Thursday, June 20, 2024

ಸತ್ಯ | ನ್ಯಾಯ |ಧರ್ಮ

ಸಕ್ಕರೆ ಕಾಯಿಲೆ | ಇಂಜಕ್ಷನ್ ಬದಲು ನೋವಾಗದ ಓರಲ್‌ ಇನ್ಸುಲಿನ್ ಸ್ಪ್ರೇ ಶೀಘ್ರದಲ್ಲೇ ಬಿಡುಗಡೆ

ಮಧುಮೇಹ ಹೊಂದಿರುವ ಜನರು, ಅದರಲ್ಲೂ ಟೈಪ್ 1 ಮಧುಮೇಹ ಹೊಂದಿರುವವರು, ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಪ್ರತಿದಿನ ಇನ್ಸುಲಿನ್ ಚುಚ್ಚುಮದ್ದನ್ನು ಚುಚ್ಚಿಕೊಳ್ಳುತ್ತಾರೆ.

ಆದರೆ ಈ ಇನ್ಸುಲಿನ್‌ ಇಂಜಕ್ಷನ್‌ ತೆಗೆದುಕೊಳ್ಳುವುದೆಂದರೆ ನೋವು ಸಹಿಸುವುದು ಎಂದರ್ಥ. ಜೊತೆಗೆ ಮನೆಯಿಂದ ಹೊರಗೆ ಅಥವಾ ಕೆಲಸದ ಸ್ಥಳದಲ್ಲಿರುವಾಗ ಈ ಇಂಜಕ್ಷನ್‌ ತೆಗೆದುಕೊಳ್ಳಲು ಸಾಕಷ್ಟು ಅನಾನುಕೂಲಗಳೂ ಎದುರಾಗುತ್ತವೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಹೈದರಾಬಾದ್‌ ಮೂಲದ ಕಂಪನಿಯೊಂದು ಬಾಯಿಯ ಮೂಲಕ ತೆಗೆದುಕೊಳ್ಳಬಹುದಾದ ಇನ್ಸುಲಿನ್ – ಒಝುಲಿನ್‌‌ (Ozulin) ಎನ್ನುವ ಔಷಧಿಯನ್ನು ಹೊರತರಲು ಯೋಜಿಸಿದೆ. ಕಂಪನಿಗೆ ಈ ನಿಟ್ಟಿನಲ್ಲಿ ಅನುಮತಿ ದೊರೆತರೆ ಇದು ಸಕ್ಕರೆ ಕಾಯಿಲೆ ಹೊಂದಿರುವವರ ಪಾಲಿಗೆ ವರದಾನವಾಗಲಿದೆ ಎನ್ನಲಾಗುತ್ತಿದೆ. ಇದರ ಡೋಸನ್ನು ನೇರಾಗಿ ಬಾಯಿಗೆ ಸಿಂಪಡಿಸಿಕೊಳ್ಳಬಹುದು ಮತ್ತು ಯಾವುದೇ ನೋವಿನ ಕಿರಿಕಿರಿ ಇರುವುದಿಲ್ಲ.

ಕಂಪನಿ ಹೇಳಿಕೆಯಂತೆ ಒಝುಲಿನ್‌ ಇನ್ನೊಂದು ಎರಡು ಮೂರು ವರ್ಷಗಳಲ್ಲಿ, ಎಂದರೆ 2025-26ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಸುರಕ್ಷತೆ ಮತ್ತು ವಿಷವಿಜ್ಞಾನ ಅಧ್ಯಯನಗಳನ್ನು ನಡೆಸಲು ಅನುಮೋದನೆಗಾಗಿ ಕಂಪನಿಯು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಗೆ ಅರ್ಜಿ ಸಲ್ಲಿಸಿದೆ ಎಂದು ನೀಡಲ್‌ಫ್ರೀ ಟೆಕ್ನಾಲಜೀಸ್ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ನಿರ್ದೇಶಕ ಡಾ.ಕೆ.ಕೋಟೇಶ್ವರ ರಾವ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಅದರ ನಂತರ, ಇದು ಮಾನವ ಪ್ರಯೋಗಗಳಿಗೆ ಸಿದ್ಧವಾಗಲಿದೆ.

ಓರಲ್ ಇನ್ಸುಲಿನ್ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಅಭಿವೃದ್ಧಿ ಇನ್ನೂ ಪ್ರಗತಿಯಲ್ಲಿದ್ದು ಅದರ ಮೇಲಿನ ಅಧ್ಯಯನಗಳು ವಿವಿಧ ಅಂಶಗಳಲ್ಲಿ ಭರವಸೆಯನ್ನು ತೋರಿಸಿವೆಯಾದರೂ, ಅದರ ಅಭಿವೃದ್ಧಿಯು ಇಲ್ಲಿಯವರೆಗೆ ಅಸ್ಪಷ್ಟ ಕನಸಾಗಿ ಉಳಿದಿತ್ತು.

