Monday, June 17, 2024

ಸತ್ಯ | ನ್ಯಾಯ |ಧರ್ಮ

ಮೋದಿ ಅಭಿಮಾನಿ, ರಿಕ್ಷಾ ಡ್ರೈವರ್‌, ನಿರುದ್ಯೋಗಿ: ಸಂಸತ್‌ ದಾಳಿ ನಡೆಸಿದ್ಯಾರು?

"ನನ್ನ ಹೆಸರು ನೀಲಂ. ಭಾರತ ಸರ್ಕಾರ ನಮ್ಮ ವಿರುದ್ಧ ದೌರ್ಜನ್ಯ ಎಸಗುತ್ತಿದೆ. ನಮ್ಮ ಹಕ್ಕುಗಳಿಗಾಗಿ ಮಾತನಾಡಲು ನಮಗೆ ಸಾಧ್ಯವಾಗುತ್ತಿಲ್ಲ, ಪೊಲೀಸರು ಲಾಠಿ ಚಾರ್ಜ್ ಮಾಡುತ್ತಾರೆ ಮತ್ತು ನಮ್ಮನ್ನು ಕಂಬಿಗಳ ಹಿಂದೆ ಇರಿಸಿ ಚಿತ್ರಹಿಂಸೆ ನೀಡುತ್ತಾರೆ. ನಮ್ಮ ಹಕ್ಕುಗಳಿಗಾಗಿ ಮಾತನಾಡಲು ನಮಗೆ ಯಾವುದೇ ಮಾಧ್ಯಮ ಇರಲಿಲ್ಲ.... ನಾವು ಯಾವುದೇ ಸಂಘ ಅಥವಾ ಗುಂಪುಗಳಿಗೆ ಸಂಬಂಧ ಪಟ್ಟವರಲ್ಲ. ನಾವು ಸಾಮಾನ್ಯರು, ನಾವು ವಿದ್ಯಾರ್ಥಿಗಳು, ನಾವು ನಿರುದ್ಯೋಗಿಗಳು”

ಹೀಗೆಂದು ಡಿಸೆಂಬರ್ 13 ಬುಧವಾರದಂದು ಭದ್ರತೆಯನ್ನು ಮೀರಿ ಸಂಸತ್ತಿನ ಮೇಲೆ ದಾಳಿ ಮಾಡಿದ ನಾಲ್ವರು ಆರೋಪಿಗಳಲ್ಲಿ ಒಬ್ಬರಾದ ನೀಲಂ (42) ಪೊಲೀಸರು ಎಳೆದುಕೊಂಡು ಹೋಗುವಾಗ ಕೂಗಿದ್ದಾರೆ. 

ಪೊಲೀಸರು ಇದಕ್ಕೆ ಸಂಬಂಧಿಸಿದ ಏಳು ಜನರನ್ನು ಗುರುತಿಸಿದ್ದು, ಆರು ಜನರನ್ನು ಬಂಧಿಸಲಾಗಿದೆ. ಓರ್ವ ತಲೆಮರೆಸಿಕೊಂಡಿದ್ದಾನೆ.

ಇವರಲ್ಲಿ ಸಾಗರ್ ಶರ್ಮಾ ಮತ್ತು ಕರ್ನಾಟಕದ ಮನೋರಂಜನ್ ಡಿ  ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಗೆ ಜಿಗಿದು ಸದನದೊಳಗೆ ಬಣ್ಣದ ಹೊಗೆಯ ಡಬ್ಬಿಗಳನ್ನು ಹಾಕಿದ್ದಾರೆ., ಇನ್ನಿಬ್ಬರಾದ ಅಮೋಲ್ ಶಿಂಧೆ ಮತ್ತು ನೀಲಂ ಘೋಷಣೆಗಳನ್ನು ಕೂಗುತ್ತಾ, ಸದನದ ಹೊರಗೆ, ಸಂಸತ್ತಿನ ಆವರಣದಲ್ಲಿ ಡಬ್ಬಿಗಳಿಂದ ಬಣ್ಣದ ಹೊಗೆಯನ್ನು ಹಾರಿಸಿದ್ದಾರೆ. ಇನ್ನೂ ಮೂವರು ಸಹಚರರನ್ನು ಬಿಹಾರ ಮೂಲದ ಲಲಿತ್ ಝಾ ಮತ್ತು ವಿಕ್ಕಿ ಶರ್ಮಾ ಮತ್ತು ಈತನ ಪತ್ನಿ ಎಂದು ಗುರುತಿಸಲಾಗಿದೆ.

