ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರವೊಂದನ್ನು ಕೈಗೊಳ್ಳಲಿದ್ದು, ರಕ್ಷಣಾ ಬಜೆಟ್‌ಗೆ 50,000 ಕೋಟಿ ರೂ.ಗಳಷ್ಟು ಹೆಚ್ಚುವರಿ ನಿಧಿಯನ್ನು ಕೇಂದ್ರವು ಮಂಜೂರು ಮಾಡಲಿದೆ ಎನ್ನಲಾಗಿದೆ.
ಆಪರೇಷನ್ ಸಿಂಧೂರ್ನ ಹಿನ್ನೆಲೆಯಲ್ಲಿ ಸರ್ಕಾರವು ಈ ದಿಶೆಯಲ್ಲಿ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಸಂಬಂಧಿತ ಮೂಲಗಳು ತಿಳಿಸಿವೆ. ಈ ವರ್ಷದ ಬಜೆಟ್ಟಿನಲ್ಲಿ ರಕ್ಷಣಾ ಇಲಾಖೆಗೆ 6.81 ಲಕ್ಷ ಕೋಟಿ ರೂ.ಗಳ ಬಜೆಟ್ ಅನುದಾನ ನೀಡಲಾಗಿದೆ. ಈ ಹೆಚ್ಚುವರಿ ಅನುದಾನಕ್ಕೆ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ ದೊರೆಯುವ ಸಾಧ್ಯತೆ ಇದೆ. ಇದರಿಂದ ರಕ್ಷಣಾ ಕ್ಷೇತ್ರಕ್ಕೆ ಅನುದಾನಿತ ನಿಧಿ ಮೊತ್ತ 7 ಲಕ್ಷ ಕೋಟಿ ರೂ.ಗಳನ್ನು ಮೀರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಚೀನಾ ಮತ್ತು ಪಾಕಿಸ್ತಾನದಿಂದ ಭದ್ರತೆಗೆ ಎದುರಾಗುತ್ತಿರುವ ಸವಾಲುಗಳ ಹಿನ್ನೆಲೆಯಲ್ಲಿ, ರಕ್ಷಣಾ ಕ್ಷೇತ್ರವನ್ನು ಬಲಪಡಿಸುವ ಗುರಿಯೊಂದಿಗೆ ಈ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಕೇಂದ್ರವು ಅನುದಾನವನ್ನು ಹೆಚ್ಚಿಸಿತ್ತು. ಈ ಯೋಜನೆಯಡಿ 6,81,210 ಕೋಟಿ ರೂ.ಗಳನ್ನು ಪ್ರಸ್ತಾಪಿಸಲಾಗಿತ್ತು. 2024-25ರ ಬಜೆಟ್ ಅನುದಾನದ (6.22 ಲಕ್ಷ ಕೋಟಿ ರೂ.) ಜೊತೆ ಹೋಲಿಸಿದರೆ ಇದು 9.53% ಹೆಚ್ಚು.
ಸಂಶೋಧಿತ ಅಂದಾಜಿನ (6.41 ಲಕ್ಷ ಕೋಟಿ ರೂ.) ಜೊತೆಗೆ ಹೋಲಿಸಿದರೆ 6.2% ಹೆಚ್ಚಾಗಿದೆ. ಈ ಅನುದಾನದಲ್ಲಿ ಹೊಸ ಶಸ್ತ್ರಾಸ್ತ್ರ ವ್ಯವಸ್ಥೆಗಳ ಖರೀದಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ (GDP)ಯಲ್ಲಿ ರಕ್ಷಣಾ ವ್ಯವಸ್ಥೆಗೆ ಮೀಸಲಿಟ್ಟುರುವುದು 1.91%.
50,000 ಕೋಟಿ ರೂ.ಗಳಪೂರಕ ಬಜೆಟ್‌ನ ನಿಧಿಗಳನ್ನು ಸಂಶೋಧನೆ, ಶಸ್ತ್ರಾಸ್ತ್ರಗಳು ಮತ್ತು ಅಗತ್ಯ ಸಾಮಗ್ರಿಗಳ ಖರೀದಿಗೆ ಬಳಸಿಕೊಳ್ಳುವ ಸಾಧ್ಯತೆಯಿದೆ. 2014-15ರ ಆರ್ಥಿಕ ವರ್ಷದಲ್ಲಿ ಎನ್‌ಡಿಎ ಮೈತ್ರಿಕೂಟವು ಅಧಿಕಾರಕ್ಕೆ ಬಂದ ನಂತರ ಮಂಡಿಸಿದ ಬಜೆಟ್‌ನಲ್ಲಿ ರಕ್ಷಣಾ ಮೀಸಲು 2.29 ಲಕ್ಷ ಕೋಟಿ ರೂ.ಗಳಾಗಿತ್ತು. ಒಟ್ಟು ವಾರ್ಷಿಕ ಬಜೆಟ್‌ನ 13% ರಕ್ಷಣೆಗೆ ಮೀಸಲಿಡಲಾಗಿತ್ತು.
ಏಪ್ರಿಲ್ 22, 2025ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನ ಸಮೀಪದ ಪ್ರಸಿದ್ಧ ಪ್ರವಾಸಿ ತಾಣವಾದ ಬೈಸರನ್ ಕಣಿವೆಯಲ್ಲಿ ಉಗ್ರರು ಮಾರಣಹೋಮ ನಡೆಸಿದ್ದರು. ಸೈನಿಕರ ಉಡುಗೆಯಲ್ಲಿ ಬಂದ ಉಗ್ರರು ಪ್ರವಾಸಿಗರನ್ನು ಸಮೀಪದಿಂದ ಗುಂಡಿಟ್ಟು ಕೊಂದಿದ್ದರು. ಈ ಘಟನೆಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ಪ್ರತಿಕಾರವಾಗಿ ಭಾರತವು ಆಪರೇಷನ್ ಸಿಂಧೂರ್ನಡಿ ಪಿಒಕೆ ಮತ್ತು ಪಾಕಿಸ್ತಾನದ ಉಗ್ರಗಾಮಿ ನೆಲೆಗಳನ್ನು ಧ್ವಂಸಗೊಳಿಸಿತು.
ಈ ಕಾರ್ಯಾಚರಣೆಯನ್ನು ಜೀರ್ಣಿಸಿಕೊಳ್ಳಲಾಗದ ಪಾಕಿಸ್ತಾನವು ನಂತರ ಭಾರತವನ್ನು ಕೆರಳಿಸುವ ಕೃತ್ಯಗಳಲ್ಲಿ ತೊಡಗಿತು. ಇದರಿಂದ ಎರಡೂ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಉಗ್ರ ಸ್ವರೂಪಕ್ಕೆ ತಿರುಗಿತು. ಆದರೆ, ಭಾರತದ ದಾಳಿಯ ತೀವ್ರತೆಯನ್ನು ತಡೆಯಲಾಗದ ಪಾಕಿಸ್ತಾನವು ಹಿಂದೆ ಸರಿದು, ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿತು.