ಎಮ್‌ಡಿಆರ್‌ ಚಾರ್ಜ್:‌ 2000 ರೂಪಾಯಿ ಮೀರಿದ ಇಂಧನ ವಹಿವಾಟುಗಳನ್ನು ನಗದಿನಲ್ಲೇ ನಡೆಸಲು ಪೆಟ್ರೋಲ್‌ ಬಂಕುಗಳಿಂದ ನಿರ್ಧಾರ

ಯುಪಿಐ ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ವಿಧಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ದೇಶವ್ಯಾಪಿ ಪೆಟ್ರೋಲ್ ಬಂಕ್ ಡೀಲರ್‌ಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರತಿ ವಹಿವಾಟಿಗೆ ನಿಗದಿತ ₹5 ಶುಲ್ಕ ವಿಧಿಸಿದರೆ ಈಗಾಗಲೇ ಅತ್ಯಂತ ಕಡಿಮೆ ಇರುವ ಲಾಭಾಂಶದ ಮೇಲೆ ಗಂಭೀರ ಹೊರೆ ಬೀಳಲಿದ್ದು, ₹2,000 ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಯುಪಿಐ ಪಾವತಿಗಳನ್ನು ಸ್ಥಗಿತಗೊಳಿಸಿ ಕೇವಲ ನಗದು ಮಾತ್ರ ಸ್ವೀಕರಿಸುವುದಾಗಿ ಡೀಲರ್‌ಗಳು ಎಚ್ಚರಿಸಿದ್ದಾರೆ.

ತೈಲ ಮಾರುಕಟ್ಟೆ ಕಂಪನಿಗಳ (ಒಎಂಸಿ) ಮೂಲಕ ಪೆಟ್ರೋಲ್ ಬಂಕ್‌ಗಳಿಗೆ ಪ್ರತಿ ಲೀಟರ್ ಇಂಧನಕ್ಕೆ ಕೇವಲ ₹2.40 ರಿಂದ ₹3.40 ರಷ್ಟು ಕಮಿಷನ್ ಸಿಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಎಂಡಿಆರ್ ಶುಲ್ಕವು ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ ಎಂದು ದೆಹಲಿ-ಎನ್‌ಸಿಆರ್, ಪಂಜಾಬ್, ಉತ್ತರ ಪ್ರದೇಶ, ಮುಂಬೈ, ಕರ್ನಾಟಕ ಹಾಗೂ ರಾಜಸ್ಥಾನದ ಪೆಟ್ರೋಲ್ ಪಂಪ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಇಂಧನ ಮಾರಾಟಗಾರರಿಗೆ ಈ ಶುಲ್ಕದಿಂದ ವಿನಾಯಿತಿ ನೀಡದಿದ್ದರೆ ದೊಡ್ಡ ಮೊತ್ತದ ಡಿಜಿಟಲ್ ಪಾವತಿಗಳನ್ನು ನಿಲ್ಲಿಸುವುದು ಅನಿವಾರ್ಯ ಎಂದು ಅಖಿಲ ಭಾರತ ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟ (ಎಫ್‌ಎಐಪಿಟಿ) ಸ್ಪಷ್ಟಪಡಿಸಿದೆ.

ಸಾಮಾನ್ಯ ಚಿಲ್ಲರೆ ವ್ಯಾಪಾರಗಳಿಗೆ ಹೋಲಿಸಿದರೆ ಪೆಟ್ರೋಲಿಯಂ ಚಿಲ್ಲರೆ ಮಳಿಗೆಗಳ ವ್ಯಾಪಾರ ಮಾದರಿ ಭಿನ್ನವಾಗಿದ್ದು, ತಮಗೆ ಪ್ರತ್ಯೇಕ ವಿನಾಯಿತಿ ನೀಡುವಂತೆ ಕೋರಿ ಅಖಿಲ ಕರ್ನಾಟಕ ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟ (ಎಕೆಎಫ್‌ಪಿಟಿ) ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ಪತ್ರ ಬರೆದಿದೆ. ಪೆಟ್ರೋಲ್ ಅಥವಾ ಡೀಸೆಲ್‌ನ ಚಿಲ್ಲರೆ ಮಾರಾಟ ದರವನ್ನು ತಾವಾಗಿಯೇ ಹೆಚ್ಚಿಸಲು ಡೀಲರ್‌ಗಳಿಗೆ ಅಧಿಕಾರವಿಲ್ಲದ ಕಾರಣ, ಡಿಜಿಟಲ್ ವಹಿವಾಟಿನ ವೆಚ್ಚವನ್ನು ಭರಿಸುವುದು ಅಸಾಧ್ಯ ಎಂದು ಒಕ್ಕೂಟ ಪ್ರತಿಪಾದಿಸಿದೆ. ಮತ್ತೊಂದೆಡೆ, ನಿಯಮದ ಪ್ರಕಾರ ಎಂಡಿಆರ್ ಶುಲ್ಕವನ್ನು ವ್ಯಾಪಾರಿಗಳೇ ಭರಿಸಬೇಕಿದ್ದರೂ, ಈ ಹೊರೆಯನ್ನು ಪರೋಕ್ಷವಾಗಿ ಗ್ರಾಹಕರ ಮೇಲೆಯೇ ವರ್ಗಾಯಿಸುವ ಸಾಧ್ಯತೆಯಿದ್ದು, ಇದು ದೇಶದ ಡಿಜಿಟಲ್ ಪಾವತಿ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ ತರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದೇ ವೇಳೆ, ಯುಪಿಐ ವಹಿವಾಟುಗಳ ಮೇಲೆ ಶೇ. 0.4 ರಷ್ಟು ಎಂಡಿಆರ್ ವಿಧಿಸುವ ಕೇಂದ್ರದ ನಡೆಯ ವಿರುದ್ಧ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದು, ತಕ್ಷಣವೇ ಈ ‘ಯುಪಿಐ ತೆರಿಗೆ’ಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಅಮೆರಿಕದ ಕಾರ್ಡ್ ಕಂಪನಿಗಳ ಹಿತಾಸಕ್ತಿ ಕಾಯಲು ಮತ್ತು ವಿದೇಶಿ ಕಾರ್ಪೊರೇಟ್‌ಗಳ ಅನುಕೂಲಕ್ಕಾಗಿ ಭಾರತದ ಸ್ವದೇಶಿ ಯುಪಿಐ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಜೈರಾಮ್ ರಮೇಶ್ ಹಾಗೂ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಕಿಡಿಕಾರಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು