Monday, January 20, 2025

ಸತ್ಯ | ನ್ಯಾಯ |ಧರ್ಮ

ರೋಹಿತ್ ವೇಮುಲ ಕಾಯ್ದೆಗಾಗಿ ಜನಾಂದೋಲನ

ಬೆಂಗಳೂರು, ಜ,19 : ವಿದ್ಯಾರ್ಥಿ ಸಂಘಟನೆಗಳು ರೋಹಿತ್ ವೇಮುಲ ಅವರ ಸಾಂಸ್ಥಿಕ ಹತ್ಯೆಯ ವಿರುದ್ಧ ಹೋರಾಟ ಮಾಡಿ, ದೇಶದ್ಯಾಂತ ರೋಹಿತ್ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಹಕ್ಕೊತ್ತಾಯ ಮಾಡಿದ್ದರು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡಿಯುತ್ತಿರುವ ವಿದ್ಯಾಥಿಗಳ ಇಂತಹ ಹತ್ಯೆಗಳನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು. ಕರ್ನಾಟಕದಲ್ಲಿಯೂ, ದಲಿತ, ವಿದ್ಯಾರ್ಥಿ ಮತ್ತು ನಾಗರಿಕ ಸಮಾಜದ ಹಲವಾರು ಸಂಘಟನೆಗಳು ದಲಿತ & ಆದಿವಾಸಿ ಸಮುದಾಯದ ವಿದ್ಯಾರ್ಥಿಗಳು ಎದುರಿಸುತ್ತಿರುವ ಜಾತಿ ತಾರತಮ್ಯ ಮತ್ತು ಇನ್ನಿತರೆ ಸಮಸ್ಯೆಗಳನ್ನು ಪರಿಹರಿಸಲು ರೋಹಿತ್ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಒಗ್ಗಟ್ಟಾಗಿದ್ದಾರೆ.

ಇದೆ ಭಾನುವಾರ, ‘ರೋಹಿತ್ ಕಾಯ್ದೆಗಾಗಿ ಜನಾಂದೋಲನ’ ಎಂಬ ಒಂದು ದಿನದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಮುಖ್ಯವಾಗಿ ವಿಶ್ವವಿದ್ಯಾಲಯಗಳಲ್ಲಿ ದಲಿತ ವಿದ್ಯಾರ್ಥಿಗಳು ಎದುರಿಸುತ್ತಿರುವ ಜಾತಿ ತಾರತಮ್ಯದ ವಿಚಾರಗಳನ್ನು ಕೂಲಂಕುಷವಾಗಿ ಚರ್ಚಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಾತಿ ವಿರೋಧಿ ಕಾರ್ಯಕರ್ತರಾದ ರಾಧಿಕಾ ವೇಮುಲ ರವರು ಶಾಂತ ಸ್ವಭಾವದ, ವಿದ್ಯಾಭ್ಯಾಸದಲ್ಲಿ ಚುರುಕಾಗಿದ್ದ ತಮ್ಮ ಮಗ ರೋಹಿತ್ ವೇಮುಲ ರವರು ಹೀಗೆ ಒಂದು ದಿನ ಕಣ್ಮರೆಯಾಗುತ್ತಾನೆ ಎಂದು ಊಹಿಸಿರಲಿಲ್ಲ ಎಂದು ಕಣ್ಣೀರಾದರು. ಮುಂದುವರೆದು, ದಲಿತ ವಿದ್ಯಾರ್ಥಿಗಳು ಸಾಂಸ್ಥಿಕವಾಗಿ ಹೇಗೆ ತಾರತಮ್ಯಕ್ಕೆ ಒಳಗಾಗಿದ್ದರೆಂದು ಹೇಳಿದರು. ಘನತೆಯುಕ್ತ ಉನ್ನತ ಜೀವನವನ್ನು ಕಟ್ಟಿಕೊಳ್ಳಲು ದಲಿತ ವಿದ್ಯಾರ್ಥಿಗಳು ಎಷ್ಟೆಲ್ಲ ರೀತಿಯ ಕಷ್ಟಕೋಟಲೆಗಳನ್ನು ಅನುಭವಿಸಬೇಕು ಎಂಬುದನ್ನು ಅರ್ಥೈಸಿದರು.

ದಲಿತ ಸಂಘರ್ಷ ಸಮಿತಿಯ ನಾಯಕರಾದ ಮಾವಳ್ಳಿ ಶಂಕರ್ ಅವರು ಮಾತನಾಡಿ ಮೂಲಭೂತ ಹಕ್ಕುಗಳಿಗಾಗಿ ನಡೆಯುತ್ತಿರುವ ಜನರ ಆಂದೋಲನಗಳ ಬಗ್ಗೆ ಒಕ್ಕೂಟ ಸರ್ಕಾರ ಅಸಹಿಸ್ಣುತೆಯಿಂದ ನಡೆದುಕೊಳ್ಳುತ್ತಿದೆ ಎಂದರು.

“ಬಿಜೆಪಿ ಸರ್ಕಾರದ ಕೋಮುವಾದಿ ಅಜೆಂಡಾದ ಫಲವಾಗಿ ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ನಾಶವಾಗುತ್ತಿದೆ. ಈ ಹಿಂದೆ, ಸಿದ್ದರಾಮಯ್ಯ ರವರ ಸರ್ಕಾರ ಮೂಢ ನಂಬಿಕೆಗಳ ವಿರುದ್ಧ ಕರಡು ಕಾಯ್ದೆಯನ್ನು ತಂದಿದ್ದರು, ಆದರೆ ಅದು ಕಾನೂನಾಗಲಿಲ್ಲ. ಅದೇ ರೀತಿ, ಡಾ.ಸಿದ್ಧಲಿಂಗಯ್ಯ ರವರು ಅಂತರ್ಜಾತಿ ವಿವಾಹವಾದ ದಂಪತಿಗಳ ಮಕ್ಕಳಿಗೆ ಮೀಸಲಾತಿ ತರಬೇಕೆಂದು ಒತ್ತಾಯಿಸಿದ್ದರು, ಆದರೆ ಅದು ಸಹ ಜಾರಿಯಾಗಲಿಲ್ಲ. ಸರ್ಕಾರಿ ಶಾಲೆಗಳಲ್ಲಿ ದಲಿತ ಮಹಿಳೆಯರು ಮಾಡುವ ಮಧ್ಯಾಹ್ನದ ಬಿಸಿ ಊಟವನ್ನು ಮಕ್ಕಳು ನಿರಾಕರಿಸುವಂತೆ ಈ ಜಾತಿ ವ್ಯವಸ್ಥೆಯು ಅವರಿಗೆ ಹೇಳಿಕೊಡುತ್ತದೆ. ಜಾತಿವಾದವು ನಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಷ್ಟು ವ್ಯಾಪಕವಾಗಿದ್ದರೆ, ಇದರ ವಿರುದ್ಧ ಹೋರಾಡಲು ರೋಹಿತ್ ಕಾಯ್ದೆಯಂತಹ ವಿಶೇಷ ಕಾನೂನಿನ ಅಗತ್ಯವಿದೆ” ಎಂದು ಉಲ್ಲೇಖಿಸಿದರು.

ಪ್ರಗತಿಪರ ಚಿಂತಕರು ಹಾಗು ಬರಹಗಾರರಾದ ವಿಕಾಸ್ ಮೌರ್ಯ ಅವರು ಮಾತನಾಡುತ್ತ, “ಸರ್ಕಾರ, ಶೈಕ್ಷಣಿಕ ಸಂಸ್ಥೆಗಳಲ್ಲಿ ಎಷ್ಟು ಜನ SC/ST ವಿಧ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು ಎಂದು ಅಂಕಿ ಅಂಶಗಳನ್ನು ಸಂಸತ್ತಿನಲ್ಲಿ ಮಂಡಿಸಿದರು. ಆದರೆ ಇದನ್ನು ತಡೆಯಲು ಏನು ಮಾಡಬೇಕು ಎಂದು ‌ಮಾತ್ರ ಸರ್ಕಾರ ಯೋಚಿಸುತ್ತಿಲ್ಲ” ಎಂದರು. ಮುಂದುವರೆದು, “ಭಾರತದಲ್ಲಿ ಬ್ರಾಹ್ಮಣವಾದ ಹಾಗು ಬಂಡವಾಳಶಾಹಿ ಪದ್ದತಿ ಎರಡು ಸೇರಿ ದಲಿತ ಬಹುಜನ ವಿಧ್ಯಾರ್ಥಿಗಳನ್ನು ಮೂಲೆಗುಂಪು ಮಾಡುತ್ತಿದೆ. ಸ್ವತಂತ್ರ್ಯ ಸಿಕ್ಕಿ ಇಷ್ಟು ದಶಕಗಳ ನಂತರವು ನಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಷ್ಟು ಅಸಮಾನತೆ ಹಾಗು ತಾರತಮ್ಯ ಇರುವುದು ಬೇಸರದ ವಿಷಯ” ಎಂದರು.

ಆಲ್ ಇಂಡಿಯಾ ವಿಧ್ಯಾರ್ಥಿ ಸಂಘಟನೆಯ ಲೇಖಾ ಅಡವಿ ಅವರು ಮಾತನಾಡಿ, ” ಶೈಕ್ಷಣಿಕ ಸಂಸ್ಥೆಗಳಲ್ಲಿ ‌ನಡೆಯುತ್ತಿರುವ ಜಾತಿ ತಾರತಮ್ಯವನ್ನು ತಡಿಯುವದಕ್ಕೆ ಆಗುತ್ತಿಲ್ಲ. ಇಂದು ಜಾತಿ ತಾರತಮ್ಯದಿಂದ SC/ST ವಿಧ್ಯಾರ್ಥಿಗಳಿಗೆ ಕಾಲೇಜು ಪ್ರವೇಶಿಸುವುದು ಕಷ್ಟವಾಗಿದೆ, ಕಾಲೇಜು ಸೇರಿಕೊಂಡ ಮೇಲೆ ಅಲ್ಲಿ ತಾರತಮ್ಯ ಎದುರಿಸುತಿದ್ದಾರೆ, ಕೆಲವರಿಗೆ ಮುಂದುವರಿಸಲಾಗುತ್ತಿಲ್ಲ. ಈ ತಾರತಮ್ಯ ಹಾಗು ಮಾನಸಿಕ ಹಿಂಸೆ ತಡೆಯಲಾರದೆ ಕೆಲ ವಿಧ್ಯಾರ್ಥಿಗಳು ತಮ್ಮ ಪ್ರಾಣ ತ್ಯಾಗ ಮಾಡುತಿದ್ದಾರೆ. ಹಾಗಾಗಿ, ನಾವು ಹಲವು ಸಂಘಟನೆಗಳು ಸೇರಿ ರೋಹಿತ್ ಕಾಯ್ದೆಗಾಗಿ ಜನಾಂದೋಲನದ ಅಡಿಯಲ್ಲಿ ಬಂದಿದ್ದೇವೆ. ರೋಹಿತ್ ಕಾಯ್ದೆಯು, ಜಾತಿ ತಾರತಮ್ಯ ತಡಿಯುವುದಲ್ಲದೆ , SC/ST ವಿಧ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವುದಕ್ಕೆ,‌ಕಾಲೇಜುಗಳಲ್ಲಿ academic ಬೆಂಬಲ‌ ಸಹ ನೀಡಬೇಕು ಎಂದು ಒತ್ತಾಯಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page