Saturday, June 29, 2024

ಸತ್ಯ | ನ್ಯಾಯ |ಧರ್ಮ

ಭಾಗ 2 | ಹವಾಮಾನದ ಹದಗೆಟ್ಟ ಬದಲಾವಣೆ – ರೈತಾಪಿ ಕಸುಬು ಉಳಿದೀತೆ?

ವರುಷದಿಂದ ವರುಷಕ್ಕೆ ರೈತಾಪಿ ಬದುಕು ದಿಡೀರ್ ಹವಾಮಾನ ಬದಲಾವಣೆಗಳಿಂದ ನಜ್ಜುಗುಜ್ಜಾಗಿ ಹೋಗುತ್ತಿದೆ. ಹೀಗೆಯೆ ಮುಂದುವರೆದು ರೈತರು ಬೇಸಾಯವನ್ನೇ ಕೈಬಿಟ್ಟರೆ ಕತೆಯೇನು? ನಮಗೆ ಹಸಿವಾದಾಗ ನಮಗೆ ಉಣಿಸಿಗೆ ಬೇಕಾದ ಕಾಳು, ಬೇಳೆ, ನುಚ್ಚು, ರವೆ, ಹಿಟ್ಟುಗಳನ್ನು ಇಂಟರ್‌ನೆಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳುವಂತಹ ಸಾಫ್ಟ್‌ವೇರ್ ಪ್ರೋಗ್ರಾಮ್ ಉಂಟೇ?- ಕೆ ಎಸ್‌ ರವಿಕುಮಾರ್

ಹಾನಿಗೀಡಾದ ಸಾಸಿವೆ

ಗೋಧಿಯ ನಂತರ ಹೆಚ್ಚು ಹಾನಿಗೀಡಾದ ಎರಡನೆಯ ಚಳಿಗಾಲದ ಬೆಳೆಯೆಂದರೆ ಸಾಸಿವೆ. ಇದು ವಾಣಿಜ್ಯ ಬೆಳೆ. ದಕ್ಷಿಣದಲ್ಲಿ ನಾವು ಸಾಸಿವೆಯನ್ನು ಮಸಾಲೆ ಹುಡಿಗಳಲ್ಲಿ ಮತ್ತು ನೇರ ಒಗ್ಗರಣೆಗಷ್ಟೆ ಬಳಸುತ್ತೇವೆ. ಉತ್ತರದಲ್ಲಿ ಹಾಗಲ್ಲ, ಅಲ್ಲಿ ಸಾಸಿವೆಯಿಂದ ಎಣ್ಣೆ ತೆಗೆದು ಅಡುಗೆಗೆ ಬಳಸುತ್ತಾರೆ. ಸಾಸಿವೆಗೆ ಕೊರತೆಯಾಯಿತೆಂದರೆ ಇತರ ಅಡುಗೆ ಎಣ್ಣೆಗಳಿಗೆ ಬೇಡಿಕೆ ಹೆಚ್ಚುತ್ತದೆ, ಬೆಲೆಯೂ ಏರುತ್ತದೆ. ಜಗತ್ತಿನಲ್ಲೆ ನಂಬರ್ 1 ಅತಿ ದೊಡ್ಡ ಅಡುಗೆ ಎಣ್ಣೆಯ ಬಳಕೆದಾರ ದೇಶವಾಗಿರುವ ಭಾರತ ಬರುವ ದಿನಗಳಲ್ಲಿ ಸಹಜವಾಗಿ ಸಾಸಿವೆ ಎಣ್ಣೆಯ ಕೊರತೆ ತುಂಬಲು ತಾಳೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ವೆಜಿಟೇಬಲ್ ಎಣ್ಣೆಗಳ ಆಮದನ್ನು ಹೆಚ್ಚಿಸಬೇಕಾಗುತ್ತದೆ (ಅಂದಹಾಗೆ ಈ ಹೆಚ್ಚುವರಿ ಆಮದಿನ ಲಾಭ ದೇಶದಲ್ಲೆ ಅತಿ ದೊಡ್ಡ ಅಡುಗೆ ಎಣ್ಣೆಯ ಆಮದನ್ನು ನಿರ್ವಹಿಸುತ್ತಿರುವ ಅದಾನಿ-ವಿಲ್ಮರ್ ಕಂಪೆನಿಗೆ ದೊರೆಯುತ್ತದೆ ಎಂದು ನಾನು ಬಿಡಿಸಿ ಹೇಳಬೇಕೆ?)

