ದೆಹಲಿ, ಜನವರಿ 25: ಗಣರಾಜ್ಯೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರವು ಭಾನುವಾರ 2026ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ.
ಬಾಲಿವುಡ್‌ಗೆ ವಿಶೇಷ ಸೇವೆ ಸಲ್ಲಿಸಿದ ಖ್ಯಾತ ನಟ ಧರ್ಮೇಂದ್ರ ಸಿಂಗ್ ಡಿಯೋಲ್ (ಮರಣೋತ್ತರ) ಅವರಿಗೆ ಪದ್ಮವಿಭೂಷಣ ಘೋಷಿಸಲಾಗಿದೆ. ಕೇರಳದ ಮಾಜಿ ಮುಖ್ಯಮಂತ್ರಿ ಅಚ್ಚುತಾನಂದನ್ (ಮರಣೋತ್ತರ), ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಕೆ.ಟಿ. ಥಾಮಸ್, ಪಿಟೀಲು ವಿದ್ವಾಂಸೆ ಎನ್. ರಾಜಮ್ ಮತ್ತು ಪ್ರಸಿದ್ಧ ಮಲಯಾಳಂ ಪತ್ರಕರ್ತ ಪಿ. ನಾರಾಯಣನ್ ಅವರಿಗೂ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ.
ಪ್ರಸಿದ್ಧ ಮಲಯಾಳಂ ನಟ ಮಮ್ಮುಟ್ಟಿ, ಜಾರ್ಖಂಡ್ ಮಾಜಿ ಸಿಎಂ ಶಿಬು ಸೊರೆನ್, ಖ್ಯಾತ ವೈದ್ಯರಾದ ನೋರಿ ದತ್ತಾತ್ರೇಯ ಸೇರಿದಂತೆ 13 ಮಂದಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಖ್ಯಾತ ಕ್ರಿಕೆಟಿಗ ರೋಹಿತ್ ಶರ್ಮಾ, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಸೇರಿದಂತೆ 113 ಜನರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಪ್ರಮುಖ ತೆಲುಗು ನಟರಾದ ರಾಜೇಂದ್ರ ಪ್ರಸಾದ್, ಮುರಳಿ ಮೋಹನ್ ಮತ್ತು ಗಂಧದ ಚೊರಚೆಕ್ಕೆ ಕಳ್ಳ ವೀರಪ್ಪನ್‌ನನ್ನು ಹತ್ಯೆಗೈದ ಎಸ್‌ಟಿಎಫ್ (STF) ನೇತೃತ್ವ ವಹಿಸಿದ್ದ ಸಿಆರ್‌ಪಿಎಫ್ ಮಾಜಿ ಡಿಜಿ ಕೆ. ವಿಜಯ್ ಕುಮಾರ್ ಕೂಡ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿದ್ದಾರೆ.
ಒಟ್ಟಾರೆಯಾಗಿ ಈ ವರ್ಷ 131 ಮಂದಿಗೆ ಪದ್ಮ ಪ್ರಶಸ್ತಿಗಳು ಲಭಿಸಿವೆ. ಒಟ್ಟು ಪ್ರಶಸ್ತಿ ಪುರಸ್ಕೃತರಲ್ಲಿ 90 ಮಂದಿ ಮಹಿಳೆಯರಿದ್ದಾರೆ. ಪಟ್ಟಿಯಲ್ಲಿ ವಿದೇಶಿಯರು, ಎನ್‌ಆರ್‌ಐ, ಪಿಐಒ, ಒಸಿಐ ವಿಭಾಗದಡಿ ಆರು ಜನರಿಗೆ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. 16 ಮಂದಿಗೆ ಮರಣೋತ್ತರವಾಗಿ ಪ್ರಶಸ್ತಿಗಳನ್ನು ನೀಡಲಾಗಿದೆ.
ಎಲೆಮರೆ ಕಾಯಿಗಳು
ಪದ್ಮಶ್ರೀ ಪ್ರಶಸ್ತಿಗಳಲ್ಲಿ ಗುರುತಿಸಲ್ಪಡದ ಸಾಧಕರ (ಅನ್‌ಸಂಗ್ ಹೀರೋಸ್) ವಿಭಾಗದಲ್ಲಿ, ಅತಿ ದೊಡ್ಡ ಉಚಿತ ಗ್ರಂಥಾಲಯವನ್ನು ಸ್ಥಾಪಿಸಿದ ಮಾಜಿ ಬಸ್ ಕಂಡಕ್ಟರ್ ಅಂಕೆಗೌಡ, ಏಷ್ಯಾದಲ್ಲೇ ಮೊದಲ ಮಾನವ ಹಾಲಿನ ಬ್ಯಾಂಕ್ (Human Milk Bank) ಸ್ಥಾಪಿಸಿದ ಮಕ್ಕಳ ವೈದ್ಯಕೀಯ ತಜ್ಞೆ ಆರ್ಮಿಡಾ ಫರ್ನಾಂಡಿಸ್ ಮತ್ತು ಅಪರೂಪದ ವಾದ್ಯ ನುಡಿಸುವ 90 ವರ್ಷದ ಸಂಗೀತಗಾರ ಭಿಕ್ಲ್ಯಾ ಲಡ್ಕ್ಯಾ ದಿಂಡಾ ಸೇರಿದ್ದಾರೆ.
ಕರ್ನಾಟಕದವರಾದ ಅಂಕೆಗೌಡ ಅವರು 20 ಭಾಷೆಗಳಲ್ಲಿನ 20 ಲಕ್ಷ ಪುಸ್ತಕಗಳನ್ನು ಸಂಗ್ರಹಿಸಿ ಜನರಿಗಾಗಿ ವಿಶ್ವದ ಅತಿದೊಡ್ಡ ಉಚಿತ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ. ಮಹಾರಾಷ್ಟ್ರದ ಶಿಶುವೈದ್ಯೆ ಆರ್ಮಿಡಾ ಫರ್ನಾಂಡಿಸ್ ಅವರು ಏಷ್ಯಾದಲ್ಲೇ ಮೊದಲ ಮಾನವ ಹಾಲಿನ ಬ್ಯಾಂಕ್ ಸ್ಥಾಪಕರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಮಹಾರಾಷ್ಟ್ರದ ಸಂಗೀತಗಾರ ಭಿಕ್ಲ್ಯಾ ಲಡ್ಕ್ಯಾ ದಿಂಡಾ ಅವರು ಸೋರೆಕಾಯಿ ಮತ್ತು ಬಿದಿರಿನಿಂದ ತಯಾರಿಸಿದ ‘ತರ್ಪಾ’ ಎಂಬ ಅಪರೂಪದ ವಾದ್ಯವನ್ನು ನುಡಿಸುವುದರಲ್ಲಿ ನಿಪುಣರು. ಈ ವಿಭಾಗದಲ್ಲಿ ಒಟ್ಟು 45 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
