ಯಮುನಾ ನದಿಯ ಮಾಲಿನ್ಯ ಮತ್ತು ವಿವಾದಾತ್ಮಕ ‘ಕೃತಕ ಕೊಳ’ದ ಕುರಿತು ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಡುವಿನ ಸಮರ ಮಂಗಳವಾರವೂ ಮುಂದುವರಿದಿದೆ. ಎಎಪಿ ದೆಹಲಿ ಅಧ್ಯಕ್ಷ ಸೌರಭ್ ಭಾರದ್ವಾಜ್, ರಹಸ್ಯ ಬಯಲಾದ ಕಾರಣ ಪ್ರಧಾನಿ ನರೇಂದ್ರ ಮೋದಿ ಘಾಟ್‌ಗೆ ಭೇಟಿ ನೀಡುವ ಕಾರ್ಯಕ್ರಮವನ್ನೇ ರದ್ದುಗೊಳಿಸಿದ್ದಾರೆ ಎಂದು ಆರೋಪಿಸಿದರು.
ಭಾರದ್ವಾಜ್ ತಮ್ಮ ಹೇಳಿಕೆಯಲ್ಲಿ, “ಪ್ರಧಾನಿ ಮೋದಿ ಅವರು ವಾಸುದೇವ್ ಘಾಟ್‌ನಲ್ಲಿ ನಿರ್ಮಿಸಿದ ‘ನಕಲಿ ಯಮುನಾ’ ದಲ್ಲಿ ತಮ್ಮ ಛತ್ ಪೂಜೆ ಮತ್ತು ಸೂರ್ಯ ಅರ್ಘ್ಯವನ್ನು ರದ್ದುಪಡಿಸಿದ್ದಾರೆ. ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಬಿಜೆಪಿ ಸರ್ಕಾರದ ಮಾಲಿನ್ಯ ಕುರಿತ ವಂಚನೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಬಯಲಾಗಿರುವುದು ಅವರಿಗೆ ಮುಜುಗರ ತಂದಿದೆ” ಎಂದು ಹೇಳಿದ್ದಾರೆ.
ಪ್ರಧಾನಿ ವಿಧ್ಯುಕ್ತವಾಗಿ ಸ್ನಾನ ಮಾಡಲು ನಿರ್ಧರಿಸಿದ್ದ ವಾಸುದೇವ ಘಾಟ್‌ನಲ್ಲಿ ಯಮುನಾ ನದಿಯ ಪಕ್ಕದಲ್ಲಿ ಪ್ರತ್ಯೇಕ ಕೊಳವನ್ನು ನಿರ್ಮಿಸಿ, ವಜೀರಾಬಾದ್ ಸಂಸ್ಕರಣಾ ಘಟಕದ ಶುದ್ಧೀಕರಿಸಿದ ನೀರನ್ನು ತುಂಬಿಸಲಾಗಿತ್ತು ಎಂದು ಎಎಪಿ ಸೋಮವಾರ ಬೆಳಕು ಚೆಲ್ಲಿತ್ತು.
“ಕೇವಲ ಒಂದು ವಾರದ ಮೊದಲು ಬಿಹಾರ ಚುನಾವಣೆ ಇರುವಾಗ, ಪ್ರಧಾನಿಯವರು ಸಾರ್ವಜನಿಕವಾಗಿ ಛಠ್ ಆಚರಿಸಲು ಮತ್ತು ಅದರ ವೀಡಿಯೊಗಳು/ಫೋಟೋಗಳನ್ನು ಹರಡಲು ಸಾಧ್ಯವಾಗಲಿಲ್ಲ ಎಂದರೆ ಊಹಿಸಿ. ಕೊನೆಯ ಕ್ಷಣದಲ್ಲಿ ರದ್ದುಗೊಂಡ ಕಾರಣ, ಮತ್ತೊಂದು ಸ್ಥಳವನ್ನು ಯೋಜಿಸಲು ಪ್ರಧಾನಿ ಕಚೇರಿಗೆ ತಡವಾಯಿತು ಎನ್ನಿಸುತ್ತದೆ” ಎಂದು ಭಾರದ್ವಾಜ್ ಹೇಳಿದರು.
ಯಮುನಾ ನದಿಯ ನೀರು ಈಗ ಸ್ವಚ್ಛವಾಗಿದೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡಿದ ನಂತರ, ಎಎಪಿ ಸರ್ಕಾರದ ವಿರುದ್ಧ ಟೀಕೆಗಳ ಮಳೆಯನ್ನು ಸುರಿಸುತ್ತಿದೆ. ಯಮುನಾ ಮೇಲ್ಮೈಯಲ್ಲಿನ ನೊರೆಯನ್ನು (foam) ಮರೆಮಾಚಲು ಬಿಜೆಪಿ ಸರ್ಕಾರವು ಪೂರ್ವ ಕಾಲುವೆಯಿಂದ ನೀರನ್ನು ತಿರುಗಿಸುತ್ತಿದೆ ಮತ್ತು ಪ್ರತಿ ದಿನ ಬೆಳಿಗ್ಗೆ ನೊರೆ ನಿವಾರಕ ರಾಸಾಯನಿಕಗಳನ್ನು ಬಳಸುತ್ತಿದೆ ಎಂದು ಎಎಪಿ ಆರೋಪಿಸಿದೆ. ಅಲ್ಲದೆ, ಯಮುನಾ ನೀರು ಸ್ವಚ್ಛವಾಗಿದೆ ಎಂದು ಸಾಬೀತುಪಡಿಸಲು ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ಯಮುನಾ ನೀರನ್ನು ಕುಡಿಯುವಂತೆ ಭಾರದ್ವಾಜ್ ಸವಾಲು ಹಾಕಿದ್ದಾರೆ.
