ನವದೆಹಲಿ, ಮಾ.20: ಇಸ್ರೇಲ್–ಇರಾನ್ ಸಂಘರ್ಷದ ಪರಿಣಾಮ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ತೀವ್ರ ಅಸ್ಥಿರತೆ ಕಾಣಿಸಿಕೊಂಡಿರುವ ಹಿನ್ನೆಲೆ, ದೇಶದ ತೈಲ ಮಾರುಕಟ್ಟೆ ಕಂಪನಿಗಳು ಪ್ರೀಮಿಯಂ ಪೆಟ್ರೋಲ್ ದರಗಳಲ್ಲಿ ಏರಿಕೆ ಮಾಡುವ ನಿರ್ಧಾರ ಕೈಗೊಂಡಿವೆ.
ಸರ್ಕಾರಿ ಸ್ವಾಮ್ಯದ ಪ್ರಮುಖ ತೈಲ ಕಂಪನಿಗಳಾದ ಬಿಪಿಸಿಎಲ್, ಎಚ್‌ಪಿಸಿಎಲ್ ಹಾಗೂ ಐಒಸಿಎಲ್ ಶುಕ್ರವಾರ ಈ ಕುರಿತು ಪ್ರಕಟಣೆ ನೀಡಿದ್ದು, ಹೆಚ್ಚಿನ ಕಾರ್ಯಕ್ಷಮತೆಯ ಇಂಧನಗಳಾದ ‘ಸ್ಪೀಡ್’, ‘ಪವರ್’ ಮತ್ತು ‘ಎಕ್ಸ್‌ಪಿ 95’ ದರಗಳನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಿವೆ.
ಇದಕ್ಕೆ ವಿರುದ್ಧವಾಗಿ, ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಯಥಾಸ್ಥಿತಿಯಲ್ಲಿ ಉಳಿಸಲಾಗಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತದ ನಡುವೆಯೂ ಸಾಮಾನ್ಯ ಗ್ರಾಹಕರ ಮೇಲೆ ನೇರ ಪರಿಣಾಮ ಬೀಳದಂತೆ ಕ್ರಮ ಕೈಗೊಳ್ಳಲಾಗಿದೆ ಎಂಬುದು ಕಂಪನಿಗಳ ಸ್ಪಷ್ಟನೆ.
ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರಿದಿರುವುದರಿಂದ ಇಂಧನದ ಬೆಲೆಗಳಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಬದಲಾವಣೆ ಸಾಧ್ಯತೆ ಇರುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
