Monday, April 29, 2024

ಸತ್ಯ | ನ್ಯಾಯ |ಧರ್ಮ

ಪರಶು ರಾಮ್‌ ಥೀಮ್‌ ಪಾರ್ಕ್‌ ಹಗರಣ: ತನಿಖೆಗೆ ಆದೇಶಿಸಿದ ಸಿ ಎಮ್

ಕಾರ್ಕಳದ ಪರಶುರಾಮ್ ಥೀಂ ಪಾರ್ಕ್ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರವಾಸೋದ್ಯಮ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.

ಸೋಮವಾರ ನವೆಂಬರ್ 20ರಂದು ಈ ಕುರಿತು ವಿವರಗಳನ್ನು ನೀಡಿದ MLC ಮಂಜುನಾಥ್ ಭಂಡಾರಿ, “ಪರಶುರಾಮ್ ಥೀಮ್ ಪಾರ್ಕ್ ಧಾರ್ಮಿಕ ಸ್ಥಳವೋ ಅಥವಾ ಪ್ರವಾಸಿ ತಾಣವೋ ಎಂಬ ಗೊಂದಲವಿದೆ. ಮಾಜಿ ಸಿಎಂ ಉದ್ಘಾಟಿಸಿದ ಪ್ರತಿಮೆ ದಿಢೀರ್ ಕಣ್ಮರೆಯಾಗಿದೆ. ಈ ವಿಷಯ ಸಿಎಂ ಹಾಗೂ ಡಿಸಿಎಂ ಗಮನಕ್ಕೆ ಬಂದಿದೆ. ಅವರು ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ. ಪ್ರಸ್ತುತ ಪ್ರತಿಮೆಯ ಸೊಂಟದ ಮೇಲಿನ ಭಾಗವು ಕಾಣೆಯಾಗಿದೆ. ಅಧಿಕಾರಿಗಳನ್ನು ಕೇಳಿದಾಗ ವಿನ್ಯಾಸ ಬದಲಾವಣೆಗೆ ಕಳುಹಿಸಲಾಗಿದೆ ಎಂದರು. ಆದಾಗ್ಯೂ, ಈ ಸ್ಥಳವು ಗೋಮಾಳ ಭೂಮಿಯಾಗಿದೆ. ಅಲ್ಲಿ ಪಾರ್ಕ್ ನಿರ್ಮಿಸದಂತೆ ಸರ್ಕಾರ ಹಿಂದೆಯೇ ಆದೇಶ ನೀಡಿತ್ತು.” ಎಂದು ಮಾಹಿತಿ ನೀಡಿದರು.

“ಒಮ್ಮ ಮುಖ್ಯಮಂತ್ರಿ ಪ್ರತಿಮೆ ಉದ್ಘಾಟಿಸಿದ ಬಳಿಕ ಜಿಲ್ಲಾಧಿಕಾರಿ ಅನುಮತಿ ಪಡೆಯದೆ ಅದನ್ನು ಸ್ಥಳಾಂತರ ಮಾಡಲಾಗಿದೆ. ಇದೀಗ ಸಿಎಂ ಸಿದ್ದರಾಮಯ್ಯ ಪ್ರವಾಸೋದ್ಯಮ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಪ್ರತಿಮೆ ಉದ್ಘಾಟನೆ ವೇಳೆ ಅದರ ಸೊಂಟದ ಮೇಲ್ಭಾಗದಲ್ಲಿ ಏನಿತ್ತು ಎಂಬ ಸತ್ಯ ಹೊರಬರಬೇಕು. ಧಾರ್ಮಿಕ ಕೇಂದ್ರವೋ ಅಥವಾ ಪ್ರವಾಸಿ ತಾಣವೋ ಎಂಬುದನ್ನು ಸ್ಪಷ್ಟಪಡಿಸಲಿ” ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ವಿನಯ್‌ಕುಮಾರ್, “ಮಾಜಿ ಮುಖ್ಯಮಂತ್ರಿಗಳು ಉದ್ಯಾನವನ ಉದ್ಘಾಟನೆಗೂ ಮುನ್ನ ಸೂಕ್ತ ಮಾಹಿತಿ ಪಡೆಯಬೇಕಿತ್ತು. ಇದೀಗ ತನಿಖೆಗೆ ಆದೇಶ ನೀಡಲಾಗಿದೆ. ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಪರಶುರಾಮನಿಗೆ ಅವಮಾನ ಮಾಡಿದೆ. ತರಾತುರಿಯಲ್ಲಿ ಪ್ರತಿಮೆಯನ್ನು ಏಕೆ ನಿರ್ಮಿಸಲಾಗಿದೆ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುವುದು” ಎಂದು ಅವರು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು