ಲೆಬನಾನ್‌ನಲ್ಲಿ ನೂರಾರು ಪೇಜರ್‌ಗಳು ಏಕಕಾಲದಲ್ಲಿ ಸ್ಫೋಟಗೊಂಡವು. ಮಂಗಳವಾರ ನಡೆದ ಘಟನೆಗಳಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 2,800 ಜನರು ಗಾಯಗೊಂಡಿದ್ದಾರೆ. ಸೆಲ್ ಫೋನ್‌ಗಳ ಯುಗದ ನಂತರ ಪ್ರಪಂಚದಾದ್ಯಂತ ಕಣ್ಮರೆಯಾದ ಪೇಜರ್‌ಗಳನ್ನು ಹೆಜ್ಬೊಲ್ಲಾ ಇನ್ನೂ ಏಕೆ ಬಳಸುತ್ತಿದೆ? ಸಾವಿರಾರು ಪೇಜರ್‌ಗಳು ಏಕಕಾಲದಲ್ಲಿ ಹೇಗೆ ಸ್ಫೋಟಗೊಳ್ಳುತ್ತವೆ? ಈ ಪೀಳಿಗೆಗೆ ಅಷ್ಟಾಗಿ ಗೊತ್ತಿಲ್ಲದ ಪೇಜರ್‌ಗಳ ಕಥೆ ಏನು? ಎಂಬ ವಿಷಯಗಳು ಈಗ ಕುತೂಹಲಕಾರಿಯಾಗಿವೆ.
ಪೇಜರ್ಸ್ ಎಂದರೇನು?
1949ರಲ್ಲಿ, ಆಲ್ಫ್ರೆಡ್ ಗ್ರಾಸ್ ಪೇಜರ್ ಕಂಡುಹಿಡಿದರು, ಇದು ಅಂಗೈಯಲ್ಲಿ ಹೊಂದಿಕೊಳ್ಳುವಷ್ಟು ಚಿಕ್ಕ ಸಾಧನ. 1964ರಲ್ಲಿ, ಮೊಟೊರೊಲಾ ಕಂಪನಿಯು ‘ಪೇಜ್‌ಬಾಯ್ 1’ ಹೆಸರಿನ ಮೊದಲ ಪೇಜರ್ ಸೇವೆ ಪ್ರಾರಂಭಿಸಿತು. ಪೇಜರ್‌ಗಳಿಗೆ ಕ್ಯಾಲ್ಕುಲೇಟರ್‌ನಂತೆ ಪರದೆಯ ಮೇಲೆ ಕಿರು ಸಂದೇಶಗಳನ್ನು ಕಳುಹಿಸಲು ಸಾಧ್ಯವಾಯಿತು. ಪೇಜರ್‌ಗಳನ್ನು ಸಂದೇಶ ಕಳುಹಿಸಲು ಮಾತ್ರ ಬಳಸಲಾಗುತ್ತದೆ. 1990ರ ದಶಕದ ಅಂತ್ಯದವರೆಗೆ ತುರ್ತು ಸಂದೇಶಗಳನ್ನು ಸ್ವೀಕರಿಸಲು ಅನೇಕರು ಅವುಗಳನ್ನು ಬಳಸುತ್ತಿದ್ದರು. ನಂತರ, ಸೆಲ್ ಫೋನ್‌ಗಳ ಆಗಮನದೊಂದಿಗೆ, ಅವುಗಳ ಬಳಕೆ ಕ್ರಮೇಣ ಕ್ಷೀಣಿಸಿತು ಮತ್ತು 2000 ರ ಹೊತ್ತಿಗೆ ಸಂಪೂರ್ಣವಾಗಿ ಕಣ್ಮರೆಯಾಯಿತು.
ಹಿಜ್ಬುಲ್ಲಾ ಇನ್ನೂ ಅದನ್ನು ಏಕೆ ಬಳಸುತ್ತಿದೆ?
ರೇಡಿಯೋ ತರಂಗಾಂತರ ಸಂಕೇತಗಳ ಮೂಲಕ ಪೇಜರ್‌ಗಳು ಕಾರ್ಯನಿರ್ವಹಿಸುತ್ತವೆ. ಇವುಗಳಿಗೆ ಮೊಬೈಲ್ ನೆಟ್ವರ್ಕ್ ಅಗತ್ಯವಿಲ್ಲ. ಇಸ್ರೇಲಿ ಪಡೆಗಳಿಂದ ತಮ್ಮ ಲೊಕೇಷನ್ ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಹೆಜ್ಬುಲ್ಲಾ ಸದಸ್ಯರು ಈಗಲೂ ಪೇಜರ್‌ಗಳನ್ನು ಬಳಸುತ್ತಿದ್ದಾರೆ. ಇದು ಯುದ್ಧ ವಲಯಗಳಲ್ಲಿ ಸಿಗ್ನಲ್ ಅಡಚಣೆ ಮತ್ತು ನೆಟ್‌ವರ್ಕ್ ಸಮಸ್ಯೆಗಳನ್ನು ತಪ್ಪಿಸುತ್ತದೆ. ಇವುಗಳನ್ನು ಅವರು ಹೆಜ್ಬೊಲ್ಲಾ ಸದಸ್ಯರಿಗೆ ಸಂದೇಶ ಕಳುಹಿಸಲಷ್ಟೇ ಬಳಕೆ ಮಾಡುತ್ತಾರೆ.
ಒಮ್ಮೆಲೇ ಹೇಗೆ ಸ್ಫೋಟಗೊಂಡವು?
ಹೆಜ್ಬುಲ್ಲಾ ಉಗ್ರಗಾಮಿಗಳು ಬಳಸಿದ ಸಾವಿರಾರು ಪೇಜರ್‌ಗಳನ್ನು ಏಕಕಾಲದಲ್ಲಿ ಸ್ಫೋಟಿಸುವ ಹಿಂದೆ ಇಸ್ರೇಲ್ ಕೈವಾಡವಿದೆ ಎನ್ನುವ ವರದಿಗಳಿವೆ. ಈ ಎಲ್ಲಾ ಪೇಜರ್‌ಗಳನ್ನು ಕಳೆದ ಒಂದು ವರ್ಷದೊಳಗೆ ಖರೀದಿಸಲಾಗಿದೆ. ಇವುಗಳನ್ನು ತೈವಾನ್‌ನ ‘ಗೋಲ್ಡ್ ಅಪೊಲೊ’ ಎಂಬ ಕಂಪನಿಯಿಂದ ಹೆಜ್ಬೊಲ್ಲಾ ಖರೀದಿಸಿದೆ. ಇವುಗಳನ್ನು ತಯಾರಿಸುವಾಗ ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸ್ಸಾದ್ ಸ್ಫೋಟಕಗಳನ್ನು ಇರಿಸಿತ್ತು ಎಂಬ ವರದಿಗಳಿವೆ. ಆದರೆ ತಾಂತ್ರಿಕವಾಗಿ ಪೇಜರ್‌ಗಳು ಏಕಕಾಲದಲ್ಲಿ ಹೇಗೆ ಸ್ಫೋಟಿಸಲು ಸಾಧ್ಯವಾಯಿತು ಎಂಬುದು ಇನ್ನೂ ನಿಗೂಢವಾಗಿದೆ.