Home ದೆಹಲಿ ಬ್ಯಾಂಕ್ ನೌಕರರ ಮುಷ್ಕರ: ಮಂಗಳವಾರ ದೇಶಾದ್ಯಂತ ಸೇವೆಗಳಲ್ಲಿ ವ್ಯತ್ಯಯ

ಬ್ಯಾಂಕ್ ನೌಕರರ ಮುಷ್ಕರ: ಮಂಗಳವಾರ ದೇಶಾದ್ಯಂತ ಸೇವೆಗಳಲ್ಲಿ ವ್ಯತ್ಯಯ

0

ದೆಹಲಿ: ಈಗಾಗಲೇ ಮಾಡಿಕೊಂಡಿರುವ ವೇತನ ಪರಿಷ್ಕರಣೆ ಒಪ್ಪಂದದಲ್ಲಿ ಒಪ್ಪಲಾದ ಅಂಶಗಳು ಸೇರಿದಂತೆ ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ಒಕ್ಕೂಟಗಳು ಮಂಗಳವಾರ ದೇಶಾದ್ಯಂತ ಮುಷ್ಕರ ನಡೆಸುತ್ತಿವೆ.

ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ಮಧ್ಯರಾತ್ರಿಯವರೆಗೆ ಈ ಮುಷ್ಕರ ನಡೆಯಲಿದ್ದು, ಇದರಿಂದಾಗಿ ದೇಶಾದ್ಯಂತ ಇರುವ ಹಲವು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಸೇವೆಗಳು ಸ್ಥಗಿತಗೊಳ್ಳಲಿವೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಈ ಮುಷ್ಕರಕ್ಕೆ ಕರೆ ನೀಡಿದೆ. ಈ ಒಕ್ಕೂಟವು ಒಂಬತ್ತು ಪ್ರಮುಖ ಬ್ಯಾಂಕ್ ಯೂನಿಯನ್‌ಗಳನ್ನು ಪ್ರತಿನಿಧಿಸುತ್ತದೆ.

ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದ ವೇತನ ಪರಿಷ್ಕರಣೆ ಒಪ್ಪಂದದ ಭಾಗವಾಗಿ, ಎಲ್ಲಾ ಶನಿವಾರಗಳನ್ನು ಬ್ಯಾಂಕ್ ರಜಾದಿನಗಳನ್ನಾಗಿ ಘೋಷಿಸುವ ವಿಷಯಕ್ಕೆ ಎರಡೂ ಬದಿಯವರು ಒಪ್ಪಿಗೆ ಸೂಚಿಸಿದ್ದರು. ಆದರೆ ಆ ಭರವಸೆ ಇದುವರೆಗೂ ಜಾರಿಯಾಗಿಲ್ಲ.

ಇದರಿಂದಾಗಿ, UFBU ಕೈಗಾರಿಕಾ ವಿವಾದಗಳ ಕಾಯ್ದೆ-1947 ರ ಅಡಿಯಲ್ಲಿ ಐಬಿಎ (IBA), ಮುಖ್ಯ ಕಾರ್ಮಿಕ ಆಯುಕ್ತರು ಮತ್ತು ಹಣಕಾಸು ಸೇವೆಗಳ ಇಲಾಖೆಗೆ ಮುಷ್ಕರದ ನೋಟಿಸ್ ನೀಡಿದೆ. “ಬ್ಯಾಂಕ್ ಉದ್ಯೋಗಿಗಳು ತಮ್ಮ ಯೋಗಕ್ಷೇಮವನ್ನು ಲೆಕ್ಕಿಸದೆ ಭಾರತದ ಆರ್ಥಿಕ ಸ್ಥಿರತೆ ಮತ್ತು ಪ್ರಗತಿಗೆ ಕೊಡುಗೆ ನೀಡುತ್ತಾರೆ. ವಾರಕ್ಕೆ ಐದು ದಿನಗಳ ಕೆಲಸ ಎಂಬುದು ಯಾವುದೇ ರಿಯಾಯಿತಿಯಲ್ಲ, ಇದು ದೀರ್ಘಕಾಲದಿಂದ ಜಾರಿಯಾಗಬೇಕಿರುವ ಸುಧಾರಣೆ. ಇದಕ್ಕೆ ಲಿಖಿತ ಭರವಸೆಯನ್ನೂ ನೀಡಲಾಗಿತ್ತು, ಇದನ್ನು ಖಂಡಿತವಾಗಿಯೂ ಜಾರಿಗೊಳಿಸಬೇಕು,” ಎಂದು UFBU ತನ್ನ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದೆ. ಕೆಲಸದ ದಿನಗಳನ್ನು ಐದು ದಿನಗಳಿಗೆ ಇಳಿಸುವುದರಿಂದ ಉತ್ಪಾದಕತೆ ತಗ್ಗುವುದಿಲ್ಲ, ಸೋಮವಾರದಿಂದ ಶುಕ್ರವಾರದವರೆಗೆ ಹೆಚ್ಚುವರಿ 40 ನಿಮಿಷಗಳ ಕಾಲ ಕೆಲಸ ಮಾಡಲು ಉದ್ಯೋಗಿಗಳು ಈಗಾಗಲೇ ಒಪ್ಪಿಕೊಂಡಿದ್ದಾರೆ ಎಂದು ಅದು ತಿಳಿಸಿದೆ.

ಮುಷ್ಕರವನ್ನು ತಡೆಯಲು ಸರ್ಕಾರ ಪ್ರಯತ್ನಗಳನ್ನು ನಡೆಸಿತಾದರೂ ಅವು ಫಲ ನೀಡಲಿಲ್ಲ. ಸರ್ಕಾರದೊಂದಿಗೆ ನಡೆದ ಮಾತುಕತೆಗಳು ವಿಫಲವಾದ ಕಾರಣ, ಮುಷ್ಕರ ನಡೆಸುವುದನ್ನು ಬಿಟ್ಟು ನಮಗೆ ಬೇರೆ ಪರ್ಯಾಯ ಮಾರ್ಗವಿಲ್ಲ ಎಂದು ಒಕ್ಕೂಟಗಳು ತಿಳಿಸಿವೆ.

You cannot copy content of this page

Exit mobile version