Home ಬೆಂಗಳೂರು ಬೆಂಗಳೂರು: ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದ ಪಿಇಎಸ್ ವಿವಿ ಪ್ರಾಧ್ಯಾಪಕ ಅಮಾನತು

ಬೆಂಗಳೂರು: ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದ ಪಿಇಎಸ್ ವಿವಿ ಪ್ರಾಧ್ಯಾಪಕ ಅಮಾನತು

0

ಬೆಂಗಳೂರಿನ ಪ್ರತಿಷ್ಠಿತ ವಿಶ್ವವಿದ್ಯಾನಿಲಯವೊಂದರಲ್ಲಿ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಯ ವಿರುದ್ಧ ದ್ವೇಷಪೂರಿತ ಹೇಳಿಕೆ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ವಿಶ್ವವಿದ್ಯಾನಿಲಯವು ಆ ಪ್ರಾಧ್ಯಾಪಕನನ್ನು ಅಮಾನತು ಮಾಡಿದೆ.

ವರದಿಯ ಪ್ರಕಾರ, ಬೆಂಗಳೂರಿನ ಪಿಇಎಸ್ (PES) ವಿಶ್ವವಿದ್ಯಾನಿಲಯದಲ್ಲಿ ಕಳೆದ ಮಂಗಳವಾರ ಈ ಘಟನೆ ನಡೆದಿದೆ. ತರಗತಿಯಲ್ಲಿ ಪಾಠ ಮಾಡುತ್ತಿದ್ದ ವೇಳೆ ಅಫಾನ್ ಎಂಬ ವಿದ್ಯಾರ್ಥಿಯು ಹೊರಗೆ ಹೋಗಲು ಅನುಮತಿ ಕೇಳಿದ್ದಾನೆ. ಇದರಿಂದ ಆಕ್ರೋಶಗೊಂಡ ಪ್ರಾಧ್ಯಾಪಕ ವಿದ್ಯಾರ್ಥಿಯ ವಿರುದ್ಧ ಅತ್ಯಂತ ಕೀಳುಮಟ್ಟದ ಪದಬಳಕೆ ಮಾಡಿದ್ದಾನೆ. ವಿದ್ಯಾರ್ಥಿಯನ್ನು “ಭಯೋತ್ಪಾದಕ” ಎಂದು ಕರೆದಿದ್ದಲ್ಲದೆ, “ಇರಾನ್ ಯುದ್ಧಕ್ಕೆ ನಿನ್ನಂತವರೇ ಕಾರಣ” ಎಂದು ಟೀಕಿಸಿದ್ದಾನೆ. ಅಷ್ಟೇ ಅಲ್ಲದೆ, “ಟ್ರಂಪ್ ಬಂದು ನಿನ್ನನ್ನು ಕರೆದೊಯ್ಯುತ್ತಾರೆ” ಎಂದು ಹೀಯಾಳಿಸಿ ಕೋಪ ವ್ಯಕ್ತಪಡಿಸಿದ್ದಾನೆ.

ಈ ಸಂಪೂರ್ಣ ಘಟನೆಯನ್ನು ತರಗತಿಯಲ್ಲಿದ್ದ ಮತ್ತೊಬ್ಬ ವಿದ್ಯಾರ್ಥಿ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ. ಘಟನೆಯನ್ನು ಖಂಡಿಸಿ ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆಯಾದ ಎನ್‌ಎಸ್‌ಯುಐ (NSUI) ಪೊಲೀಸರಿಗೆ ದೂರು ನೀಡಿದೆ. ವಿದ್ಯಾರ್ಥಿಯ ಧರ್ಮವನ್ನು ಅವಮಾನಿಸುವಂತೆ ಮಾತನಾಡಿದ ಪ್ರಾಧ್ಯಾಪಕ ಕ್ಷಮೆಯಾಚಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯು ಪ್ರಾಧ್ಯಾಪಕರನ್ನು ಸೇವೆಯಿಂದ ಅಮಾನತುಗೊಳಿಸಿದ್ದು, ಈ ಬಗ್ಗೆ ಆಂತರಿಕ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

You cannot copy content of this page

Exit mobile version