ಭದ್ರತಾ ಪಡೆಗಳನ್ನೇ ಗುರಿಯಾಗಿಸಿ ಮಾವೋವಾದಿಗಳು ಅಳವಡಿಸಿದ್ದ ನೆಲಬಾಂಬ್ ಸ್ಫೋಟಗೊಂಡು 11 ಮಂದಿ ಯೋಧರು ಗಾಯಗೊಂಡಿದ್ದಾರೆ. ಈ ಘಟನೆ ತೆಲಂಗಾಣ-ಛತ್ತೀಸ್‌ಗಢ ರಾಜ್ಯಗಳ ಗಡಿಯ ಬಿಜಾಪುರ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಬಿಜಾಪುರ ಜಿಲ್ಲೆಯ ಉಸೂರ್ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ರೆಗುಟ್ಟ ಅರಣ್ಯಗಳಲ್ಲಿ ಮಾವೋವಾದಿಗಳು ಸಂಚರಿಸುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಡಿಆರ್‌ಜಿ (DRG) ಮತ್ತು ಕೋಬ್ರಾ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದವು.
ಈ ಸಂದರ್ಭದಲ್ಲಿ, ಅದೇ ಪ್ರದೇಶದಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿ ಮಾವೋವಾದಿಗಳು ಆರು ಕಡೆಗಳಲ್ಲಿ ಅಳವಡಿಸಿದ್ದ ನೆಲಬಾಂಬ್‌ಗಳು ಸ್ಫೋಟಗೊಂಡವು. ಇದರಿಂದಾಗಿ ಹತ್ತು ಜನ ಡಿಆರ್‌ಜಿ ಸಿಬ್ಬಂದಿ ಹಾಗೂ ಓರ್ವ ಕೋಬ್ರಾ ಯೋಧ ತೀವ್ರವಾಗಿ ಗಾಯಗೊಂಡರು. ಇದನ್ನು ಗಮನಿಸಿದ ಸಹ ಯೋಧರು ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ತುರ್ತಾಗಿ ರಾಯ್‌ಪುರ ಆಸ್ಪತ್ರೆಗೆ ರವಾನಿಸಿದರು.
