ಸರ್ಕಾರ ಬಡ ವಿದ್ಯಾರ್ಥಿಗಳು, ಬಡತನ ರೇಖೆಗಿಂತ ಕೆಳಗಿರುವ ಹೆಣ್ಣು ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಸ್ಯಾನಿಟರಿ ಪ್ಯಾಡ್ ಕೊಡಬೇಕು ಎಂಬ ವಿದ್ಯಾರ್ಥಿನಿಯೊಬ್ಬರ ಬೇಡಿಕೆಗೆ ಐಎಎಸ್ ಕೇಡರ್ ಮಹಿಳಾ ಅಧಿಕಾರಿಯೊಬ್ಬರ ಉದ್ಧಟತನದ ಉತ್ತರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬಿಹಾರದಲ್ಲಿ ‘ಸಶಕ್ತ ಮಹಿಳೆ, ಸಮೃದ್ಧ ಬಿಹಾರ’ ಎಂಬ ಕಾರ್ಯಾಗಾರದಲ್ಲಿ ಸ್ಥಳೀಯ ವಿಧ್ಯಾರ್ಥಿನಿಯರ ಜೊತೆಗೆ ನಡೆಸಿದ ಸಂವಾದದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖ್ಯಸ್ಥೆ ಹರ್ಜೋತ್ ಕೌರ್ ಸಂವೇದನಾ ರಹಿತ ಮಾತನ್ನಾಡಿದ್ದಾರೆ. ಸಂವಾದದಲ್ಲಿ ಮಹಿಳೆ ವಿಧ್ಯಾರ್ಥಿನಿಯೊಬ್ಬರು ಕೇಳಿದ ಪ್ರಶ್ನೆಗೆ ತೀರಾ ಮೂರ್ಖತನದಂತೆ ಉತ್ತರಿಸಿ ಕೊನೆಗೆ ನೀನು ಪಾಕಿಸ್ತಾನಕ್ಕೆ ಹೋಗು ಎಂದು ವಿಧ್ಯಾರ್ಥಿನಿಗೆ ಉದ್ಧಟತನದ ಉತ್ತರ ಕೊಟ್ಟಿದ್ದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಸಂವಾದದಲ್ಲಿ ಬಡ ಹೆಣ್ಣು ಮಕ್ಕಳಿಗೆ ಸರ್ಕಾರ ಕಡಿಮೆ ವೆಚ್ಚದಲ್ಲಿ ಸ್ಯಾನಿಟರಿ ಪ್ಯಾಡ್ ಕೊಡಬೇಕು ಎಂದು ಕೇಳಿದಾಗ, ‘ಹೀಗೆ ನೀವು ಬಾಯಿಗೆ ಬಂದಿದ್ದನ್ನೆಲ್ಲಾ ಕೇಳುವಾಗ ನಾಳೆ ನೀವು ಸರ್ಕಾರ ಜೀನ್ಸ್ ಕೊಡಬೇಕು ಎನ್ನುತ್ತೀರಿ, ನಂತರ ಉಚಿತವಾಗಿ ಶೂಗಳನ್ನು ಕೊಡಬೇಕು ಎನ್ನುತ್ತೀರಿ, ಒಂದಾದ ಮೇಲೆ ಒಂದರಂತೆ ಉಚಿತ ವಿತರಣೆಗೆ ಬೇಡಿಕೆ ಇಡುತ್ತೀರಿ. ಮುಂದೆ ಕಾಂಡೋಮ್ ಕೂಡಾ ಉಚಿತವಾಗಿ ಕೊಡಬೇಕು ಎಂದು ಹೇಳಲೂ ನೀವು ಹಿಂಜರಿಯುವುದಿಲ್ಲ. ಸರ್ಕಾರದ ಬಳಿ ಉಚಿತವಾಗಿ ಎಲ್ಲವನ್ನೂ ಕೇಳುವುದು ಸರಿಯಲ್ಲ’ ಎಂದು ಹರ್ಜೋತ್ ಕೌರ್ ಅವಿವೇಕದಿಂದ ಮಾತನಾಡಿದ್ದಾರೆ.
ವಿದ್ಯಾರ್ಥಿನಿ ಮುಂದುವರೆದು ‘ಸರ್ಕಾರ ನಮ್ಮಿಂದ ಆರಿಸಲ್ಪಟ್ಟಿದೆ. ಅವಶ್ಯಕತೆ ಇರುವುದನ್ನು ಕೊಡುವುದು, ಪ್ರಜೆಗಳು ಹೊರೆ ಇಳಿಸುವುದು ಸರ್ಕಾರದ ಕೆಲಸ ಎಂದು ಹೇಳಿದ್ದಾರೆ. ಆದರೆ ವಿಧ್ಯಾರ್ಥಿನಿಯ ಮಾತನ್ನು ಆಲಿಸದೇ ಹರ್ಜೋತ್ ಕೌರ್ ಉಚಿತವಾಗಿ ಕೇಳೋದು ಮೂರ್ಖತನ, ನಿನ್ನ ಓಟಿನ ಅವಶ್ಯಕತೆ ಇಲ್ಲ, ಬೇಕಿದ್ದರೆ ನೀನು ಪಾಕಿಸ್ತಾನಕ್ಕೆ ಹೋಗು ಎಂಬ ರೀತಿಯಲ್ಲಿ ಮೇಲಿಂದ ಮೇಲೆ ವಿವಾದಾತ್ಮಕವಾಗಿ ಉತ್ತರ ನೀಡಿದ್ದಾರೆ.
ಸಧ್ಯ ಈ ಚರ್ಚೆಯ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಜೊತೆಗೆ ನೆಟ್ಟಿಗರು ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಅವರ ಉದ್ಧಟತನದ ಉತ್ತರಕ್ಕೆ ವ್ಯಾಪಕವಾಗಿ ಟೀಕಿಸಿದ್ದಾರೆ.
ಈ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಕ್ರಯಿಸಿದ್ದು “ನಾವು ರಾಜ್ಯದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಎಲ್ಲಾ ರೀತಿಯ ಕೆಲಸ ಮಾಡುತ್ತಿದ್ದೇವೆ. ಐಎಎಸ್ ಅಧಿಕಾರಿ ಮಾತನಾಡಿದ ರೀತಿ ಸರಿಯಲ್ಲ. ಮಾಧ್ಯಮಗಳಿಂದ ಈ ಬಗ್ಗೆ ಕೇಳಿದ್ದೇನೆ. ಪರಿಸ್ಥಿತಿ ಅರಿತು ನಾನು ಪ್ರತಿಯೊಂದನ್ನೂ ಮೇಲ್ವಿಚಾರಣೆ ಮಾಡುತ್ತಿದ್ದೇನೆ ಮತ್ತು ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಹೇಳಿದರು.
ನಂತರ ವಿಷಯದ ಗಂಭೀರತೆಯನ್ನು ಅರಿತ ಹರ್ಜೋತ್ ಕೌರ್ “ನನಗೆ ಯಾರನ್ನು ನೋಯಿಸುವ ಉದ್ದೇಶ ಇರಲಿಲ್ಲ, ಮಾತಿನ ಭರದಲ್ಲಿ ಬಂದ ಆ ಪ್ರತಿಕ್ರಿಯೆಗೆ ನಾನು ಕ್ಷಮೆ ಯಾಚಿಸುತ್ತೇನೆ” ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪತ್ರದಲ್ಲಿ ತಿಳಿಸಿದ್ದಾರೆ.