Monday, January 13, 2025

ಸತ್ಯ | ನ್ಯಾಯ |ಧರ್ಮ

ಜನಾಂಗೀಯ ದ್ವೇಷದ ಹಿಂದಿನ ಕಾರಣಗಳನ್ನು ಹುಡುಕುವ ʼOriginʼ ಸಿನಿಮಾ (ನಾಗಾಂಕಣ -10)

  • ಎಂ ನಾಗರಾಜ ಶೆಟ್ಟಿ

ಆರ್ಯರನ್ನು, ದ್ರಾವಿಡರನ್ನು ಬೇರೆ ಬೇರೆ ಜನಾಂಗಗಳಿಗೆ ಸೇರಿದವರೆಂದು ಪರಿಗಣಿಸುವುದಿಲ್ಲ; ಜರ್ಮನರು, ಯಹೂದಿಗಳನ್ನು ಬಿಳಿಯರೆಂದೇ ತಿಳಿಯಲಾಗುತ್ತಿದೆ. ಹೀಗಿದ್ದರೂ ಭಾರತದಲ್ಲಿ ಜಾತಿ ತಾರತಮ್ಯ, ಜರ್ಮನಿಯಲ್ಲಿ ಹಿಟ್ಲರ್‌ ಕಾಲದಲ್ಲಿ ಯಹೂದಿಗಳ ಹತ್ಯೆ ನಡೆಯುತ್ತದೆ. ಒಂದೇ ಜನಾಂಗಕ್ಕೆ ಸೇರಿದವರಲ್ಲಿ ತಾರತಮ್ಯ, ಒಂದೇ ವರ್ಣದ ಜನರ ಕ್ರೂರ ಹತ್ಯೆ ಇದಕ್ಕೆ ಕಾರಣಗಳಾದರೂ ಏನು?

ಇಸಾಬೆಲ್ ವಿಲ್ಕರ್ ಸನ್ ಹೆಸರಿನ ಮಹಿಳೆ ಈ ಕುರಿತ ಅಧ್ಯಯನ, ಸಂಶೋಧನೆ ನಡೆಸಿ 2020 ರಲ್ಲಿ Caste- The origin of our discontents ಎನ್ನುವ ಕೃತಿ ರಚಿಸುತ್ತಾರೆ. ಈ ಪುಸ್ತಕದಲ್ಲಿ ಅವರು ಜನಾಂಗೀಯ ದ್ವೇಷವೊಂದೇ ಭೇದಭಾವಕ್ಕೆ ಕಾರಣವಾಗಿರಲಾರದು; ಮೇಲು ಕೀಲು, ಉಚ್ಚ, ನೀಚ ಭಾವನೆಗಳು ವಿದ್ವೇಷವನ್ನು, ತರತಮವನ್ನು ಹುಟ್ಟುಹಾಕುತ್ತದೆ, ಇದರ ಮೂಲ ಜಾತಿಭಾವನೆಯಲ್ಲಿದೆ ಎಂದು ಪ್ರತಿಪಾದಿಸುತ್ತಾರೆ. ಈ ಪುಸ್ತಕ ಕೆಲವು ತಿಂಗಳುಗಳ ಕಾಲ ಅಮೇರಿಕಾದಲ್ಲಿ ಬೆಸ್ಟ್ ಸೆಲ್ಲರ್ ಆಗಿ ಸಾವಿರಾರು ಪ್ರತಿಗಳು ಮಾರಾಟವಾಗುತ್ತವೆ. ಈ ಪುಸ್ತಕವನ್ನು ಆಧರಿಸಿ ಅವಾ ಡುವೆರ್ನೇ ʼ Origin ʼ ಹೆಸರಿನ ಸಿನಿಮಾ ಮಾಡಿದ್ದಾರೆ.

ಇಸಾಬೆಲ್ ಈ ಪುಸ್ತಕವನ್ನು ಬರೆಯುವ ಮೊದಲೇ ಪುಲಿಟ್ಜರ್ ಪ್ರಶಸ್ತಿ ಪಡೆದಿರುತ್ತಾರೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಬರೆದ ಸಂಶೋಧನಾತ್ಮಕ ಲೇಖನಗಳಿಗೆ ಈ ಪ್ರಶಸ್ತಿ ಬಂದಿರುತ್ತದೆ. ಜನಾಂಗೀಯ ಹತ್ಯೆಗಳ ಬಗೆಗಾಗಲೀ, ಜಾತೀಯ ವೈಷಮ್ಯದ ಕುರಿತಾಗಲೀ ಬರೆಯಬೇಕೆಂಬ ಯೋಚನೆ ಅವರಿಗಿರುವುದಿಲ್ಲ. ಅದಕ್ಕೆ ಕಾರಣವಾಗುವುದು ಒಂದು ಕೊಲೆ!

ಒಂದು ರಾತ್ರಿ ಕಪ್ಪು ವರ್ಣದ ಯುವಕನೊಬ್ಬ ಮಾಲ್ ನಲ್ಲಿ ಖರೀದಿಸಿ ವಾಪಾಸಾಗುತ್ತಿರುವಾಗ ಬೆನ್ನಟ್ಟಿದ ಬಿಳಿಯ ಪೊಲೀಸರು ತಪ್ಪಿಸಿಕೊಳ್ಳಲು ಬಿಡದೆ ಅವನನ್ನು ಕೊಲೆ ಮಾಡುತ್ತಾರೆ. ಮೈ ಬಣ್ಣ ಬಿಟ್ಟರೆ ಆ ಅಮಾಯಕ ಹುಡುಗನನ್ನು ಕೊಲ್ಲಲು ಕಾರಣಗಳಿರುವುದಿಲ್ಲ. ಇದರಿಂದ ಕಪ್ಪು ಬಣ್ಣದವರ ಹಕ್ಕಿನ ಬಗ್ಗೆ ಕಳಕಳಿ ಉಳ್ಳ ಇಸಾಬೆಲ್ ತಾಯಿ ಕ್ರುದ್ಧಳಾಗಿ ಮಗಳೊಡನೆ ಚರ್ಚಿಸುತ್ತಾರೆ. ಇಸಾಬೆಲ್ ಗೆಳತಿಯೂ ನೊಂದು ಪ್ರತಿಕ್ರಿಯಿಸುತ್ತಾಳೆ. ಇಸಾಬೆಲ್ ಈ ಕೊಲೆಯ ಬಗ್ಗೆ ಅರಿತಂತೆ, ಹತ್ಯೆಗೊಳಗಾದ ಯುವಕನ ಫೋನ್ ಕರೆಗಳನ್ನು ಪರಿಶೀಲಿಸಿದಂತೆ ಜನಾಂಗೀಯ ದ್ವೇಷದ ಕಾರಣಗಳು ಗೋಚರಿಸುತ್ತವೆ.

ಚರ್ಮದ ಬಣ್ಣಕ್ಕಾಗಿ ಸಹಜೀವಿಗಳನ್ನು ಕೊಲ್ಲುವ ಮನಸ್ಥಿತಿ ಇಸಾಬೆಲ್ ರನ್ನು ಯೋಚಿಸುವಂತೆ ಮಾಡುತ್ತದೆ. ಕೇವಲ ಮೈ ಬಣ್ಣದ ಕಾರಣಕ್ಕಾಗಿ ಕೊಲ್ಲುತ್ತಾರೆಯೇ? ಜನಾಂಗೀಯ ದ್ವೇಷವಲ್ಲದೆ ಹತ್ಯೆಗೆ ಬೇರೆ ಕಾರಣಗಳು ಇವೆಯೇ ಎನ್ನುವುದನ್ನು ತಿಳಿದುಕೊಳ್ಳಲು ಆಕೆ ಪ್ರಯತ್ನಿಸುತ್ತಾರೆ.

ಇಸಾಬೆಲ್ ಗಂಡ ಬ್ರೆಟ್ ಗಣಿತಜ್ಞ. ಬಿಳಿ ಬಣ್ಣದವನಾದರೂ ಸಂಕುಚಿತ ಮನಸ್ಸಿನವನಲ್ಲ. ಮಡದಿಯ ಅಧ್ಯಯನಕ್ಕೆ, ಸಂಶೋಧನೆಗೆ, ತಿರುಗಾಟಕ್ಕೆ ಅವನ ಪೂರ್ಣ ಸಹಕಾರ ಇದ್ದೇ ಇರುತ್ತದೆ. ಇಸಾಬೆಲ್ ಅಸ್ವಸ್ಥ ತಾಯಿಯನ್ನೂ ಅಕ್ಕರೆಯಿಂದ ನೋಡಿಕೊಳ್ಳುವ ಬ್ರೆಟ್ ಅಕಾಲದಲ್ಲಿ ಸಾವನ್ನಪ್ಪತ್ತಾನೆ. ಅನಾರೋಗ್ಯದಿಂದಿರುವ ತಾಯಿಯೂ ಬದುಕುವುದಿಲ್ಲ. ಇದರಿಂದ ತೀವ್ರ ಕ್ಷೋಭೆಗೊಳಗಾಗುವ ಇಸಾಬೆಲ್ ಅಧ್ಯಯನದ ಬಗ್ಗೆ ಅನಾಸಕ್ತಿ ತಳೆಯುವ ಪ್ರಸಂಗ ಬರುತ್ತದೆ. ಈ ಸಮಯದಲ್ಲಿ ಆಕೆಯ ಕಸಿನ್ ಧೈರ್ಯ ತುಂಬುತ್ತಾಳೆ. ʼ ನಿನ್ನೊಂದಿಗಿರುವೆ ʼ ಎಂದು ಭರವಸೆ ನೀಡುವ, ಕಾಯಿಲೆಯಿಂದ ಒದ್ದಾಡುವ ಆಕೆ ಕೂಡಾ ತೀರಿಹೋಗುತ್ತಾಳೆ. ಆ ಸಮಯದಲ್ಲಿ ಹೊರದೇಶದಲ್ಲಿರುವ ಇಸಾಬೆಲ್ ಸಾಯುವ ಸ್ಥಿತಿಯಲ್ಲಿರುವ ಆಕೆ ಕೇಳಿಸಿಕೊಳ್ಳುವಂತೆ ಹೃದಯದ ಮಾತುಗಳನ್ನು ಹೇಳುತ್ತಾರೆ.

ಇಸಾಬೆಲ್ ತನ್ನ ಅಧ್ಯಯನಕ್ಕಾಗಿ ಜರ್ಮನಿ, ಅಮೇರಿಕಾದ ಮಿಸಿಸೆಪ್ಪಿ ಮತ್ತು ಭಾರತಕ್ಕೆ ಭೇಟಿ ನೀಡುತ್ತಾರೆ. ಅಮೇರಿಕಾದ ವರ್ಣಭೇದದ ಕುರಿತು ಸಂಶೋಧನೆ ನಡೆಸಿದ ಇಬ್ಬರು ದಂಪತಿಯರ ʼ ಡೀಪ್ ಸೌತ್ ʼ ಎನ್ನುವ ಪುಸ್ತಕದ ಮುಖಾಂತರ ಪ್ರತ್ಯೇಕತೆಯ ಕಾರಣಗಳನ್ನು ತಿಳಿಯಲು ಯತ್ನಿಸುತ್ತಾರೆ. ಜರ್ಮನಿಯ ಮ್ಯೂಸಿಯಂ, ಹತ್ಯಾಕಾಂಡ ನಡೆದ ಸ್ಥಳಗಳಿಗೆ ಭೇಟಿ ಕೊಟ್ಟಾಗ ನಾಜಿಗಳ ಕ್ರೂರತೆಯ ದರ್ಶನವಾಗುತ್ತದೆ. ನಾಜಿಗಳ ಜೊತೆಗಾರನಾಗಿದ್ದೂ ತಾನು ಪ್ರೇಮಿಸಿದ ಯುವತಿಯನ್ನು ಪಾರುಮಾಡಲಾಗದೆ ಶಿಬಿರಕ್ಕೆ ಕಳಿಸಬೇಕಾದ ಅವಸ್ಥೆಯ ಪರಿಚಯವಾಗುತ್ತದೆ. ಹೆಣ್ಣು, ಗಂಡೆಂಬ ಭೇದವಿಲ್ಲದೆ, ಪ್ರೀತಿ, ಕರುಣೆ ಇಲ್ಲದೆ ನಾಜಿಗಳು ಕ್ರೂರವಾಗಿ ಹತ್ಯೆ ಮಾಡಿದ ಇತಿಹಾಸ ತೆರೆದುಕೊಳ್ಳುತ್ತದೆ. ಯಹೂದಿಗಳ ಹಕ್ಕುಗಳನ್ನು ಕಸಿದುಕೊಳ್ಳಲು ನಾಜಿಗಳು ಅಮೇರಿಕಾದ ಜಿಮ್ ಕ್ರೌ ಕಾನೂನನ್ನು ಅನುಷ್ಠಾನಕ್ಕೆ ತರಬಯಸಿದ್ದು, ಬಳಿಕ ಸಾಮೂಹಿಕ ನರಮೇಧದಲ್ಲಿ ಪರ್ಯಾವಸಾನಗೊಳ್ಳುವುದನ್ನು ಇಸಾಬೆಲ್ ಕಂಡುಕೊಳ್ಳುತ್ತಾರೆ.

ಭಾರತಕ್ಕೆ ಬಂದ ಇಸಾಬೆಲ್ ಗೆ  ಇನ್ನೊಂದು ರೀತಿಯಲ್ಲಿ ನರಕ ದರ್ಶನವಾಗುತ್ತದೆ. ಸೂರಜ್ ಯಂಗ್ಡೆ ಮತ್ತವರ ಸಹವರ್ತಿಗಳ ಮೂಲಕ ಭಾರತದ ಜಾತಿ ತಾರತಮ್ಯವನ್ನು ತಿಳಿದುಕೊಳ್ಳುತ್ತಾಳೆ. ತಮ್ಮ ಹಾಗೇ ಇರುವ ಮನುಷ್ಯರನ್ನು ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳುವ, ಹೀನ ಕೆಲಸಗಳಿಗೆ ಬಳಸಿಕೊಳ್ಳುವ ರೀತಿಯನ್ನು ಕಣ್ಣಾರೆ ಕಾಣುತ್ತಾರೆ. ಚಿತ್ರದಲ್ಲಿ ಮನಸ್ಸು ಕಲಕುವಂತೆ ಮಲದ ಗುಂಡಿಗಿಳಿದು ಮಲ ಎತ್ತುವ , ಕಕ್ಕಸ್ಸಿನ ಹೊಲಸನ್ನು ಕೈಯಿಂದ ಬಾಚುವ ದೃಶ್ಯಗಳನ್ನು ತೋರಿಸಲಾಗಿದೆ.

ಇದೇ ರೀತಿಯಲ್ಲಿ ಅಮೇರಿಕಾದಲ್ಲಿ ಕಪ್ಪು ಹುಡುಗನೊಬ್ಬನನ್ನು ಬಿಳಿಯರು ನಡೆಸಿಕೊಳ್ಳುವ ದೃಶ್ಯ ಕರುಳಿರಿಯುತ್ತದೆ. ರಗ್ಬಿ ಆಟದಲ್ಲಿ ಗೆದ್ದ ತಂಡದ ಕಪ್ಪು ಬಣ್ಣದ ಹುಡುಗನಿಗೆ ಸಹ ಆಟಗಾರರೊಂದಿಗೆ ಈಜುಕೊಳ ಪ್ರವೇಶಿಸದಂತೆ ನಿಷೇಧಿಸುತ್ತಾರೆ. ಆ ಹುಡುಗ ಕೊಳದ ಹೊರಗೆ ವಿಷಣ್ಣನಾಗಿ ಕುಳಿತಿದ್ದಾಗ ತರಬೇತುದಾರ ವ್ಯವಸ್ಥಾಪಕರೊಂದಿಗೆ ಮಾತನಾಡಿ ಈಜು ಕೊಳ ಪ್ರವೇಶಿಸಲು ಅನುಮತಿ ಪಡೆಯುತ್ತಾನೆ. ಆದರೆ ಕೊಳದೊಳಗೆ ಇಳಿದರೂ ನೀರು ಮುಟ್ಟುವಂತಿಲ್ಲ! ಚಾಪೆಯಂತ ತೆಪ್ಪದಲ್ಲಿ ಅವನನ್ನು ಮಲಗಿಸಿ, ಕೈಕಾಲುಗಳು ನೀರಿಗೆ ತಗಲಬಾರದೆಂದು ಎಚ್ಚರಿಕೆ ನೀಡಲಾಗುತ್ತದೆ. ಆ ಹುಡುಗ ಭೀತಿಯಿಂದ ಸೆಟೆದು ಕುಳಿತು ಆಕಾಶ ನೋಡುತ್ತಾ ತೇಲುವುದು ತೀವ್ರ ವಿಷಾದವನ್ನು ಹುಟ್ಟಿಸುತ್ತದೆ.

ಭಾರತಕ್ಕೆ ಬಂದ ಇಸಾಬೆಲ್ ಅವರಿಗೆ ಸೂರಜ್ ಯೆಂಗ್ಡೆ ಮತ್ತವರ ಗೆಳೆಯರು ದೆಹಲಿಯ ಪರಿಚಯ ಮಾಡಿಕೊಡುತ್ತಾರೆ. ಅಂಬೇಡ್ಕರ್ ಪ್ರತಿಮೆಯನ್ನು ತೋರಿಸಿ, ಕೈಯಲ್ಲಿರುವ ಸಂವಿಧಾನದ ಪ್ರತಿಯನ್ನು ತೋರಿಸುತ್ತಾ ʼ ಸಂವಿಧಾನ ಶಿಲ್ಪಿ ʼ ಎಂದು ಹೇಳಿ, ಜಾತಿವಿನಾಶ ಹೋರಾಟದ ಬಗ್ಗೆ ಹೇಳುತ್ತಾರೆ. ದೇಶದ ಎಲ್ಲೆಡೆ ಅಂಬೇಡ್ಕರ್   ಪ್ರತಿಮೆಗಳನ್ನು ಕಾಣಬಹುದು. ಆದರೆ ಅದನ್ನು ವಿರೂಪಗೊಳಿಸುವ ಕೆಲಸವೂ ನಡೆಯುತ್ತಿದೆ, ಅದಕ್ಕಾಗಿ ಇಲ್ಲಿಯೂ ಕಬ್ಬಿಣದ ಕಟಾಂಜನದ ಒಳಗೆ ಅಂಬೇಡ್ಕರ್ ಪ್ರತಿಮೆಯನ್ನು ಇರಿಸಲಾಗಿದೆ ಎಂದು ವಿವರಿಸುತ್ತಾರೆ. ಇದು ಸಾಂಕೇತಿಕವಾಗಿದೆ. ವರದಿಯನ್ನೇ ಆಧರಿಸಿದರೆ ದೇಶದಲ್ಲಿ ದಲಿತರ ಮೇಲೆ ಪ್ರತಿ ಹದಿನೈದು ನಿಮಿಷಕ್ಕೆ ಹಲ್ಲೆಗಳಾಗುತ್ತಿವೆ. ಪ್ರತಿ ದಿನ ಹತ್ತು ದಲಿತ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಾರೆ. ದಲಿತರ ಬದುಕುವ ಹಕ್ಕನ್ನೇ  ನಿರಾಕರಿಸಿ, ಅವರ ಸ್ವಾತಂತ್ರ್ಯವನ್ನು ಕಸಿದುಕೊಂಡ ವ್ಯವಸ್ಥೆಯನ್ನು ಇದು ತೋರಿಸುವಂತಿದೆ.

ಸೂರಜ್ ಯಂಗ್ಡೆ ಮೂಲಕ ಅಂಬೇಡ್ಕರ್ ವಿಚಾರಗಳು, ಅಧ್ಯಯನಗಳನ್ನು ಇಸಾಬೆಲ್ ತಿಳಿದುಕೊಳ್ಳುತ್ತಾರೆ. ಚಿತ್ರದ ಬಹಳಷ್ಟು ಅವಧಿ ಅಂಬೇಡ್ಕರ್ ಚಿಂತನೆಗೆ, ವ್ಯಕ್ತಿತ್ವ ಪರಿಚಯಕ್ಕೆ ಮೀಸಲಾಗಿದೆ. ಜಾತೀಯ ವಿಷಯದಲ್ಲಿ ತಿಳಿದುಕೊಳ್ಳಲೇಬೇಕಾದ ಅಂಬೇಡ್ಕರ್ ವಿಚಾರಗಳನ್ನು ಇಸಾಬೆಲ್ ತನ್ನ ಪುಸ್ತಕದಲ್ಲಿ ಪ್ರಸ್ತಾಪಿಸಿರುವುದು ಆಕೆಯ ಬದ್ಧತೆಗೆ ಸಾಕ್ಷಿ.

ಇಸಾಬೆಲ್ ಬಹಳಷ್ಟು ಕಡೆ ಓಡಾಡಿ, ಅಧ್ಯಯನ, ಸಂಶೋಧನೆ ಮಾಡಿ ಪುಸ್ತಕವನ್ನು ಬರೆದಿದ್ದರೂ ಅದರಲ್ಲಿ ಪ್ರಸ್ತಾಪಿತವಾಗಿರುವ ಅನೇಕ ವಿಷಯಗಳು ಚರ್ಚಾರ್ಹವಾಗಿವೆ. ಕಪ್ಪು ಜನರನ್ನು ಗುಲಾಮರನ್ನಾಗಿಸಿದ್ದು, ನಾಗರಿಕ ಹಕ್ಕುಗಳನ್ನು ನಿರಾಕರಿಸಿದ್ದು ಮತ್ತು ಈಗಲೂ ಅವರನ್ನು ಸಮಾನವಾಗಿ ಕಾಣಲು ಹಿಂಜರಿಯುತ್ತಿರುವುದರಲ್ಲಿ ಭಾರತದ ಜಾತಿಯ ಲಕ್ಷಣಗಳಿವೆ. ಆದರೆ ಯಹೂದಿಗಳನ್ನು ನಾಜಿಗಳು ದ್ವೇಷ ಮಾಡಿದ್ದು, ಕೊಂದಿದ್ದು ಜನಾಂಗೀಯವಲ್ಲ; ಅದರಲ್ಲಿ ಜಾತಿಭೇದದ ಅಂಶಗಳಿವೆ ಎನ್ನುವುದಕ್ಕೆ ಸರಿಯಾದ ವಿವರಣೆ ಇಲ್ಲ. ನಾಜಿಗಳು ಮತ್ತು ಯಹೂದಿಗಳಲ್ಲಿ ಮೇಲು ಕೀಳಿನ ಭಾವನೆ, ಪ್ರತ್ಯೇಕತಾ ಭಾವನೆ ಇತ್ತು. ಆದರೆ ಅದಷ್ಟೇ ನಾಜಿಗಳ ಸಾಮೂಹಿಕ ಕೊಲೆಗೆ ಕಾರಣವಲ್ಲ. ಪ್ರತ್ಯೇಕತೆಯೊಂದಿಗೆ ರಾಷ್ಟ್ರೀಯತೆ, ರಾಜಕೀಯ, ಅಧಿಕಾರ ದಾಹ ಇವೆಲ್ಲವೂ ಯಹೂದಿಗಳ ಹತ್ಯೆಯಲ್ಲಿ ಅಡಕವಾಗಿವೆ. ಭಾರತಕ್ಕೆ ಕಳಂಕವೆನ್ನಿಸುವ ಜಾತಿವ್ಯವಸ್ಥೆಯನ್ನು ಇತರ ದೇಶಗಳಲ್ಲಿ ಇರುವ ತಾರತಮ್ಯದ ಜೊತೆ ತಳಕು ಹಾಕುವುದಕ್ಕೆ ಸರಿಯಾದ ಕಾರಣಗಳನ್ನು ಒದಗಿಸಲು ಇಸಾಬೆಲ್ ವಿಫಲರಾಗಿದ್ದಾರೆ ಎಂದೇ ಅನ್ನಿಸುತ್ತದೆ. ಅಥವಾ ಭಾರತದ ಜಾತಿ ವ್ಯವಸ್ಥೆಯನ್ನು, ಶ್ರೇಣೀಕೃತ ಸಮಾಜವನ್ನು ಸರಿಯಾಗಿ ಗ್ರಹಿಸಲಾಗಿಲ್ಲವೆಂದು ತೋರುತ್ತದೆ.

ಈ ಚರ್ಚೆಯ ನಡುವೆಯೂ ಇಸಾಬೆಲ್ ಪುಸ್ತಕ ಮತ್ತು ʼ Origin ʼ ಸಿನಿಮಾ ಗಮನಾರ್ಹವಾದುದು. ಕೊಲೆಗೆ ಕಾರಣವಾಗುವ ಮನುಷ್ಯ ವಿರೋಧಿ ಪ್ರತ್ಯೇಕತಾ ಭಾವನೆಯ ಮೂಲವನ್ನು ಕಂಡುಕೊಳ್ಳಲು ಇಸಾಬೆಲ್ ಪ್ರಯತ್ನ ನಡೆಸಿರುವುದನ್ನು ಮೆಚ್ಚಲೇಬೇಕು. ತರತಮ ಭಾವನೆಗೆ ಪರಿಹಾರ ಕಂಡುಕೊಳ್ಳುವುದು ಇಸಾಬೆಲ್ ಉದ್ದೇಶವಲ್ಲ;  ಭೇದಭಾವದ ಕಾರಣಗಳನ್ನು ಕಂಡು ಹಿಡಿಯುವ ಪ್ರಯತ್ನವೆಂದೇ ಇದನ್ನು ತಿಳಿಯಬಹುದು.

