ಭಾರತ ಪ್ರಜಾಪ್ರಭುತ್ವದ ತಾಯಿ | ಅಧಿಕಾರ ಯಾರ ಕೈಯಲ್ಲಿದೆ ಎನ್ನುವುದಕ್ಕಿಂತ ಹೇಗೆ ಬಳಸುತ್ತಾರೆ ಎಂಬುದು ಮುಖ್ಯ: ಮೋದಿ

ದೇಶದ ರಾಜಧಾನಿ ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಿರುದ್ಧ ನಡೆದ ಪ್ರತಿಭಟನೆಗಳನ್ನು ಭದ್ರತಾ ಸಿಬ್ಬಂದಿ ಬಲಪ್ರಯೋಗದ ಮೂಲಕ ಹತ್ತಿಕ್ಕಿದ, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ದೌರ್ಜನ್ಯ ಎಸಗಿದ ಗಂಭೀರ ಆರೋಪಗಳ ಬೆನ್ನಲ್ಲೇ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಭಾರತವು ಪ್ರಜಾಪ್ರಭುತ್ವದ ತಾಯಿ (ಮದರ್ ಆಫ್ ಡೆಮಾಕ್ರಸಿ)” ಎಂದು ಪುನರುಚ್ಚರಿಸಿದ್ದಾರೆ.

ಮಂಗಳವಾರ ದೆಹಲಿಯಲ್ಲಿ ಆರಂಭವಾದ ‘ಬ್ಲೂಮ್‌ಬರ್ಗ್ ನ್ಯೂ ಎಕಾನಮಿ ಫೋರಂ’ನಲ್ಲಿ ಸುದೀರ್ಘ ಭಾಷಣ ಮಾಡಿದ ಪ್ರಧಾನಿ ಮೋದಿ, “ಅಧಿಕಾರ ಯಾರ ಕೈಯಲ್ಲಿದೆ ಎಂಬುದು ಮುಖ್ಯ ಪ್ರಶ್ನೆಯಲ್ಲ, ಆ ಅಧಿಕಾರವನ್ನು ಸಾರ್ವಜನಿಕ ಹಿತಕ್ಕಾಗಿ ಹೇಗೆ ಬಳಸಲಾಗುತ್ತಿದೆ ಎಂಬುದೇ ನಿಜವಾದ ಪ್ರಶ್ನೆ,” ಎಂದು ಪ್ರತಿಪಾದಿಸಿದರು. ಇದೇ ವೇಳೆ ಭಾರತೀಯರ ಸೋಷಿಯಲ್ ಮೀಡಿಯಾ ಬಳಕೆ ಮತ್ತು ಡಿಜಿಟಲ್ ಒಳಗೊಳ್ಳುವಿಕೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಆದರೆ, ರಾಜಧಾನಿ ದೆಹಲಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಮತ್ತು ಸಿಇಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರು ಹಾಗೂ ರಾಜಕೀಯ ಕಾರ್ಯಕರ್ತರ ಮೇಲೆ ಪೊಲೀಸರು ಉಕ್ಕುಪಾದ ಚಲಾಯಿಸಿ, ಜಂತರ್ ಮಂತರ್ ಅನ್ನು ಸೀಲ್ ಮಾಡಿ ಧರಣಿಯ ಹಕ್ಕನ್ನೇ ಕಸಿದುಕೊಂಡಿರುವ ಹೊತ್ತಿನಲ್ಲೇ ಪ್ರಧಾನಿಗಳು ಇಂತಹ ಹೇಳಿಕೆ ನೀಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಪ್ರಜಾಪ್ರಭುತ್ವದ ಮೂಲ ಆಶಯವಾದ ಶಾಂತಿಯುತ ಪ್ರತಿಭಟನೆಗಳನ್ನು ನಿರ್ಬಂಧಿಸುತ್ತಾ, ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವುದು ಆಡಳಿತದ ಇಬ್ಬಗೆ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ವಿರೋಧ ಪಕ್ಷಗಳು ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು