ಹಾಸನ: ನಗರದ ಮಕ್ಕಳಲ್ಲಿ ವೈರಲ್ ಜ್ವರ, ಶೀತ, ಕೆಮ್ಮು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ತೀವ್ರಗೊಂಡಿದ್ದು, ಮಕ್ಕಳ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ.
ಹಾಸನದ ಹಿಮ್ಸ್ ಮಕ್ಕಳ ಆಸ್ಪತ್ರೆ ಹಾಗೂ ನಗರದಲ್ಲಿರುವ ಖಾಸಗಿ ಆಸ್ಪತ್ರೆಗಳ ಒಳರೋಗಿ ವಿಭಾಗಗಳು ಈಗಾಗಲೇ ಭರ್ತಿಯಾಗಿರುವುದರಿಂದ, ಅಡ್ಮಿಟ್ ಅಗತ್ಯವಿರುವ ಅನಾರೋಗ್ಯ ಪೀಡಿತ ಮಕ್ಕಳನ್ನು ದಾಖಲಿಸಲು ಪೋಷಕರು ಹಾಸಿಗೆ ಸಿಗದೇ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಮಕ್ಕಳ ವೈದ್ಯರ ಹೊರ ರೋಗಿಗಳ ವಿಭಾಗಗಳು ಶೀತ, ಕೆಮ್ಮು, ಜ್ವರದ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳನ್ನು ಕರೆತಂದ ಪೋಷಕರಿಂದ ಗಿಜಿಗುಡುತ್ತಿರುವ ಸ್ಥಿತಿ ಉಂಟಾಗಿದೆ. ಕಳೆದ ಒಂದು ವಾರದಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಗಣನೀಯವಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಮಕ್ಕಳ ವೈದ್ಯರೊಂದಿಗೆ ತುರ್ತು ಸಭೆ ಕರೆದಿದ್ದಾರೆ.