Home ಬೆಂಗಳೂರು ನರೇಗಾ ಹೆಸರು ಬದಲಾವಣೆ: ಬಡವರು ಮತ್ತು ಗಾಂಧಿ ಮೇಲಿನ ದ್ವೇಷದ ಪರಮಾವಧಿ – ಮುಖ್ಯಮಂತ್ರಿ ಸಿದ್ದರಾಮಯ್ಯ...

ನರೇಗಾ ಹೆಸರು ಬದಲಾವಣೆ: ಬಡವರು ಮತ್ತು ಗಾಂಧಿ ಮೇಲಿನ ದ್ವೇಷದ ಪರಮಾವಧಿ – ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ

0
ಕಾನೂನುಬಾಹಿರ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ಕಾನೂನು ಕ್ರಮ- ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂ-ನರೇಗಾ)ಯ ಹೆಸರು ಮತ್ತು ಸ್ವರೂಪವನ್ನು ಬದಲಾಯಿಸಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವು ಬಡವರು ಮತ್ತು ಮಹಾತ್ಮ ಗಾಂಧೀಜಿಯವರ ಬಗೆಗಿನ ದ್ವೇಷದ ಪ್ರತಿಬಿಂಬ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರವಾಗಿ ಖಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಈ ಜನವಿರೋಧಿ ನಿರ್ಧಾರದ ವಿರುದ್ಧ ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸುವುದಾಗಿ ಅವರು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

ಕಳೆದ ಎರಡು ದಶಕಗಳಿಂದ ಗ್ರಾಮೀಣ ಪ್ರದೇಶದ ಬಡತನ ನಿರ್ಮೂಲನೆಯಲ್ಲಿ ಜೀವಾಳವಾಗಿದ್ದ ನರೇಗಾ ಯೋಜನೆಯು ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗದ ಹಕ್ಕನ್ನು ಖಾತರಿಪಡಿಸಿತ್ತು. ಆದರೆ, ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಹೊಸ ರಚನೆಯು ಈ ಉದ್ಯೋಗದ ಭರವಸೆಯನ್ನು ರಾಜಕೀಯ ನಾಯಕರ ಇಚ್ಛೆಗೆ ಬಿಟ್ಟುಕೊಡುವಂತಿದೆ.

ಇದು ಜಾತಿ ತಾರತಮ್ಯ ಮತ್ತು ಸಾಮಾಜಿಕ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಅಲ್ಲದೆ, ನೂರು ಪ್ರತಿಶತ ಕೇಂದ್ರವೇ ಭರಿಸುತ್ತಿದ್ದ ಈ ಯೋಜನೆಯ ವೆಚ್ಚದಲ್ಲಿ ಈಗ ಶೇ. 40ರಷ್ಟನ್ನು ರಾಜ್ಯಗಳ ಮೇಲೆ ಹೇರಿರುವುದು ಮೋದಿ ಸರ್ಕಾರದ ಒಕ್ಕೂಟ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಸಿಎಂ ಕಿಡಿಕಾರಿದ್ದಾರೆ.

ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸಲು ಈ ಯೋಜನೆಗೆ ಅವರ ಹೆಸರಿಡಲಾಗಿತ್ತು. ವಿದೇಶಗಳಲ್ಲಿ ಗಾಂಧಿ ಭಜನೆ ಮಾಡುವ ಪ್ರಧಾನಿ ಮೋದಿ, ದೇಶದೊಳಗೆ ಅವರ ಹೆಸರನ್ನು ಅಳಿಸಿಹಾಕುವ ಹುನ್ನಾರ ನಡೆಸುತ್ತಿದ್ದಾರೆ. ಗಾಂಧೀಜಿಯ ಹಂತಕ ಗೋಡ್ಸೆಯನ್ನು ಮೆರೆಸುವವರಿಂದ ಇದಕ್ಕಿಂತ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಯುಪಿಎ ಸರ್ಕಾರದ ಅವಧಿಯ 25ಕ್ಕೂ ಹೆಚ್ಚು ಯೋಜನೆಗಳನ್ನು ಕೇವಲ ಹೆಸರು ಬದಲಾಯಿಸಿ ಮರುಬ್ರಾಂಡ್ ಮಾಡಿರುವ ಮೋದಿ ಸರ್ಕಾರಕ್ಕೆ ‘ಹೆಸರು ಬದಲಾಯಿಸುವ ಸಚಿವಾಲಯ’ವನ್ನು ಆರಂಭಿಸುವುದೇ ಸೂಕ್ತ ಎಂದು ಅವರು ವ್ಯಂಗ್ಯವಾಡಿದ್ದಾರೆ.

ನಿರ್ಮಲ ಭಾರತ್, ರಾಜೀವ್ ಗ್ರಾಮೀಣ ವಿದ್ಯುದೀಕರಣ ಮತ್ತು ಜೆಎನ್‌ಎನ್‌ಯುಆರ್‌ಎಂ ನಂತಹ ಯೋಜನೆಗಳನ್ನು ಮರುನಾಮಕರಣ ಮಾಡಿರುವ ಪಟ್ಟಿಯನ್ನು ನೀಡಿದ ಅವರು, ನರೇಗಾ ಬದಲಾವಣೆಯಿಂದ ಬಡವರು ಉದ್ಯೋಗ ಅರಸಿ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದಿದ್ದಾರೆ.

ರಾಜ್ಯದ ಬಿಜೆಪಿ ನಾಯಕರನ್ನು ಪ್ರಶ್ನಿಸುವಂತೆ ಫಲಾನುಭವಿಗಳಿಗೆ ಕರೆ ನೀಡಿರುವ ಸಿಎಂ, ಯೋಜನೆಯನ್ನು ಅದರ ಮೂಲ ಸ್ವರೂಪದಲ್ಲೇ ಉಳಿಸಿಕೊಳ್ಳಲು ಪಕ್ಷಾತೀತವಾಗಿ ದನಿ ಎತ್ತಬೇಕು ಎಂದು ಒತ್ತಾಯಿಸಿದ್ದಾರೆ.

You cannot copy content of this page

Exit mobile version