ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ನೆಲೆಗಳ ಮೇಲೆ ಭಾರತ ನಡೆಸಿದ ಮಿಲಿಟರಿ ದಾಳಿಯ ನಂತರ ಸುಳ್ಳು ಸುದ್ದಿಗಳ ಫ್ಯಾಕ್ಟ್ ಚೆಕ್ಕರ್ ಮೊಹಮ್ಮದ್ ಜುಬೈರ್ ಆನ್‌ಲೈನ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಆಪರೇಷನ್ ಸಿಂಧೂರ್ ನಡೆಯುತ್ತಿದ್ದಂತೆ, ಮೊಹಮ್ಮದ್ ಜುಬೈರ್ ರಾತ್ರಿ ಹೊರಬರುತ್ತಿದ್ದ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲ್ಪಡುತ್ತಿದ್ದ ಸುಳ್ಳು ಸುದ್ದಿಗಳನ್ನು ಬಯಲಿಗೆಳೆದಿದ್ದಾರೆ.
ಪಾಕಿಸ್ತಾನ ಆರಂಭಿಸಿದ ಸುಳ್ಳು ಮಾಹಿತಿ ಹರಡುವ ತಂತ್ರವನ್ನು ಜುಬೈರ್ ರಾತ್ರೋ ರಾತ್ರಿ ಬಟಾ ಬಯಲು ಮಾಡಿದ್ದಾರೆ. ರೈಟ್-ವಿಂಗ್ ಐಟಿ ಸೆಲ್‌ಗಳಿಂದ ಸತತ ಆನ್‌ಲೈನ್ ದಾಳಿಗಳಿಗೆ ಒಳಗಾಗುತ್ತಿದ್ದ ಜುಬೈರ್ ಈಗ ಪಾಕಿಸ್ತಾನದ ಸುಳ್ಳು ಸುದ್ದಿಗಳ ಬಣ್ಣವನ್ನು ಕಳಚಿದ್ದಾರೆ. ಪಾಕಿಸ್ತಾನಿ ಸಾಮಾಜಿಕ ಜಾಲತಾಣ ಖಾತೆಗಳು ಹಾಗೂ ಹಮೀದ್ ಮಿರ್ ಅವರಂತಹ ಹಿರಿಯ ಪತ್ರಕರ್ತರು ಹಂಚಿಕೊಂಡಿರುವ ತಪ್ಪು ಮಾಹಿತಿಯನ್ನು ಅವರು ಸುಳ್ಳೆಂದು ಸಾಬೀತು ಮಾಡಿದ್ದಾರೆ.
ಆಲ್ಟ್ ನ್ಯೂಸ್ ಸಂಸ್ಥಾಪಕರಾಗಿರುವ ಇವರು, ಭಾರತ ನಡೆಸಿದ ದಾಳಿಯ ನಂತರ ಪಾಕಿಸ್ತಾನ ಹರಡಲು ಆರಂಭಿಸಿದ ತಪ್ಪು ಮಾಹಿತಿ 90% ಪಾಕಿಸ್ತಾನಿ ಖಾತೆಗಳಿಂದ ಬಂದಿದೆ ಎಂದು ಹೇಳಿದ್ದಾರೆ.
X ನಲ್ಲಿ, ಜುಬೈರ್ ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿಯಂತೆ ನಟಿಸುವ ಪಾಕಿಸ್ತಾನಿ ಖಾತೆಗಳ ಪಟ್ಟಿಯನ್ನು ಸಹ ಹಂಚಿಕೊಂಡಿದ್ದಾರೆ . ಅಂತಹ ಒಂದು ಖಾತೆಯ ಹೆಸರು ಅಡ್ಮಿರಲ್ ಅರುಣ್ ಪ್ರಕಾಶ್, ಈತ ತನ್ನನ್ನು ತಾನು ಮಾಜಿ ನೌಕಾಪಡೆಯ ನೌಕರ ಎಂದು ಬರೆದುಕೊಂಡಿದ್ದ, “ಭಾರತ ನನ್ನ ರಕ್ತದಲ್ಲಿದೆ” ಎಂದು ತನ್ನ ಬಯೋದಲ್ಲಿ ಹೇಳಿಕೊಂಡಿದ್ದಾನೆ.
ಮೂರನೇ ಪರಿಶೀಲಿಸಿದ ಎಕ್ಸ್ ಖಾತೆಯು ತನ್ನನ್ನು ತಾನು ಹೆಮ್ಮೆಯ ಭಾರತೀಯ ಮತ್ತು “ಕಾಂಗ್ರೆಸ್ ಬೆಂಬಲಿಗ” ಎಂದು ಕರೆದುಕೊಂಡಿದೆ. ಈ ಖಾತೆಯಿಂದ ಹಂಚಿಕೊಳ್ಳಲಾದ ನಕಲಿ ಸುದ್ದಿಗಳನ್ನು ಪಾಕಿಸ್ತಾನಿ ಪತ್ರಕರ್ತ ಹಮೀದ್ ಮಿರ್ ಶೇರ್ ಮಾಡಿದ್ದರು.
“ನಮ್ಮ ಪಡೆಗಳು ನಡೆಸಿದ ಆಪರೇಷನ್ ಸಿಂದೂರ್ ನಂತರ, ರಕ್ತಸಿಕ್ತ ಪಾಕಿಸ್ತಾನಿಗಳು ಅಖ್ನೂರ್ ಬಳಿ 1 ರಫೇಲ್ ಮತ್ತು 1 ಸು -30 ಅನ್ನು ಹೊಡೆದುರುಳಿಸಿದರು. ಮತ್ತು ನಮ್ಮ ಬ್ರಿಗೇಡ್ ಪ್ರಧಾನ ಕಚೇರಿಯನ್ನು ನಾಶಪಡಿಸಿದರು” ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಈ ಪೋಸ್ಟ್ ಅನ್ನು ಹಮೀದ್ ಮೀರ್ ರಿಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಸತ್ಯ ಪರಿಶೀಲನೆಗೆ ಇಳಿದ ಜುಬೈರ್ ಈ ಭಾರತೀಯ ವೇಷದ ನಕಲಿ ಪಾಕಿಸ್ತಾನಿ ಎಕ್ಸ್ ಹ್ಯಾಂಡಲ್‌ನ ನೈಜತೆಯನ್ನು ಬಯಲಿಗೆಳೆದರು.
ಪಾಕಿಸ್ತಾನದ ಪ್ರತೀಕಾರದ ಪುರಾವೆಯಾಗಿ ಹಂಚಿಕೊಳ್ಳಲಾಗುತ್ತಿರುವ ಹಲವಾರು ದೃಶ್ಯಗಳು ಹಳೆಯ ಘಟನೆಗಳಾಗಿದ್ದು, ಅವುಗಳಲ್ಲಿ ಹಲವು ಗಾಜಾದ ವೀಡಿಯೋಗಳಾಗಿವೆ.
“ಕೆಲವು ಗಾಜಾ ಮತ್ತು ಇಸ್ರೇಲ್‌ನಿಂದ ಬಂದಿವೆ, ಮತ್ತು ಭಾರತ ಮತ್ತು ಪಾಕಿಸ್ತಾನದ ಹಳೆಯ ಫೋಟೋಗಳು ಮತ್ತು ಘಟನೆಗಳು ಸಹ ಬಂದಿವೆ” ಎಂದು ಜುಬೈರ್ ಹೇಳಿದ್ದು, ಹರಿದಾಡುತ್ತಿರುವ ಕೆಲವು ದೃಶ್ಯಗಳು ಇರಾನ್‌ನಿಂದಲೂ ಬಂದಿವೆ ಎಂದು ಹೇಳಿದ್ದಾರೆ.
ಮೇ 4 ರವರೆಗೆ, ಪಾಕಿಸ್ತಾನದಲ್ಲಿ X ಅನ್ನು ನಿಷೇಧಿಸಲಾಗಿತ್ತು. ಅದರ ಈ ನಿಷೇಧವನ್ನು ತೆಗೆದು ಹಾಕಿದ ನಂತರ ಸುಳ್ಳು ಸುದ್ದಿ ಹರಡಲು ವ್ಯಾಪಕವಾಗಿ ಬಳಕೆಯಾಯಿತು.
“ಪ್ರಚಾರ ಮತ್ತು ಪ್ರಭಾವಿ ಖಾತೆಗಳು ಎರಡೂ ತಪ್ಪು ಮಾಹಿತಿಯನ್ನು ಹರಡುತ್ತಿವೆ ಎಂದು ನಮ್ಮ ಮೂಲಗಳಿಂದ ನಮಗೆ ತಿಳಿದಾಗ, ನಾನು ಸತ್ಯ ಪರಿಶೀಲನೆ ಮಾಡಲು ಪ್ರಾರಂಭಿಸಿದೆ. ಅಲ್ಗಾರಿದಮ್ ನನಗೆ ಸಹಾಯ ಮಾಡಿತು,” ಎಂದು ಜುಬೈರ್ ಹೇಳಿದರು.
ಭಾರತ-ಪಾಕಿಸ್ತಾನ ಬಿಕ್ಕಟ್ಟಿನ ಹಿಂದಿನ ಅಧ್ಯಾಯವಾದ ಪುಲ್ವಾಮಾ ಮತ್ತು ಪ್ರತೀಕಾರದ ಬಾಲಕೋಟ್ ದಾಳಿಯಲ್ಲಿ ಎರಡೂ ಕಡೆಯಿಂದಲೂ ತಪ್ಪು ಮಾಹಿತಿ ಹರಡಲಾಗುತ್ತಿತ್ತು ಎಂದು ಅವರು ಹೇಳಿದರು.
ಭಾರತದಲ್ಲಿ ಕೂಡ ಎಕ್ಸ್, ವಿಶೇಷವಾಗಿ ಸಂಘರ್ಷದ ಸಮಯದಲ್ಲಿ, ತನ್ನ ನಕಲಿ ಮತ್ತು ಕೃತಕ ನಿರೂಪಣೆಗಳ ಪ್ರಚಾರಕ್ಕೆ ಕುಖ್ಯಾತವಾಗಿದೆ. ಉದಾಹರಣೆಗೆ, ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದ ಸಮಯದಲ್ಲಿ, ಭಾರತೀಯ ಎಕ್ಸ್ ಖಾತೆಗಳಲ್ಲಿ ನಕಲಿ ಸುದ್ದಿಗಳೇ ತುಂಬಿದ್ದವು. ಇವುಗಳ ಸುಳ್ಳನ್ನು ಬಯಲಿಗೆಳೆದ ಜುಬೈರ್ ಅವರನ್ನು ಭಾರತದಲ್ಲಿ ʼಪಾಕಿಸ್ತಾನಿʼ ಎಂದೆಲ್ಲಾ ಕರೆದಿದ್ದರು. ಈಗ ಪಾಕಿಸ್ತಾನದ ನಕಲಿ ಸುದ್ದಿಗಳನ್ನು ಬಯಲಿಗೆಳೆದು ತಮ್ಮ ವೃತ್ತಿನಿಷ್ಠೆಯನ್ನು ಮೆರೆದಿದ್ದಾರೆ.
ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜುಬೈರ್ ಅವರನ್ನು ಜನರು ಪ್ರಶಂಸೆ ಮಾಡುತ್ತಿದ್ದಾರೆ.