರ್ಯಪಡೆ’ಯ ಬದಲು ಈಗಿರುವ ಪೊಲೀಸ್ ಇಲಾಖೆಗೆ ಕಾಯಕಲ್ಪ ನೀಡಬೇಕು. ಪೊಲೀಸರು ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಬೇಕು.  ರೌಡಿಗಳು, ದಂಧೆಕೋರರು ಧರ್ಮ ರಕ್ಷಣೆಯ ಸೋಗಿನಲ್ಲಿ ನಡೆಸುವ ಗೂಂಡಾಗಿರಿಯನ್ನು ನಿಲ್ಲಿಸಲು ಪೊಲೀಸರಿಗೆ ಸೂಕ್ತ ನಿರ್ದೇಶನದ ಜೊತೆಗೆ ಮುಕ್ತ ಸ್ವಾತಂತ್ರ್ಯ ನೀಡಬೇಕು. ಎಲ್ಲಾ ಧರ್ಮಕ್ಕೆ ಸೇರಿದ ಎಲ್ಲಾ ಸಕ್ರಿಯ ರೌಡಿಶೀಟರ್ ಗಳನ್ನು ಕರಾವಳಿಯಿಂದ ಗಡಿಪಾರು ಮಾಡಬೇಕು. ಇಲ್ಲದೇ ಇದ್ದರೆ ಈ ಸಕ್ರಿಯ ರೌಡಿಶೀಟರ್ ಗಳು ಧರ್ಮ, ರಾಷ್ಟ್ರೀಯತೆಯ ಮುಸುಕಿನಲ್ಲಿದ್ದು ಪೊಲೀಸರಿಂದಲೇ ಗೌರವಾತಿಥ್ಯಗಳನ್ನು ಪಡೆದು ‘ಗೌರವಾನ್ವಿತ ಕೊಲೆ’ ಮಾಡುತ್ತಾರೆ. ವೃತ್ತಿಪರ ರೌಡಿಗಳು ಕೊಲೆಯ ಮೂಲಕವೇ ಧಾರ್ಮಿಕ/ಸಾಮಾಜಿಕ ನಾಯಕರಾಗುತ್ತಿದ್ದಾರೆ. ಹಾಗಾಗಿ, ಧರ್ಮಾತೀತವಾಗಿ ‘ಕೊಲೆಗಾರ ರೌಡಿಶೀಟರ್’ ಗಳ ಗಡಿಪಾರು ಮಾಡಬೇಕಿದೆ.  

ಇವೆಲ್ಲಕ್ಕೂ ಮೊದಲು, ಪೊಲೀಸರಿಗೆ ಮಾನವ ಹಕ್ಕುಗಳು ಮತ್ತು ಸಂವಿದಾನದ  ಜಾತ್ಯಾತೀತತೆ, ಕೋಮು ನಿರಾಪೇಕ್ಷತೆ (Religious or Communal Secularism) ಬಗ್ಗೆ ತರಬೇತಿ ನೀಡಿ ಸ್ಪಷ್ಟ ಅದೇಶವನ್ನು ಹೊರಡಿಸಬೇಕು. ಈ ಬಗೆಗೆ ಪೊಲೀಸ್ ಮ್ಯಾನುವಲ್ ಮತ್ತು ಕಾನೂನುಗಳಿಗ ಸೂಕ್ತ ತಿದ್ದುಪಡಿ ತಂದು ಪೊಲೀಸರನ್ನು ಸಂವಿದಾನದ ಆಶಯದ ವ್ಯಾಪ್ತಿಯೊಳಗೆ ತರಬೇಕು. ಕರಾವಳಿ ಕೋಮುಸೂಕ್ಷ್ಮ ಪ್ರದೇಶವಾಗಿರುವುದರಿಂದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದರ್ಜೆಗಿಂತ ಮೇಲ್ಪಟ್ಟ ಯಾವುದೇ  ಅಧಿಕಾರಿ ಐದು ವರ್ಷಕ್ಕಿಂತ ಹೆಚ್ಚು ಕಾಲ ಕರಾವಳಿಯಲ್ಲಿ ಸೇವೆ ಸಲ್ಲಿಸುವಂತಿಲ್ಲ ಎಂಬ ನಿಯಮ ಜಾರಿಗೆ ತರಬೇಕು.  ರೌಡಿಗಳನ್ನು, ಕೋಮುವಾದಿಗಳನ್ನು, ಸಮಾಜ ವಿದ್ರೋಹಿಗಳನ್ನು ನಿಯಂತ್ರಿಸುವುದಕ್ಕೂ ಮೊದಲು ಕೋಮುವಾದಿ ಪೊಲೀಸರ ನಿಯಂತ್ರಣವಾಗಬೇಕಿದೆ.

2023 ರಿಂದ 2024 ರ ಮಧ್ಯೆ 114 ಕೋಮು ಹಿಂಸೆ ಪ್ರಕರಣಗಳು ಕರಾವಳಿಯಲ್ಲಿ ನಡೆದಿದೆ. ಕಳೆದ ಹತ್ತು ವರ್ಷಗಳ ಕೋಮು ಹಿಂಸೆಗಳ ಗಣತಿಯನ್ನು ಮಾಡಿದರೆ ಕರಾವಳಿಯ ಕೋಮು ಹಿಂಸೆಯ ಭಯಾನಕತೆ ಅರಿವಿಗೆ ಬರುತ್ತದೆ. ಇದರ ತಡೆಗೆ ಸರ್ಕಾರದ ಬಳಿ ಇರುವ ಯೋಜನೆಗಳೇನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. “ಎಲ್ಲಿಯಾದರೂ ಅನ್ಯಾಯವಾದರೆ ಅದು ಎಲ್ಲೆಡೆಯ ನ್ಯಾಯಕ್ಕೆ ಬೆದರಿಕೆಯಾಗಿದೆ ” ಎಂದು ಮಾರ್ಟೀನ್ ಲೂಥರ್ ಕಿಂಗ್ ಹೇಳುತ್ತಾರೆ. ಹಾಗಾಗಿ ರಾಜ್ಯ ಸರ್ಕಾರವು ಕರಾವಳಿಯ ಕೋಮು ಹಿಂಸೆಯನ್ನು ಒಂದು ಜಿಲ್ಲೆಯ ಸಮಸ್ಯೆ ಎಂದು ನಿರ್ಲಕ್ಷಿಸಬಾರದು. ಇದು ಇಡೀ ದೇಶದ ಸಂವಿಧಾನದ ಮೇಲೆ ನಡೆಯುತ್ತಿರುವ ದಾಳಿ ಎಂದು ಖಡಾಖಂಡಿತವಾಗಿ ಪರಿಗಣಿಸಬೇಕು. ಕರಾವಳಿ ಎನ್ನುವುದು ಕೋಮುವಾದದ ಪ್ರಯೋಗಶಾಲೆ ಎಂದು ಕರೆಯಲ್ಪಡುವುದನ್ನು ರಾಜ್ಯ ಸರ್ಕಾರಕ್ಕೆ ಕೋಮುವಾದಿಗಳು ಹಾಕಿರುವ ಸವಾಲು ಮತ್ತು ಅಂತಹ ಸವಾಲು ರಾಜ್ಯ ಸರ್ಕಾರಕ್ಕೆ ನಾಚಿಗೆಗೇಡು ಎಂದು ಘನ ಸರ್ಕಾರ ಪರಿಗಣಿಸಬೇಕು.

ಹಾಗಾಗಿ ಪ್ರಣಾಳಿಕೆಯಲ್ಲಿ ಕೋಮುವಾದದ ವಿರುದ್ಧದ ಭರವಸೆಯನ್ನು ನೀಡಿ ಅಧಿಕಾರಕ್ಕೆ ಬಂದ ತಾವು ಕರಾವಳಿಯ ಜನಸಮುದಾಯದ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ‘ಮೃದು ಹಿಂದುತ್ವ’ದ ಧೋರಣೆಯನ್ನು ಕೈಬಿಟ್ಟು ಕೋಮು ನಿರಾಪೇಕ್ಷತೆಯನ್ನು (ಸರ್ಕಾರವು ಯಾವುದೇ ಧರ್ಮವನ್ನೂ ತನ್ನ ಧರ್ಮವಾಗಿ ಅಂಗೀಕರಿಸುವುದಿಲ್ಲ, ಎಲ್ಲಾ ನಾಗರಿಕರಿಗೆ ಧರ್ಮ ಸ್ವಾತಂತ್ರ್ಯ ಇರಬೇಕು, ಧರ್ಮದ ಆಧಾರದಲ್ಲಿ ಯಾವ ಭೇದಭಾವವೂ ಇರಬಾರದು, ಯಾವುದೇ ಧಾರ್ಮಿಕ ಭಾವನೆ ಅಥವಾ ಕೋಮು ಗಲಭೆಗೆ ಅವಕಾಶ ನೀಡದೆ, ಸಮಾನತೆ ಮತ್ತು ಶಾಂತಿಗೆ ಒತ್ತು ನೀಡುವುದು) ಜಾರಿಗೆ ತರುವ ಕೆಲಸವನ್ನು ತುರ್ತಾಗಿ ನಿರ್ವಹಿಸಬೇಕಿದೆ.

