Home ರಾಜಕೀಯ ಡಿ.ಕೆ.ಸುರೇಶ, ವಿನಯ್ ಕುಲಕರ್ಣಿಯಂಥವರನ್ನು ಗುಂಡಿಕ್ಕಿ ಕೊಲ್ಲಬೇಕಿದೆ: ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

ಡಿ.ಕೆ.ಸುರೇಶ, ವಿನಯ್ ಕುಲಕರ್ಣಿಯಂಥವರನ್ನು ಗುಂಡಿಕ್ಕಿ ಕೊಲ್ಲಬೇಕಿದೆ: ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

0

ದಾವಣಗೆರೆ: ದೇಶ ವಿಭಜನೆಯ ಹೇಳಿಕೆ ನೀಡಿದ ಸಂಸದ ಡಿ.ಕೆ.ಸುರೇಶ್‌ ಹಾಗೂ ಶಾಸಕ ವಿನಯ್‌ ಕುಲಕರ್ಣಿಯಂಥವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಗುರುವಾರ ಮಾತನಾಡಿದ ಅವರು, ಇವರಿಬ್ಬರು ರಾಷ್ಟ್ರದ್ರೋಹಿಗಳು. ಇವರ ಹಾಗೆ ದೇಶ ವಿಭಜನೆಯ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ’ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಖಂಡ ಭಾರತದ ಕುರಿತು ಮಾತನಾಡಿದರೆ ಸಾಲದು. ತಾಕತ್ತಿದ್ದರೆ ಡಿ.ಕೆ.ಸುರೇಶ್‌ ಹಾಗೂ ವಿನಯ್‌ ಕುಲಕರ್ಣಿ ಅವರನ್ನು ಪಕ್ಷದಿಂದ ವಜಾಗೊಳಿಸಬೇಕು ಎಂದು ಈಶ್ವರಪ್ಪ ಸವಾಲು ಹಾಕಿದರು.
ಸುರೇಶ್ ಹಾಗೂ ವಿನಯ್ ಅವರ ಮಾತಿನಲ್ಲಿ ಜಿನ್ನಾ ಸಂಸ್ಕೃತಿ ಎದ್ದು ಕಾಣುತ್ತಿದೆ. ದೇಶ ವಿಭಜಿಸಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕೆ ಬಿಜೆಪಿ ಅವಕಾಶವನ್ನೂ ನೀಡುವುದಿಲ್ಲ. ಬೇಕಿದ್ದರೆ ಪಾಕಿಸ್ತಾನವನ್ನೇ ಭಾರತಕ್ಕೆ ಸೇರ್ಪಡೆ ಮಾಡುತ್ತೇವೆ’ ಎಂದು ಹೇಳಿದರು.
ಮಾಗಡಿಯ ಕಾಂಗ್ರೆಸ್‌ ಶಾಸಕ ಬಾಲಕೃಷ್ಣ ಅವರು ಬಿಜೆಪಿ ಸಂಸದರು ಗಂಡಸರಲ್ಲ ಎಂದಿದ್ದಾರೆ. ನಮ್ಮ ಪಕ್ಷದಲ್ಲಿ ಗಂಡಸರು ಇದ್ದಾರೋ ಇಲ್ಲವೋ ಎಂಬುದನ್ನು ಎಲ್ಲಿ ತೋರಿಸಬೇಕು. ಅವರು ಆ ರೀತಿ ಮಾತನಾಡಬಾರದಿತ್ತು ಎಂದು ಈಶ್ವರಪ್ಪ ಕಿಚಾಯಿಸಿದರು.

https://twitter.com/INCKarnataka/status/1755610355928301953


ಈಶ್ವರಪ್ಪ ಗೋಡ್ಸೆ ಸಂತತಿ: ಕಾಂಗ್ರೆಸ್‌ ಕಿಡಿ
ಈಶ್ವರಪ್ಪ ಹೇಳಿಕೆ ಕುರಿತು ಶುಕ್ರವಾರ X ನಲ್ಲಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಮಹಾತ್ಮ ಗಾಂಧಿಯವರಿಗೆ ಗುಂಡಿಕ್ಕಿದ ಗೋಡ್ಸೆ ಸಂತತಿಯವರಾದ ಬಿಜೆಪಿ ನಾಯಕರ ಭಯೋತ್ಪಾದಕ ಮನಸ್ಥಿತಿ ಈಶ್ವರಪ್ಪ ಅವರಿಂದಾಗಿ ಅನಾವರಣವಾಗಿದೆ ಎಂದು ವ್ಯಂಗ್ಯವಾಡಿದೆ.
ಸಂಸದರಾದ ಡಿ. ಕೆ ಸುರೇಶ್ ಹಾಗೂ ಶಾಸಕರಾದ ವಿನಯ್ ಕುಲಕರ್ಣಿಯವರನ್ನು ಗುಂಡಿಕ್ಕಿ ಕೊಲ್ಲಬೇಕು ಎನ್ನುವ ಮೂಲಕ ಬಿಜೆಪಿಯ ಭಯೋತ್ಪಾದನೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡಿದ್ದಾರೆ. ಈ ಗುಂಡು ಹಾಕುವ ವ್ಯಕ್ತಿಯ ಮೇಲೆ ಭಯೋತ್ಪಾದನೆ ನಿಗ್ರಹ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕು’ ಎಂದು ಗೃಹ ಸಚಿವರಿಗೆ ಪೋಸ್ಟ್ನಲ್ಲಿ ರಾಜ್ಯ ಕಾಂಗ್ರೆಸ್‌ ಮನವಿ ಮಾಡಿದೆ.

You cannot copy content of this page

Exit mobile version