ಕೊಳೆತಿನಿಯ ಕಾಟ

ಬಿಸಿಯಲೆಗಳು ಎರಗಬಹುದೆಂದು ಗೋಧಿ ಹೊಲಗಳಿಗೆ ಈಗಾಗಲೆ ನೀರು ಹಾಯಿಸಿ ತಂಪಾಗಿರಿಸಲು ಹೆಣಗುತ್ತಿದ್ದ ರೈತರು ಈಗ ಬಿದ್ದ ಅಕಾಲದ ಮಳೆಯಿಂದಾಗಿ ಹೊಲದಲ್ಲಿ ತೇವಾಂಶ ಮಿತಿಮೀರಿ ಗೋಧಿ ಗಿಡಗಳಿಗೆ ಕೊಳೆತಿನಿ (ಫಂಗಸ್) ತಗಲುವುದನ್ನು ಕಾಣಬೇಕಾಯಿತು.  Puccinia striiformis  ಪ್ರಭೇದದ ಕೊಳೆತಿನಿಯಿಂದ ಬರುವ ಹಳದಿ ತುಕ್ಕಿನ ಫಂಗಸ್ ಕಾಯಿಲೆ ಗೋಧಿ ಎಲೆಗಳನ್ನು ಹಳದಿ ಬಣ್ಣಕ್ಕೆ ತಿರುಗಿಸಿ ಕ್ರಮೇಣ ಸಾಯಿಸಿಬಿಡುತ್ತದೆ. ಹರ್ಯಾಣದ ರೋಹತಕ್ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಇನ್ನೊಂದು ಬಗೆಯ ಫಂಗಸ್ ತೆನೆತುಂಬಿದ ಗೋಧಿಗಿಡಗಳನ್ನು ಕಪ್ಪುಬಣ್ಣಕ್ಕೆ ತಿರುಗಿಸಿದೆ.