ಎಲ್ಲಾ ಅಭಿವೃದ್ದಿಗಳಿಗಿಂತ ‘ಬದುಕುವ ಹಕ್ಕು’ ಮೂಲಭೂತ ಅಗತ್ಯವಾಗಿರುತ್ತದೆ. ಬದುಕುವ ಹಕ್ಕನ್ನು ಕಸಿಯುವ ಕೋಮುವಾದವು ಕರಾವಳಿಯಲ್ಲಿ ಉದ್ಯೋಗ, ಶಿಕ್ಷಣ, ಆರೋಗ್ಯವನ್ನು ಕಸಿಯುತ್ತಿದೆ. ಇದರಿಂದಾಗಿ ಅಭಿವೃದ್ದಿ ಎನ್ನುವುದು ಕೆಲವೇ ಜನರಿಗೆ ಸೀಮಿತವಾಗುತ್ತದೆ. ಹಾಗಾಗಿ ಕರಾವಳಿಯ ಜನರ ಬದುಕುವ ಹಕ್ಕನ್ನು ರಕ್ಷಿಸುವುದು ಸರ್ಕಾರದ ಮೂಲಭೂತ ಕರ್ತವ್ಯವಾಗಬೇಕಿದೆ.

ಸಂವಿದಾನದ ಮೇಲೆ ಅತೀವ ಪ್ರೀತಿ ಮತ್ತು ನಂಬಿಕೆ ಇಟ್ಟಿರುವ ತಾವುಗಳು ಇದನ್ನು ಆಧ್ಯತೆಯ ಕರ್ತವ್ಯವೆಂದು ಭಾವಿಸುವಿರಿ ಎಂದು ವಿಶ್ವಾಸ ಇಟ್ಟುಕೊಂಡಿರುವ,

ತಮ್ಮ ವಿಶ್ವಾಸಿಗಳು,
ಪ್ರೊ. ನರೇಂದ್ರ ನಾಯಕ್
ಡಾ. ಗಣನಾಥ ಶೆಟ್ಟಿ ಎಕ್ಕಾರು
ಡಾ. ಶ್ರೀನಿವಾಸ ಕಕ್ಕಿಲ್ಲಾಯ
ಪ್ರೊ. ಫಣಿರಾಜ್
ಡಾ. ಪೂವಪ್ಪ ಕಣಿಯೂರು
ಡಾ. ಎನ್.  ಇಸ್ಮಾಯಿಲ್
ಡಾ. ಕೃಷ್ಣಪ್ಪ ಕೊಂಚಾಡಿ
ವಾಸುದೇವ ಉಚ್ಚಿಲ
ಚಂದ್ರಕಲಾ ನಂದಾವರ
ಮುನೀರ್ ಕಾಟಿಪಳ್ಳ
ಅತ್ರಾಡಿ ಅಮೃತಾ ಶೆಟ್ಟಿ
ಐ ಕೆ ಬೊಳವಾರು
ನವೀನ್ ಸೂರಿಂಜೆ
ಸ್ವರ್ಣಾ ಭಟ್
ಗುಲಾಬಿ ಬಿಳಿಮಲೆ
ಉದ್ಯಾವರ ನಾಗೇಶ ಕುಮಾರ್
ಸಂತೋಷ್ ಶೆಟ್ಟಿ ಹಿರಿಯಡ್ಕ
ಯಶವಂತ ಮರೋಳಿ
ಶ್ರೀನಿವಾಸ ಕಾರ್ಕಳ
ಪ್ರಕಾಶ್ ನೊರೋನ್ಹ, ಪಾಂಬೂರು

You cannot copy content of this page

Exit mobile version