ಗುರುಗ್ರಾಮದಲ್ಲಿ ತಂಗಿದ್ದ ಆರೋಪಿಗಳು ಬುಧವಾರ ಬೆಳಗ್ಗೆ ಸಂಸತ್ತಿಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.

ಲಕ್ನೋದ ಇ-ರಿಕ್ಷಾ ಚಾಲಕ ಸಾಗರ್ ಶರ್ಮಾ

ಆರೋಪಿಗಳಲ್ಲಿ ಓರ್ವನಾದ ಸಾಗರ್ ಶರ್ಮಾನ ಬಳಿ ಇದ್ದ ಸಂದರ್ಶಕರ ಪಾಸ್‌ನಲ್ಲಿ ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಸಹಿ ಇತ್ತು. ಈತ  ಲಕ್ನೋದ ಅಲಂಬಾಗ್‌ನ ಇ-ರಿಕ್ಷಾ. ಬಡಗಿಯೋರ್ವರ ಮಗನಾದ ಈತ ಲಕ್ನೋದಲ್ಲಿ ಬಅಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ. ದಾಳಿಯ ಎರಡು ದಿನಗಳ ಹಿಂದೆ ಈತ ಮನೆ ಬಿಟ್ಟಿದ್ದ.

“ಇದನ್ನೆಲ್ಲಾ ನೋಡಿ ನನಗೆ ಆಘಾತವಾಗಿದೆ. ನನ್ನ ಮಗ ಹೀಗೆ ಮಾಡಲು ಸಾಧ್ಯವಿಲ್ಲ. ಅವನು ಈ ರೀತಿ ಮಾಡುತ್ತಾನೆ ಎಂದು ನನಗೆ ನಂಬಲು ಸಾಧ್ಯವಿಲ್ಲ” ಎಂದು ಸಾಗರ್ ತಾಯಿ ರಾಣಿ ಶರ್ಮಾ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ವರದಿಯಾಗಿದೆ.

ಸಾಗರ್‌ ಶರ್ಮಾನ ಆಧಾರ್‌ ಕಾರ್ಡ್‌ ಕೃಪೆ:The Quint

ಮೋದಿ ಅಭಿಮಾನಿ ಮನೋರಂಜನ್

ಆರೋಪಿಗಳಲ್ಲಿ ಓರ್ವನಾದ ಕರ್ನಾಟಕದ ಮೈಸೂರಿನ ಮನೋರಂಜನ್ ಡಿ‌, 2014 ರಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದ. ಈತ ಪ್ರಧಾನಿ ನರೇಂದ್ರ ಮೋದಿಯವರ ಕಟ್ಟಾ ಅಭಿಮಾನಿ ಎಂದು ಆತನ ತಂದೆ ದೇವರಾಜೇಗೌಡ ಹೇಳಿದ್ದಾರೆ.

"ನನ್ನ ಮಗ ಏನಾದರೂ ಒಳ್ಳೆಯ ಕೆಲಸ ಮಾಡಿದ್ದರೆ ಖಂಡಿತ ನಾನು ಬೆಂಬಲಿಸುತ್ತೇನೆ. ಅವನು ತಪ್ಪು ಮಾಡಿದ್ದರೆ ಅದನ್ನು ತೀವ್ರವಾಗಿ ಖಂಡಿಸುತ್ತೇನೆ, ಅವನು ಮಾಡಿದ್ದು ಶಿಕ್ಷಾರ್ಹ ಅಪರಾಧ, ಸಮಾಜದ ವಿರುದ್ಧ ಏನಾದರೂ ತಪ್ಪು ಮಾಡಿದ್ದರೆ ಅವನನ್ನು ಗಲ್ಲಿಗೇರಿಸಲಿ" 

ಮೈಸೂರಿನ ವಿಜಯನಗರದಲ್ಲಿರುವ ತಮ್ಮ ಮನೆಯ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಈತನ ತಂದೆ ಹೀಗೆ ಹೇಳಿದ್ದಾರೆ.

ಇವರದ್ದು ಬಿಜೆಪಿ ಬೆಂಬಲಿಗರ ಕುಟುಂಬ, ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ಆತನ ತಂದೆ ಹೇಳಿದ್ದಾರೆ. ಈತ ವಿವೇಕಾನಂದರ ಕೃತಿಗಳನ್ನು ಓದುತ್ತಿದ್ದ, ಮಾತ್ರವಲ್ಲ ಈತನ ಬಳಿ 10,000 ಪುಸ್ತಕಗಳಿದ್ದವು ಎಂದು ದೇವರಾಜೇಗೌಡ ತಿಳಿಸಿದ್ದಾರೆ. 

