ಬೆಂಗಳೂರು: ಕಾರಾಗೃಹ ಇಲಾಖೆಯ ನೂತನ ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡಿರುವ ಅಲೋಕ್ ಕುಮಾರ್ (Alok Kumar IPS) ಮೊದಲ ದಿನವೇ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಕೆ ಹಾಗೂ ಎಣ್ಣೆ ಪಾರ್ಟಿ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಅಲೋಕ್ ಕುಮಾರ್ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಜೈಲು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ರಾಜಾತಿಥ್ಯದ ವಿಡಿಯೋ ಯಾವಾಗ ನಡೆದಿದೆ? ವೈರಲ್ ಮಾಡಿದ್ದು ಯಾರು ಅಂತ ಗೊತ್ತಾಗಬೇಕು ಎಂದು ಹೇಳಿದ್ದಾರೆ.
ವೈರಲ್ ವಿಡಿಯೋದ ಕುರಿತು ವರದಿ ನೀಡುವಂತೆ ಅಲೋಕ್ ಕುಮಾರ್ ಕೇಳಿದ್ದಾರೆ. ವೈರಲ್ ವಿಡಿಯೋ ಪ್ರಕರಣದಲ್ಲಿ ಯಾವ ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದಾರೆ ಎನ್ನುವ ರಿಪೋರ್ಟ್ ಬೇಕು. ಸುಖಾಸುಮ್ಮನೆ ತನಿಖೆ, ವಿಚಾರಣೆ ಆಗುತ್ತಿದೆ ಎನನ್ನುವುದು ಬೇಡ. ಒಂದು ವರ್ಷದಲ್ಲಿ ದಾಖಾಲಾದ ಪ್ರಕರಣಗಳು, ತನಿಖಾ ಹಂತದ ಬಗ್ಗೆ ಡಿಜಿಪಿ ಅಲೋಕ್ ಕುಮಾರ್ ವರದಿ ಕೇಳಿದ್ದಾರೆ.
ಸಭೆಯಲ್ಲಿ ಜೈಲು ಅಧಿಕಾರಿ ಈವರೆಗೆ ಜೈಲಿನಲ್ಲಿ ಪತ್ತೆ ಆಗಿರುವ ಮೊಬೈಲ್‌ನ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವರ್ಷದಲ್ಲಿ 67 ಮೊಬೈಲ್ ಸಿಕ್ಕಿದೆ, 48 ಸಿಮ್ ಹಾಗೂ ಚಾಕುಗಳು ಸಿಕ್ಕಿದೆ. ಇದರ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅಲೋಕ್ ಕುಮಾರ್ ಅವರು, ಜೈಲಿನಲ್ಲಿ ಇಷ್ಟು ಭದ್ರತೆಯಿದ್ದರೂ ಹೇಗೆ ಮೊಬೈಲ್ ಜೈಲಿನಲ್ಲಿ ಬಳಕೆ ಆಗುತ್ತಿದೆ? ಈ ರೀತಿ ಮೊಬೈಲ್ ಬಳಕೆ ಆಗುತ್ತಿದೆ ಎಂದ್ರೆ ನಮ್ಮವರೂ ಶಾಮೀಲು ಆಗಿದ್ದಾರೆ ಎಂದರ್ಥವಲ್ಲವೇ? ಅವರು ಯಾರು ಏನ್ನುವುದರ ಬಗ್ಗೆ ತನಿಖೆ ನಡೆಸಿ ವರದಿ ನೀಡಿ. ಜೊತೆಗೆ ಯಾವ ಕೈದಿಗೂ ಯಾವುದೇ ರಾಜಾತಿಥ್ಯ ಕೊಡಲು ಸರ್ಕಾರ ಹೇಳಿಲ್ಲ, ಅದು ಮೀರಿ ರಿಸ್ಕ್ ತಗೊಂಡು ರಾಜಾತಿಥ್ಯ ನೀಡಿದ್ರೆ ನಿಮ್ಮ ತಿಥಿ ಮಾಡ್ತೀನಿ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದೇ ರೀತಿ ಕಾರಾಗೃಹ ಇಲಾಖೆಯ ಡಿಜಿಪಿಯಾಗಿರುವ ಅಧಿಕಾರ ಸ್ವೀಕರಿಸಿರುವ ಅಲೋಕ್ ಕುಮಾರ್ ಅವರಿಗೆ ಮೊದಲ ದಿನವೇ ಸ್ಥಳೀಯರು ದೂರು ನೀಡಿದ್ದಾರೆ.
