ಅಡಿಲೇಡ್ ಓವಲ್ (ಆಸ್ಟ್ರೇಲಿಯಾ): ಗುರುವಾರ ನಡೆಯಲಿರುವ ಟಿ20 ಸೆಮಿಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಅಭ್ಯಾಸದ ತೊಡಗಿದ್ದಾಗ ಮುಂದೋಳಿಗೆ ಬಲವಾದ ಪೆಟ್ಟು ತಿಂದಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಚೇತರಿಸಿಕೊಂಡಿದ್ದು, ಮತ್ತೆ ಅಭ್ಯಾಸದಲ್ಲಿ ತೊಡಗಿದ್ದಾರೆ.
ಬೆಳಿಗ್ಗೆ ಇಲ್ಲಿ ಅಭ್ಯಾಸ ನಿರತರಾಗಿದ್ದ ರೋಹಿತ್ ಶರ್ಮಾ ಅವರಿಗೆ ಭಾರತ ತಂಡದ ನೆಟ್ ಬೌಲರ್ ರಘು ಎಸೆದ ಎಸೆತವೊಂದು ಮುಂದೋಳಿಗೆ ಬಲವಾಗಿ ಬಿದ್ದಿದ್ದರ ಪರಿಣಾಮವಾಗಿ ಭಾರತ ತಂಡದ ಕ್ಯಾಂಪ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಏಟು ಬಿದ್ದ ಹಿನ್ನೆಲೆಯಲ್ಲಿ ಭಾರತ ತಂಡದ ನಾಯಕ ಕೆಲಕಾಲ ವಿಶ್ರಾಂತಿ ಪಡೆದರು. ಏಟು ಬಿದ್ದ ಕೂಡಲೇ ಐಸ್ ಪ್ಯಾಕ್ ಹಾಕಲಾಗಿತ್ತು. ತಂಡದ ಫಿಸಿಯೋ ಪ್ಯಾಡಿ ಆಪ್ಟನ್ ಅವರೊಂದಿಗೆ ರೋಹಿತ್ ಶರ್ಮ ಸಮಾಲೋಚನೆ ನಡೆಸಿದ್ದರು. ಐಸ್ ಪ್ಯಾಕ್ ಕಟ್ಟಿಕೊಂಡೇ ಭಾರತ ತಂಡದ ಅಭ್ಯಾಸವನ್ನು ಶರ್ಮ ವೀಕ್ಷಿಸುತ್ತಿದ್ದರು.
ಸ್ವಲ್ಪ ಸಮಯದ ನಂತರ ರೋಹಿತ್ ಶರ್ಮ ಮತ್ತೆ ಅಭ್ಯಾಸಕ್ಕೆ ಮರಳಿದರು. ಬೆಟ್ ಬೌಲರ್ ರಘು ಅವರ ಎಸೆತಗಳನ್ನು ಎದುರಿಸಿದ ಅವರು ರಕ್ಷಣಾತ್ಮಕ ಹೊಡೆತಗಳನ್ನು ಪ್ರಯತ್ನಿಸಿ, ಮುಂದೋಳಿಗೆ ಆಗಿರುವ ಪೆಟ್ಟಿನಿಂದ ಏನಾದರೂ ಸಮಸ್ಯೆ ಆಗುತ್ತಿದೆಯೇ ಎಂದು ಪರಿಶೀಲಿಸಿದರು.
ಗುರುವಾರ ಇಂಗ್ಲೆಂಡ್ ವಿರುದ್ಧ ಭಾರತ ಸೆಮಿಫೈನಲ್ ಆಡುತ್ತಿದ್ದು, ರೋಹಿತ್ ಶರ್ಮ ಅವರು ಗಾಯಾಳುವಾದರೆ ಸಮಸ್ಯೆಗೆ ಸಿಲುಕುವ ಸಾಧ್ಯತೆ ಇತ್ತು.