ಪಂಜಾಬಿನಲ್ಲಿ ಹಲವು ಕಡೆ ಇನ್ನೇನು ಕೆಲವೇ ದಿನಗಳಲ್ಲಿ ಕಟಾವಾಗಬಹುದು ಎಂಬ ಹಂತದಲ್ಲಿದ್ದ ಗೋಧಿ ತೆನೆಗಳು ನೆಲಕಚ್ಚಿದ ಸ್ಥಿತಿಯಲ್ಲೆ ಮೊಳಕೆಯೊಡೆಯುತ್ತಿವೆ. ಮಳೆ ಬಾರದೆ ಬರಿಯ ಗಾಳಿಗೆ ನೆಲಕ್ಕೊರಗಿದ್ದಿದ್ದರೆ ಅವು ಫಸಲು ಕೊಡುತ್ತಿದ್ದವು. ಆದರೆ ಮಳೆಗೆ ಒದ್ದೆಯಾದ ಮೇಲೆ ಅವು ಹಾಳಾದಂತೆಯೆ. ಒದ್ದೆಯಾಗಿ ಕೊಳೆತ ಮತ್ತು ಬೂಷ್ಟು ಬಂದು ಕಪ್ಪುಬಣ್ಣಕ್ಕೆ ತಿರುಗಿದ ಗೋಧಿಗಿಡಗಳು ಮಣ್ಣುಪಾಲಾಗಿ ಪಂಜಾಬಿನಲ್ಲೀಗ ಜಾನುವಾರುಗಳು ಒಣಹುಲ್ಲಿನ ಕೊರತೆ ಅನುಭವಿಸಬೇಕಾಗಿದೆ. ಫರೀದ್‍ಕೋಟ್‍ನಲ್ಲಿ ಒಣಹುಲ್ಲಿನ ದರ ಒಂದೇ ವಾರದಲ್ಲಿ ಕ್ವಿಂಟಾಲಿಗೆ 400ರಿಂದ 650-700 ರೂಪಾಯಿಗಳಿಗೆ ಏರಿದೆ. ಮತ್ತೆ ಈ ಒಣಹುಲ್ಲನ್ನು ಖರೀದಿಸುವವರೂ ರೈತರೆ. ಅವರೆ ಹೆಚ್ಚು ಜಾನುವಾರುಗಳನ್ನು ಸಾಕುವುದಲ್ಲವೆ? ಸಾಲದ ಹೊರೆ, ಬೆಳೆಹಾನಿ, ಮೇವಿನ ಕೊರತೆ, ಸರಿಹೊತ್ತಿಗೆ ನೆರವಿಗಾಗದ ಸರ್ಕಾರಗಳ ಹೊಣೆಗೇಡಿತನ ಹೀಗೆ ಎಲ್ಲದಕ್ಕೂ ತಲೆಕೊಡುವುದು ಕಡೆಗೆ ರೈತರೆ ಆಗಿರುತ್ತಾರೆ. ಬಹುಶಃ ಜಗತ್ತಿನಲ್ಲಿ ಬೇರೆ ಯಾವ ವೃತ್ತಿಯವರೂ ಇಷ್ಟೊಂದು ನಿರುತ್ಸಾಹದ, ನಿರುತ್ತೇಜಕ ಸನ್ನಿವೇಶಗಳಿಗೆ ಸಿಲುಕುವುದಿಲ್ಲವೆಂದು ಕಾಣುತ್ತದೆ. ಅದೂ ಒಂದು ಬಾರಿಯಲ್ಲ, ಪ್ರತೀ ವರುಷ ಮತ್ತೆ ಮತ್ತೆ.

