ಇತ್ತೀಚಿನ ವಾರಗಳಲ್ಲಿ ತಮಿಳುನಾಡಿನ ಚೆನ್ನೈ ಮತ್ತು ಕಾಂಚೀಪುರಂ ಕರಾವಳಿಯಲ್ಲಿ 500 ಕ್ಕೂ ಹೆಚ್ಚು ಸತ್ತ ಆಲಿವ್ ರಿಡ್ಲಿ ಆಮೆಗಳು ದಡಕ್ಕೆ ಕೊಚ್ಚಿಕೊಂಡು ಹೋಗಿದ್ದು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಮೀನುಗಾರಿಕೆ ಮತ್ತು ಅರಣ್ಯ ಇಲಾಖೆಗಳು ಮತ್ತು ರಾಜ್ಯದ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಸೂಚನೆಗಳನ್ನು ನೀಡುವಂತೆ ಸೂಚಿಸಿದೆ.
ಆಲಿವ್ ರಿಡ್ಲಿ ಆಮೆಗಳು ಸಾಮಾನ್ಯವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಸಂತಾನೋತ್ಪತ್ತಿ ಮಾಡಲು ತಮಿಳುನಾಡು ಕರಾವಳಿಗೆ ಬರುತ್ತವೆ, ಅವುಗಳ ಗೂಡುಕಟ್ಟುವ ಅವಧಿಯು ನವೆಂಬರ್ ಅಂತ್ಯದಿಂದ ಮಾರ್ಚ್‌ವರೆಗೆ ಇರುತ್ತದೆ. ಗೂಡುಕಟ್ಟುವ ಅವಧಿಯಲ್ಲಿ ಸಾವುಗಳು ಅಪರೂಪವಲ್ಲವಾದರೂ, ಈ ವರ್ಷ ಅಸಾಧಾರಣವಾಗಿ ಹೆಚ್ಚಿನ ಸಂಖ್ಯೆಯ ಆಮೆಗಳು ಸತ್ತಿರುವುದು ಕಳವಳವನ್ನು ಹುಟ್ಟುಹಾಕಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಆಮೆಗಳ ಸಾವಿಗೆ ನಿಖರವಾದ ಕಾರಣವನ್ನು ನಿರ್ಧರಿಸಲು ಸಾಧ್ಯವಾಗದಷ್ಟು ಮಟ್ಟದಲ್ಲಿ ಅವುಗಳ ಶವಗಳು ಕೊಳೆತುಹೋಗಿವೆ ಎಂದು ದಿ ಹಿಂದೂ ವರದಿ ಮಾಡಿದೆ. ಹಾಗಿದ್ದೂ ಅರಣ್ಯ ಇಲಾಖೆ ಮತ್ತು ತಮಿಳುನಾಡು ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನಗಳ ವಿಶ್ವವಿದ್ಯಾನಿಲಯವು ಆಮೆಗಳ ದೇಹಗಳು ಊದಿರುವುದು ಮತ್ತು ಕಣ್ಣುಗಳು ಉಬ್ಬಿರುವುದು ಸಂಭವನೀಯ ಉಸಿರುಗಟ್ಟುವಿಕೆಯನ್ನು ಸೂಚಿಸುತ್ತದೆ ಎಂದು ಹೇಳಿವೆ.
ಆಮೆಗಳು ಅಕ್ರಮ ವಾಣಿಜ್ಯ ಮೀನುಗಾರಿಕೆ ನಡೆಸುತ್ತಿದ್ದ ಟ್ರಾಲರ್‌ಗಳ ಬಲೆಯಲ್ಲಿ ಸಿಲುಕಿ ಚೆನ್ನೈನ ಕಾಸಿಮೇಡು ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿ ತೀರದ ಸಮೀಪದಲ್ಲಿ ಸಾವನ್ನಪ್ಪಿವೆ ಎಂದು ಶಂಕಿಸಲಾಗಿದೆ.
“ಆಲಿವ್ ರಿಡ್ಲಿ ಆಮೆಗಳು ಉಸಿರಾಡಲು ಸಮುದ್ರದ ಮೇಲ್ಮೈಗೆ ಈಜಿ ಬರಬೇಕು. ಅವು ಬಲೆಗಳಲ್ಲಿ ಸಿಕ್ಕಿಹಾಕಿಕೊಂಡರೆ, ಉಸಿರುಗಟ್ಟಿ ಸಾಯುತ್ತವೆ,” ಎಂದು ಪಾಂಡಿಚೇರಿ ವಿಶ್ವವಿದ್ಯಾಲಯದ ಪರಿಸರ ಮತ್ತು ಪರಿಸರ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಕೆ ಶಿವಕುಮಾರ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಆಮೆಗಳು ಹೆಚ್ಚು ಇರುವ ಪ್ರದೇಶಗಳ ಬಳಿ ಹೆಚ್ಚಿನ ಸಂಖ್ಯೆಯ ಮೀನುಗಳಿರುವುದರಿಂದ ಟ್ರಾಲರ್‌ಗಳನ್ನು ಬಳಸಿ ಇಲ್ಲಿ ಮೀನುಗಾರಿಕೆ ನಡೆಸಿರುವುದು ಈ ವರ್ಷ ಅಸಾಧಾರಣವಾಗಿ ಹೆಚ್ಚಿನ ಸಂಖ್ಯೆಯ ಆಮೆಗಳ ಸಾವಿಗೆ ಕಾರಣ ಎಂದು ಅವರು ಹೇಳಿದ್ದಾರೆ.
ಜನವರಿ ಮತ್ತು ಏಪ್ರಿಲ್ ನಡುವೆ ಸಂಭಾವ್ಯ ಆಮೆ ಗೂಡುಕಟ್ಟುವ ಮತ್ತು ಸಂತಾನೋತ್ಪತ್ತಿ ಸ್ಥಳಗಳಲ್ಲಿ ಕರಾವಳಿಯ ಐದು ನಾಟಿಕಲ್ ಮೈಲುಗಳ ಒಳಗೆ ಯಾಂತ್ರೀಕೃತ ಹಡಗುಗಳ ಮೂಲಕ ಮೀನುಗಾರಿಕೆಗೆ ನಿಷೇಧವಿದೆ. ಹಾಗಿದ್ದೂ ಕೂಡ, ವರ್ಷದ ಈ ಸಮಯದಲ್ಲಿ ಆಳ ಸಮುದ್ರದಲ್ಲಿನ ಒರಟು ಪರಿಸ್ಥಿತಿಗಳಿಂದಾಗಿ ಅವರು ಕರಾವಳಿಯ ಮೂರರಿಂದ ಐದು ನಾಟಿಕಲ್ ಮೈಲಿಗಳೊಳಗೆ ಮೀನುಗಾರಿಕೆಗೆ ಆದ್ಯತೆ ನೀಡುತ್ತಾರೆ ಎಂದು ಅಪರಿಚಿತ ಮೀನುಗಾರರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
“ನಾವು ಪುಲಿಕಾಟ್ ಮತ್ತು ದಕ್ಷಿಣ ಆಂಧ್ರದ ಬಳಿ ಮೀನುಗಾರಿಕೆಗೆ ಆದ್ಯತೆ ನೀಡುತ್ತೇವೆ, ಏಕೆಂದರೆ ಕೊಳಚೆ ಇಲ್ಲದ ನೀರು ಇಲ್ಲಿದ್ದು, ಹೆಚ್ಚು ಮೀನು ಸಿಗುತ್ತದೆ,” ಎಂದು ಆ ಮೀನುಗಾರ ಹೇಳಿದ್ದಾರೆ.