Thursday, July 10, 2025

ಸತ್ಯ | ನ್ಯಾಯ |ಧರ್ಮ

ʼದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಣ್ಣʼ ಇದು ರಾಜ್ಯದ ಜನರ ಬಯಕೆ – ನಿಖಿಲ್‌ ಕುಮಾರಸ್ವಾಮಿ

ಚಿಕ್ಕಬಳ್ಳಾಪುರ, ಜುಲೈ 10: ದೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಂತೆ, ರಾಜ್ಯಕ್ಕೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿಯವರೇ ಎಂಬ ಭಾವನೆ ಕೇವಲ ಜನತಾ ದಳ (ಜೆಡಿಎಸ್) ಕಾರ್ಯಕರ್ತರಲ್ಲಿ ಮಾತ್ರವಲ್ಲ, ರಾಜ್ಯದ ಜನತೆಯ ಮನಸ್ಸಿನಲ್ಲೂ ಗಟ್ಟಿಯಾಗಿ ಬೇರೂರಿದೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜನವರಿ 9ರಂದು ಆಯೋಜಿಸಲಾದ ಜನರೊಂದಿಗಿನ ಜೆಡಿಎಸ್‌ ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಕುಮಾರಣ್ಣನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯಕ್ಕೆ ನೀಡಿದ ಕೊಡುಗೆಗಳನ್ನು ಜನತೆ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಿದಾಗ, ಜನತೆಯಿಂದ ‘ಕುಮಾರಣ್ಣನವರು ಮತ್ತೆ ಸಿಎಂ ಆಗಬೇಕು’ ಎಂಬ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾದರೆ ರಾಜ್ಯದಲ್ಲಿ ಸಮೃದ್ಧಿಯ ವಾತಾವರಣ ನಿರ್ಮಾಣವಾಗಲಿದೆ,” ಎಂದು ಹೇಳಿದರು.

ನಿಖಿಲ್ ಕುಮಾರಸ್ವಾಮಿ ತಮ್ಮ ಭಾಷಣದಲ್ಲಿ ಜೆಡಿಎಸ್‌ ಪಕ್ಷದ ವ್ಯಾಪ್ತಿಯನ್ನು ಒತ್ತಿ ಹೇಳಿದರು. “ನಮ್ಮ ಪಕ್ಷವು ಕೇವಲ ಹಳೆ ಮೈಸೂರು ಭಾಗಕ್ಕೆ ಸೀಮಿತವಲ್ಲ. ನಮ್ಮ ಶಾಸಕರಲ್ಲಿ ಶೇಕಡ 50 ರಷ್ಟು ಜನರು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗಗಳಿಂದ ಆಯ್ಕೆಯಾಗುತ್ತಾರೆ. ಈ ಪ್ರದೇಶಗಳಿಗೆ ನಾನು ನಿಯಮಿತವಾಗಿ ಭೇಟಿ ನೀಡುತ್ತೇನೆ ಮತ್ತು ಕಾರ್ಯಕರ್ತರ ಜೊತೆಗೆ ಸಂವಾದ ನಡೆಸುತ್ತೇನೆ,” ಎಂದು ತಿಳಿಸಿದರು.

2028ರ ವಿಧಾನಸಭೆ ಚುನಾವಣೆಯ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದ ನಿಖಿಲ್, “ನಾವು ಯಾವುದೇ ಅನೈತಿಕ ಮಾರ್ಗಗಳಿಂದ ಮುಂದಿನ ಮೂರು ವರ್ಷಗಳಲ್ಲಿ ಅಧಿಕಾರ ಹಿಡಿಯಲು ಯತ್ನಿಸುವುದಿಲ್ಲ. 2028ರಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಯು 150ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದು, ಸಮ್ಮಿಶ್ರ ಸರ್ಕಾರವನ್ನು ರಚಿಸಲಿದೆ. ನಮ್ಮ ನಾಯಕರಾದ ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡರು ಮತ್ತು ಕುಮಾರಣ್ಣನವರಂತಹ ಜನಮನ್ನಣೆಯ ನಾಯಕರು ಈ ಗುರಿಯನ್ನು ಸಾಧಿಸಲಿದ್ದಾರೆ. ಕುಮಾರಣ್ಣನವರು ಮತ್ತೆ ಸಿಎಂ ಆಗಬೇಕೆಂಬುದು ಕೇವಲ ನಮ್ಮ ಆಕಾಂಕ್ಷೆಯಲ್ಲ, ಇದು ಕಾರ್ಯಕರ್ತರ ಮತ್ತು ಜನತೆಯ ಒಲವೂ ಆಗಿದೆ,” ಎಂದು ಒತ್ತಿ ಹೇಳಿದರು.

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಜೆಡಿಎಸ್‌ಗೆ ಯಾವಾಗಲೂ ಬಲವಾದ ಭದ್ರಕೋಟೆಗಳಾಗಿವೆ. “ರಾಮನಗರ ಮತ್ತು ಚಿಕ್ಕಬಳ್ಳಾಪುರ ನಮಗೆ ಎರಡು ಕಣ್ಣುಗಳಂತೆ. ಶಿಡ್ಲಘಟ್ಟ ಶಾಸಕ ರವಿಕುಮಾರ್ ಮತ್ತು ಚಿಂತಾಮಣಿಯ ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿಯವರು ಪಕ್ಷಕ್ಕೆ ಆಧಾರ ಸ್ತಂಭಗಳಂತೆ,” ಎಂದು ನಿಖಿಲ್ ವಿವರಿಸಿದರು.

ಯುವಕರಿಗೆ ರಾಜಕಾರಣಕ್ಕೆ ಬರಲು ಪ್ರೋತ್ಸಾಹಿಸುವ ಸಂದೇಶವನ್ನು ನೀಡಿದ ಅವರು, “ಯುವಕರು ರಾಜಕೀಯ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಬದಲಾವಣೆ ಸಾಧ್ಯವಾಗುತ್ತದೆ. ಸಮಾಜದ ಕೊನೆಯ ವ್ಯಕ್ತಿಯ ಸಮಸ್ಯೆಗಳನ್ನೂ ಪರಿಹರಿಸುವ ಛಲವಿರಬೇಕು. ಚುನಾವಣೆಗಳಲ್ಲಿ ಗೆಲುವು-ಸೋಲು ಸಾಮಾನ್ಯ. ಕೆಲವರಿಗೆ ಫಲ ಸಿಕ್ಕಿರಬಹುದು, ಕೆಲವರಿಗೆ ಸಿಕ್ಕಿಲ್ಲದಿರಬಹುದು, ಆದರೆ ಇದು ರಾಜಕೀಯದ ಸಹಜ ಭಾಗ,” ಎಂದು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page