ಗೋಧಿಕಾಳಿನ ಗುಣಮಟ್ಟ

ಹೊಲದಲ್ಲಿ ನಿಸರ್ಗದ ಹಲವಾರು ಸವಾಲುಗಳನ್ನು ಎದುರಿಸಿ ಅಂತೂ ಕಟಾವಾಗಿ ಕಸಕಡ್ಡಿಯಿಂದ ಚೊಕ್ಕಟಗೊಂಡ ಗೋಧಿಕಾಳುಗಳು ಮಂಡಿಯನ್ನು ತಲುಪಿದ ಮೇಲೂ ಹಲವು ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕಾಗುತ್ತದೆ. ಮೊದಲ ಹಂತದಲ್ಲಿ ಮಧ್ಯ ಹಾಗೂ ಉತ್ತರ ಭಾರತದ ಮಂಡಿಯನ್ನು ತಲುಪಿರುವ ಗೋಧಿಯಲ್ಲಿ ಶೇಕಡಾ 80ರಷ್ಟು ಕಳಪೆಯಾಗಿದೆ ಎಂದು ಕೊಳ್ಳುವವರು ಮೂಗು ಮುರಿದಿದ್ದಾರೆ. ಫೆಬ್ರವರಿಯ ಬಿಸಿಯಲೆಗಳು ಮತ್ತು ಮಾರ್ಚಿಯಲ್ಲಿ ಮಳೆಯ ತೇವಾಂಶಕ್ಕೆ ತುತ್ತಾದ ಗೋಧಿಬೆಳೆ ಹಿಟ್ಟಾಗಲು ಬೇಕಾದ ತನ್ನ ಸಹಜತನವನ್ನು ಕಳೆದುಕೊಂಡದ್ದೇ ಇದಕ್ಕೆ ಕಾರಣ. ಗೋಧಿಕಾಳುಗಳಲ್ಲಿ ಅಗತ್ಯಕ್ಕಿಂತ (ಶೇಕಡಾ 12ರ ಒಳಗಿರಬೇಕು) ಹೆಚ್ಚು ತೇವಾಂಶವಿರುವುದು (ಈಗ ಶೇಕಡಾ 18ರ ಆಸುಪಾಸಿನಲ್ಲಿದೆ) ಅವುಗಳ ಖರೀದಿಗೆ ಅಡ್ಡಿಯಾಗಿದೆ. ಹಲವು ಮಂಡಿಗಳಲ್ಲಿ ಖರೀದಿ ಇಲ್ಲದೆ ಗುಪ್ಪೆಗಟ್ಟಲೆ ಗೋಧಿ ಹಾಗೆಯೆ ಬಿದ್ದುಕೊಂಡಿದೆ (ಕೆಲವು ಮಂಡಿಗಳಲ್ಲಿ ಸರ್ಕಾರದ ಕನಿಷ್ಟ ಬೆಂಬಲದ ಬೆಲೆ (MSP)ಗಿಂತಲೂ ಕಡಿಮೆ ದರಕ್ಕೆ ಖರೀದಿಸಲ್ಪಟ್ಟಿದೆ). ಆದರೆ ಮುಂದೆ ಅದು ಬೇರೆಬೇರೆ ಹಂತಗಳಲ್ಲಿ ಮಾರುಕಟ್ಟೆಯ ವ್ಯವಹಾರ ವಹಿವಾಟುಗಳಿಗೆ ಒಳಪಡಬೇಕಲ್ಲ, ಮಂಡಿಯಲ್ಲೆ ಬಿದ್ದುಕೊಂಡಿದ್ದರೆ ಪ್ರಯೋಜನವೇನು? ಹೆಚ್ಚು ಮಳೆಗೆ ತುತ್ತಾದ ಪಂಜಾಬಿನಲ್ಲಿ ಗೋಧಿಯನ್ನು ಕೊಳ್ಳಲು ರಿಲೆಯನ್ಸ್, ಐಟಿಸಿ, ಅದಾನಿ ಗ್ರೂಪ್ ಮುಂತಾದ ಕಾರ್ಪೊರೇಟುಗಳು ಇನ್ನೂ ಮುಂದೆ ಬಂದಿಲ್ಲ ಎಂದು ಮಧ್ಯವರ್ತಿ ಕಮಿಷನ್ ಏಜೆಂಟರು ಗೋಳು ತೋಡಿಕೊಂಡಿದ್ದಾರೆ. ಸರ್ಕಾರೆಗಳೇ ಪೂರ್ತಿ ಮುಂದೆ ನಿಂತು ಗೋಧಿಯನ್ನು ಕೊಳ್ಳಲೆಂದರೆ ಅವು ನಿಗದಿಪಡಿಸಿದ ಗುಣಮಟ್ಟದಲ್ಲಿ ಗೋಧಿ ಬೆಳೆಯಿರಬೇಕು. ಈ Food Corporation of India ದ ಗೋದಾಮುಗಳಲ್ಲಿ ಹೆಚ್ಚು ಕಾಲ ಕೂಡಿಡ ಬೇಕಿರುವುದರಿಂದ ಕಾಳಿನ ಗುಣಮಟ್ಟ ಉತ್ತಮವಾಗಿರಲೇ ಬೇಕು. ಆದರೆ ಈ ನೆಪವೊಡ್ಡಿ ಸರ್ಕಾರಗಳು ಲಾಭಕ್ಕಷ್ಟೆ ಕಣ್ಣು ನೆಟ್ಟ ಕಾರ್ಪೊರೇಟುಗಳಂತೆ ಹಿಂದೆಗೆಯುಂತಿಲ್ಲ. ರೈತರ ನೆರವಿಗೆ ಬರಲೇಬೇಕಿದೆ. ಹೀಗಾಗಿ ಸರ್ಕಾರಗಳು ತಾವು ಪಾಲಿಸುವ ಗುಣಮಟ್ಟ ಸಂಬಂಧಿ ನಿಯಮಗಳನ್ನು ಕೊಂಚ ಸಡಿಲಿಸಿ ಖರೀದಿಸಲು ಮುಂದೆ ಬರಬೇಕೆಂದು ರೈತರು ಬೇಡಿಕೆ ಇಟ್ಟಿದ್ದಾರೆ. ಹಾಗೆಲ್ಲ ಸರ್ಕಾರಗಳು (ಅದೂ ಕಾರ್ಪೋರೇಟ್‍ಗಳ ‘ಚೆಡ್ಡಿ’ದೋಸ್ತ್ ಸರ್ಕಾರಗಳು) ಬೇಡಿಕೆ, ಅರಿಕೆ, ಕೋರಿಕೆ, ಮನವಿ, ಮೊರೆಗಳಿಗೆ ಮಣಿಯುವುದುಂಟೆ! ಇದೆಲ್ಲ ರೈತರಿಗೆ ಗೊತ್ತಿಲ್ಲವೆ? ಹರ್ಯಾಣದ ರೈತರು ರಸ್ತೆತಡೆ ಮಾಡಿ ಪ್ರತಿಭಟಿಸುತ್ತಿದ್ದಂತೆ ರಾಜ್ಯ ಸರ್ಕಾರ ಮತ್ತು ಒಕ್ಕೂಟ ಸರ್ಕಾರಗಳು ಕ್ರಮವಾಗಿ ಖರೀದಿ ಸಂಗ್ರಹಣೆ (procurement) ಮತ್ತು ಕಾಳಿನ ಗುಣಮಟ್ಟದ ನಿಯಮಗಳನ್ನು ಸಡಿಲಿಸಿದವು. ಸಡಿಲಿಸಲ್ಪಟ್ಟ ಗುಣಮಟ್ಟದ ನಿಯಮಗಳು ಹರ್ಯಾಣವಲ್ಲದೆ ಪಂಜಾಬ್, ಚಂಡೀಘರ್ ಮತ್ತು ರಾಜಸ್ತಾನಗಳಿಗೂ ಅಳವಟ್ಟವು

ಒಕ್ಕೂಟ ಸರ್ಕಾರದ ನಿರೀಕ್ಷೆ ನಿಜವಾಗಬಹುದೆ?

ಯಾರದೋ ಸಾಧನೆಯ ಕಟ್ಟಕಡೆಯ ಯಶಸ್ಸಿನ ಲಾಭವನ್ನು ತಮ್ಮದೇ ಎಂದು ಬಿಂಬಿಸಿಕೊಳ್ಳಲು ಸರ್ಕಾರಗಳು ಮುನ್ನುಗ್ಗುವುದನ್ನು ನಾವು ಕಂಡಿದ್ದೇವೆ. ನಮ್ಮ ಒಕ್ಕೂಟ ಸರ್ಕಾರವೂ ಇದಕ್ಕೆ ಹೊರತಲ್ಲ. 2022-2023ನೇ ಸಾಲಿಗೆ 11.218 ಕೋಟಿ ಟನ್ನುಗಳ ಸಾರ್ವಕಾಲಿಕ ದಾಖಲೆಯ ಗೋಧಿ ಬೆಳೆ ಬರುತ್ತದೆಂದು ಸರ್ಕಾರ ಒಂದೇ ಸಮನೆ ನಾಲ್ಕೈದು ತಿಂಗಳುಗಳಿಂದ ಗಳಹುತ್ತಲೆ ಬಂದಿದೆ. ತಾನೇ ನಿಂತು ಗೋಧಿ ಬೆಳೆದಿರುವೆನೇನೊ ಎಂಬ ದನಿಯಲ್ಲಿ ಅದು ಮಾತನಾಡಿತ್ತು. ಕೃಷಿ ಮಂತ್ರಾಲಯವಂತೂ ‘ಯಾವ ಬಿಸಿಯಲೆಗೂ ಬೆದರಬೇಡಿ, ಯಾವ ಮಳೆಗೂ ಜಗ್ಗಬೇಡಿ, ಯಾವ ಬಿರುಗಾಳಿಗೂ ಕುಗ್ಗಬೇಡಿ’ ಎಂದು ರೈತರಿಗೆ ವೀರಾವೇಶದ ಸೂಚನೆ(ಘೋಷಣೆ)ಗಳನ್ನು ನೀಡಿತ್ತು. ಸರ್ಕಾರಿ ಹಿಡಿತದ ಹವಾಮಾನ, ಕೃಷಿ ಮತ್ತು ಸಂಶೋಧನಾ ಸಂಸ್ಥೆಗಳೂ ಸರ್ಕಾರದ ದನಿಗೆ ಒತ್ತಾಸೆಯಾಗಿ ಬಾಯಿಪಾಠ ಒಪ್ಪಿಸಿದವು. ನೆಲ ಮತ್ತು ಮುಗಿಲಿನ ವಾಸ್ತವ ಗೊತ್ತಿರುವ ರೈತರು ಇಂತಹ ಜೊಳ್ಳು, ಬರಡು, ಟೊಳ್ಳು ಉತ್ತೇಜನಗಳಿಂದ ಹುರುಪು ಗೊಳ್ಳುವುದಿಲ್ಲ. ಕಳೆದ ಫೆಬ್ರವರಿಯಲ್ಲಿ ವಿಪರೀತ ಏರಿದ ತಾಪ ಮತ್ತು ಮಾರ್ಚಿಯ ಅಕಾಲದ ಮಳೆ, ಆಲಿಕಲ್ಲುಗಳ ಹೊಡೆತದಿಂದ ತತ್ತರಿಸಿರುವ ರೈತರು ಈ ವರುಷ ಸರ್ಕಾರ ನಿರೀಕ್ಷಿಸಿದ ಗೋಧಿ ಬೆಳೆ ಸಾಧ್ಯವಿಲ್ಲ ಎನ್ನುತ್ತಿದ್ದರೂ ಒಕ್ಕೂಟ ಸರ್ಕಾರ ಅದನ್ನು ಒಪ್ಪಿರಲಿಲ್ಲ. ಈಗ ನಿಧಾನಕ್ಕೆ ಅದು ವಾಸ್ತವವನ್ನು ಅರಿಯುತ್ತಿದೆ. ಮಾರ್ಚ್ ಕಡೆಯ ವಾರದಲ್ಲಿ ತನ್ನ ನಿರೀಕ್ಷಿತ ಇಳುವರಿಯಲ್ಲಿ ಒಟ್ಟು 10 ಲಕ್ಷ ಟನ್ನಿನಷ್ಟು ಕಡಿಮೆಯಾಗಬಹುದು ಎಂದಿದ್ದು ಏಪ್ರಿಲ್ ಮೊದಲ ವಾರದ ಹೊತ್ತಿಗೆ 20 ಲಕ್ಷ ಟನ್ ಕಮ್ಮಿಯಾಗಬಹುದು ಎಂದಿದೆ (ಪೂರ್ಣ ಚಿತ್ರಣ ಪಡೆಯಲು ನಾವು ಜೂನ್-ಜುಲೈವರೆಗೆ ಕಾಯಬೇಕು). United States Department of Agriculture(USDA)ಗೆ ಸೇರಿದ Foreign Agriculture Service(FAS) ಸಂಸ್ಥೆಯು ಒಟ್ಟು ಇಳುವರಿ 10.8 ಕೋಟಿ ಟನ್ನುಗಳಾಗಬಹುದು ಎಂದು ಅಂದಾಜಿಸಿದೆ. Roller Flour Millers Federation of India (RFMFI)    ಜೊತೆಗೂಡಿ Agriwatch ಸಂಸ್ಥೆಯು ನಡೆಸಿದ ಸರ್ವೆ ಪ್ರಕಾರ ಈ ವರುಷ ಒಟ್ಟು ಇಳುವರಿ 10.29 ಲಕ್ಷ ಟನ್ ಆಗಬಹುದು. ಇಷ್ಟಾಗಿಯೂ ಇದು ಕಳೆದ ವರುಷದ ಇಳುವರಿಯಾದ 9.76 ಕೋಟಿ ಟನ್ನಿಗಿಂತ ಹೆಚ್ಚು. ನಮ್ಮ ರೈತರ ಸಾಗುವಳಿಯ ಹುಮ್ಮಸ್ಸಿಗೆ ನಾವು ಬೆನ್ನು ತಟ್ಟಲೇ ಬೇಕಲ್ಲವೆ? ಇದೇ ರೈತರನ್ನು ಹದಿಮೂರು ತಿಂಗಳು ಅಕ್ಷರಶಃ ಬೀದಿಯಲ್ಲಿ ಹೋರಾಟಕ್ಕೆ ಕೂರಿಸಿದ್ದ ಒಕ್ಕೂಟ ಸರ್ಕಾರದ ‘ಚೂಪು ಸಲಾಕೆ’ಗಳಿಗೆ ರೈತರು ಹವಾಮಾನ ಬದಲಾವಣೆ ಎಂಬ ಯೂಪಸ್ತಂಭಕ್ಕೆ ಕಟ್ಟಿಹಾಕಲ್ಪಟ್ಟ ಮೊಟ್ಟಮೊದಲ ಬಲಿಗಳು ಎಂದು ಅರಿವಾಗಬೇಕು.    

 ಅಬ್ಬಾ! ದೇಶದ ಹಸಿವು ನೀಗುವ ರೈತರಿಗೆ ಈಪಾಟಿ ತೊಡಕುಗಳು ಕಾಲಿಗೆ ಬಿಗಿದು ಕೊಳ್ಳಬಾರದು. ವರುಷದಿಂದ ವರುಷಕ್ಕೆ ರೈತಾಪಿ ಬದುಕು ದಿಡೀರ್ ಹವಾಮಾನ ಬದಲಾವಣೆಗಳಿಂದ ನಜ್ಜುಗುಜ್ಜಾಗಿ ಹೋಗುತ್ತಿದೆ. ಹೀಗೆಯೆ ಮುಂದುವರೆದು ರೈತರು ಬೇಸಾಯವನ್ನೇ ಕೈಬಿಟ್ಟರೆ ಕತೆಯೇನು? ನಮಗೆ ಹಸಿವಾದಾಗ ನಮಗೆ ಉಣಿಸಿಗೆ ಬೇಕಾದ ಕಾಳು, ಬೇಳೆ, ನುಚ್ಚು, ರವೆ, ಹಿಟ್ಟುಗಳನ್ನು ಇಂಟರನೆಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳುವಂತಹ ಸಾಫ್ಟ್‌ವೇರ್ ಪ್ರೋಗ್ರಾಮ್ ಉಂಟೇ?

ರವಿಕುಮಾರ್ ಕೆ.ಎಸ್, ಹಾಸನ

ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.

ಮೊಬೈಲ್:‌ 9964604297

ಇದನ್ನೂ ಓದಿhttps://peepalmedia.com/worsening-climate-change-will-farmers-survive/ಹವಾಮಾನದ ಹದಗೆಟ್ಟ ಬದಲಾವಣೆ – ರೈತಾಪಿ ಕಸುಬು ಉಳಿದೀತೆ?

Related Articles

ಇತ್ತೀಚಿನ ಸುದ್ದಿಗಳು