ಶಿವಮೊಗ್ಗ: ಕರ್ನಾಟಕದ ವಿವಿಧ ಅಡಿಕೆ ಸಹಕಾರ ಸಂಘಗಳು ಹಾಗೂ ಖಾಸಗಿ ವ್ಯಾಪಾರಿಗಳಿಗೆ ಸೇರಿದ, ಅಡಿಕೆ ತುಂಬಿದ 55 ಕ್ಕೂ ಹೆಚ್ಚು ಲಾರಿಗಳನ್ನು ಮಹಾರಾಷ್ಟ್ರದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ತಪಾಸಣೆಯ ನೆಪದಲ್ಲಿ ಕಳೆದ ಒಂದು ವಾರದಿಂದ ವಶದಲ್ಲಿಟ್ಟುಕೊಂಡಿದೆ.
ಶಿವಮೊಗ್ಗದ ಮ್ಯಾಮ್ಕೋಸ್ (MAMCOS – ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ), ಮಂಗಳೂರಿನ ಕ್ಯಾಂಪ್ಕೋ (CAMPCO), ಹಾಸನದ ಅಡಿಕೆ ಬೆಳೆಗಾರರ ಸಹಕಾರ ಸಂಘ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಅಡಿಕೆ ಲೋಡ್ ಮಾಡಿಕೊಂಡು ಹೋಗಿದ್ದ 55 ಕ್ಕೂ ಹೆಚ್ಚು ಲಾರಿಗಳನ್ನು ಮಹಾರಾಷ್ಟ್ರದ ಸೋಲಾಪುರ, ಔರಂಗಾಬಾದ್, ಬೀಡ್ ಮತ್ತು ನಾಂದೇಡ್ ಹೆದ್ದಾರಿಗಳಲ್ಲಿ ಜೂನ್ 11 ರಿಂದ ತಡೆಹಿಡಿಯಲಾಗಿದೆ.
ಲಾರಿಗಳಲ್ಲಿದ್ದ ಅಡಿಕೆಗೆ ಬಣ್ಣ (ಡೈ) ಬಳಿಯಲಾಗಿದೆಯೇ ಮತ್ತು ಅವು ಮಾನವ ಬಳಕೆಗೆ ಯೋಗ್ಯವೇ ಎಂಬುದನ್ನು ಪರೀಕ್ಷಿಸಲು ಅಧಿಕಾರಿಗಳು ಮಾದರಿಗಳನ್ನು (ಸ್ಯಾಂಪಲ್ಸ್) ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪರೀಕ್ಷಾ ವರದಿಯಲ್ಲಿ ಅಡಿಕೆಯು ಬಳಕೆಗೆ ಸುರಕ್ಷಿತವಲ್ಲ ಎಂದು ಕಂಡುಬಂದರೆ, ಸಂಪೂರ್ಣ ಸರಕನ್ನು ಸ್ಥಳದಲ್ಲೇ ನಾಶಪಡಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ. ಒಂದೊಮ್ಮೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಅಡಿಕೆಯ ಗುಣಮಟ್ಟವು ನಿಗದಿಪಡಿಸಿದ ಮಾನದಂಡಗಳಿಗಿಂತ ಕಡಿಮೆಯಿದ್ದರೆ, ಸಂಬಂಧಪಟ್ಟವರಿಗೆ ದಂಡ ವಿಧಿಸಿ ಸಿವಿಲ್ ಮೊಕದ್ದಮೆ ಹೂಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮ್ಯಾಮ್ಕೋಸ್ ಸಂಸ್ಥೆಗೆ ಸೇರಿದ ಎರಡು ಲಾರಿಗಳನ್ನು ಸೋಲಾಪುರದಲ್ಲಿ ತಡೆಹಿಡಿಯಲಾಗಿದ್ದು, “ನಾವು ಅಲ್ಲಿನ ಸಹಾಯಕ ಆಯುಕ್ತರನ್ನು ಭೇಟಿ ಮಾಡಿ ಲಾರಿಗಳನ್ನು ಬಿಡುಗಡೆ ಮಾಡುವಂತೆ ವಿನಂತಿಸಿದ್ದೇವೆ. ಆದರೆ ಈವರೆಗೆ ಅವರಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ,” ಎಂದು ಮ್ಯಾಮ್ಕೋಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವಾ ಹೇಳಿದ್ದಾರೆ.
ಇತ್ತ, “ಪ್ರಯೋಗಾಲಯದ ವರದಿ ಬರಲು ಕನಿಷ್ಠ 14 ದಿನಗಳು ಬೇಕಾಗುತ್ತವೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ವರದಿ ಬರುವುದು ವಿಳಂಬವಾದರೆ, ಇನ್ನು ಹೆಚ್ಚುವರಿಯಾಗಿ 14 ದಿನಗಳ ಕಾಲ ಇಲ್ಲೇ ಕಾಯಬೇಕಾಗುತ್ತದೆ ಎಂದು ಅಧಿಕಾರಿಗಳು ನಮಗೆ ತಿಳಿಸಿದ್ದಾರೆ,” ಎಂಬುದಾಗಿ ಶಿವಮೊಗ್ಗದ ಲಾರಿ ಚಾಲಕರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