ಮನೋರಂಜನ್ ಆಧಾರ್‌ ಕಾರ್ಡ್‌ ಕೃಪೆ:The Quint

ನಿರುದ್ಯೋಗಿ ನೀಲಂ

ಸಂಸತ್ತಿನ ಹೊರಗೆ ಬಂಧಿಸಲಾದ ಇಬ್ಬರು ಆರೋಪಿಗಳಲ್ಲಿ ಒಬ್ಬರಾದ ನೀಲಂ ಹರಿಯಾಣದ ಜಿಂದ್‌ನ ಘಾಸೊ ಖುರ್ದ್ ಗ್ರಾಮದವರು. ಹಿಸಾರ್‌ನಲ್ಲಿ ನಾಗರಿಕ ಸೇವಾ ಪ್ರವೇಶ ಪರೀಕ್ಷೆಗೆ ಓದುತ್ತಿದ್ದ ಈಕೆ, ಪಿಜಿಯಲ್ಲಿ ವಾಸಿಸುತ್ತಿದ್ದರು. ಆಕೆ ಬೇಕರಿ ಅಂಗಡಿ ನಡೆಸುತ್ತಿರುವ ವ್ಯಕ್ತಿಯೋರ್ವರ 

"ನೀಲಂ ನನ್ನ ಸಹೋದರಿ. ಅವಳು ದೆಹಲಿಯಲ್ಲಿದ್ದಾಳೆಂದು ನಮಗೆ ಗೊತ್ತಿರಲಿಲ್ಲ. ಅವಳು ಸ್ಟಡಿ ಮಾಡಲು ಹಿಸಾರ್‌ನಲ್ಲಿದ್ದಾಳೆ ಎಂದು ನಾವು ತಿಳಿದಿದ್ದೆವು.. ಅವಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಾಗುತ್ತಿದ್ದಳು" 

ಆಕೆಯ ಕಿರಿಯ ಸಹೋದರ ANI ಗೆ ತಿಳಿಸಿದ್ದಾರೆ. ಇವರ ಪ್ರಕಾರ ನೀಲಂ BA, MA, B.Ed, M.Ed, CTET, M.Phil ಮತ್ತು NET-ಅರ್ಹತೆ ಹೊಂದಿದ್ದರೂ ನಿರುದ್ಯೋಗಿಯಾಗಿದ್ದರು.

ನಿರುದ್ಯೋಗ ಸಮಸ್ಯೆ ಕುರಿತು ಹಲವು ಬಾರಿ ಮಾತನಾಡಿದ್ದ ಈಕೆ, ರೈತ ಹೋರಾಟದಲ್ಲೂ ಭಾಗವಹಿಸಿದ್ದರು. ಈ ಬಗ್ಗೆ ಅಕೆಯ ತಾಯಿ ಸರಸ್ವತಿ ಹೀಗೆ ಹೇಳಿದ್ದಾರೆ,

"ಅವಳು ನಿರುದ್ಯೋಗದಿಂದ ಬೇಸತ್ತಿದ್ದಳು. ಸಾಕಷ್ಟು ಓದಿದ್ದಳು. ಆದರೆ ನಾವು ಯಾವುದೇ ಪ್ರಭಾವಿ ಸಂಪರ್ಕಗಳನ್ನು ಹೊಂದಿರಲಿಲ್ಲ. ಅವಳು ಯಾವಾಗಲೂ ನಿರುದ್ಯೋಗದ ಬಗ್ಗೆ ಮಾತನಾಡುತ್ತಿದ್ದಳು. ಅವಳು ಕೆಲಸ ಪಡೆಯಲು ಸಾಧ್ಯವಾಗದೆ, ಸಾಯುವುದೇ ಉತ್ತಮ ಎಂದು ಹೇಳುತ್ತಿದ್ದಳು. ಕೊನೆಯ ಬಾರಿ ಅಕೆಯೊಂದಿಗೆ ಮಾತನಾಡುವಾಗ ಒಳ್ಲೆಯ ಡಾಕ್ಟರ್‌ ಒಬ್ಬರನ್ನು ನೋಡಬೇಕು ಎಂದು ಹೇಳಿದ್ದಳು"
ಸಂಸತ್‌ ಆವರಣದಲ್ಲಿ ಘೋಷಣೆ ಕೂಗುತ್ತಿರುವ ನೀಲಂ ಕೃಪೆ: ANI

ದಿನಗೂಲಿ ನೌಕರ, ಸೈನಿಕನಾಗಬೇಕೆಂದಿದ್ದ ಅಮೋಲ್ ಶಿಂಧೆ!