ಇಂಜಕ್ಷನ್‌ ಇನ್ಸುಲಿನ್‌ಗೆ ಹೋಲಿಸಿದರೆ ರಕ್ತದ ಹರಿವಿನಲ್ಲಿ 90% ಕ್ಕಿಂತ ಹೆಚ್ಚು ಇನ್ಸುಲಿನ್ ಸಾಪೇಕ್ಷ ಜೈವಿಕ ಲಭ್ಯತೆಯನ್ನು ತೋರಿಸಲು ನಮಗೆ ಸಾಧ್ಯವಾಗಿದೆ ಎಂದು ಕೋಟೇಶ್ವರ ರಾವ್ ಹೇಳಿದ್ದಾರೆ.

ಇನ್ಸುಲಿನ್‌ ಬಹಳ ಮುಖ್ಯ ಹಾರ್ಮೋನ್‌ ಆಗಿದ್ದು ಅದು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜೊತೆಗೆ ಇದು ನಂತರದ ಬಳಕೆಗಾಗಿ ಹೆಚ್ಚುವರಿ ಸಕ್ಕರೆ ಅಂಶವನ್ನು ಸಂಗ್ರಹಿಡುವಂತೆ ಯಕೃತ್ತಿಗೆ ಸಂದೇಶವನ್ನೂ ಇದೇ ಕಳುಹಿಸುತ್ತದೆ. ಆದರೆ ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾದಂತೆ ಮೇದೋಜ್ಜೀರಕ ಗ್ರಂಥಿಯು ರಕ್ತದಲ್ಲಿನ ಸಕ್ಕರೆಯನ್ನು ಜೀವಕೋಶಗಳಿಗೆ ಕಳುಹಿಸಲು ಇನ್ಸುಲಿನ್‌ ಅಂಶವನ್ನು ಹೆಚ್ಚಿನ ಮಟ್ಟದಲ್ಲಿ ಹೊರಹಾಕಲಾರಂಭಿಸುತ್ತದೆ. ದಿನ ಕಳೆದಂತೆ ಜೀವಕೋಶಗಳು ಇನ್ಸುಲಿನ್‌ ಅಂಶಕ್ಕೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿ ಇನ್ಸುಲಿನ್‌ ನಿರೋಧಕ ಗುಣವನ್ನು ಬೆಳೆಸಿಕೊಳ್ಳುತ್ತವೆ.

ಇನ್ಸುಲಿನ್ ಚುಚ್ಚುಮದ್ದು ಸಕ್ಕರೆ ಅಂಶವನ್ನು ರಕ್ತದಿಂದ ದೇಹದ ಇತರ ಅಂಗಾಂಶಗಳಿಗೆ ಸಾಗಿಸಲು ಸಹಾಯ ಮಾಡುತ್ತದೆ. ಅದನ್ನು ಅವು ಶಕ್ತಿಗಾಗಿ ಬಳಸಿಕೊಳ್ಳುತ್ತವೆ. ಮಾನವ ಇನ್ಸುಲಿನ್ (Human insulin) ದ್ರಾವಣ ಮತ್ತು ಸಸ್ಪೆನ್ಷನ್ ರೂಪದಲ್ಲಿರುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಇದನ್ನು ದಿನಕ್ಕೆ ಹಲವಾರು ಬಾರಿ ಚರ್ಮದ ಕೆಳಗೆ ಚುಚ್ಚಬೇಕಾಗುತ್ತದೆ. ಸಕ್ಕರೆ ಕಾಯಿಲೆಯಿರುವವರಿಗೆ ಒಂದಕ್ಕಿಂತ ಹೆಚ್ಚು ವಿಧದ ಇನ್ಸುಲಿನ್ ಬೇಕಾಗಬಹುದು. ಮಾನವ ಇನ್ಸುಲಿನ್ ಹೈ ಬ್ಲಡ್‌ ಶುಗರ್‌ ಅಂಶವನ್ನು ನಿಯಂತ್ರಿಸುತ್ತದೆ ಆದರೆ ಮಧುಮೇಹವನ್ನು ಗುಣಪಡಿಸುವುದಿಲ್ಲ.

Related Articles

ಇತ್ತೀಚಿನ ಸುದ್ದಿಗಳು