ಆರ್.ಡಿ. ವೀರಪ್ಪ ಹತ್ಯೆ ಖಂಡಿಸಿ ಸಂಘಟನೆಗಳಿಂದ ಪ್ರತಿಭಟನೆ ಮನವಿ

ಹಾಸನ: ಸಿಐಟಿಯು, ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಹಾಗೂ ದಲಿತ ಹಕ್ಕುಗಳ ಸಮಿತಿ ಕರ್ನಾಟಕ (ಡಿಎಚ್‌ಎಸ್) ಹಾಸನ ಜಿಲ್ಲೆ ವತಿಯಿಂದ ಕೆ.ಎಸ್.ಆರ್.ಟಿ.ಸಿ ನೌಕರರಾದ ಆರ್.ಡಿ. ವೀರಪ್ಪರವರ ಬರ್ಬರ ಹತ್ಯೆಯನ್ನು ಖಂಡಿಸಿ ನಗರದ ಆರ್.ಸಿ. ರಸ್ತೆಯಲ್ಲಿರುವ ‘ಶ್ರಮ’ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಜಿಲ್ಲೆಯ ಆಲೂರು ತಾಲೂಕಿನ ರಾಜನಹಳ್ಳಿಯಲ್ಲಿ ಫೆ.17ರಂದು ನಡೆದಿರುವ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ದಲಿತ ಸಮುದಾಯಕ್ಕೆ ಸೇರಿದ ವೀರಪ್ಪರವರನ್ನು ಜಮೀನಿನಲ್ಲೇ ಹತ್ಯೆಗೈದು ಪೆಟ್ರೋಲ್ ಹಾಕಿ ಸುಟ್ಟಿರುವುದು ಅಮಾನುಷ ಕೃತ್ಯ ಎಂದು ಖಂಡಿಸಿದರು.


ಪ್ರತಿಭಟನೆಯಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, “ಘಟನೆ ನಡೆದು 15 ದಿನಗಳು ಕಳೆದರೂ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ. ಇದು ಪೊಲೀಸ್ ಇಲಾಖೆಯ ಕಾರ್ಯಪದ್ಧತಿಯ ಮೇಲೆಯೇ ಅನುಮಾನ ಮೂಡಿಸುತ್ತಿದೆ. ದಲಿತ ಸಮುದಾಯದ ವ್ಯಕ್ತಿಯೊಬ್ಬರನ್ನು ಇಂತಹ ಕ್ರೂರವಾಗಿ ಹತ್ಯೆಗೈದಿರುವುದು ಸಮಾಜವೇ ತಲೆತಗ್ಗಿಸುವ ಸಂಗತಿ. ಸರ್ಕಾರ ತಕ್ಷಣ ಉನ್ನತ ಮಟ್ಟದ ತನಿಖೆಗೆ ಆದೇಶಿಸಿ, ಸಂಚು ರೂಪಿಸಿದವರನ್ನೂ ಸೇರಿಸಿ ಎಲ್ಲ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು. ದಲಿತ ಮುಖಂಡ ಕೃಷ್ಣದಾಸ್ ಮಾತನಾಡಿ, “ಮೇಲ್ನೋಟಕ್ಕೆ ಆಸ್ತಿ ವಿವಾದದ ಪ್ರಕರಣವೆಂದು ತೋರಿಸಿಕೊಳ್ಳಲಾಗುತ್ತಿದೆಯಾದರೂ, ಈ ಹತ್ಯೆಯ ಹಿಂದೆ ಪ್ರಭಾವಶಾಲಿ ವ್ಯಕ್ತಿಗಳ ಕೈವಾಡ ಇರುವ ಶಂಕೆ ಇದೆ. ತನಿಖೆಯನ್ನು ಎಲ್ಲ ಆಯಾಮಗಳಲ್ಲಿ ನಡೆಸಿ ನಿಜಾಂಶವನ್ನು ಬಹಿರಂಗಪಡಿಸಬೇಕು. ವೀರಪ್ಪರವರ ಕುಟುಂಬಕ್ಕೆ ಸಮರ್ಪಕ ಪರಿಹಾರ ಹಾಗೂ ರಕ್ಷಣೆ ಒದಗಿಸಬೇಕು” ಎಂದು ಒತ್ತಾಯಿಸಿದರು.


ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿ, ಪ್ರಕರಣವನ್ನು ತ್ವರಿತವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ವೀರಪ್ಪರ ಸಾವಿಗೆ ನ್ಯಾಯ ಸಿಗುವವರೆಗೆ ತೀವ್ರ ಹಾಗೂ ಬೃಹತ್ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಟಿ.ಆರ್. ವಿಜಯ್ ಕುಮಾರ್, ಪೃಥ್ವಿ ಎಂ.ಜಿ., ರಾಜಶೇಖರ್ ಹುಲಿಕಲ್, ನಾರಾಯಣದಾಸ್, ಎಚ್.ಆರ್. ನವೀನ್ ಕುಮಾರ್, ರಾಜು ಗೊರೂರು, ಅಂಬುಗ ಮಲ್ಲೇಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು