Friday, June 14, 2024

ಸತ್ಯ | ನ್ಯಾಯ |ಧರ್ಮ

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌ ಆದ ವಿಡಿಯೋ ಮತ್ತು ಅದರ ನಂತರ ಸಂಸ್ಥೆ ನೀಡಿದ ಸ್ಪಷ್ಟೀಕರಣ, ಇದರೊಂದಿಗೆ ಮುಗಿದು ಹೋಗಬಹುದಾದ ಘಟನೆ ಖಂಡಿತ ಇದಲ್ಲ. ಇದು ನಮ್ಮನ್ನು ಚಿಂತನೆಗೆ ಈಡು ಮಾಡಬೇಕಾದ ವಿಡಿಯೋ. ಬೆಳೆಯುವ ಮಕ್ಕಳ ಮೇಲೆ ಆಳವಾಗಿ ಪರಿಣಾಮ ಬೀರಬಹುದಾದ ಇಂತಹ ಘಟನೆಗಳನ್ನು ಪೀಪಲ್‌ ಮೀಡಿಯಾ ಖಂಡಿಸುತ್ತದೆ. ಮತ್ತು ನೊಂದ ಮಕ್ಕಳೊಡನೆ ನಿಲ್ಲುತ್ತದೆ ಹಾಗೂ ಭಾರತದ ಶಾಲಾ ತರಗತಿಗಳು ಜಾತಿ, ಧರ್ಮ, ಲಿಂಗ ಇತ್ಯಾದಿ ಬೇಧಗಳಿಂದ ಮುಕ್ತವಾಗಿರಬೇಕೆಂದು ನಾವು ಆಗ್ರಹಿಸುತ್ತೇವೆ ಮತ್ತು ಆ ಕುರಿತು ಬದ್ಧತೆಯಿಂದ ಕೆಲಸ ಮಾಡುತ್ತೇವೆ

ನಿನ್ನೆ ಬೆಳಗಿನಿಂದ ಟ್ವಿಟರ್‌ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಒಂದು “ಓಡಾಡುತ್ತಾ” ಬಿಸಿಬಿಸಿ ಚರ್ಚೆಗೆ ಈಡಾಗುತ್ತಿದೆ, ಆ ವಿಡೀಯೊ ಗಮನಿಸಿದರೆ ಒಂದು ದೇಶವಾಗಿ ನಾವು ಎಲ್ಲಿಗೆ ತಲುಪಿದ್ದೇವೆನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ.

ಮೊದಲು ವಿಡೀಯೋದಲ್ಲಿ ಏನೇನಿತ್ತು ಎನ್ನುವುದನ್ನು ತಿಳಿಯೋಣ ಬನ್ನಿ.


ಉಡುಪಿಯ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.
ಪ್ರಾಧ್ಯಾಪಕರು ವಿದ್ಯಾರ್ಥಿಯ ಬಳಿ ಅವನ ಹೆಸರನ್ನು ಕೇಳಿದ್ದಾರೆಂದು ವರದಿಯಾಗಿದೆಯಾದರೂ ಆ ಕುರಿತು ವಿಡೀಯೊದಲ್ಲಿ ಸಾಕ್ಷ್ಯವಿಲ್ಲ ಮತ್ತು ನಂತರ ಹುಡುಗ ಮುಸ್ಲಿಂ ಹೆಸರನ್ನು ಹೇಳಿದ ನಂತರ “ಓಹ್, ನೀನು ಕಸಬ್ ಹಾಗೆ ಇದ್ದೀ!” ಎಂದಿದ್ದಾರೆ ಎನ್ನಲಾಗಿದೆ. ( 26/11 ಮುಂಬೈ ದಾಳಿಯ ನಂತರ ಜೀವಂತವಾಗಿ ಸೆರೆಹಿಡಿಯಲಾದ ಏಕೈಕ ಪಾಕಿಸ್ತಾನಿ ಭಯೋತ್ಪಾದಕ ಅಜ್ಮಲ್ ಕಸಬ್‌ನನ್ನು 2012ರಲ್ಲಿ ಗಲ್ಲಿಗೇರಿಸಲಾಯಿತು.
ಎಲ್ಲೆಡೆ ವೈರಲ್‌ ಆಗಿರುವ ವೀಡಿಯೊದಲ್ಲಿ, ವಿದ್ಯಾರ್ಥಿಯು ಪ್ರಾಧ್ಯಾಪಕರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ನೀವು ನನ್ನನ್ನು ಭಯೋತ್ಪಾದಕ ಎನ್ನುವ ಮೂಲಕ ನನ್ನ ಧರ್ಮಕ್ಕೆ ಅಪಮಾನ ಮಾಡಿದ್ದೀರಿ ಎಂದು ನೋವಿನಿಂದ ಹೇಳಿದ್ದಾನೆ.

“26/11 ತಮಾಷೆಯಾಗಿರಲಿಲ್ಲ. ಈ ದೇಶದಲ್ಲಿ ಮುಸ್ಲಿಮನಾಗಿ ದಿನನಿತ್ಯ ಇದನ್ನೆಲ್ಲಾ ಎದುರಿಸುವುದು ತಮಾಷೆಯಲ್ಲ ಸಾರ್. ನನ್ನ ಧರ್ಮದ ಬಗ್ಗೆಯೂ ನೀವು ಹೀಗೆ ಅವಹೇಳನಕಾರಿಯಾಗಿ ತಮಾಷೆ ಮಾಡುವಂತಿಲ್ಲ. ಇದು ತಮಾಷೆಯಲ್ಲ ಸಾರ್, ಅಲ್ಲ. ,” ಎಂದು ವಿದ್ಯಾರ್ಥಿಯು ಕೂಗಿದಾಗ ಶಿಕ್ಷಕ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡುತ್ತಾರೆ.

“ನೀನು ನನ್ನ ಮಗನಂತೆ…” ಎಂದು ಪ್ರಾಧ್ಯಾಪಕರು ವಿದ್ಯಾರ್ಥಿಯನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾರೆ.
ಆಗ ಹುಡುಗ “ನೀವು ನಿಮ್ಮ ಮಗನ ಬಳಿ ಹೀಗೆ ಮಾತನಾಡುತ್ತೀರಾ? ನೀವು ಅವನನ್ನು ಭಯೋತ್ಪಾದಕ ಎಂದು ಕರೆಯುತ್ತೀರಾ?” ಎಂದು ಕೇಳುತ್ತಾನೆ.

ಅಧ್ಯಾಪಕರು “ಇಲ್ಲ” ಎಂದಾಗ, ವಿದ್ಯಾರ್ಥಿಯು ಮುಂದುವರಿದು: “ಹಾಗಾದರೆ ನೀವು ನನ್ನನ್ನು ಇಷ್ಟು ಜನರ ಮುಂದೆ ಹೇಗೆ ಆ ಹೆಸರಿನಿಂದ ಕರೆಯುತ್ತೀರಿ? ನೀವು ವೃತ್ತಿಪರರು, ನೀವು ಮಕ್ಕಳಿಗೆ ಕಲಿಸುತ್ತೀರಿ, ಕೇವಲ ಕ್ಷಮೆ ನೀವು ಹೇಗೆ ಯೋಚಿಸುತ್ತೀರಿ ಅಥವಾ ನಿಮ್ಮನ್ನು ನೀವು ಹೇಗೆ ತೋರಿಸಿಕೊಳ್ಳುತ್ತೀರಿ ಎನ್ನುವುದನ್ನು ಬದಲಾಯಿಸುವುದಿಲ್ಲ.”

ಶಿಕ್ಷಕ ಮುಂದುವರೆದು ಮತ್ತೆ ಕ್ಷಮೆ ಕೇಳುತ್ತಾರೆ.

ಈಗ ಘಟನೆಯ ಮುಂದುವರೆದ ಭಾಗವಾಗಿ ಮಣಿಪಾಲ್‌ ಯುನಿವರ್ಸಿಟಿ ಆ ಪ್ರಾಧ್ಯಾಪಕರನ್ನು ವಿಷಯದ ಕುರಿತಾದ ತನಿಖೆ ಮುಗಿಯುವರೆಗೆ ಅಮಾನತ್ತಿನಲ್ಲಿರಿಸುವುದಾಗಿ ಪ್ರಕಟಣೆ ನೀಡಿದೆ. ಮತ್ತು ಇಂತಹ ವಿಷಯಗಳ ಕುರಿತು ಸಂಸ್ಥೆಯು ಶೂನ್ಯ ಸಹನೆಯನ್ನು ಹೊಂದಿದ್ದು ತಮ್ಮ ಸಂಸ್ಥೆಯ ನೀತಿಯ ಪ್ರಕಾರ ವಿಚಾರಣೆ ನಡೆಸುವುದಾಗಿ ಹೇಳಿಕೊಂಡಿದೆ.

ಈ ಘಟನೆಯಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ. ಅದರಲ್ಲಿ ಒಂದು ಆ ವಿದ್ಯಾರ್ಥಿ ಒಬ್ಬಂಟಿಯಾಗಿ ತನ್ನ ಪ್ರಾಧ್ಯಾಪಕರ ಸಂವೇದನಾ ರಹಿತ ಮಾತುಗಳನ್ನು ಪ್ರತಿಭಟಿಸಿ ಮಾತನಾಡುತ್ತಿದ್ದರೆ ಉಳಿದ ವಿದ್ಯಾರ್ಥಿಗಳು ಮೂಕಪ್ರೇಕ್ಷಕರಾಗಿ ಉಳಿದಿದ್ದರು. ಇದು ನಮ್ಮ ಭಾರತದ ಬಹುತೇಕ ಮಧ್ಯಮ ವರ್ಗ ಮತ್ತು ಅದಕ್ಕಿಂತಲೂ ಉಳಿದ ಮೇಲಿನ ವರ್ಗಗಳ ಜನರ ಮನಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ದ್ವೀಪಗಳಾಗಿ ಬದುಕುವ ಈ ಜನರು ಎಂದಿಗೂ ತಮ್ಮ ಸುತ್ತಲಿನ ತಲ್ಲಣಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅಲ್ಲದೆ ಇತ್ತೀಚೆಗೆ ಶಾಲಾ ಮಟ್ಟದಲ್ಲೇ ಮಕ್ಕಳು ಧಾರ್ಮಿಕವಾಗಿ ಗುಂಪುಗಳಾಗಿ ಒಡೆದುಹೋಗಿರುವುದು ಕೂಡಾ ಇದಕ್ಕೆ ಕಾರಣ. (ಇತ್ತೀಚಿನ ಹಿಜಾಬ್‌ ಗಲಾಟೆಯನ್ನು ನೆನಪಿಸಿಕೊಳ್ಳಿ)


ಎರಡನೆಯದಾಗಿ ಗಮನ ಸೆಳೆಯುವ ವಿಷಯವೆಂದರೆ ಸೌಹಾರ್ದತೆಯ ಪಾಠ ಹೇಳಿಕೊಡಬೇಕಿರುವ ಪ್ರಾಧ್ಯಾಪಕರೇ ಕೋಮುವಾದಿ ಮನಸ್ಥಿತಿ ಹೊಂದಿರುವುದು. ಹಿಂದೆಯೂ ಇಂತಹ ಮನಸ್ಥಿತಿಯ ಶಿಕ್ಷಕರಿದ್ದರಾದರೂ ಅವರ ಇಂತಹ ಮನಸ್ಥಿತಿಗಳು ನೇರ ತರಗತಿಗಳಲ್ಲಿ ಅಷ್ಟಾಗಿ ಪ್ರಕಟಗೊಳ್ಳುತ್ತಿರಲಿಲ್ಲ. ಆದರೆ ಇತ್ತೀಚೆಗೆ ವಾಟ್ಸಾಪ್‌ ಫೇಸ್ಬುಕ್ಕಿನಂತಹ ಸಾಮಾಜಿಕ ತಾಣಗಳ ಗ್ರೂಪುಗಳು ಇಂತಹ ಮನಸ್ಥಿತಿಯುಳ್ಳ ಶಿಕ್ಷಕರಲ್ಲಿ ಒಂದು ರೀತಿಯ ಭಂಡ ಧೈರ್ಯವನ್ನು ತುಂಬುತ್ತಿವೆ ಮತ್ತು ಇಂತಹ ಮನಸ್ಥಿತಿ ಹೊಂದಿರುವುದು ಸರಿಯೆನ್ನುವ ವಾತಾವಾರಣವನ್ನು ಸೃಷ್ಟಿಸುತ್ತಿವೆ. ಆದರೆ ಇದು ಕೇವಲ ಶಿಕ್ಷಕರಿಗಷ್ಟೇ ಸೀಮಿತವಾಗಿಲ್ಲ.

ಪ್ರಜ್ಞಾವಂತರಾಗಬೇಕಿದ್ದ ಕಲಾವಿದರು, ಸಾಹಿತಿಗಳನ್ನೂ ಈ ಕೋಮು ವಿಷ ಬಿಟ್ಟಿಲ್ಲ. ಕಲಾವಿದರು, ಸಾಹಿತಿಗಳು ಖ್ಯಾತಿಗಾಗಿ ದ್ವೇಷವನ್ನು ಬಳಸಿಕೊಳ್ಳುವುದನ್ನು ಕಲಿತಿದ್ದಾರೆ. ಇಂದು ಸಾಹಿತ್ಯಕವಾಗಿ ಏನೂ ಅಲ್ಲದ ವ್ಯಕ್ತಿಗಳೂ ದ್ವೇಷಪೂರಿತ ಲೇಖನಗಳನ್ನು ಬರೆಯುವ ಮೂಲಕ ಬಲಪಂಥೀಯ ಪಾಳಯಗಳಲ್ಲಿ ಮಿಂಚುತ್ತಿದ್ದಾರೆ. ಈ ಹಿಂದೆ ಪ್ರಜ್ಞಾವಂತರಂತೆ ಬರೆಯುತ್ತಿದ್ದ ಹಲವರೂ ಈಗೀಗ ದ್ವೇಷ ಬರಹಗಳ ಮೂಲಕ ಒಂದಿಷ್ಟು ಲೈಮ್‌ ಲೈಟಿನಡಿ ಮಿಂಚಲು ತಯಾರಾಗುತ್ತಿದ್ದಾರೆ.

ದುಷ್ಟ ರಾಜಕಾರಣಿಗಳು, ಕೋಮುವಾದಿ ಮನಸ್ಥಿತಿಯ ಚಿಂತಕರು ಅಧಿಕಾರ ಹಂಚಿಕೊಂಡರೆ ಏನಾಗಬಹುದೆನ್ನುವುದನ್ನು ನಾವು ಭಾರತದಲ್ಲಿ ನೋಡುತ್ತಿದ್ದೇವೆ. ಇಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುವ ಹಿಂಸೆಯನ್ನು ವೈಭವೀಕರಿಸಿ ಸೋಷಿಯಲ್‌ ಮೀಡಿಯಾ ಮತ್ತು ಬಲಪಂಥೀಯ ಮಾಧ್ಯಮಗಳ ಮೂಲಕ ಒಬ್ಬ ಅಲ್ಪಸಂಖ್ಯಾತನ ಮೇಲೆ ನಡೆದ ದಾಳಿಯನ್ನು ಇಡೀ ದೇಶದ ಅಲ್ಪಸಂಖ್ಯಾತರನ್ನು ಬೆದರಿಸಿ “ಅವರಿಗೆ ಅವರ ಸ್ಥಾನವನ್ನು ನೆನಪಿಸಲು” ಬಳಸಲಾಗುತ್ತಿದೆ. ಮೇಲೆ ಹೇಳಲಾದ ವಿಡೀಯೊದಲ್ಲೂ ಕೂಡಾ ಅದನ್ನು ಖಂಡಿಸಿದವರಿಗಿಂತಲೂ ಅದನ್ನು ಸುತ್ತಿ ಬಳಸಿ ಸಮರ್ಥಿಸಿಕೊಳ್ಳುವವರೇ ಹೆಚ್ಚಿರುವುದು ಅಚ್ಚರಿಯೇನಲ್ಲ.

ಹಿಂಸೆಯ ಪರವಾಗಿ ಯಾವುದೇ ನಾಚಿಕೆಯಿಲ್ಲದೆ ಮಾತನಾಡಬಲ್ಲ, ಅದನ್ನು ಸಮರ್ಥಿಸಿಕೊಳ್ಳಬಲ್ಲವರು ನಮ್ಮ ನಿಮ್ಮ ಕುಟುಂಬಗಳಲ್ಲೇ ಇದ್ದಾರೆ. ನಮ್ಮ ಅಕ್ಕಪಕ್ಕದಲ್ಲೇ ಇದ್ದಾರೆ. ಇಂದು ಯಾವುದೇ ಮತಾಂಧ ವ್ಯಕ್ತಿ ನಾನು ಕೋಮುವಾದಿ, ಅಲ್ಪಸಂಖ್ಯಾತ ವಿರೋಧಿ, ನಾನು ಮರ್ಯಾದ ಹತ್ಯೆಯ ಪರ ಎಂದು ಬೋರ್ಡ್‌ ತಗುಲಿಸಿಕೊಂಡು ತಿರುಗುವುದಿಲ್ಲ. ಅವನು ನಮ್ಮ ನಿಮ್ಮಂತೆಯೇ ಒಬ್ಬ ನಿರುದ್ಯೋಗಿಯೋ, ಬ್ಯಾಂಕ್‌ ಉದ್ಯೋಗಿಯೋ, ಶಿಕ್ಷಕನೋ ಇನ್ನೇನೋ ಆಗಿರುತ್ತಾನೆ, ಸಮಯ ಬಂದಾಗ ಗುಂಪಿನಲ್ಲಿ ಅವನೊಳಗಿರುವ ಕೋಮುವಾದಿ ಎದ್ದು ನಿಲ್ಲುತ್ತಾನೆ. ಮತ್ತು ಈಗೀಗ ಕೋಮು ಗಲಭೆಯೆಂದರೆ ಬೀದಿಗಿಳಿದು ಕಲ್ಲು ಹೊಡೆಯುವ ಮಾದರಿಯದ್ದಲ್ಲ. ಇಂದು ಅಂತಹ ಗಲಭೆಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಎಬ್ಬಿಸಲಾಗುತ್ತದೆ. ಗುಂಪುಗುಂಪಾಗಿ ವ್ಯಕ್ತಿಗಳ ಮೇಲೆ ಗುಂಪು ಹಲ್ಲೆ ಮಾಡಲಾಗುತ್ತದೆ, ಎಲ್ಲೋ ನಡೆದ ಗುಂಪು ಹಲ್ಲೆಯ ವಿಡೀಯೊಗಳಿಗೆ ಲಜ್ಜೆಯಿಲ್ಲದೆ ಸಮರ್ಥನೆ ನೀಡಲಾಗುತ್ತದೆ. ಹೌದು ನಮ್ಮ ಭಾರತ ಬದಲಾಗಿದೆ.

ಜರ್ಮನಿಯ ಹಾಲೊಕಾಸ್ಟ್‌ ಎನ್ನುವುದು ಇದ್ದಕ್ಕಿದ್ದಂತೆ ನಡೆದಿದ್ದಲ್ಲ, ಕ್ಯಾಂಪುಗಳನ್ನು ಕಟ್ಟುವ ಮೊದಲು ಜನರನ್ನು ಮಸಿನಲ್ಲಿ ದ್ವೇಷದ ಬೀಜಗಳನ್ನು ಬಿತ್ತಲಾಗಿತ್ತು. ನಾವು ಅವರು ಎನ್ನುವ ನರೇಟಿವ್‌ಗಳನ್ನು ಸಾಧ್ಯಂತವಾಗಿ ಕಟ್ಟಲಾಗಿತ್ತು. ಇಂದು ಭಾರತದಲ್ಲಿಯೂ ಅದೇ ಆಗುತ್ತಿದೆ. ಬಲಪಂಥೀಯ ರಾಜಕಾರಣ ಕಾಲೇಜುಗಳಲ್ಲಿ ಸ್ಥಳ ಪಡೆಯುತ್ತಿದೆ. ಕಾಲೇಜುಗಳ ಒಳಗೇ ಇತಿಹಾಸದ ಪ್ರಾಧ್ಯಾಪಕರಿಗೆ ಹೊಸ ಬಗೆಯ “ರೋಚಕ ಇತಿಹಾಸ”ವನ್ನು “ಕಲಿಸಲಾಗುತ್ತಿದೆ.” ಇದೆಲ್ಲ ಹೆಚ್ಚಿಕೊಳ್ಳಲು ಕಾರಣ ದುಷ್ಟರ ಕಾರ್ಯಾಚರಣೆಯಲ್ಲ, ಬದಲಿಗೆ ಸಜ್ಜನರ ಮೌನ. ಈಗ ಇದು ತರಗತಿಗಳಿಗೆ ಹಬ್ಬಿದೆ, ಬೀದಿಗಳಿಗೆ ಹಬ್ಬಿದೆ, ಊರುಗಳಿಗೆ ಹಬ್ಬಿದೆ. ಆದರೂ ಜನರು “ಏನೂ ನಡೆದಿಲ್ಲವೆನ್ನುವಂತೆ” ಆರಾಮಾಗಿದ್ದಾರೆ. ಸದ್ಯದ ಆತಂಕವೆಂದರೆ ಅದೇ ಆಗಿದೆ. ಸದಾ ಮೂಲೆ ತಳ್ಳಲ್ಪಟ್ಟ ವ್ಯಕ್ತಿಗೆ ಇನ್ನೊಮ್ಮೆ ಮೂಲೆಗೆ ತಳ್ಳಲ್ಪಡುವುದರಲ್ಲಿ ಏನೂ ವಿಶೇಷ ಎನ್ನಿಸುವುದಿಲ್ಲ. ಆದರೆ ಇದುವರೆಗೂ ಸೆಕ್ಯುಲರ್‌ ಭಾರತ ಕರುಣಿಸಿದ ಸವಲತ್ತುಗಳು, ಜನರು ನಾಳೆ ದೇಶವೆನ್ನುವುದು ಮತಾಂಧರ ನೆಲೆವೀಡಾದಾಗ ಅಭಿವೃದ್ಧಿಯ ರುಚಿಯನ್ನುಂಡ ಜನರೂ ಕೂಡಾ ಅವರ ಗುರಿಯಾಗಲಿದ್ದಾರೆ. ಗಲಭೆ ಪೀಡಿತ ದೇಶದಲ್ಲಿ ತಿನ್ನಲೂ ಅನ್ನವೂ ಇರುವುದಿಲ್ಲ. ಆಗ ಬೀದಿಗಿಳಿದರೆ ಏನೂ ಸಿಗುವುದಿಲ್ಲ. ನಾವು ಕಲಿಯುವುದಾದರೆ ಅಕ್ಕಪಕ್ಕದ ದೇಶಗಳಲ್ಲೇ ನಮಗೆ ಪಾಠವಿದೆ. ಅದು “ನಾವು ಕಲಿಯುವದಾದರೆ ಮಾತ್ರ.”

Related Articles

ಇತ್ತೀಚಿನ ಸುದ್ದಿಗಳು