ಇಸಾಬೆಲ್ ಪುಸ್ತಕವನ್ನು ಸಿನಿಮಾ ರೂಪಕ್ಕೆ ತರುವಲ್ಲಿ ಚಿತ್ರಕತೆ ಬರೆದು ನಿರ್ದೇಶಿಸಿದ ಅವಾ ಡ್ಯುವರ್ಮೆ ಯಶಸ್ವಿಯಾಗಿದ್ದಾರೆ. ಇಸಾಬೆಲ್ ರವರ ಬದುಕಿನ ಕ್ಷಣಗಳನ್ನು ಹಿಂದು- ಮುಂದಾಗಿ ಹೆಣೆದು ಆಸಕ್ತಿ ಹುಟ್ಟುವಂತೆ ನಿರೂಪಣೆ ಮಾಡಿದ್ದಾರೆ. ಅವರ ತಾಯಿಯನ್ನು ಗಂಡ ಬ್ರೆಟ್ ಎತ್ತಿಕೊಳ್ಳುವ ಸಂದರ್ಭ, ಆತ ನಿಧನನಾದಾಗ ಆಕೆಯ ಪರಿತಾಪ, ತೆಪ್ಪದಲ್ಲಿ ತೇಲುವ ಹುಡುಗನ ಪಕ್ಕದಲ್ಲಿ ಕೂತಂತ ಕಲ್ಪನೆ ಪರಿಣಾಮಕಾರಿಯಾಗಿದೆ. ಇಸಾಬೆಲ್ ಅವರ ವ್ಯಕ್ತಿತ್ವದೊಳಗೆ ಹೊಕ್ಕು ಆಂಜನ್ಯೂ ಎಲಿಸ್ ಟೇಲರ್ ನಟಿಸಿದ್ದಾರೆ. ಅವರಲ್ಲಿ ಸಾಕ್ಷಾತ್ ಇಸಾಬೆಲ್ ರನ್ನೇ ಕಂಡಂತಾಗುತ್ತದೆ.

ವರ್ಣ ಭೇದ ನೀತಿಯಿಂದ ನೊಂದ ಅಮೇರಿಕಾ ಕಪ್ಪು ಬಣ್ಣದ ಮಹಿಳೆಯೊಬ್ಬರು, ಮನುಷ್ಯ ಮನುಷ್ಯನನ್ನು ಕೊಲ್ಲುವ, ಕೀಳಾಗಿ ಕಾಣುವ ಮನಸ್ಥಿತಿ ಹೊಂದುವುದಾದರೂ ಹೇಗೆ ಎಂದು ತಿಳಿದುಕೊಳ್ಳಲು ಪರಿಶ್ರಮ ಪಡುವುದು, ಭಾರತದ ಜಾತಿಪದ್ಧತಿಯಲ್ಲಿ ಅದರ ಮೂಲ ಹುಡುಕುವುದು ಆಸಕ್ತಿದಾಯಕ. ಅದನ್ನು ಸಿನಿಮಾ ಮಾಡುವುದಂತೂ ಇನ್ನೂ ಹೆಚ್ಚಿನ ಸವಾಲುಗಳನ್ನು ಆಹ್ವಾನಿಸುತ್ತದೆ. ಶ್ರೇಷ್ಠ, ಕನಿಷ್ಟ ಭಾವನೆಗಳ ಮೂಲ ಎಲ್ಲಿದೆ ಎನ್ನುವುದನ್ನು ಕಂಡುಕೊಳ್ಳಲು ಅಸಕ್ತಿ ಇರುವವರು ನೋಡಲೇ ಬೇಕಾದ ಸಿನಿಮಾ ʼ Origin!

Related Articles

ಇತ್ತೀಚಿನ ಸುದ್ದಿಗಳು

You cannot copy content of this page