ಜಾಲಹಳ್ಳಿ ಮೆಟ್ರೋ ಸ್ಟೇಷನ್ನಿನಲ್ಲಿ ಇಂದು ಸಂಜೆ ವ್ಯಕ್ತಿಯೊಬ್ಬ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಂಜೆ ಸರಿಸುಮಾರು ಏಳು ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದ್ದು ಸುಮಾರು ಒಂದು ಗಂಟೆಗಳಿಗೂ ಹೆಚ್ಚು ಕಾಲ ಮೆಟ್ರೊ ಸಂಚಾರ ಅಸ್ತವ್ಯಸ್ಥಗೊಂಡಿತ್ತು.
ಘಟನೆ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಸಂಭವಿಸಿದ್ದು, ನಾಗಸಂದ್ರ ನಿಲ್ದಾಣದಿಂದ ಯಶವಂತಪುರ ವರೆಗೂ ಮೆಟ್ರೋ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಒಂದು ಗಂಟೆ ಸಮಯದ ನಂತರ ಮೆಟ್ರೋ ಪುನಃ ಪ್ರಾರಂಭವಾಗಿತ್ತು. ಮೆಟ್ರೋ ಹಳಿಯ ಮೇಲೆ ಹಾರಿದ ವ್ಯಕ್ತಿಯನ್ನ ಜಾಲಹಳ್ಳಿ ಸ್ಟೇಷನ್ನಿನ ಸಿಬ್ಬಂದಿ ತಕ್ಷಣಕ್ಕೆ ಆಸ್ಪತ್ರೆ ರವಾನಿಸುವ ಕೆಲಸ ಮಾಡಿದರೂ ಸಹಾ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. ವಿದ್ಯುತ್ ಘರ್ಷಣೆಯಿಂದಾಗಿ ಈ ಸಾವು ಸಂಭವಿಸಿರುವುದಾಗಿ ಮೇಲ್ನೋಟಕ್ಕೆ ತಿಳಿದು ಬಂದಿರುತ್ತದೆ.
ಸ್ಥಳಕ್ಕೆ ಆಗಮಿಸಿದ ಪೋಲೀಸರು ಸ್ಥಳದ ಮಹಜರು ಮಾಡಿದ್ದು ತನಿಖೆಯನ್ನ ಆರಂಭಿಸಿರುವುದಾಗಿ ಮಾಹಿತಿ ತಿಳಿದು ಬಂದಿದೆ. ಪೊಲೀಸರ ತನಿಖೆಯ ನಂತರವಷ್ಟೆ ವ್ಯಕ್ತಿಯ ವಿವರ ಮತ್ತು ಘಟನೆಯ ವಿವರಗಳು ಲಭ್ಯವಾಗಲಿವೆ.