ಬೆಂಗಳೂರು ಮುಖ್ಯ ಪೋಸ್ಟ್ ಆಫೀಸ್‌ನಲ್ಲಿ ಫಿಲಾಟೆಲಿ ಪಾಸ್‌ಪೋರ್ಟ್‌ಗೆ ಬೆಳಗ್ಗೆಯೇ ಸಾಲುಗಟ್ಟಿ ನಿಂತ ಯುವಕರು

ಬೆಂಗಳೂರು : ಪ್ರವಾಸ, ಪರಂಪರೆ ಮತ್ತು ಅಂಚೆ ಸಂಗ್ರಹವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಇಂಡಿಯಾ ಪೋಸ್ಟ್‌ನ ‘ಕರ್ನಾಟಕ ಫಿಲಾಟೆಲಿ ಪಾಸ್‌ಪೋರ್ಟ್- ವರ್ಶನ್ 3.0’ ಬಿಡುಗಡೆಗೆ ಶುಕ್ರವಾರ ಬೆಂಗಳೂರಿನ ಕಬ್ಬನ್ ಪಾರ್ಕ್ ಸಮೀಪದ ಜನರಲ್ ಪೋಸ್ಟ್ ಆಫೀಸ್ (ಜಿಪಿಒ)ನಲ್ಲಿ ಪಾಸ್‌ಪೋರ್ಟ್ ಖರೀದಿಸಲು ಬೆಳಗ್ಗೆ 8.30 ಗಂಟೆಯಿಂದಲೇ ನೂರಾರು ಜನರು ಸರದಿಯಲ್ಲಿ ನಿಂತು ಕಾಯುತ್ತಿದ್ದ ದೃಶ್ಯ ಕಂಡುಬಂತು.

ಮಾರಾಟ ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದರೂ, ಸೀಮಿತ ಸಂಖ್ಯೆಯಲ್ಲಿ ಮಾತ್ರ ಪಾಸ್‌ಪೋರ್ಟ್ ಲಭ್ಯವಿರುವ ಹಿನ್ನೆಲೆಯಲ್ಲಿ ಯುವಕರು, ಬೈಕ್ ರೈಡರ್‌ಗಳು, ಪ್ರವಾಸಾಸಕ್ತರು, ಫೋಟೋಗ್ರಾಫರ್‌ಗಳು, ವಿದ್ಯಾರ್ಥಿಗಳು ಹಾಗೂ ಫಿಲಾಟೆಲಿ ಸಂಗ್ರಹಕಾರರು ಮುಂಜಾನೆಯೇ ಪೋಸ್ಟ್ ಆಫೀಸ್‌ಗೆ ಆಗಮಿಸಿದ್ದರು. ಮೊದಲ ದಿನವೇ ಉದ್ದನೆಯ ಸಾಲು ನಿರ್ಮಾಣವಾಗಿದೆ.

ಈ ಫಿಲಾಟೆಲಿ ಪಾಸ್‌ಪೋರ್ಟ್ ಯಾವುದೇ ಅಧಿಕೃತ ಪ್ರಯಾಣದ ದಾಖಲೆಯಲ್ಲ. ಕರ್ನಾಟಕದ ವಿವಿಧ ಪ್ರವಾಸಿ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ತಾಣಗಳಿಗೆ ಭೇಟಿ ನೀಡುವವರು ಅಲ್ಲಿನ ಅಂಚೆ ಕಚೇರಿಗಳಲ್ಲಿ ದೊರೆಯುವ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಶನ್ (PPC) ಎಂಬ ವಿಶೇಷ ಅಂಚೆ ಮುದ್ರೆಗಳನ್ನು ಈ ಪಾಸ್‌ಪೋರ್ಟ್‌ನಲ್ಲಿ ಸಂಗ್ರಹಿಸಿಕೊಳ್ಳುವ ಉದ್ದೇಶದಿಂದ ಇದನ್ನು ರೂಪಿಸಲಾಗಿದೆ. ಇದನ್ನು ಪ್ರವಾಸದ ನೆನಪುಗಳನ್ನು ಶಾಶ್ವತವಾಗಿ ದಾಖಲಿಸುವ ವಿಶಿಷ್ಟ ಸಂಗ್ರಹ ಪುಸ್ತಕವೆಂದೂ ಪರಿಗಣಿಸಲಾಗುತ್ತಿದೆ.

ಈ ಆವೃತ್ತಿಯಲ್ಲಿ ಕರ್ನಾಟಕದ ಸುಮಾರು 100 ಪ್ರಮುಖ ಪ್ರವಾಸಿ ಹಾಗೂ ಪರಂಪರೆಯ ತಾಣಗಳಿಗೆ ಸಂಬಂಧಿಸಿದ ಪುಟಗಳನ್ನು ಸೇರಿಸಲಾಗಿದ್ದು, ಪ್ರತಿಯೊಂದು ಪುಟದಲ್ಲೂ ಸ್ಥಳದ ಚಿತ್ರ, ಸಂಕ್ಷಿಪ್ತ ಪರಿಚಯ ಹಾಗೂ ವಿಶೇಷ ಮುದ್ರೆ ಹಾಕಲು ಅವಕಾಶ ಕಲ್ಪಿಸಲಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಜೊತೆಗೆ ರಾಜ್ಯದ ಪರಂಪರೆ ಮತ್ತು ಅಂಚೆ ಇಲಾಖೆಯ ಇತಿಹಾಸವನ್ನು ಯುವಜನರಿಗೆ ಪರಿಚಯಿಸುವುದು ಈ ಯೋಜೆಯ ಪ್ರಮುಖ ಉದ್ದೇಶವಾಗಿದೆ.

ಈ ಬಾರಿ ಬೆಂಗಳೂರು ಜಿಪಿಒದಲ್ಲಿ 1,000, ಮೈಸೂರು ಮತ್ತು ಮಂಗಳೂರು ಹೆಡ್ ಪೋಸ್ಟ್ ಆಫೀಸ್‌ಗಳಲ್ಲಿ ತಲಾ 200 ಸೇರಿದಂತೆ ಒಟ್ಟು 1,400 ಪ್ರತಿಗಳನ್ನು ಮಾತ್ರ ಭೌತಿಕ ಮಾರಾಟಕ್ಕೆ ಬಿಡುಗಡೆ ಮಾಡಲಾಗಿದೆ. ಜುಲೈ 10 ಮತ್ತು 11ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಅಥವಾ ಸ್ಟಾಕ್ ಇರುವವರೆಗೆ ಮಾರಾಟ ನಡೆಯಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಪಾಸ್‌ಪೋರ್ಟ್ ಕುರಿತು ವ್ಯಾಪಕ ಪ್ರಚಾರವಾಗಿರುವುದು, ಹಿಂದಿನ ಆವೃತ್ತಿಗಳ ಯಶಸ್ಸು ಹಾಗೂ ಸಂಗ್ರಹಿಸಬಹುದಾದ ವಿಶೇಷ ಆವೃತ್ತಿ ಎಂಬ ಕಾರಣಗಳಿಂದ ಮೊದಲ ದಿನವೇ ಭಾರೀ ಬೇಡಿಕೆ ಕಂಡುಬಂದಿದೆ. ಪ್ರವಾಸವನ್ನು ಕೇವಲ ಛಾಯಾಚಿತ್ರಗಳಿಗೆ ಸೀಮಿತಗೊಳಿಸದೆ, ವಿಶೇಷ ಅಂಚೆ ಮುದ್ರೆಗಳ ಮೂಲಕ ನೆನಪಾಗಿ ಉಳಿಸಿಕೊಳ್ಳುವ ಹೊಸ ಪರಿಕಲ್ಪನೆಗೆ ಯುವಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿರುವುದು ಗಮನಾರ್ಹವಾಗಿದೆ.

Related Articles

ಇತ್ತೀಚಿನ ಸುದ್ದಿಗಳು