ಸಂಸತ್ತಿನ ಹೊರಗೆ ನೀಲಂ ಜೊತೆಗೆ ಘೋಷಣೆ ಕೂಗುತ್ತಾ ಬಣ್ಣದ ಹೊಗೆ ಹಾಕಿದ ಇನ್ನೋರ್ವ ಆರೋಪಿ ಅಮೋಲ್ ಶಿಂಧೆ (25). ಈತ ಮಹಾರಾಷ್ಟ್ರದ ಲಾತೂರ್‌ ಮೂಲದವನು.

ಪಿಟಿಐ ವರದಿಯಂತೆ ಚಕುರ್ ತಹಸಿಲ್‌ನ ಝರಿ ಗ್ರಾಮದ ಶಿಂಧೆ, ಸೇನಾ ನೇಮಕಾತಿ ಅಭಿಯಾನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗುವುದಾಗಿ ಮನೆಯವರಿಗೆ ತಿಳಿಸಿ ಬಂದಿದ್ದ. 

ಬಿಎ ಪದವೀಧರರಾಗಿದ್ದ ಈತ, ಪೊಲೀಸ್ ಮತ್ತು ಸೇನಾ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾ, ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದ. ಈ ಘಟನೆಯ ನಂತರ ಆತನ ಕುಟುಂಬವನ್ನು ವಿಚಾರಣೆ ಮಾಡಲು ಲಾತೂರ್ ಪೊಲೀಸರ ತಂಡವು ಮನೆಗೆ ಭೇಟಿ ನೀಡಿದೆ.

ಅಮೋಲ್ ಶಿಂಧೆ, ಕೃಪೆ: ವಿಡಿಯೋ

ವಿಕ್ಕಿ ಶರ್ಮಾ ಮತ್ತು ಪತ್ನಿ!

ಐದು ಮತ್ತು ಆರನೇ ಆರೋಪಿಗಳು ಗುರುಗ್ರಾಮ್‌ನ ವಿಕ್ಕಿ ಶರ್ಮಾ ಮತ್ತು ಆತನ ಪತ್ನಿ.

ANI ವರದಿಯಲ್ಲಿ  ಆರ್‌ಡಬ್ಲ್ಯೂಎ ಅಧ್ಯಕ್ಷ ವಿಜಯ್ ಪರ್ಮಾರ್ ಅವರ ಹೇಳಿಕೆ ವರದಿಯಾಗಿದ್ದು, ಇದರಲ್ಲಿ ವಿಕ್ಕಿಗೆ ಸ್ಥಿರವಾದ ಉದ್ಯೋಗವಿರಲಿಲ್ಲ ಮತ್ತು ಡ್ರೈವಿಂಗ್, ಇಲ್ಲವೇ  ಸೆಕ್ಯುರಿಟಿ ಗಾರ್ಡ್‌ನಂತಹ ಕೆಲಸಗಳನ್ನು ಮಾಡುತ್ತಿದ್ದ ಎಂದು ಉಲ್ಲೇಖಿಸಲಾಗಿದೆ. ವಿಕ್ಕಿ ಮತ್ತು ಆತನ ಪತ್ನಿ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಜೋಡಿಗೆ 14 ವರ್ಷದ ಮಗಳಿದ್ದಾಳೆ.

“ಈ ರೀತಿ ಹಿಂದೆ ಮಾಡದಿದ್ದರೂ, ಆತ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಮತ್ತು ನೆರೆಹೊರೆಯವರನ್ನು ನಿಂದಿಸುತ್ತಿದ್ದನು” ಎಂದು ಪರ್ಮಾರ್ ಹೇಳಿದ್ದಾರೆ.

ಏಳನೇ ಆರೋಪಿ ಲಲಿತ್ ಝಾ ಇನ್ನೂ ತಲೆಮರೆಸಿಕೊಂಡಿದ್ದಾನೆ. ಈತನ ಗುರುಗ್ರಾಮ್‌ನಲ್ಲಿ ಇರುವ ಮನೆಯಲ್ಲಿ ಆರೋಪಿಗಳು ತಂಗಿದ್ದರು. ಆರೋಪಿಗಳಿಂದ ಇದು ವರೆಗೆ ಯಾವುದೇ ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿಲ್ಲ. ಪೊಲೀಸರು ಲಲಿತ್‌ ಝಾನ ಹುಡುಕಾಟದಲ್ಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು