ಚುನಾವಣೆ ಮುಗಿಯುತ್ತಿದ್ದಂತೆಯೇ ಕೇಂದ್ರದಿಂದ ಬೆಲೆಯೇರಿಕೆ ಶಾಕ್: ಇಂಧನ ಬೆಲೆ ಏರಿಕೆ ನಿರ್ಧಾರಕ್ಕೆ ರಾಹುಲ್ ಗಾಂಧಿ, ಸಿಎಂ ವಿಜಯ್ ತೀವ್ರ ಖಂಡನೆ

ಐದು ರಾಜ್ಯಗಳ ಚುನಾವಣಾ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಕೇಂದ್ರ ಸರ್ಕಾರವು ಇಂಧನ ದರಗಳನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಮೂಲಕ ದೇಶದ ಜನತೆಗೆ ದೊಡ್ಡ ಆಘಾತ ನೀಡಿದೆ. ಸಾಮಾನ್ಯ ಜನರ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಲೀಟರ್‌ಗೆ ಸರಾಸರಿ 3 ರೂಪಾಯಿಗಿಂತ ಹೆಚ್ಚು ಏರಿಸಲಾಗಿದ್ದು, ಇದರೊಂದಿಗೆ ಸಿಎನ್‌ಜಿ ದರವನ್ನು ಕೂಡ ಪ್ರತಿ ಕಿಲೋಗೆ 2 ರೂಪಾಯಿ ಹೆಚ್ಚಿಸಲಾಗಿದೆ. ಈ ಹೊಸ ದರಗಳು ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದಲೇ ಜಾರಿಗೆ ಬಂದಿವೆ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿವೆ.

ಈ ಇಂಧನ ದರ ಏರಿಕೆಯಿಂದಾಗಿ ದೇಶದ ಪ್ರಮುಖ ನಗರಗಳಲ್ಲಿ ಮತ್ತು ವಿವಿಧ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಣನೀಯವಾಗಿ ಬದಲಾಗಿವೆ. ಪರಿಷ್ಕೃತ ದರಗಳ ಪ್ರಕಾರ ದೇಶದ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 94.77 ರೂಪಾಯಿಯಿಂದ 97.77 ರೂಪಾಯಿಗೆ ಹಾಗೂ ಡೀಸೆಲ್ ದರ 87.67 ರೂಪಾಯಿಯಿಂದ 90.67 ರೂಪಾಯಿಗೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 106.68 ರೂಪಾಯಿ ಮತ್ತು ಡೀಸೆಲ್ 93.14 ರೂಪಾಯಿ ತಲುಪಿದ್ದರೆ, ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 108.74 ರೂಪಾಯಿ ಹಾಗೂ ಡೀಸೆಲ್ ಬೆಲೆ 95.13 ರೂಪಾಯಿ.

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾಗಿರುವುದರಿಂದ ತೈಲ ಕಂಪನಿಗಳ ಮೇಲಿನ ಆರ್ಥಿಕ ಹೊರೆಯನ್ನು ಸರಿದೂಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಸಮರ್ಥಿಸಿಕೊಂಡಿವೆ. ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಶೇಕಡಾ 50 ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಯುದ್ಧಕ್ಕೂ ಮುನ್ನ ಫೆಬ್ರವರಿಯಲ್ಲಿ ಪ್ರತಿ ಬ್ಯಾರೆಲ್‌ಗೆ ಸರಾಸರಿ 69 ಅಮೆರಿಕನ್ ಡಾಲರ್ ಇದ್ದ ಆಮದು ವೆಚ್ಚ, ತದನಂತರದ ತಿಂಗಳುಗಳಲ್ಲಿ 113 ರಿಂದ 114 ಅಮೆರಿಕನ್ ಡಾಲರ್‌ಗೆ ಜಿಗಿದಿದೆ ಎಂದು ಮೂಲಗಳು ತಿಳಿಸಿವೆ. 2024ರ ಮಾರ್ಚ್‌ನಿಂದ ಇಂಧನ ದರಗಳಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ, ಕೇವಲ ಲೋಕಸಭಾ ಚುನಾವಣೆಗೆ ಮುನ್ನ ಲೀಟರ್‌ಗೆ 2 ರೂಪಾಯಿ ಕಡಿತಗೊಳಿಸಲಾಗಿತ್ತು.

ಆದರೆ, ಪ್ರಧಾನಿ ಮೋದಿಯವರು ದೇಶದ ಜನತೆಗೆ ಉಳಿತಾಯದ ಪಾಠ ಬೋಧಿಸಿದ ಕೇವಲ ಎರಡೂ ಮೂರು ದಿನಗಳಲ್ಲೇ ಈ ರೀತಿ ಬೆಲೆ ಏರಿಕೆ ಮಾಡಿರುವುದು ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಇಂಧನ ದರ ಏರಿಕೆಯಿಂದಾಗಿ ಸಾರಿಗೆ ಮತ್ತು ಸಾಗಣಿಕೆ ವೆಚ್ಚಗಳು ಹೆಚ್ಚಾಗಲಿದ್ದು, ಇದು ನೇರವಾಗಿ ದಿನಬಳಕೆಯ ನಿತ್ಯಾವಶ್ಯಕ ವಸ್ತುಗಳ ಬೆಲೆ ಏರಿಕೆ ಹಾಗೂ ಪ್ರಯಾಣ ದರಗಳ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಮೋಡಿ ಸರ್ಕಾರದ ತಪ್ಪುಗಳಿಗೆ ಸಾಮಾನ್ಯ ಜನರು ಬೆಲೆ ತೆರುತ್ತಿದ್ದಾರೆ, ಈಗಾಗಲೇ 3 ರೂಪಾಯಿಗಳ ದೊಡ್ಡ ಶಾಕ್ ನೀಡಲಾಗಿದ್ದು, ಇನ್ನುಳಿದ ವಸೂಲಾತಿಯನ್ನು ಮುಂದಿನ ದಿನಗಳಲ್ಲಿ ಕಂತುಗಳ ರೂಪದಲ್ಲಿ ಮಾಡಲಾಗುತ್ತದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ತಮಿಳುನಾಡು ಮುಖ್ಯಮಂತ್ರಿ ಎಸ್. ಜೋಸೆಫ್ ವಿಜಯ್ ಅವರು ಇಂಧನ ದರ ಏರಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಈ ನಿರ್ಧಾರವು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲದ್ದು ಎಂದು ಹೇಳಿದ್ದಾರೆ. ಅಂತರಾಷ್ಟಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಕಡಿಮೆಯಾದಾಗ ತೈಲ ಕಂಪನಿಗಳು ಗ್ರಾಹಕರಿಗೆ ಅದರ ಲಾಭವನ್ನು ವರ್ಗಾಯಿಸದೆ ಕೇವಲ ತಾವೇ ಲಾಭ ಮಾಡಿಕೊಂಡಿದ್ದವ ಎಂದು ಅವರು ಟೀಕಿಸಿದ್ದಾರೆ.

ಚುನಾವಣೆ ಮುಗಿಯುತ್ತಿದ್ದಂತೆಯೇ ಕೇಂದ್ರದಿಂದ ಶಾಕ್: ಬೆಲೆ ಏರಿಕೆ ನಿರ್ಧಾರಕ್ಕೆ ರಾಹುಲ್ ಗಾಂಧಿ, ಸಿಎಂ ವಿಜಯ್ ತೀವ್ರ ಖಂಡನೆಐದು ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆಯೇ ಬೆಲೆ ಏರಿಸಿರುವುದು ಸರಿಯಲ್ಲ ಮತ್ತು ಇದು ದ್ವಿಚಕ್ರ ವಾಹನ ಹಾಗೂ ಸಣ್ಣ ವಾಹನಗಳನ್ನು ಬಳಸುವ ಬಡ ಮತ್ತು ಮಧ್ಯಮ ವರ್ಗದ ಜನರ ಮಾಸಿಕ ಆದಾಯದ ಮೇಲೆ ಭಾರಿ ಹೊಡೆತ ನೀಡಲಿದೆ ಎಂದು ಆತಂಕ ವ್ಯಕ್ತಪಡಿಸಿರುವ ಸಿಎಂ ವಿಜಯ್, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಹಿತದೃಷ್ಟಿ ಹಾಗೂ ಜನರ ಮೇಲಿನ ಈ ಹೆಚ್ಚುವರಿ ಹೊರೆಯನ್ನು ಕೈಬಿಡಲು ತಕ್ಷಣವೇ ಈ ಬೆಲೆ ಏರಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ. ಜನರ ಮೇಲಿನ ಈ ಹೆಚ್ಚುವರಿ ಹೊರೆಯನ್ನು ತಕ್ಷಣವೇ ಹಿಂಪಡೆಯಬೇಕೆಂದು ಸಿಪಿಎಂ ಪಕ್ಷವು ಸಹ ಒತ್ತಾಯಿಸಿದೆ.

Related Articles

ಇತ್ತೀಚಿನ ಸುದ್ದಿಗಳು