Friday, April 18, 2025

ಸತ್ಯ | ನ್ಯಾಯ |ಧರ್ಮ

ಶೀಲ-ಅಶ್ಲೀಲಗಳ ನಡುವೆ ಮಾನವ ದೇಹ

ಪಾಂಡ್ಯರ ಅರಮನೆಯಲ್ಲಿ ತನ್ನ ಗಂಡ ಕೋವಲನ್‌ನನ್ನು ಚಿನ್ನದ ಚಿಲುಂಬು (ಗಗ್ಗರ) ಕದ್ದ ಒಬ್ಬ ಕಳ್ಳ ಎಂದು ಅಪವಾದ ಹೊರಿಸಿ ವಿಚಾರಣೆ ಮಾಡದೆ ತಲೆ ಕಡಿದಾಗ, ಇದಕ್ಕೆ ಪ್ರತಿಕಾರವನ್ನು ತೀರಿಸಲು ಅವಳು ಪಾಂಡ್ಯರ ಅರಮನೆಗೆ ಬರುತ್ತಾಳೆ. ಪ್ರಕರಣವನ್ನು ಸುಳ್ಳು ಅಪವಾದ ಎಂದು ಸಾಬೀತು ಮಾಡಿದ ಕನ್ನಗಿಯು ತನ್ನ ಒಂದು ಮೊಲೆಯನ್ನು ಕಿತ್ತು ಮಧುರೈ ಪಟ್ಟಣದ ಕಡೆಗೆ ಎಸೆದು ಇಡೀ ನಗರವನ್ನು ಭಸ್ಮ ಮಾಡುತ್ತಾಳೆ. ನಂತರ ಆ ಪಟ್ಟಣವನ್ನು ತೊರೆದು ಕೋಡಂಗಲ್ಲೂರಿಗೆ ಬಂದು ಭದ್ರಕಾಳಿಯಲ್ಲಿ ಲೀನವಾಗುತ್ತಾಳೆ. ಇದು ಚಿಲಪ್ಪದಿಕಾರಂನ ‘ಕತೆ.ʼ

ಯಾಕೆ ಮೊಲೆಯನ್ನೇ ಕಿತ್ತು, ಅದನ್ನೇ ಬೆಂಕಿಯ ಉಂಡೆಗಳನ್ನಾಗಿ ಮಾಡಿ ಬೌದ್ಧ ಮಹಿಳೆಯೊಬ್ಬಳು ಅರಸನ ಅನ್ಯಾಯಕ್ಕೆ ಪ್ರತಿರೋಧವನ್ನು ತೋರಿಸಿದಳು? ಯಾಕೆ ಮೊಲೆಯೇ ಆಗಬೇಕಿತ್ತು?

ಮೊಲೆ ಮತ್ತು ಯೋನಿಯನ್ನು ಲೈಂಗಿಕತೆಗೆ ಸೀಮಿತವಾಗಿ ನೋಡುವ ವ್ಯವಸ್ಥೆಯಲ್ಲಿ ಅವುಗಳ ಬಗ್ಗೆ ಬರೆಯುವುದು ಒಂದು ಅನೈತಿಕವಾಗುತ್ತದೆ. ಹಾಗಾಗಿ, ಇವುಗಳನ್ನು ಸಾಂಕೇತಿಕವಾಗಿ ಇಟ್ಟುಕೊಂಡು ಕವಿತೆ ಬರೆಯುವುದನ್ನು ಗಂಡಾಳ್ವಿಕೆಯ ಸಮಾಜ ಒಪ್ಪುವುದಿಲ್ಲ. ಮೊಲೆಯಿಂದಲೇ ಕನ್ನಗಿ ಮಧುರೈಯನ್ನು ಸುಟ್ಟದ್ದು ಮತ್ತು ಮೊಲೆ-ಯೋನಿಗಳೆಂಬ ಪದಗಳನ್ನು ಬಳಸಿ ಪ್ರತಿರೋಧದ ಕವನ ಬರೆಯುವುದು ಒಂದೇ ದಾಟಿಯಲ್ಲಿ ಬರುತ್ತವೆ.

ಮೊಲೆಯನ್ನು ಲೈಂಗಿಕ ಕ್ರಿಯೆಯ ಒಂದು ಅಂಗವಾಗಿ ಮಾತ್ರ ನೋಡುವಾಗ, ಅದರ ಅದು ಬಲವಾಗಿ ಪ್ರತಿಪಾದಿಸುವ ತಾಯ್ತನವನ್ನು ಮರೆಯುತ್ತದೆ, ಬಹುಶಃ ಮೊಲೆ ಹಾಲು ಕುಡಿಯುವುದನ್ನು ನಿಲ್ಲಿಸಿದ ತಕ್ಷಣ ಗಂಡಸು (ಗಂಡಸಿನ ಮನಸ್ತಿತಿಯ ಹೆಂಗಸು) ಮೊಲೆಗಳಿಗಿರುವ ತಾಯ್ತನದ ಸಂಕೇತವನ್ನು ಮರೆಯುತ್ತಾನೆ. ಅದೊಂದು ಲೈಂಗಿಕ ಕ್ರಿಯೆಗೆ ಸೀಮಿತವಾದ ಅಂಗ ಎಂಬಂತೆ ಪರಿಗಣಿಸುತ್ತಾನೆ. ಹೀಗಾಗಿ, ಎದೆ ಸೀಳು ಕಾಣಿಸುವ ಫೋಟೋಗಳಿಗೆ, ದೊಡ್ಡ ಮೊಲೆಗಳ ಹೆಂಗಸರಿಗೆ ಅವನು/ಳು ಅಶ್ಲೀಲವಾದ ಟೀಕೆಗಳನ್ನು ಮಾಡುತ್ತಾನೆ.

ಮೊಲೆಗಳ, ಯೋನಿಗಳ ಆರೋಗ್ಯ ಸಮಸ್ಯೆಗಳ ಬಗ್ಗೆ ಗಂಡಸಿಗೆ ಈಗಲೂ ಅರಿವಿಲ್ಲ. ಋತುಸ್ರಾವ ಯಾಕಾಗುತ್ತದೆ, ಹೇಗಾಗುತ್ತದೆ, ಆದಾಗ ಮಾನಸಿಕವಾಗಿ-ದೈಹಿಕವಾಗಿ ಹೆಂಗಸರಿಗೆ ಏನಾಗುತ್ತದೆ ಎಂಬ ಕನಿಷ್ಟ ತಿಳುವಳಿಕೆಗಳೂ ಗಂಡಸರಿಗೆ ಇಲ್ಲ. ಇವನು ತನ್ನ ಎಂದಿನ ಸೆಕ್ಸ್‌ ಡಿಪ್ರೈವ್‌ಡ್‌ ಮನಸ್ಥಿತಿಯನ್ನು ತೋರಿಸುತ್ತಾನೆ.

ಹಾಲು ಸ್ರವಿಸದ ಮೊಲೆಗಳಿರುವ ಗಂಡಸರು ಈ ಬಗ್ಗೆ ಬರೆಯುವುದು ಕೂಡ ಅವರ ಸೀಮಿತ ಅರಿವಿನ ಒಳಗೇ ಇರುತ್ತದೆ. ಹಾಗಾಗಿ, ನನಗೂ ಅದನ್ನು ಹೆಂಗಸರ ದೃಷ್ಟಿಕೋನದಲ್ಲಿ ಬರೆಯುವುದು ಸಾಧ್ಯವಿಲ್ಲ, ಚಾರಿತ್ರಿಕ ಅಂಶಗಳನ್ನು ಇಟ್ಟುಕೊಂಡಷ್ಟೇ ಇದನ್ನು ನೋಡಲು ಸಾಧ್ಯ.

ಇನ್ನು, ಈ ಅಂಗಗಳ ಬಗ್ಗೆ ಬರೆಯುವಾಗ ಸಂಸ್ಕೃತದ ಪದಗಳನ್ನು ಬಳಸಿದರೆ ಕವನ, ಕತೆಗಳಿಗೆ ಒಂದು ದೊಡ್ಡ ತೂಕ ಬರುತ್ತದೆ. ಮೊಲೆಗೆ ಸ್ತನ ಎಂದು ಬರೆದಿದ್ದರೆ ಇಷ್ಟು ವಿರೋಧ ಬರುತ್ತಿರಲಿಲ್ಲ ಎನಿಸುತ್ತದೆ. ಕಾಳಿದಾಸನ ಶ್ಯಾಮಲ ದಂಡಕಂನ ʼ ಕುಚೋನ್ನತೆ ಕುಂಕುಮ ರಾಗ ಶೋಣೆ…..ʼ ಪದ್ಯವನ್ನು ರಾಜ್‌ಕುಮಾರ್‌ ಹಾಡಿದ್ದು, ಎಂಎಸ್‌ ಸುಬ್ಬಲಕ್ಷಿ “ಕುಚ ಚೂಚುಕ ಕುಂಕುಮತೋ…” ಎಂದು ಹಾಡಿದ್ದು ಸಮಸ್ಯೆ ಆಗಲ್ಲ. ಅವೆಲ್ಲಾ ಸಂಸ್ಕೃತದಲ್ಲಿವೆ. ಅದೇ ಪದಗಳು ತುಳು, ಕನ್ನಡದಲ್ಲಿ ಬಂದಾಗ ಸಮಸ್ಯೆ ಸುರುವಾಗುತ್ತದೆ.

ನೀವು ಯಾವ ಭಾಷೆಯಲ್ಲಿ ಬರೆದರೂ ಅದು ಅದುವೇ….! ಶೀಲ ಮತ್ತು ಅಶ್ಲೀಲ ಎಂಬುದನ್ನು ಭಾಷೆಯ ಮೂಲಕ ನಿರ್ಧರಿಸುವುದೂ ಒಂದು ಘನಭಯಂಕರ ಜಾತಿವಾದವೇ.

ಇಡೀ ಭಾರತದಲ್ಲಿ ಹಿಂದೊಮ್ಮೆ ಹೀಗಿರಲಿಲ್ಲ. ಶಿಶ್ನ, ಮೊಲೆ ಮತ್ತು ಯೋನಿಯನ್ನು ಆರಾಧಿಸುವ ಪರಂಪರೆಗಳು ಇಡೀ ಭಾರತವನ್ನು ವ್ಯಾಪಿಸಿದ್ದವು. ಆದರೆ ಕಾಲಾಂತರದಲ್ಲಿ ಯೋಗ ಸಾಧನೆಯ ಮಾರ್ಗದಲ್ಲಿ ಹೋದ ತಾಂತ್ರಿಕರು ಸಂಭೋಗವನ್ನು ಯೌಗಿಕ ಕ್ರಿಯೆಗಳ ಒಂದು ಆಚರಣೆಯಾಗಿ ನೋಡಿದರು. ಹಾಗಾಗಿ, ಲಜ್ಜಾ ಭಗವತಿಯಂತಹ ತಾವರೆಯ ತಲೆಯ, ತೆರೆದ ಯೋನಿಯ, ಕೆಲವೊಮ್ಮೆ ಪ್ರಸವಿಸುವ ದೇವತೆಗಳನ್ನು ಆರಾಧಿಸಿದರು. ಫಲವಂತಿಕೆಯ ದೇವತೆ ಎಂದು ಕೆರೆ, ಗದ್ದೆಗಳಲ್ಲಿ ಇವುಗಳ ಮೂರ್ತಿಗಳನ್ನು ನೆಟ್ಟರು.

ಭಾರತದ ಬಹುತೇಕ ಹೆಣ್ಣು ದೇವತೆಗಳು ತೆರೆದ ಮೊಲೆಗಳನ್ನು ತೋರಿಸುವ ದೇವತೆಗಳು. ಅದು, ಇಂದು ಭಗವತಿ ಎಂದು ಆರಾಧಿಸುವ ಭದ್ರಕಾಳಿಯೂ ಇರಬಹುದು, ದುರ್ಗಾ ಪರಮೇಶ್ವರಿ-ರಾಜರಾಜೇಶ್ವರಿಯರಾಗಿರುವ ಹಿಂದಿನ ಕೊಟ್ಟವೈ, ಬೌದ್ಧರ ತಾರಾ ಭಗವತಿಯೇ ಇರಬಹುದು. ಇವರೆಲ್ಲರೂ ತೆರೆದ ಮೊಲೆಯ ದೇವತೆಗಳು!
ಹೆಣ್ಣಿನ ಮೊಲೆಗಳನ್ನು ತಾಯ್ತನದ ಸಂಕೇತವಾಗಿ ಸಂಸ್ಕೃತಿಗಳು ನೋಡಿವೆ. ಗಂಡಸಿನ ಮೀಸೆ, ಹೆಂಗಸಿನ ಮೊಲೆಗಳು ಇಬ್ಬರ ಲಿಂಗಗಳನ್ನು ಪ್ರತ್ಯೇಕಿಸುವ, ಕಣ್ಣಿಗೆ ಗೋಚರವಾಗುವ ಅಂಗಗಳು. ಯೋನಿ ಮತ್ತು ಶಿಶ್ನಗಳನ್ನು ತಾಂತ್ರಿಕರು ಫಲವಂತಿಕೆಯ ಮತ್ತು ಲೈಂಗಿಕ ಅಂಗಗಳಾಗಿ ಪರಿಗಣಿಸಿದರು, ಆದರೆ ಅವುಗಳ ಬಗ್ಗೆ ಅಶ್ಲೀಲತೆಯ ಲೇಬಲ್‌ ಅಂಟಿಸಲಿಲ್ಲ. ಹಾಗಾಗಿ, ಶಿಶ್ನವು ವಜ್ರವಾಗಿಯೂ, ಯೋನಿಯು ಪುಷ್ಪವಾಗಿಯೂ ವಜ್ರಾಯಾನ ಮತ್ತು ಉಳಿದ ಮಧ್ಯಕಾಲೀನ ತಾಂತ್ರಿಕ ಪಂಥಗಳಲ್ಲಿ ಪರಿಗಣಿಸಲ್ಪಟ್ಟಿದೆ. ಆದರೆ ಮೊಲೆ ಮತ್ತು ಮೀಸೆಗಳು ಕಣ್ಣಿಗೆ ಗೋಚರವಾಗುವ ಅಂಗಗಳಾದ್ದರಿಂದ ಇವು ಮನುಷ್ಯನನ್ನು ಎರಡು ಲಿಂಗಗಳಾಗಿ ಪ್ರತ್ಯೇಕಿಸುತ್ತವೆ.
ತುಳುನಾಡಿನಲ್ಲಿ ದೈವವೊಂದು ಹೆಣ್ಣೂ ಹೌದು, ಗಂಡೂ ಹೌದು. ಆ ದೈವ ತಾಯಿಯೂ ಹೌದು, ಮಾವನೂ ಹೌದು. ಆದರೆ ತಂದೆ ಅಲ್ಲ! ಇಲ್ಲಿ ಜನನಕ್ಕೆ ಕಾರಣನಾದ ಗಂಡಿಗೆ ಬೆಲೆ ಇಲ್ಲ. ಮಾತೃಮೂಲೀಯ ಕುಟುಂಬ ವ್ಯವಸ್ಥೆಯಲ್ಲಿ ಹೆಂಡತಿಯ ಮನೆಗೆ ಬರುವ ಗಂಡ ಅವಳ ಜೊತೆಗೆ ಸಂಪರ್ಕ ಹೊಂದಿ ಮಕ್ಕಳಾದ ಮೇಲೆ ಆತ ಅಮುಖ್ಯನಾಗುತ್ತಾನೆ.

ಮರುಮಕ್ಕತ್ತಾಯಂನಲ್ಲಿ ಅರಮನೆಗಳಲ್ಲಿ ಅರಸಿಯರ ಮನೆಯೇ ಬೇರೆ, ಅರಸನ ಮನೆಯೇ ಬೇರೆ, ಅರಸರ ಅರಮನೆಗೆ ಅರಸಿಯೂ ಬರುವುದಿಲ್ಲ. ಅರಸಿಯ ಮನೆಯಲ್ಲಿ ಹೆಂಗಸರಷ್ಟೇ ಇರುತ್ತಾರೆ. ಇವರ ಜೊತೆಗೆ ʼಸಂಬಂಧಂʼ (ಮದುವೆ ಅಲ್ಲ!) ಇಟ್ಟುಕೊಂಡ ನಂತರ ಆತ ಅಲ್ಲಿಯೇ ಉಳಿದುಕೊಳ್ಳುವಂತಿಲ್ಲ. ಕ್ಷೇತ್ರವಷ್ಟೇ ಮುಖ್ಯ, ಬೀಜವಲ್ಲ. ಹಾಗಾಗಿ ಹೆಂಗಸರ ಅರಮನೆಗಳ ಒಳಗೆ ಅನೇಕ ಸಣ್ಣ ಸಣ್ಣ ಕೋಣೆಗಳು ಇರುತ್ತವೆ. ಇಲ್ಲಿ ಹುಟ್ಟಿದ ಗಂಡು ಮಕ್ಕಳನ್ನು ಹನ್ನೆರಡು ವರ್ಷಗಳಾದ ಮೇಲೆ ಮನೆಯಿಂದ ಪ್ರತ್ಯೇಕವಾಗಿ ಕಟ್ಟಲಾಗಿರುವ ಹಾಸ್ಟೆಲ್‌ನಂತಹ ಕಾಟೆಜ್‌ ಗಳಿಗೆ ಕಳುಹಿಸುತ್ತಾರೆ. ಊಟಕ್ಕೆ ಮಾತ್ರ ಬಂದು ಊಟ ಮಾಡಿ ಜಾಗ ಖಾಲಿ ಮಾಡಬೇಕು. ಇಂತಹ ಹಾಸ್ಟೆಲ್‌ಗಳನ್ನು ಅರಮನೆಗಳ ಸುತ್ತಮುತ್ತ ನೋಡಬಹುದು.

ಇಲ್ಲಿ ಗಂಡ ಮುಖ್ಯ ಅಲ್ಲ, ಹುಟ್ಟಿದ ಮಕ್ಕಳಿಗೆ ತಾಯಿಯ ಅಣ್ಣ/ತಮ್ಮನಾದ ಮಾವನೇ ಮುಖ್ಯ. ಮಾವನ ನಂತರ ತರವಾಡಿನ ಆಡಳಿತ ಅಳಿಯನಿಗೆ ಹೋಗುತ್ತದೆ. ಮಾವ ಅಳಿಯ/ಸೊಸೆಗೆ ರಕ್ಷನೆ ನೀಡುತ್ತಾನೆ.

ಒಂದು ದೈವ ತಾಯಿಯಾಗಿಯೂ, ಮಾವನಾಗಿಯೂ ರಕ್ಷಣೆಯನ್ನು ನೀಡುತ್ತದೆ. ಹಾಗಾಗಿ ಅದಕ್ಕೆ ಮೀಸೆ ಇರುವ ಮುಖವಾಡವೂ, ದಪ್ಪ ಮೊಲೆಗಳಿರುವ ಕಂಚಿನ (ಮರದ) ಮೊಲೆಕಟ್ಟುಗಳೂ ಇರುತ್ತವೆ. ಭಗವತಿಗೆ ಕಟ್ಟುವಾಗ ದುಂಡನೆಯ ಮೊಲೆಗಳನ್ನು ಇಡುತ್ತಾರೆ. ರೂಪ ನೋಡಲು ಭಯಾನಕವಾಗಿ ಕಂಡರೂ, ಅವಳು ತಾಯಿಯೇ! ಇಲ್ಲಿ ಮೊಲೆ ಎಂಬುದು ಅಸಹ್ಯ ಅಲ್ಲ, ಮೊಲೆ ಎಂಬುದು ತಾಯ್ತನ!

ಒಂದೊಮ್ಮೆ ರವಿಕೆಯನ್ನೇ ಹಾಕದೆ ಸೀರೆಯನ್ನು ಉಡುತ್ತಿದ್ದ ದ. ಭಾರತೀಯರು (ಬಹುಶಃ ಇಡೀ ಭಾರತದಲ್ಲಿ), ಮೊಲೆಗಳನ್ನು ಮುಚ್ಚುತ್ತಿದ್ದದ್ದು ಆಭರಣಗಳಿಂದಲೇ ಹೊರತು ಬಟ್ಟೆಯಿಂದಲ್ಲ. ಸೀರೆಯ ಸೆರಗನ್ನು ಅದರ ಮೇಲೆ ಎಳೆದುಕೊಳ್ಳುತ್ತಿದ್ದರು. ಮನೆಗಳಲ್ಲಿ ದೇಹದ ಮೇಲ್ಭಾಗಕ್ಕೆ ಬಟ್ಟೆಗಳನ್ನೇ ಧರಿಸುತ್ತಿರಲಿಲ್ಲ. ವಸಾಹತು ಆಡಳಿತದ ಕಾಲದಲ್ಲಿ ವಿಕ್ಟೋರಿಯನ್‌ ನೈತಿಕಯ ಭಾಗವಾಗಿ ರವಿಕೆಗಳನ್ನು ಧರಿಸಲು ಆರಂಭಿಸಿದರು. ಅರಸು ಮನೆತನದ ಮಹಿಳೆಯರೂ ಒಂದೊಮ್ಮೆ ಸ್ತನಗಳನ್ನು ಮುಚ್ಚದೆ ಬಟ್ಟೆಗಳನ್ನು ಧರಿಸುತ್ತಿದ್ದರು. ಮೈತುಂಬಾ ಬಟ್ಟೆ ಹಾಕಿಕೊಳ್ಳುತ್ತಿದ್ದ ಪ್ರೆಂಚ್‌, ಡಚ್‌, ಪೋರ್ಚುಗೀಸರು, ಇಂಗ್ಲೀಪರ ಕಾಲದಲ್ಲಿ ರವಿಕೆಯನ್ನು ಧರಿಸಲು ಆರಂಭಿಸಿದರು.

ಫೋಟೋ: ಇಕ್ಕಾವು, ವಿಜಯಮ್ಮ ತಂಬೂರಾಟ್ಟಿ (1930s) ಕೊಚ್ಚಿ ಅರಮನೆ

ಹತ್ತೊಂಬತ್ತನೇ ಶತಮಾನದಲ್ಲಿ ಕೇರಳದಲ್ಲಿ ತಿರುವಂಕೂರು ರಾಜರು ನೂರಾರು ರೀತಿಯ ತೆರಿಗೆಗಳನ್ನು ಜಾರಿಗೆ ತಂದರು. ತೆರಿಗೆ ಸಂಗ್ರಹಿಸುವ ಅಧಿಕಾರಿಗಳಾದ ʼಪೆರುಂಬನ್‌ʼಗಳಿಗೆ ಬೆತ್ತದ ದಂಡಗಳನ್ನು ಕೊಟ್ಟು ತೆರಿಗೆ ಸಂಗ್ರಹ ಮಾಡಲು ಊರೂರಿಗೆ ಕಳುಹಿಸುತ್ತಿದ್ದರು. ಅವರು ಗಂಡಸರಿಗೆ ತಲಕ್ಕರ-ತಲಪ್ಪಣ (ತಲೆಗೆ ಹಣ), ಹೆಂಗಸರಿಗೆ ಮುಲಕ್ಕರ, ದನಗಳಿಗೆ, ಗುಡಿಸಲಿಗೆ, ಮೀಸೆ ಹೊತ್ತ ಗಂಡಸರ ಮೀಸೆಗೆ, ಹಬ್ಬಗಳನ್ನು ಮಾಡಿದರೆ… ಹೀಗೆ ಸಾಲು ಸಾಲು ತೆರಿಗೆಗಳು. ಇದರಿಂದ ಜನರು ಬೇಸತ್ತು ಹೋಗಿದ್ದರು. ಬ್ರಾಹ್ಮಣರಿಗೆ ಮಾತ್ರ ಎಂದಿನಂತೆ ಇದರಿಂದ ವಿನಾಯಿತಿ ಇತ್ತು.

(ತಲಕ್ಕರ – ತಲೆಗೆ ಕರ ಎಂಬುದನ್ನು ಇಂಗ್ಲೀಷಿನಲ್ಲಿ ಪೋಲ್‌ ಟ್ಯಾಕ್ಸ್‌ ಎಂದು ಕರೆಯುತ್ತಾರೆ. ಪೋಲ್‌ ಎಂದರೆ ತಲೆ ಎಂದು ಅರ್ಥ. ಹಾಗಾಗಿ, ತಲೆಗಳನ್ನು ಲೆಕ್ಕ ಹಾಕುವುದೇ ಮತದಾನ, ಪೋಲ್‌ (Poll).)

ಟಿಪ್ಪುವಿನ ಕಾಲದಲ್ಲಿ ಮೊಲೆ ತೋರಿಸಿಕೊಂಡು ಓಡಾಡುವುದನ್ನು ಅವನು ನಿಷೇಧಿಸಲು ನೋಡಿದ. ಯಾಕೆಂದರೆ, ಮುಸಲ್ಮಾನನಾಗಿದ್ದ ಇವನಿಗೆ ಹೆಂಗಸರು ಬರಿಮೈಯಲ್ಲಿ ಇರುವುದು ಹರಾಮ್‌ ಆಗಿತ್ತು. ಇದನ್ನು ನಿಷೇಧಿಸಿದಾಗ ತಿರುಗಿ ಬಿದ್ದವರು ಮೇಲ್ಜಾತಿಗಳು.

ಇದೇ ಮೇಲ್ಜಾತಿಗಳ ಜನರು ಬ್ರಿಟೀಷರ ಹೆಂಗಸರಂತೆ ಮೈಮುಚ್ಚಿಕೊಳ್ಳಲು ರವಿಕೆ ಹಾಕಿಕೊಳ್ಳಲು ಆರಂಭ ಮಾಡಿದಾಗ, ಆ ರೀತಿ ಕೆಳಜಾತಿಗಳು ಮಾಡುವುದನ್ನು ನಿಷೇಧಿಸಿದರು. ಮೊಲೆಗಳನ್ನು ಮುಚ್ಚಿಕೊಳ್ಳುವ ಹಕ್ಕು, ನೈತಿಕತೆ ಇರುವುದು ಮೇಲ್ಜಾತಿಗಳಿಗೆ ಮಾತ್ರ, ಶೂದ್ರ ಮತ್ತು ಪಂಚಮರಿಗೆ ಅಲ್ಲ! ಹೀಗಾಗಿ ಈಳವ, ನಾಡರ್‌ ಮೊದಲಾದ ಕೆಳಜಾತಿಗಳೆಂದು ಪರಿಗಣಿಸಲ್ಪಟ್ಟ ಧಮನಿತ ಸಮುದಾಯದ ಮಹಿಳೆಯರಿಗೆ ಈ ಅವಕಾಶ ಇರಲಿಲ್ಲ. ಇನ್ನು ಇವರಿಗೂ ಕೆಳಗಿದ್ದ ದಲಿತರ ಹೆಂಗಸರ ಪರಿಸ್ಥಿತಿಯ ಕತೆಯೇ ಬೇರೆ. ಹೀಗಾಗಿ ಅವರ ಮೇಲೆ ಉನ್ನತ ಜಾತಿಗಳ ತಂಬೂರಾನ್‌ಗಳು ತೆರಿಗೆ ಹಾಕಿ, ರವಿಕೆ ಹಾಕುವುದನ್ನೂ ನಿಷೇಧಿಸಿದರು.
ಮೊಲೆಯ ಗಾತ್ರಕ್ಕೆ ಅನುಗುಣವಾಗಿ ತೆರಿಗೆ ಹಾಕುತ್ತಿದ್ದರೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಗಂಡಸಿಗೆ ತಲೆಕ್ಕರ ಮಾಡಿದಂತೆ, ಹೆಂಗಸಿಗೆ ಗಂಡಸಿಗಿಂತ ಪ್ರತ್ಯೇಕವಾಗಿರುವ ಮೊಲೆಯಿಂದಾಗಿ ಮೊಲಕ್ಕರ ತಂದರು. ಇದನ್ನು ಮೇಲ್ಜಾತಿಯ ನಾಯರ್‌ಗಳ ಕೌನ್ಸಿಲ್‌ ಇದನ್ನು ಜಾರಿಗೆ ತರುತ್ತದೆ.

ಆದರೆ, ಮೇಲ್ಜಾತಿಯ ಅರಸು ಮನೆತನಗಳ ತಂಬೂರಾಟ್ಟಿ ಅಜ್ಜಿಗಳು ಮಾತ್ರ ತಮ್ಮ ಹಿಂದಿನ ದಿನಗಳಂತೆ ರವಿಕೆಗಳನ್ನು ಹಾಕದೆ ಸ್ತನಗಳನ್ನು ತೋರಿಸಿಕೊಳ್ಳುತ್ತಿದ್ದರು.
ಕೇರಳದ ಚೇರ್ತಳದಲ್ಲಿ ನಡೆದದ್ದು ಎಂದು ಹೇಳಲಾಗುವ ‘ನಂಗೇಲಿʼ ಯ ಮೌಖಿಕ ಕತೆಯಲ್ಲಿ ನಂಗೇಲಿ ತನ್ನ ಮನೆಗೆ ತೆರಿಗೆ ಸಂಗ್ರಹಿಸಲು ಬಂದ ಅಧಿಕಾರಿಗೆ ತನ್ನ ಮೊಲೆಗಳನ್ನು ಕತ್ತರಿಸಿ ಬಾಲೆ ಎಲೆಯಲ್ಲಿ ಸುತ್ತಿ ಕೊಡುತ್ತಾಳೆ. 19 ನೇ ಶತಮಾನದಲ್ಲಿ ನಡೆದಿದೆ ಎಂದು ನಂಬಲಾಗಿರುವ ಈ ಕತೆಯ ಐತಿಹಾಸಿಕ ಸತ್ಯಾಸತ್ಯತೆಯನ್ನು ಬದಿಗಿಟ್ಟು ನೋಡಿದರೂ, ಈ ಕತೆ ತಿರುವಂಕೂರು ರಾಜರು ಶೂದ್ರ ಮತ್ತು ಪಂಚಮರೆಂದು ಪರಿಗಣಿಸಲ್ಪಟ್ಟ ಸಮುದಾಯಗಳ ಮೇಲೆ ಹೇರಿದ ಕರಾಳದ ತೆರಿಗೆಯ ವಿರುದ್ಧ ಜನರು ತೋರಿದ ಪ್ರತಿರೋಧವನ್ನು ತೋರಿಸುತ್ತದೆ. (ಇದು ನಡೆದಿದೆ ಎಂದು ನಂಬಲಾಗುವ ಮುಲಚ್ಚಿಪರಂಬು ಎಂಬ ಸ್ಥಳಕ್ಕೆ ಮೊಲೆಯಿಂದಲೇ ಹೆಸರು ಬಂತೇ ಎಂಬುದು ಎಂಬುದು ಬೇರೆಯೇ ಪ್ರಶ್ನೆ!)

ನಂಗೇಲಿಯ ಈ ಪ್ರತಿರೋಧ ಆ ಕಾಲದ ಹೆಣ್ಣು ಮಕ್ಕಳು ಅರಸೊತ್ತಿಗೆ ಮತ್ತು ಭೂಮಾಲೀಕರ ವಿರುದ್ಧದ ಹೋರಾಟವಾಗಿತ್ತು. ಇಲ್ಲಿ ಹೆಂಗಸರು ತಮ್ಮ ಮೊಲೆಗಳನ್ನು ತೋರಿಸುವುದು ಅಸಭ್ಯ, ಅಶ್ಲೀಲ ಎಂದು ಭಾವಿಸಲಿಲ್ಲ. ಅವರು ಹೋರಾಡಿದ್ದು, ಉಳಿದ ಮೇಲ್ಜಾತಿಗಳ ಹೆಂಗಸರಿಗೆ ರವಿಕೆ ಹಾಕಿಕೊಳ್ಳಲು ಇದ್ದ ಸ್ವಾತಂತ್ರ ನಮಗೂ ಬೇಕೆಂಬ ಹೋರಾಟ, ತಮ್ಮ ಮನೆಗಳು, ಗಂಡಸರು, ಹಸುಗಳು… ತಿಂದದ್ದಕ್ಕೆ ಹೇತದಕ್ಕೆಲ್ಲಾ ಟ್ಯಾಕ್ಸ್‌ ಹಾಕುತ್ತಿದ್ದ ಕರಾಳ ತೆರಿಗೆ ಪದ್ದತಿಯ ವಿರುದ್ಧ.
ಆದರೆ ನಾವು ನಂಗೇಲಿಯ ಕತೆಯನ್ನು ಹೆಚ್ಚು ಹೇಳುತ್ತೇವೆ. ನಂಗೇಲಿ ಈಳವ ಜಾತಿಯವಳು ಎಂದು ಹೇಳುತ್ತಾರೆ. ಇವಳಂತಹ ಅನೇಕ ಹೋರಾಟಗಳ ಕತೆಗಳು ಕೇರಳದಲ್ಲಿ ಸಿಗುತ್ತವೆ. ಬಹುತೇಕ ಕತೆಗಳು ಈಳವ ಸಮುದಾಯಗಳ ಪ್ರತಿರೋಧದ ಕತೆಗಳು.

1859 ರಲ್ಲಿ ಆರಟ್ಟುಪುಳ ವೇಲಾಯುಧ ಪಣಿಕ್ಕರ್ ನೇತೃತ್ವದಲ್ಲಿ ಕಾಯಂಕುಲಂನಲ್ಲಿ ಹಿಂದುಳಿದ ವರ್ಗಗಳ, ದಲಿತರ ಹೆಂಗಸರು ಮೊಣಕಾಲಿನ ಕೆಳಗೆ ಬಟ್ಟೆ ಧರಿಸುವ ಹಕ್ಕಿಗಾಗಿ ʼಅಚಿಪುಡವ ಸಮರಂʼ ಹೋರಾಟ ಸಂಘಟಿಸಿದರು. ಎದೆಭಾಗ ಮುಚ್ಚಿಕೊಳ್ಳುವ ಹಕ್ಕಿಗಾಗಿ ಅವರು ಮಹಿಳೆಯರನ್ನು ಸಂಘಟಿಸಿ ‘ಎತ್ತಪ್ಪು ಸಮರಂʼ ನಡೆಸಿದರು. ಪಂದಳಂನಲ್ಲಿ ದಲಿತ-ಶೂದ್ರ ಮಹಿಳೆಯರನ್ನು ಸಂಘಟಿಸಿ ಚಿನ್ನದ ಮೂಗುತಿ ಹಾಕುವ ಹಕ್ಕನ್ನು ಪಡೆಯಲು ‘ಮೂಕುತ್ತಿ ಸಮರಂʼ ನಡೆಸಿದರು. ಈ ಹೋರಾಟಗಳು ತೆರಿಗೆಯ ವಿರುದ್ಧ ಮತ್ತು ಹಕ್ಕಿಗಾಗಿನ ಹೋರಾಟಗಳು.

ರಾಣಿಯರೂ ಅರಮನೆಯ ಒಳಗೆ ರವಿಕೆ ಹಾಕದೆ ಇದ್ದಂತ ಕಾಲದಲ್ಲಿ ಹೆಂಗಸರು ಯಾಕೆ ಮೈಮುಚ್ಚಿಕೊಳ್ಳಲು ಹೋರಾಟ ನಡೆಸಿದರು? ಎದೆಯ ಭಾಗವನ್ನು ಮುಚ್ಚಿಕೊಳ್ಳದ ರಾಜಮನೆತನಗಳ-ಮೇಲ್ಜಾತಿಗಳ ಹೆಂಗಸರು ಬ್ರಿಟೀಷ್‌ ಆಡಳಿತದಲ್ಲಿ ಬ್ರಿಟೀಷ್‌ ನೈತಿಕತೆಯನ್ನು ರೂಢಿಸಿಕೊಳ್ಳಲು ಮೈಮುಚ್ಚಿಕೊಳ್ಳಲು ಆರಂಭಿಸಿದರು. ಇದನ್ನು ಮಾಡಲು ಉಳಿದ ಜಾತಿಗಳ ಹೆಂಗಸರಿಗೆ ಸಾಧ್ಯ ಇರಲಿಲ್ಲ. ಆಭರಣವನ್ನು ತೊಡಲು, ಗೌನ್‌ ತರದ ಬಟ್ಟೆಗಳನ್ನು ಹಾಕಿಕೊಳ್ಳಲು ಸಾಧ್ಯ ಇರಲಿಲ್ಲ. ಇದಕ್ಕೆಲ್ಲಾ ಟ್ಯಾಕ್ಸ್‌ ಕಟ್ಟಬೇಕಿತ್ತು. ಇದನ್ನೆಲ್ಲಾ ಮಾಡಲು ಬೇಕಾದ ಸ್ವಾತಂತ್ರ್ಯ ಮತ್ತು ಹಕ್ಕಿಗಾಗಿ ಈ ಎಲ್ಲಾ ಹೋರಾಟಗಳು ನಡೆದಿವೆ.


ಒಂದೊಮ್ಮೆ ಎದೆಯ ಭಾಗವನ್ನು ಮುಚ್ಚಿಕೊಳ್ಳದೆ ಇರುವುದು ಅತ್ಯಂತ ಸಾಮಾನ್ಯ ಉಡುಗೆ ಪದ್ಧತಿಯಾಗಿತ್ತು. ಇಂತಹ ಒಂದು ಸಮಾಜಕ್ಕೆ ಮೈತುಂಬಾ ಬಟ್ಟೆ ಹಾಕಿಕೊಳ್ಳುವ ಹೊಸದಾದ ಸಮುದಾಯಗಳು (ವಸಾಹತು) ಬಂದಾಗ, ಅವರಿಗೆ ಇದು ಅಸಹ್ಯವಾಗಿ ಕಂಡಿತು. ಪಿಯಾತ್ರೋ ದೆಲ್ಲಾ ವೆಲ್ಲೆಯು ಮಂಗಳೂರಿನ ಬಜಾರಿನಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ ಚೌಟರು ಬರುವುದನ್ನು ನೋಡಿ ಅವಳ ಬಟ್ಟೆಯ ಬಗ್ಗೆ ಬರೆಯುತ್ತಾನೆ. ಆಕೆ ಜೂದ ಹೆಂಗಸರಂತೆ (ಯಹೂದಿ) ಹತ್ತಿ ಬಟ್ಟೆಯನ್ನು ಧರಿಸಿದ್ದಳು, ಸೊಂಟದ ಮೇಲ್ಬಾಗಕ್ಕೆ ಏನ್ನನ್ನೂ ಧರಿಸಿರಲಿಲ್ಲ, ತಲೆಗೆ ಸುತ್ತಿದ್ದ ಬಟ್ಟೆಯ ತುದಿ ಆಕೆಯ ಭುಜ ಮತ್ತು ಸ್ತನಗಳ ಕೆಳಗೆ ನೇತಾಡುತ್ತಿದ್ದವು. ಇದು ಹದಿನೇಳನೇ ಶತಮಾನದ ಅರಸಿಯೊಬ್ಬಳ ಉಡುಗೆ.

ಒಂದು ಕಾಲದಲ್ಲಿ ಯಾವುದು ಅಸಹ್ಯ, ಅಶ್ಲೀಲ ಎಂದು ಪರಿಗಣಿಸಲಿರಲಿಲ್ಲವೋ, ಅದೇ ಅಂಗದ ಬಗ್ಗೆ ಬರೆಯುವುದೂ ಅಪರಾಧ ಎಂದು ಪರಿಗಣಿಸಲಾಗುತ್ತಿದೆ. ಇವತ್ತು ಅಂತಹ ಬಟ್ಟೆಗಳನ್ನು ಧರಿಸಲು ಸಾಧ್ಯವಿಲ್ಲ, ಇನ್ನೂರು ವರ್ಷಗಳಲ್ಲಿ ನಮ್ಮ ಉಡುಗೆಗಳು ಬದಲಾಗಿವೆ. ಈಗ ನಮ್ಮ ಮುಂದೆ ಇರುವ ಸಮಸ್ಯೆ ಎಂದರೆ ಅಂಗಗಳ ಬಗ್ಗೆ ಸಮಾಜ ಇಟ್ಟುಕೊಂಡಿರುವ ಪೂರ್ವಾಗ್ರಹಗಳಿಗೆ ನೀಡಬೇಕಾದ ಪ್ರತಿರೋಧ.

ಈಗ ಇದೇ ಅಂಗಗಳು ಪ್ರಚೋದನೆಗೆ ಕಾರಣಗಳು ಎಂಬಂತೆ ಭಾವಿಸುವ ಮನಸ್ಥಿತಿ ಸೆಕ್ಸ್‌ ಡಿಪ್ರೈವ್‌ಡ್‌ ಸಮಾಜದ ಲಕ್ಷಣ. ಈ ಸಮಾಜ ಹೆಣ್ಣು ಮಕ್ಕಳ ಬಟ್ಟೆಯನ್ನು ಅತ್ಯಾಚಾರದಂತಹ ಹೇಯ ಕೃತ್ಯಕ್ಕೆ ಕಾರಣ ಎಂಬಂತೆ ಭಾವಿಸುತ್ತದೆ. ಸೀರೆ ಉಟ್ಟ ಹೆಂಗಸರ ಮೇಲೆ, ಹಸುಳೆಗಳ ಮೇಲೆ ಅತ್ಯಾಚಾರ ಮಾಡುವ ಕಾಲದಲ್ಲಿ ಬಟ್ಟೆಯಿಂದ ಅತ್ಯಾಚಾರ ಆಗುತ್ತದೆ ಎಂದು ಹೇಗೆ ಹೇಳುವುದು.

ಶೀಲ-ಅಶ್ಲೀಲ, ನೈತಿಕ-ಅನೈತಿಕ ಎಂದು ಯೋನಿ, ಮೊಲೆಗಳ ಮೂಲಕ ನಿರ್ಧರಿಸುವ ಜನರು ಅತ್ಯಾಚಾರಕ್ಕೆ ಒಳಗಾದ ಹೆಂಗಸರನ್ನು “ಕೆಟ್ಟು ಹೋಗಿದ್ದಾಳೆ” ಎಂದು ಕರೆಯುತ್ತದೆ. ಅತ್ಯಾಚಾರ ಮಾಡಿದವನನ್ನು “ಕೆಡಿಸಿದವನು” ಎಂದು ಕರೆಯುತ್ತದೆ. ಅತ್ಯಾಚಾರವನ್ನು “ಮಾನಭಂಗ” ಎಂದು ಕರೆಯುತ್ತದೆ. ಹೆಣ್ಣಿನ ಲೈಂಗಿಕಾಂಗಗಳ ಮೇಲೆ ಗಂಡಸು ನಡೆಸುವ ಕ್ರೌರ್ಯ ಆಕೆಯ ಮಾನಕ್ಕಾದ ಭಂಗ ಎಂದು ಭಾವಿಸುವುದು ಅನಾಗರಿಕತೆ. ಆಕೆಯ ಮಾನ ಆಕೆಯ ಅಂಗಗಳಲ್ಲಿ ಇರುವುದಿಲ್ಲ. ಆದರೆ, ಆಕೆಯ ಇಚ್ಚೆಗೆ ವಿರುದ್ಧವಾಗಿ ನಡೆದುಕೊಳ್ಳುವ ನಡೆ, ಆಕೆಯ ದೇಹದ ಮೇಲೆ ಮಾಡುವ ಕ್ರೌರ್ಯ ಒಂದು ಅಪರಾಧ. ಮಾನಭಂಗ ಆಗುವುದು ಹೆಣ್ಣಿದ್ದಲ್ಲ, ಅತ್ಯಾಚಾರ ನಡೆಸಿದ ಗಂಡಿನದ್ದು.

ಇಲ್ಲಿ ಹೆಣ್ಣಿನ ಮಾನವನ್ನು ಯೋನಿಯಲ್ಲಿಟ್ಟು ನೋಡುವ ಸಂಸ್ಕೃತಿಯಿಂದಾಗಿ ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳ ಆತ್ಮಹತ್ಯೆಗೆ ಕಾರಣವಾಗುತ್ತದೆ. ಹೀಗಾಗಿ, ಅತ್ಯಾಚಾರ ಎಂಬುದು ಒಬ್ಬ ವ್ಯಕ್ತಿಯ ಅಪರಾಧವಲ್ಲ, ಅದು ಇಡೀ ಸಮಾಜದ ಅಪರಾಧ..ನನ್ನ ಅಪರಾಧ..ನಿಮ್ಮದೂ ಕೂಡ!

ಲೇಖನ: ಚರಣ್‌ ಐವರ್ನಾಡು

Related Articles

ಇತ್ತೀಚಿನ ಸುದ್ದಿಗಳು

You cannot copy content of this page